ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಯಾ, ಅನಿತಾ ಕಣಕ್ಕೆ

ಲೋಕಸಭೆ ಉಪಚುನಾವಣೆ: ಬಿಜೆಪಿ-ಜೆಡಿಎಸ್ ಪ್ರತ್ಯೇಕ ಸ್ಪರ್ಧೆ
Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಣ ರಂಗೇರುತ್ತಿದ್ದು ಮಂಡ್ಯದಲ್ಲಿ ಚಿತ್ರ ನಟಿ ರಮ್ಯ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಅನಿತಾ ಅವರ ವಿರುದ್ಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.

ನಾಮಪತ್ರ ಸಲ್ಲಿಸಲು ಶನಿವಾರ ಕಡೆಯ ದಿನವಾಗಿದ್ದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಾಳೆಯದಲ್ಲಿ ಶುಕ್ರವಾರ ಸಾಕಷ್ಟು ಚಟುವಟಿಕೆಗಳು ನಡೆದವು. ಆಡಳಿತ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಜೆಡಿಎಸ್- ಬಿಜೆಪಿ ಒಂದಾಗುವ ಸಾಧ್ಯತೆಯೂ ಕ್ಷೀಣಿಸಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದ ಜಿ.ಮಾದೇಗೌಡ ಅವರನ್ನು ಕಣಕ್ಕೆ ಇಳಿಸಲು ಹರಸಾಹಸ ಪಟ್ಟ ಕಾಂಗ್ರೆಸ್, ಅವರು ಒಲ್ಲೆ ಎಂದ ನಂತರ ನಟಿ ರಮ್ಯಾ ಅವರನ್ನು ಅಖಾಡಕ್ಕೆ ಇಳಿಸಲು ನಿರ್ಧರಿಸಿದೆ. ರಮ್ಯ ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ಸಚಿವ ಅಂಬರೀಷ್ ಅವರಿಗೆ ನೀಡಲಾಗಿದೆ.

ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಸುಮಾರು 10 ಮಂದಿ ಬಯಸಿದ್ದರು. ಅವರಲ್ಲಿ ರಮ್ಯಾ ಮತ್ತು ಎಲ್.ಆರ್.ಶಿವರಾಮೇಗೌಡ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ದೆಹಲಿಯಲ್ಲಿದ್ದು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಕಸರತ್ತು ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಕಣಕ್ಕೆ ಇಳಿಯುತ್ತಿದ್ದಾರೆ. ಅವರಿಗೆ ಪ್ರತಿಸ್ಪರ್ಧೆ ನೀಡಲು ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರನ್ನು ಜೆಡಿಎಸ್ ಕಣಕ್ಕೆ ಇಳಿಸುತ್ತಿದೆ. ಈ ಕುರಿತು ಶುಕ್ರವಾರ ಸಂಜೆ ನಡೆದ ಮುಖಂಡರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ರಮ್ಯಾ, ಅನಿತಾ ಮತ್ತು ಸುರೇಶ ಶನಿವಾರ ನಾಮಪತ್ರ ಸಲ್ಲಿಸಲಿದ್ದಾರೆ. ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾಗರಾಜು ನಾಮಪತ್ರ ಸಲ್ಲಿಸಿದರು. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಕೂಡ ಶನಿವಾರ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯಾದರೆ ಮಾತ್ರ ಎಂ.ಕೃಷ್ಣಪ್ಪ ಅವರನ್ನು ಕಣದಿಂದ ನಿವೃತ್ತಿಗೊಳಿಸಲು ನಿರ್ಧರಿಸಲಾಗಿದೆ.

ಹೊಂದಾಣಿಕೆ ಕುರಿತು ಮಾತುಕತೆ ನಡೆದಿದ್ದು, ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ. ಮಾತುಕತೆಯ ಜವಾಬ್ದಾರಿಯನ್ನು ಬಿಜೆಪಿಯ ಡಿ.ವಿ.ಸದಾನಂದ ಗೌಡ ಮತ್ತು ಆರ್.ಅಶೋಕ ಅವರಿಗೆ ವಹಿಸಲಾಗಿದೆ. ಮಂಡ್ಯದಲ್ಲಿ ವಕೀಲ ದೊರೆಸ್ವಾಮಿ ಅಥವಾ ಗಣೇಶ್ ಅವರು ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎಂದು ಗೊತ್ತಾಗಿದೆ.

ಮಂಡ್ಯ ವರದಿ: ವಸತಿ ಸಚಿವ ಅಂಬರೀಷ್ ಅವರು, ಮಾದೇಗೌಡ ಅವರನ್ನು ಮಂಡ್ಯದಲ್ಲಿ ಶುಕ್ರವಾರ ಭೇಟಿ ಮಾಡಿ ಚುನಾವಣೆಗೆ ಸ್ಪರ್ಧಿಸುವಂತೆ ಕೋರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಮೊಬೈಲ್‌ನಲ್ಲಿ ಮಾತನಾಡಿಸಿ ಮನವೊಲಿಸುವ ಪ್ರಯತ್ನ ನಡೆಸಿದರು.

`ನನಗೆ ವಯಸ್ಸಾಗಿದೆ. ಚುನಾವಣೆಗೆ ಸ್ಪರ್ಧಿಸುವ ಮನಸ್ಸೂ ಇಲ್ಲ. ಪಕ್ಷ ಯಾರಿಗೇ ಅವಕಾಶ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ' ಎಂದು ಹೇಳುವ ಮೂಲಕ ಮಾದೇಗೌಡ ಅವರು ಸಿದ್ದರಾಮಯ್ಯ ಮತ್ತು ಅಂಬರೀಷ್ ಅವರ ಮನವಿಯನ್ನು ನಯವಾಗಿಯೇ ತಳ್ಳಿ ಹಾಕಿದರು.

ಇನ್ನೊಂದೆಡೆ, ಕಾಂಗ್ರೆಸ್ ಮುಖಂಡ ಎಂ.ಬಿ. ಶ್ರೀಕಾಂತ್ ಅವರ ಉತ್ತರ ಕ್ರಿಯಾದಿ ಕಾರ್ಯದಲ್ಲಿ ಪಾಲ್ಗೊಳ್ಳಲು ಮಂಡ್ಯಕ್ಕೆ ಬಂದಿದ್ದ ರಾಜ್ಯಸಭಾ ಸದಸ್ಯ ಎಸ್.ಎಂ. ಕೃಷ್ಣ ಅವರು, `ಪಕ್ಷದ ಅಭ್ಯರ್ಥಿ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸುತ್ತದೆ' ಎಂದರು. `ಅಭ್ಯರ್ಥಿಯಾಗಿ ಯಾರ ಹೆಸರನ್ನೂ ಶಿಫಾರಸು ಮಾಡಿಲ್ಲ. ಯಾರನ್ನು ಅಂತಿಮಗೊಳಿಸುತ್ತಾರೆ ಎಂಬುದು ನನಗೆ ಗೊತ್ತಿಲ್ಲ' ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ರಮ್ಯಾ ಷರತ್ತು?: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಮಗೇ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರೆ ಮಾತ್ರ ಕಣಕ್ಕಿಳಿಯುವುದಾಗಿ ರಮ್ಯಾ ಷರತ್ತು ಹಾಕಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಉಪ ಚುನಾವಣೆ ಫಲಿತಾಂಶ ಮಾನದಂಡವಾಗಬಾರದು ಎಂದು ಅವರು ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT