ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷವಿಡೀ ಅರಸು ಶತಮಾನೋತ್ಸವ

ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ
Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ಅಂಗವಾಗಿ ಸರ್ಕಾರದ ವತಿಯಿಂದ ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ‘ಅರಸು ಅವರ ಹುಟ್ಟೂರಾದ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಆಗಸ್ಟ್‌ 20ರಂದು ಶತಮಾನೋತ್ಸವಕ್ಕೆ ಚಾಲನೆ ನೀಡಲಾಗುವುದು. ಸರ್ಕಾರ ಕಲ್ಲಹಳ್ಳಿಯನ್ನು ದತ್ತು ಪಡೆದು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲಿದೆ. ಹುಣಸೂರಿನಲ್ಲಿ ಅರಸು ಸ್ಮಾರಕ ಭವನವನ್ನು ನಿರ್ಮಿಸಲಾಗುವುದು. ಈ ಬಾರಿ ಅರಸು ಪ್ರಶಸ್ತಿಯನ್ನು ಹುಟ್ಟೂರಿನಲ್ಲೇ  ಪ್ರದಾನ ಮಾಡಲಾಗುವುದು’ ಎಂದರು.

ಭೂಸುಧಾರಣೆ ಪ್ರಕರಣ ಇತ್ಯರ್ಥ:  ಸಮಿತಿ ಉಪಾಧ್ಯಕ್ಷ, ಸಚಿವ ಆಂಜನೇಯ ಮಾತನಾಡಿ, ‘ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಬಾಕಿ ಉಳಿದಿರುವ ಭೂಸುಧಾರಣೆ ಪ್ರಕರಣಗಳನ್ನು ಕಾಲಮಿತಿ ಒಳಗೆ ಇತ್ಯರ್ಥಪಡಿಸಿ ಹಕ್ಕುಪತ್ರ ವಿತರಿಸುವ ಬಗ್ಗೆ ಹಾಗೂ ಕೊಯಮತ್ತೂರು ಸಹಕಾರಿ ಕೃಷಿ ಸೊಸೈಟಿ ಸದಸ್ಯರಿಗೆ ಹಕ್ಕುಪತ್ರ ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು’ ಎಂದರು.

ಅರಸು ಜಾರಿಗೆ ತಂದ ಭೂಸುಧಾರಣೆ,  ಜೀತ ನಿರ್ಮೂಲನೆ, ಋಣ ಪರಿಹಾರ ಕ್ರಮಗಳು, ಮಲಹೊರುವ ಪದ್ಧತಿ ನಿಷೇಧ, ಮೀಸಲಾತಿ ಮತ್ತಿತರ ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳು, ತುರ್ತು ಪರಿಸ್ಥಿತಿ ಅವಧಿಯಲ್ಲಿನ ಅವರ ಆಡಳಿತದ ಬಗ್ಗೆ ಪ್ರತಿ ಜಿಲ್ಲೆಯಲ್ಲಿ ವಿಚಾರ ಸಂಕಿರಣ, ಅವರ ರೇಡಿಯೊ ಭಾಷಣ, ವಿಧಾನ ಮಂಡಲದಲ್ಲಿ ಅವರು ಮಾಡಿರುವ ಭಾಷಣಗಳ ಪ್ರಕಟಣೆ, ಸಾಮಾಜಿಕ, ರಾಜಕೀಯ, ಆಡಳಿತ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಅವರ ಕೊಡುಗೆಗಳ ಬಗ್ಗೆ ಪ್ರಬಂಧ ಸ್ಪರ್ಧೆ,   ಅವರ  ಸಾಧನೆಗಳ ಬಗ್ಗೆ  ಕನ್ನಡ ಮತ್ತು ಇಂಗ್ಲಿಷ್‌ ಪುಸ್ತಕಗಳನ್ನು ಪ್ರಕಟಿಸಿ ಹಿಂದಿ, ಉರ್ದು, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬಂಗಾಳಿ ಭಾಷೆಗಳಿಗೆ ಭಾಷಾಂತರಿಸುವ ಬಗ್ಗೆಯೂ ಚರ್ಚಿಸಲಾಯಿತು.

ಅರಸು ಅವರ ಅಧಿಕೃತ ನಿವಾಸವಾಗಿದ್ದ ಬಾಲಬ್ರೂಯಿ ಕಟ್ಟಡವನ್ನು ಅವರ ಸಾಧನೆಗಳನ್ನು ಬಿಂಬಿಸಲು ಬಳಸಿಕೊಳ್ಳುವುದು, ಅರಸು ಸಂಶೋಧನಾ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸುವುದು ಹಾಗೂ ಬೆಂಗಳೂರು ವಿವಿ ವಿಭಜನೆಗೊಂಡ ಬಳಿಕ ಒಂದು ವಿ.ವಿಗೆ ಅರಸು ಅವರ ಹೆಸರು ಇಡುವ ಬಗ್ಗೆಯೂ ಚರ್ಚಿಸಲಾಯಿತು.

ಮರಣೋತ್ತರ ‘ಕರ್ನಾಟಕ ರತ್ನ’?
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದೇವರಾಜ ಅರಸು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು  ಮರಣೋತ್ತರವಾಗಿ ನೀಡುವ ಚಿಂತನೆ ಇದೆ ಎಂದು ಸಚಿವ ಎಚ್‌.ಆಂಜನೇಯ ತಿಳಿಸಿದರು.

‘ಸದ್ಯದ ನಿಯಮಗಳ ಪ್ರಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಕ್ಕೆ ಅವಕಾಶ ಇಲ್ಲ.  ಈ ಕುರಿತ ಮಾರ್ಗಸೂಚಿಗಳಿಗೆ ತಿದ್ದುಪಡಿ ತರುವ ಚಿಂತನೆ ನಡೆದಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದರು.

‘ಅರಸು ಹೆಸರಿನಲ್ಲಿ ಅಂಚೆ
ಚೀಟಿ ಹೊರತರುತ್ತೇವೆ.  ಅವರ ಭಾವಚಿತ್ರಗಳನ್ನು ಒಳಗೊಂಡ ಆಲ್ಬಂ, ಅವರ ಬದುಕಿನ ಕುರಿತ ಕಿರುಚಿತ್ರ,  ನಿರ್ಮಿಸಲಾಗುವುದು. ದಸರಾದಲ್ಲಿ ಅರಸು ಸ್ತಬ್ಧಚಿತ್ರ ಪ್ರದರ್ಶಿಸಲು ತೀರ್ಮಾನಿಸಲಾಗಿದೆ’ ಎಂದರು. ಅರಸು ಬಗ್ಗೆ ದೆಹಲಿ ಹಾಗೂ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದರು.

ಅಂಕಿಅಂಶ
100 ಕಡೆ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ
708 ಮಂದಿ ಕೊಯಮತ್ತೂರು ಸಹಕಾರಿ ಕೃಷಿ ಸೊಸೈಟಿ ಸದಸ್ಯರಿಗೆ ಹಕ್ಕುಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT