ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ರೋಗಪೀಡಿತ ಪತಿಯ ಎಳೆದೊಯ್ದ ಪತ್ನಿ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗೆ ತೆರಳಲು ಗಾಲಿಕುರ್ಚಿ ನೀಡದ ಕಾರಣ ರೋಗಿಯೊಬ್ಬರನ್ನು ಅವರ ಪತ್ನಿ ನೆಲದ ಮೇಲೆ ಎಳೆದುಕೊಂಡು ಹೋಗಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಮೂರು ದಿನಗಳ ಹಿಂದೆ ಹೀಗೆ ಈ ಪ್ರಕರಣ ನಡೆದಿದ್ದು, ಆಸ್ಪತ್ರೆಯ ಸಹ ರೋಗಿಯೊಬ್ಬರು ತೆಗೆದ ವಿಡಿಯೊ ತುಣುಕು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್‌’ ಆಗಿದೆ.

ಶಿವಮೊಗ್ಗ ನಗರದ ಕುರುಬರ ಪಾಳ್ಯದ 75ರ ವಯೋಮಾನದ ಅಮೀರ್ ಸಾಬ್‌ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರು ಕಟ್ಟಡದಿಂದ ಬಿದ್ದು ಎಡಗಾಲು ಮುರಿದುಕೊಂಡಿದ್ದರು. ಅಂದಿನಿಂದ ಅವರಿಗೆ ನಡೆದಾಡಲು ಊರುಗೋಲು ಆಸರೆಯಾಗಿತ್ತು. 

ಶ್ವಾಸಕೋಶದ ಸೋಂಕು, ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದ ಅವರನ್ನು ಕಳೆದ ತಿಂಗಳ 25ರಂದು ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. 30ರಂದು ಸ್ಕ್ಯಾನಿಂಗ್ ಮಾಡಿಸಲು ವೈದ್ಯರು ಸೂಚಿಸಿದ್ದರು.

‘ಗಾಲಿಕುರ್ಚಿ ನೀಡಲು ₹20 ಕೊಡುವಂತೆ ಸಿಬ್ಬಂದಿ ಕೇಳಿದರು. ಸ್ಕ್ಯಾನಿಂಗ್‌ಗೆ ಸ್ವಲ್ಪವೇ ಹಣ ಇದ್ದ ಕಾರಣ ನೀಡಲಿಲ್ಲ. ಹಾಗಾಗಿ, ಅವರು ಕುರ್ಚಿ ನೀಡಲು ನಿರಾಕರಿಸಿದರು. ಅದಕ್ಕಾಗಿ ಪತಿಯನ್ನು ಎಳೆದುಕೊಂಡೇ ಹೋದೆ’ ಎಂದು ಫಾಮಿದಾ ಹೇಳಿದರು.

ರೋಗಿಯನ್ನು ದಾಖಲಿಸಿರುವ ವಾರ್ಡ್ ಎರಡನೇ ಮಹಡಿಯಲ್ಲಿದೆ. ಸ್ಕ್ಯಾನಿಂಗ್‌ ಸೆಂಟರ್ ನೆಲ ಮಹಡಿಯಲ್ಲಿದೆ.

‘ನಮಗೆ ಸ್ವಂತ ಮನೆ ಇಲ್ಲ. ಮಾವ ಕಾಲು ಮುರಿದುಕೊಂಡಿದ್ದಾರೆ. ಬಾಡಿಗೆ ಮನೆ ಮಾಡಿಕೊಂಡಿದ್ದು, ತಿಂಗಳಿಗೆ ₹3 ಸಾವಿರ ಕೊಡುತ್ತಿದ್ದೇವೆ. ಪತಿ ಬೆಂಗಳೂರಿನಲ್ಲಿದ್ದಾರೆ. ಅತ್ತೆ ಮತ್ತು ನಾನು ಸೇರಿ ಮೆಗ್ಗಾನ್‌ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಆ ದಿನ ನಾನು ಮನೆಗೆ ಹೋಗಿದ್ದೆ. ಇಲ್ಲಿ ಎಲ್ಲದಕ್ಕೂ ಹಣ ಕೀಳುತ್ತಾರೆ’ ಎಂದು ಅಮೀರ್‌ ಸಾಬ್‌ ಸೊಸೆ (ಮಗನ ಹೆಂಡತಿ) ಫೌಸಿಯಾ ಬಾನು ಆರೋಪಿಸಿದರು.

**

**

ನಾಲ್ವರ ಅಮಾನತು

ಪ್ರಕರಣದ ಸಂಬಂಧ ನಾಲ್ವರು ಹೊರಗುತ್ತಿಗೆ ಸಿಬ್ಬಂದಿಯನ್ನು ಅಮಾನತು ಮಾಡಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಬಿ.ವಿ.ಸುಶೀಲ್‌ ಕುಮಾರ್ ಅದೇಶ ಹೊರಡಿಸಿದ್ದಾರೆ.

ಶುಶ್ರೂಷಕಿಯರಾದ ಚೈತ್ರಾ, ಜ್ಯೋತಿ, ಆಶಾ ಹಾಗೂ ಗ್ರೂಪ್‌ ‘ಡಿ’ ನೌಕರರಾದ ಸುವರ್ಣಮ್ಮ ಅಮಾನತುಗೊಂಡವರು.

ಕೂಲಂಕಷ ತನಿಖೆಗೆ ಆದೇಶ: ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹಾಗೂ  ನಿರ್ದೇಶಕ ಬಿ.ವಿ.ಸುಶೀಲ್‌ಕುಮಾರ್, ‘ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಆಸ್ಪತ್ರೆ ರಾಜ್ಯದಲ್ಲೇ 2ನೇ ಸ್ಥಾನ ಪಡೆದಿದೆ. ಈ ಘಟನೆ ಸಾಧನೆಗೆ ಕಪ್ಪುಚುಕ್ಕೆ. ಭವಿಷ್ಯದಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಕೂಲಂಕಷ ತನಿಖೆಗೆ ಆದೇಶಿಸಲಾಗಿದೆ. ವಿಚಾರಣೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೊರಗುತ್ತಿಗೆ ಸಂಸ್ಥೆಗಳಾದ ಬೆಂಗಳೂರಿನ ‘ಡಿಟೆಕ್ಟ್‌ವೆಲ್’ ಮೈಸೂರಿನ ‘ಸ್ವಿಸ್‌’ಗೆ ನೋಟಿಸ್‌ ನೀಡಲಾಗಿದೆ. ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲೂ ಸಿಬ್ಬಂದಿ ಬದಲಾವಣೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

**

ವೈದ್ಯರಿಗೆ ಲಜ್ಜೆ ಇಲ್ಲ: ರಮೇಶ್‌ಕುಮಾರ್‌
ಬೆಂಗಳೂರು:
‘ಸರ್ಕಾರದಿಂದ ಸಂಬಳ ಪಡೆಯುವ  ವೈದ್ಯರಿಗೆ ಲಜ್ಜೆ ಇಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಗೌರವ ಬರಬೇಕು ಎಂದು ಎಷ್ಟೆಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಅವಿವೇಕಿ ವೈದ್ಯರು ನಮ್ಮ ಪ್ರಯತ್ನವನ್ನು ಭಸ್ಮ ಮಾಡಿಬಿಡುತ್ತಾರೆ’

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಪತಿಯನ್ನು ಎಳೆದುಕೊಂಡು ಹೋದ ಘಟನೆ ಕುರಿತು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ನೀಡಿದ ಪ್ರತಿಕ್ರಿಯೆ ಇದು.

‘ಈ ಆಸ್ಪತ್ರೆಯು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಸ್ಪತ್ರೆಯ ನಿರ್ದೇಶಕರ ಜತೆ ಮಾತನಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗದ ಜಿಲ್ಲಾಧಿಕಾರಿಗೂ ಸೂಚಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT