ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ನಿರಾಣಿ ಪ್ರಕರಣ: ಲೋಕಾಯುಕ್ತ ತನಿಖೆ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕಾ ಸಚಿವ ಮುರುಗೇಶ ಆರ್.ನಿರಾಣಿ ವಿರುದ್ಧ ಉದ್ಯಮಿ ಆಲಂ ಪಾಷಾ ಸಲ್ಲಿಸಿರುವ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ, ದೂರಿನ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.

ತಮ್ಮ ಕುಟುಂಬದ ಕಂಪೆನಿಗಳಿಗೆ ಕಾನೂನುಬಾಹಿರವಾಗಿ ಭೂಮಿ ಹಂಚಿಕೆ ಮಾಡಿರುವುದು, ಕಾನೂನು ಉಲ್ಲಂಘಿಸಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಮತ್ತಿತರ ಆರೋಪಗಳ ಮೇಲೆ ಪಾಷಾ ಗುರುವಾರ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದರು. ಸೋಮವಾರ ದೂರನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ದೂರಿನಲ್ಲಿರುವ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದರು.

ತೀವ್ರ ತರಾಟೆ: ಅರ್ಜಿ ಸಲ್ಲಿಸಿದ ಸಂದರ್ಭದಲ್ಲೇ ನ್ಯಾಯಾಲಯದಿಂದ ತರಾಟೆಗೆ ಒಳಗಾಗಿದ್ದ ಪಾಷಾ, ಸೋಮವಾರವೂ ಗೊಂದಲಮಯ ಹೇಳಿಕೆಗಳನ್ನು ನೀಡಿದರು. ದೂರಿನಲ್ಲಿರುವ ಆರೋಪಗಳ ಬಗ್ಗೆ ಸಮರ್ಪಕ ದಾಖಲೆಗಳನ್ನು ಒದಗಿಸದೇ, ಅಸಂಬದ್ಧ ಹೇಳಿಕೆ ನೀಡಿ ಮೂಲಕ ಕಿರಿಕಿರಿಯ ವಾತಾವರಣ ನಿರ್ಮಿಸಿದರು. ದೂರು ದಾಖಲಿಸುವವರ ವರ್ತನೆಯಿಂದ ತೀವ್ರ ಅಸಮಾಧಾನಗೊಂಡ ನ್ಯಾಯಾಧೀಶರು, ನ್ಯಾಯಾಲಯದ ಸಮಯ ಹಾಳು ಮಾಡುವ ಪ್ರಯತ್ನ ನಡೆಸದಂತೆ ಎಚ್ಚರಿಕೆ ನೀಡಿದರು.

`ನಿಮ್ಮ ಹಿನ್ನೆಲೆ ಏನು? ಆರೋಪಿ ಸಚಿವರ ಜೊತೆ ನಿಮಗೆ ಏನು ಸಂಬಂಧವಿದೆ~ ಎಂಬ ಪ್ರಶ್ನೆಯನ್ನೂ ನ್ಯಾಯಾಧೀಶರು ಪಾಷಾಗೆ ಕೇಳಿದರು. ಆಗಲೂ ಸರಿಯಾದ ಉತ್ತರ ನೀಡಲಿಲ್ಲ. ವಕೀಲರ ಸಹಾಯ ಪಡೆಯದೇ ಖುದ್ದಾಗಿ ವಾದಿಸಲು ಅವಕಾಶ ಪಡೆದು, ಗೊಂದಲ ಸೃಷ್ಟಿಸುತ್ತಿರುವುದಕ್ಕೂ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ಐದು ನಿಮಿಷಗಳ ಕಾಲ ವಿಚಾರಣೆಯನ್ನು ಮುಂದೂಡಿದರು.

ಮತ್ತೆ ವಿಚಾರಣೆ ಆರಂಭವಾದಾಗ ದೂರಿನ ಪ್ರತಿಗೆ ಪಾಷಾ ಸಹಿ ಮಾಡದಿರುವುದನ್ನು ನ್ಯಾಯಾಧೀಶರು ಗಮನಿಸಿದರು. ಅಷ್ಟರಲ್ಲಿ ನ್ಯಾಯಾಲಯದ ಕ್ಷಮೆ ಕೋರಿದ ಪಾಷಾ, ಒಪ್ಪಿಗೆ ಪಡೆದು ಸಹಿ ಮಾಡಿದರು. ನಂತರ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿ ಆದೇಶ ಹೊರಡಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT