ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಉದ್ವಿಗ್ನ: ಲಾಠಿ ಪ್ರಹಾರ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಸಿಂದಗಿ: ತಹಶೀಲ್ದಾರ ಹಾಗೂ ವಿವಿಧ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಇಲ್ಲಿಯ ಮಿನಿ ವಿಧಾನಸೌಧದ ಆವರಣದಲ್ಲಿಯ ಧ್ವಜ ಸ್ತಂಭದಲ್ಲಿ ದುಷ್ಕರ್ಮಿಗಳು ಪಾಕ್ ಧ್ವಜ ಹಾರಿಸಿರುವ ಘಟನೆ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಇದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ತಲೆ ದೋರಿತ್ತು.

ಈ ಸುದ್ದಿ ತಿಳಿದು ನೂರಾರು ಸಂಖ್ಯೆಯಲ್ಲಿ ಯುವಕರು ಸ್ಥಳದಲ್ಲಿ ಜಮಾಯಿಸಿ, ಬಸವೇಶ್ವರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು. ಕಲ್ಲು ತೂರಾಟ ನಡೆದಿದ್ದರಿಂದ 2-3 ಖಾಸಗಿ ವಾಹನಗಳು ಜಖಂಗೊಂಡವು. ಮಂಗಳೂರಿನಿಂದ ಸಿಂದಗಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಸಹ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಯಿತು.ಹಿಂದೂಪರ ಸಂಘಟನೆಗಳ ಕಾರ್ಯಕರ್ತರೇ ಆ ಧ್ವಜವನ್ನು ತೆಗೆದುಹಾಕಿದರು.

ಈ ಕೃತ್ಯ ಮಾಡಿದವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು.  ಉದ್ವಿಗ್ನ ವಾತಾವರಣ ನಿರ್ಮಾಣಗೊಂಡ ಹಿನ್ನಲೆಯಲ್ಲಿ  ಅಂಗಡಿಗಳು ಬಂದ್ ಆಗಿದ್ದವು. ಸಂತೆಯನ್ನೂ ಸಹ ರದ್ದುಪಡಿಸಲಾಯಿತು.
 
ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಸಂಜೆಯವರೆಗೂ ಸ್ಥಗಿತಗೊಂಡಿತ್ತು. ಸಂತೆ ರದ್ದಾಗಿದ್ದರಿಂದ ಹಳ್ಳಿಗಳಿಂದ ಬಂದಿದ್ದ ತರಕಾರಿ ಮಾರಾಟಗಾರರು, ಮಧ್ಯಮ ವರ್ಗದ ವ್ಯಾಪಾರಸ್ಥರು ತೊಂದರೆ ಅನುಭವಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ, ಪ್ರಭಾರ ಜಿಲ್ಲಾಧಿಕಾರಿ ಕಾಶಿನಾಥ ಪವಾರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು.

ಈ ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ಇದೇ 2ರಂದು (ಸೋಮವಾರ) ಸಿಂದಗಿ ಬಂದ್‌ಗೆ ಕರೆ ನೀಡಿವೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದವರು ಈ ಘಟನೆ ಖಂಡಿಸಿ ವಿಜಾಪುರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT