ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರ್ಥ ಅಘೋಷಿತ ಆಸ್ತಿ ₹650 ಕೋಟಿ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ ಅಳಿಯ, ಕೆಫೆ ಕಾಫಿ ಡೇ (ಸಿಸಿಡಿ) ವ್ಯವಸ್ಥಾಪಕ ನಿರ್ದೇಶಕ ವಿ.ಜಿ. ಸಿದ್ಧಾರ್ಥ  ಮನೆ ಮತ್ತು ಕಂಪೆನಿಗಳ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ನಡೆಸಿದ ಶೋಧ ಕಾರ್ಯಾಚರಣೆ ಮುಕ್ತಾಯವಾಗಿದ್ದು, ₹650 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ.

‘ಸಿದ್ಧಾರ್ಥ ಅವರಿಗೆ ಸೇರಿದ ಕಾಫಿ ಉದ್ಯಮ, ಪ್ರವಾಸೋದ್ಯಮ, ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಂಪೆನಿಗಳ ಮೇಲಿನ ಶೋಧ ಭಾನುವಾರ ಮುಕ್ತಾಯವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅವರು ₹ 650 ಕೋಟಿ ಅಘೋಷಿತ ಆಸ್ತಿ ಹೊಂದಿದ್ದಾರೆ ಎಂಬುದು ಗೊತ್ತಾಗಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ಕಾನೂನು ಉಲ್ಲಂಘಿಸಿರುವ ದಾಖಲೆಗಳು ದೊರೆತಿವೆ’ ಎಂದು ಐ.ಟಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವಶಪಡಿಸಿಕೊಂಡ ದಾಖಲೆಗಳನ್ನು ಆಧರಿಸಿ ವಿವಿಧ ಮೂಲಗಳನ್ನು ಬೆನ್ನು ಹತ್ತಿದ್ದು, ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಪೂರ್ಣ ಪ್ರಮಾಣದ ಶೋಧ ಮತ್ತು ದಾಖಲೆಗಳ ಪರಿಶೀಲನೆ ಮುಕ್ತಾಯವಾದ ಬಳಿಕ ಅಘೋಷಿತ ಆಸ್ತಿ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಬೆಂಗಳೂರು, ಹಾಸನ, ಚಿಕ್ಕಮಗಳೂರು, ಮುಂಬೈ ಮತ್ತು ಚೆನ್ನೈನ ಒಟ್ಟು 25 ಕಡೆಗಳಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಗುರುವಾರ (ಇದೇ 21ರಿಂದ) ಬೆಳಿಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸಿದ್ದರು.

ಸದಾಶಿವನಗರದಲ್ಲಿನ ಮನೆ, ವಿಠಲ್ ಮಲ್ಯ ರಸ್ತೆಯಲ್ಲಿನ ಕೆಫೆ ಕಾಫಿ ಡೇ ಕೇಂದ್ರ ಕಚೇರಿ, ಸಿ.ವಿ. ರಾಮನ್ ನಗರದ ಬಾಗ್ಮನೆ ಟೆಕ್ ಪಾರ್ಕ್, ಸೆರಾಯ್‌ ಹಾಸ್ಪಿಟಾಲಿಟಿ ಮತ್ತು ರೆಸಾರ್ಟ್, ಎಬಿಸಿ (ಅಮಾಲ್ಗಮೇಟೆಡ್ ಬೀನ್ ಕಾಫಿ) ಗ್ಲೋಬಲ್ ವಿಲೇಜ್, ಸಿದ್ಧಾರ್ಥ ಅವರ ಲೆಕ್ಕಪರಿಶೋಧಕ ಹುಬ್ಬಳ್ಳಿಯ ಜಯರಾಜ್ ಅವರ ರಾಜರಾಜೇಶ್ವರಿ ನಗರದಲ್ಲಿನ ಮನೆ, ಹಾಸನದ ಎಬಿಸಿ ಕಾಫಿ ಕ್ಯೂರಿಂಗ್ ಘಟಕ, ಚಿಕ್ಕಮಗಳೂರಿನ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ಕಚೇರಿ, ಸೆರಾಯ್‌ ಐಷಾರಾಮಿ ಹೋಟೆಲ್‌, ಚೈನ್ನೈನ ಕೆಫೆ ಕಾಫಿ ಡೇ ಮಳಿಗೆಗಳು ಮತ್ತು ಅರ್ಮೇನಿಯನ್‌ ಸ್ಟ್ರೀಟ್‌ನ ಜಾರ್ಜ್ ನಗರದಲ್ಲಿರುವ ಕಚೇರಿ ಮೇಲೆ ಏಕ ಕಾಲದಲ್ಲಿ ದಾಳಿ ನಡೆದಿತ್ತು.

ದೇಶದ 29 ರಾಜ್ಯಗಳಲ್ಲಿ 1,530 ಕಾಫಿ ಡೇ ಮಳಿಗೆಗಳಿದ್ದು, ದೇಶ ಮತ್ತು ವಿದೇಶದಲ್ಲಿ 10,000 ಎಕರೆಗೂ ಹೆಚ್ಚು ಕಾಫಿ ತೋಟವನ್ನು ಸಿದ್ಧಾರ್ಥ ಹೊಂದಿದ್ದಾರೆ. ಮುಂಬೈ ಮತ್ತು ಚೆನ್ನೈನಲ್ಲಿ ‘ವೇ2ವೆಲ್ತ್’  ಹಣಕಾಸು ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ವಹಿವಾಟುಗಳ ಮೇಲೆ ಒಂದು ವರ್ಷದಿಂದ ಕಣ್ಣಿಟ್ಟಿದ್ದ ಅಧಿಕಾರಿಗಳು ಈ ಸಂಬಂಧ ದಾಖಲೆ ಕಲೆ ಹಾಕುವ ಕೆಲಸ ಮಾಡಿದ್ದರು ಎನ್ನಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT