ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲಂಬಿಯಾ: ಕೆಸರಿನಲ್ಲಿ ಸಿಲುಕಿದ ಬಸ್‌, 34 ಮಂದಿ ಸಾವು

Last Updated 6 ಡಿಸೆಂಬರ್ 2022, 11:14 IST
ಅಕ್ಷರ ಗಾತ್ರ

ಬೊಗೋಟಾ, ಕೊಲಂಬಿಯಾ: ಧಾರಾಕಾರ ಮಳೆಯಿಂದ ಕೊಲಂಬಿಯಾದ ಹೆದ್ದಾರಿಯಲ್ಲಿಉಂಟಾದ ಕೆಸರುಮಣ್ಣಿನಲ್ಲಿ ಬಸ್‌ ಹಾಗೂ ಇತರ ಎರಡು ವಾಹನಗಳು ಸಿಲುಕಿಕೊಂಡು ಕನಿಷ್ಠ 34 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿಗೀಡಾದವರಲ್ಲಿ ಎಂಟು ಮಕ್ಕಳು ಸೇರಿದ್ದಾರೆ ಎಂದು ಅಲ್ಲಿನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ರಿಸಾರಾಲ್ಡಾ ಜಿಲ್ಲೆಯ ಪ್ಯೂಬ್ಲೊ ರಿಕೊದಲ್ಲಿ ಭಾನುವಾರ ಸಂಭವಿಸಿದ ಮಣ್ಣು ಕುಸಿತದಿಂದಾಗಿ ಹೆದ್ದಾರಿಯ ಎರಡು ಭಾಗವಾಗಿತ್ತು. ಕೆಸರಿನಲ್ಲಿ ಹೂತ ಬಸ್‌ನಲ್ಲಿ 34 ಮಂದಿ ಪ್ರಯಾಣಿಕರಿದ್ದರು. ಅಲ್ಲದೇ, ಆರು ಮಂದಿ ಪ್ರಯಾಣಿಸುತ್ತಿದ್ದ ಕಾರು ಮತ್ತು ಒಂದು ಬೈಕ್‌ ಸಹ ಕೆಸರಿನಲ್ಲಿ ಸಿಲುಕಿಕೊಂಡಿತ್ತು’ ಎಂದೂ ಅಧಿಕಾರಿಗಳು ಹೇಳಿದರು.

70ಕ್ಕೂ ಹೆಚ್ಚು ಶೋಧ ಮತ್ತು ರಕ್ಷಣಾ ಪಡೆಯ ಸಿಬ್ಬಂದಿ ಬುಲ್ಡೋಜರ್‌ ಹಾಗೂ ಇತರ ಉಪಕರಣಗಳ ಮೂಲಕ ಕೆಸರಿನಲ್ಲಿ ಹೂತಿದ್ದ ಮಂದಿಯನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ಸೋಮವಾರ ಮಧ್ಯಾಹ್ನ ತಮ್ಮ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು.

ಘಟನೆ ಕುರಿತಂತೆ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ಅವರು ಟ್ವೀಟ್‌ ಮಾಡಿದ್ದು, ‘ಸಂತ್ರಸ್ತರ ಕುಟುಂಬದೊಂದಿಗೆ ನಾವಿದ್ದೇವೆ. ಅವರಿಗೆ ಸರ್ಕಾರದ ಸಂಪೂರ್ಣ ಸಹಕಾರ ದೊರಕಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT