ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌ ಶಾಂತಿ ಒಪ್ಪಂದಕ್ಕೆ 80 ದೇಶಗಳ ಜಂಟಿ ಕರೆ

Published 16 ಜೂನ್ 2024, 15:52 IST
Last Updated 16 ಜೂನ್ 2024, 15:52 IST
ಅಕ್ಷರ ಗಾತ್ರ

ಬರ್ಗೆನ್‌ (ಸ್ವಿಟ್ಜರ್ಲೆಂಡ್): ಎರಡು ವರ್ಷಗಳಿಂದ ನಡೆಸುತ್ತಿರುವ ಯುದ್ಧ ಕೊನೆಗೊಳಿಸುವ ಯಾವುದೇ ಶಾಂತಿ ಒಪ್ಪಂದವು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆ ಕಾ‍ಪಾಡುವಂತಿರಬೇಕು ಎಂದು ಸುಮಾರು 80 ದೇಶಗಳು ಭಾನುವಾರ ಜಂಟಿ ಕರೆ ನೀಡಿವೆ. 

ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಎರಡು ದಿನಗಳಿಂದ ನಡೆದ ಸ್ವಿಸ್‌ ಶಾಂತಿ ಸಮ್ಮೇಳನದ ಕೊನೆಯಲ್ಲಿ ಈ ಒಮ್ಮತದ ಕರೆ ನೀಡಲಾಗಿದೆ. ಆದರೆ, ರಷ್ಯಾ ಅನುಪಸ್ಥಿತಿಯಲ್ಲಿ ಈ ಕರೆ ಕೊಡುವಲ್ಲಿ ಕೆಲವು ಪ್ರಮುಖ ಅಭಿವೃದ್ಧಿಶೀಲ ದೇಶಗಳು ಹೊರಗುಳಿದವು.

ಸಹಿ ಹಾಕದೇ ಹೊರಗುಳಿದವರಲ್ಲಿ ಭಾರತ, ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ, ಸಂಯುಕ್ತ ಅರಬ್‌ ಸಂಸ್ಥಾನ ಪ್ರಮುಖವಾಗಿವೆ. 

ಈ ಶಾಂತಿ ಸಮ್ಮೇಳನಕ್ಕೆ ರಷ್ಯಾಕ್ಕೆ ಆಹ್ವಾನ ನೀಡಲಾಗಿರಲಿಲ್ಲ. ಆದರೆ, ಇದರಲ್ಲಿ ಪಾಲ್ಗೊಂಡಿದ್ದ ಬಹುತೇಕ ದೇಶಗಳ ನಾಯಕರು ರಷ್ಯಾ ಶಾಂತಿ ಒಪ್ಪಂದಕ್ಕೆ ಕಿವಿಗೊಡಬಹುದೆಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಶಾಂತಿ ಸಮ್ಮೇಳನದಲ್ಲಿ ಪರಮಾಣು ಸುರಕ್ಷತೆ, ಆಹಾರ ಭದ್ರತೆ ಮತ್ತು ಕೈದಿಗಳ ವಿನಿಮಯ ಕುರಿತ ವಿಷಯಗಳು ಚರ್ಚೆಯಾದವು.  ಸಮ್ಮೇಳನದಲ್ಲಿ ಸುಮಾರು 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 

ಸ್ವಿಟ್ಜರ್ಲೆಂಡ್‌ ಅಧ್ಯಕ್ಷೆ ವಿಯೋಲಾ ಪ್ಯಾಟ್ರಿಸಿಯಾ ಅಮ್ಹೆರ್ಡ್‌ ಆತಿಥ್ಯ ವಹಿಸಿದ್ದರು.

ಉಕ್ರೇನ್‌ನ ಹಳ್ಳಿ ವಶಪಡಿಸಿಕೊಂಡ ರಷ್ಯಾ

ದಕ್ಷಿಣ ಉಕ್ರೇನ್‌ ಪ್ರದೇಶದಲ್ಲಿರುವ ಪ್ರಮುಖ ಹಳ್ಳಿಯೊಂದನ್ನು ತನ್ನ ಪಡೆಗಳು ವಶಪಡಿಸಿಕೊಂಡಿವೆ ಎಂದು ರಷ್ಯಾ ಭಾನುವಾರ ಹೇಳಿಕೊಂಡಿದೆ.  ಮದ್ದುಗುಂಡು ಶಸ್ತ್ರಾಸ್ತ್ರ ಕೊರತೆ ಎದುರಿಸುತ್ತಿರುವ ಉಕ್ರೇನ್‌ ಪಡೆಗಳ ವಿರುದ್ಧ ರಷ್ಯಾ ಸೇನೆ ದಿನೇ ದಿನೇ ಮೇಲುಗೈಸಾಧಿಸುತ್ತಿದೆ.  ಉಕ್ರೇನ್‌ ಆಕ್ರಮಣದಲ್ಲಿ‌ ಹಲವು ತಿಂಗಳುಗಳಿಂದ ಅಷ್ಟೇನು ಪ್ರಗತಿ ಸಾಧಿಸದಿದ್ದ ರಷ್ಯಾ ಪಡೆಗಳು ವಾರದಿಂದ ಈಚೆಗೆ ಉಕ್ರೇನ್‌ನ ಪೂರ್ವ ಆಗ್ನೇಯ ಮತ್ತು ಈಶಾನ್ಯದಲ್ಲಿ ಮೂರು ಹಳ್ಳಿಗಳನ್ನು ವಶಪಡಿಸಿಕೊಂಡವು. ‘ಸೇನೆಯ ಪೂರ್ವ ಪಡೆಗಳ ಘಟಕಗಳು ಝಪೊರಿಝಿಯಾ ಪ್ರದೇಶದಲ್ಲಿ ಝಾಗ್ರಿನ್ ಜನವಸತಿಯನ್ನು ವಿಮೋಚನೆಗೊಳಿಸಿವೆ. ಅಲ್ಲದೆ ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡಿವೆ’ ಎಂದು ರಷ್ಯಾ ರಕ್ಷಣಾ ಸಚಿವಾಲಯವು ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ‘ತಮ್ಮ ಪಡೆಗಳು ವರ್ಷದ ಆರಂಭದಿಂದ ಈವರೆಗೆ ಸುಮಾರು 880 ಚದರ ಕಿಲೋಮೀಟರ್ (340 ಚದರ ಮೈಲಿ) ಭೂಮಿಯನ್ನು ವಶಪಡಿಸಿಕೊಂಡಿವೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

‘ಶಾಂತಿಮಾತುಕತೆಗೆ ರಷ್ಯಾ ಸಿದ್ಧವಿಲ್ಲ’

ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪನೆಯ ಮಾತುಕತೆಗೆ ರಷ್ಯಾ ಸಿದ್ಧವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಹೇಳಿದ್ದಾರೆ. ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಪ್ರಮುಖ ರಾಜತಾಂತ್ರಿಕ ಶೃಂಗಸಭೆಯ ಕೊನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು ‘ರಷ್ಯಾ ಶಾಂತಿಯನ್ನು ಬಯಸುವುದಿಲ್ಲ ಅದು ಸತ್ಯ. ಅದರ ನಾಯಕತ್ವವು ನ್ಯಾಯಯುತ ಶಾಂತಿಗೆ ಸಿದ್ಧವಾಗಿಲ್ಲ ಅದು ಸಹ ಸತ್ಯ’ ಎಂದು ಹೇಳಿದ್ದಾರೆ. ಉಕ್ರೇನ್ ತನ್ನ ಸೇನಾ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಶಾಂತಿ ಮಾತುಕತೆಗಳನ್ನು ಆರಂಭಿಸಲು ದೇಶದ ಪೂರ್ವ ಮತ್ತು ದಕ್ಷಿಣದಿಂದ ತನ್ನ ಸೇನೆ ಹಿಂತೆಗೆದುಕೊಳ್ಳುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾನುವಾರ ಕರೆ ಕೊಟ್ಟಿದ್ದಾರೆ. ‘ಮುಂಚೂಣಿಯ ಪ್ರದೇಶಗಳಲ್ಲಿನ ನಮ್ಮ ಪ್ರಾಬಲ್ಯವು ಉಕ್ರೇನ್‌ ಸೇನೆಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಿರುವುದು ಸ್ಪಷ್ಟ. ಶಾಂತಿ ನೆಲಸಬೇಕೆಂದರೆ ವಾಸ್ತವ ಸ್ಥಿತಿಯನ್ನು ಉಕ್ರೇನ್‌ ಅಧ್ಯಕ್ಷರು ಅರ್ಥಮಾಡಿಕೊಳ್ಳಬೇಕು’ ಎಂದು ಪುಟಿನ್‌ ಅವರ ವಕ್ತಾರ ಡಿಮಿಟ್ರಿ ಪೆಸ್ಕೊವ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT