ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಬಳಸಲೂ ಆಗದ ಸ್ಥಿತಿಯಲ್ಲಿ ಚೀನಾ ಪಾದ್ರಿ

Published 25 ಮಾರ್ಚ್ 2024, 13:33 IST
Last Updated 25 ಮಾರ್ಚ್ 2024, 13:33 IST
ಅಕ್ಷರ ಗಾತ್ರ

ಬೀಜಿಂಗ್: ಏಳು ವರ್ಷ ಜೈಲಿನಲ್ಲಿ ಕಳೆದು, ಶಿಕ್ಷೆ ಮುಗಿಸಿ ಹೊರಬಂದಿರುವ ಪಾದ್ರಿಯೊಬ್ಬರಿಗೆ ರೈಲಿನ ಟಿಕೆಟ್‌ ಖರೀದಿಸುವುದು, ವೈದ್ಯರನ್ನು ಭೇಟಿ ಮಾಡುವುದು ಕೂಡ ಸಾಧ್ಯವಾಗದ ಸ್ಥಿತಿ ಉದ್ಭವವಾಗಿದೆ. 

ರೆವರೆಂಡ್‌ ಜಾನ್‌ ಸ್ಯಾಂಕಿಯಾಂಗ್ ಕಾವೊ ಅವರು ಮಿಷನರಿ ಪ್ರವಾಸ ಮುಗಿಸಿಕೊಂಡು ಮ್ಯಾನ್ಮಾರ್‌ನಿಂದ ಬರುವಾಗ, ಏಳು ವರ್ಷಗಳ ಹಿಂದೆ ಅವರನ್ನು ಬಂಧಿಸಲಾಗಿತ್ತು. ಅಕ್ರಮ ವಲಸೆಗೆ ಕುಮ್ಮಕ್ಕು ಕೊಟ್ಟ ಅಪರಾಧದ ಮೇರೆಗೆ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ಆಯಿತು. 

ಚೀನಾದ ಚಾಂಗ್‌ಶಾನಲ್ಲಿ ಹುಟ್ಟಿದ ಕಾವೊ, ದೇಶದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಅಮೆರಿಕದ ಮಹಿಳೆಯನ್ನು ವಿವಾಹವಾಗಿದ್ದ ಅವರು, ಓದಿದ್ದು ಕೂಡ ಅದೇ ದೇಶದಲ್ಲಿ. ಹುಟ್ಟಿದ ದೇಶದಲ್ಲೇ ಧರ್ಮ ಪ್ರಚಾರ ಮಾಡಬೇಕೆಂಬ ಗುರಿಯೊಂದಿಗೆ ಅವರು ಚೀನಾದಲ್ಲಿಯೇ ನೆಲೆಸಿದ್ದರು. 

ಚೀನಾದಲ್ಲಿ ಸರ್ಕಾರ ನಡೆಸುವ ಅಧಿಕೃತ ಚರ್ಚ್‌ಗಳಲ್ಲಿ ಮಾತ್ರ ಕ್ರಿಶ್ಚಿಯನ್ ತತ್ತ್ವ ಬೋಧನೆಗೆ ಅವಕಾಶವಿದೆ. ಅನಧಿಕೃತ ಬೈಬಲ್ ಶಾಲೆಗಳು, ಖಾಸಗಿ ಚರ್ಚ್‌ಗಳಲ್ಲಿ ಧರ್ಮ ಪ್ರಚಾರವನ್ನು ನಿಷೇಧಿಸಲಾಗಿದೆ. 

ಚೀನಾದಲ್ಲಿ ಹುಟ್ಟಿದ ಪ್ರತಿಯೊಬ್ಬರ ಹೆಸರನ್ನು ‘ಹುಕೌ’ ಹೆಸರಿನ ನೋಂದಣಿ ಪುಸ್ತಕದಲ್ಲಿ ದಾಖಲು ಮಾಡಲಾಗುತ್ತದೆ. ಕಾವೊ ಅವರನ್ನು ಬಂಧಿಸಿದಾಗ, ಅವರ ತಾಯಿಯಿಂದ ಈ ನೋಂದಣಿ ಪುಸ್ತಕದಲ್ಲಿ ಹೆಸರು ದಾಖಲಾದುದಕ್ಕೆ ಇದ್ದ ಅಧಿಕೃತ ದಾಖಲಯನ್ನೂ ಪೊಲೀಸರು ಹೊತ್ತೊಯ್ದಿದ್ದರು.

ಎಪಿ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕಾವೊ ಈ ಸಂಗತಿಯನ್ನೆಲ್ಲ ತಿಳಿಸಿದ್ದಾರೆ. 

‘ಹುಕೌ’ ದಾಖಲೆ ಈಗ ಅವರ ಬಳಿ ಇಲ್ಲ. ಅಮೆರಿಕಕ್ಕೆ ತೆರಳಲು ಬಳಸುತ್ತಿದ್ದ ಪಾಸ್‌ಪೋರ್ಟ್‌ ಅನ್ನು ನವೀಕರಿಸಲು ಕೂಡ ಅವರಿಗೆ ಸಾಧ್ಯವಾಗಿರಲಿಲ್ಲ. ಯಾಕೆಂದರೆ, ಅದರ ಕಾಲಾವಧಿ ಮುಗಿದಾಗ ಅವರು ಜೈಲಿನಲ್ಲಿ ಇದ್ದರು. ಇಬ್ಬರೂ ಪುತ್ರರು ಅಮೆರಿಕದಲ್ಲಿದ್ದು, ಅವರು ಬಂದು ನೋಡಿಕೊಂಡು ಹೋಗಲಷ್ಟೇ ಸಾಧ್ಯವಾಗಿದೆ. ಅವರ ಜೊತೆ ಅಮೆರಿಕಕ್ಕೆ ಹೋಗಲು ಕೂಡ ಸಾಧ್ಯವಾಗುತ್ತಿಲ್ಲ. 

ಜೈಲಿನಿಂದ ಹೊರಬಂದರೂ, ಸಣ್ಣ ಪುಟ್ಟ ಕೆಲಸಗಳಿಗೂ ತಮಗೆ ತೊಂದರೆಯಾಗುತ್ತಿದೆ ಎನ್ನುವ ಕಾವೊ ಅವರಿಗೆ ‘ಹುಕೌ’ ದಾಖಲೆಯನ್ನು ಪೊಲೀಸರು ಹೊತ್ತೊಯ್ದದ್ದು ಯಾಕೆ ಎನ್ನುವ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT