ಬುನಿಯಾ, ಕಾಂಗೊ(ಎಎಫ್ಪಿ): ಡೆಮಾಕ್ರಟಿಕ್ ರಿಪಬ್ಲಿಕ್ ಕಾಂಗೊದಲ್ಲಿ ನಡೆದ ಹತ್ಯಾಕಾಂಡದಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಕೃತ್ಯವನ್ನು ಎಡಿಎಫ್ ಉಗ್ರರು ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇರುಮು ಪ್ರದೇಶದ ಬ್ವನಸುರಾ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಈ ದಾಳಿ ನಡೆದಿದೆ ಎಂದು ಕಿವು ಭದ್ರತಾ ಟ್ರ್ಯಾಕರ್(ಕೆಎಸ್ಟಿ) ಟ್ಟಿಟರ್ ಮೂಲಕ ತಿಳಿಸಿದೆ. ಆದರೆ, ಈ ಉಗ್ರರು ದಾಳಿ ನಡೆಸಿದ ಘಟನಾ ಸ್ಥಳದಲ್ಲಿ 36 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಇರುಮುನಲ್ಲಿರುವ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬೀಝಾ ಅವರು ತಿಳಿಸಿದ್ದಾರೆ.
ಅಲೈಡ್ ಡೆಮಾಕ್ರಟಿಕ್ ಪಡೆ(ಎಡಿಎಫ್) ಉಗ್ರರು ಭಾನುವಾರ ರಾತ್ರಿ 8 ಗಂಟೆಗೆ ಬಂದು, ಈ ದಾಳಿ ನಡೆಸಿದ್ದಾರೆ. ಆದರೆ, ಹಲವು ನಿವಾಸಿಗಳು ಈ ದಾಳಿಯಿಂದ ಪಾರಾಗಿ, ಬೇರೆಡೆ ಹೋಗಿದ್ದಾರೆ ಎಂದು ಬೀಝಾ ತಿಳಿಸಿದ್ದಾರೆ.