ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರನ ಕಲ್ಲು, ದೂಳು ಹೊತ್ತು ತಂದ ನೌಕೆ: ಹೊಸ ಇತಿಹಾಸ ಬರೆದ ಚೀನಾ

Published 26 ಜೂನ್ 2024, 0:01 IST
Last Updated 26 ಜೂನ್ 2024, 0:01 IST
ಅಕ್ಷರ ಗಾತ್ರ

ಬೀಜಿಂಗ್‌: ಬಾಹ್ಯಾಕಾಶ ಅಧ್ಯಯನ ಕ್ಷೇತ್ರದಲ್ಲಿ ಚೀನಾ ಹೊಸ ಇತಿಹಾಸ ಸೃಷ್ಟಿಸಿದೆ. 

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿರುವ, ಭೂಮಿಯಿಂದ ನೇರವಾಗಿ ಕಾಣದ ಜಾಗದ ಅಧ್ಯಯನಕ್ಕಾಗಿ ಚೀನಾ ಕಳುಹಿಸಿದ್ದ ಚಾಂಗ್‌‘ಇ–6 ನೌಕೆಯ ಘಟಕವು (ಮಾಡ್ಯೂಲ್‌) ಚಂದ್ರನ ಅಂಗಳದಿಂದ ದೂಳು, ಕಲ್ಲಿನ ಮಾದರಿಗಳನ್ನು ಹೊತ್ತೊಯ್ದು ಮಂಗಳವಾರ ಯಶಸ್ವಿಯಾಗಿ ಭೂಮಿಗೆ ಮರಳಿದೆ. 

ಇಲ್ಲಿಯವರೆಗೂ ಯಾರಿಗೂ ತಲುಪಲು ಸಾಧ್ಯವಾಗದ (ಭೂಮಿಯಿಂದ ನೇರವಾಗಿ ಕಾಣದ) ಚಂದ್ರನ ಮೇಲ್ಮೆನಲ್ಲಿ ನೌಕೆಯನ್ನು ಇಳಿಸಿ, ಅಲ್ಲಿಂದ ಮಾದರಿಗಳನ್ನು ಭೂಮಿಗೆ ತರುವುದು ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಇದರಲ್ಲಿ ಅದು ಯಶಸ್ವಿಯಾಗಿದೆ.

ಉತ್ತರ ಚೀನಾದ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಸಿಜಿವಾಂಗ್‌ ಬನ್ನಾರ್‌ನ ಪೂರ್ವ ನಿಗದಿತ ಸ್ಥಳದಲ್ಲಿ‌, ಮಂಗಳವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 2.07ಕ್ಕೆ ಚಂದ್ರನ ಅಂಗಳದ ಮಾದರಿಗಳನ್ನು ಹೊಂದಿದ್ದ ನೌಕೆಯ ಕೋಶವು ಯಶಸ್ವಿಯಾಗಿ ಭೂಮಿ ಸ್ಪರ್ಶಿಸಿತು.   

‘ನೌಕೆಯ ಕೋಶವು ಸಹಜವಾಗಿ ಕಾರ್ಯನಿರ್ವಹಿಸುತ್ತಿದ್ದು, ಯೋಜನೆಯು ಸಂಪೂರ್ಣವಾಗಿ ಯಶಸ್ವಿಯಾಗಿದೆ’ ಎಂದು ಚೀನಾದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಸಿಎಸ್‌ಎಸ್‌ಎ ಹೇಳಿದೆ. 

ಕಳೆದ ವರ್ಷದ ಆಗಸ್ಟ್‌ನಲ್ಲಿ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ರಜ್ಞಾನ್‌ ರೋವರ್‌ ಅನ್ನು ಹೊತ್ತೊಯ್ದು ‘ಚಂದ್ರಯಾನ–3’ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ನಂತರ ಚೀನಾವು ಈ ಯೋಜನೆ ಚಾಲನೆ ನೀಡಿತ್ತು.

ಭೂಮಿಗೆ ನೇರವಾಗಿ ಕಾಣದ ಚಂದ್ರನ ಮೇಲ್ಮೈನಲ್ಲಿ ನೌಕೆಯನ್ನು ಇಳಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ಚೀನಾಕ್ಕಿದೆ. 2019ರಲ್ಲೂ ಅದು ಅಲ್ಲಿ ನೌಕೆಯನ್ನು ಇಳಿಸಿತ್ತು. ಚಂದ್ರನ ಈ ಭಾಗ ತುಂಬಾ ದೂರದಲ್ಲಿರುವುದರಿಂದ ಮತ್ತು ದೊಡ್ಡ ದೊಡ್ಡ ಕುಳಿಗಳು ಹೆಚ್ಚಿದ್ದು, ಸಪಾಟದ ಪ್ರದೇಶ ಕಡಿಮೆ ಇರುವುದರಿಂದ ಅಲ್ಲಿಗೆ ತಲುಪುವುದು ತಾಂತ್ರಿಕವಾಗಿ ಹೆಚ್ಚು ಸವಾಲಿನಿಂದ ಕೂಡಿದೆ. 

2 ಕೆಜಿಯಷ್ಟು ಕಲ್ಲು ದೂಳು
ಭೂಮಿಗೆ ಬಂದಿರುವ ನೌಕೆಯ ಘಟಕವು ಚಂದ್ರನ ನೆಲದಿಂದ 2 ಕೆಜಿಯಷ್ಟು ದೂಳು ಮತ್ತು ಕಲ್ಲುಗಳನ್ನು ತಂದಿರುವ ನಿರೀಕ್ಷೆ ಇದೆ.  ‘ನೌಕೆಯ ಘಟಕವನ್ನು ಏರ್‌ಲಿಫ್ಟ್ ಮಾಡಿ ಬೀಜಿಂಗ್‌ಗೆ ತೆಗೆದುಕೊಂಡು ಹೋಗಲಾಗುವುದು. ವಿಜ್ಞಾನಿಗಳು ಅದನ್ನು ತೆರೆದು ಚಂದ್ರನ ಮಾದರಿಗಳನ್ನು ಸಂಗ್ರಹಿಸಲಿದ್ದಾರೆ. ನಂತರ ಅದನ್ನು ವಿಶ್ಲೇಷಣೆಗೆ ಒಳಪಡಿಸಲಿದ್ದಾರೆ. ಆ ಬಳಿಕ ಮಾದರಿಗಳನ್ನು ಅಂತರರಾಷ್ಟ್ರೀಯ ವಿಜ್ಞಾನಿಗಳ ಅಧ್ಯಯನಕ್ಕೂ ನೀಡಲಾಗುವುದು’ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. 
ಮೇ 3ರಿಂದ ಜೂನ್‌ 25ರವರೆಗೆ...
ಆರ್ಬಿಟರ್‌ ರಿಟರ್ನರ್‌ (ಭೂಮಿಗೆ ಮರಳುವ ನೌಕೆ) ಲ್ಯಾಂಡರ್‌ ಮತ್ತು ಅಸೆಂಡರ್‌ (ಚಂದ್ರನ ಅಂಗಳದಿಂದ ಮಾದರಿಯನ್ನು ಮೇಲಕ್ಕೆ ತರುವ ಸಾಧನ) ಹೊಂದಿದ್ದ ಚಾಂಗ್‌‘ಇ–6 ನೌಕೆಯನ್ನು ಮೇ 3ರಂದು ಉಡಾವಣೆ ಮಾಡಲಾಗಿತ್ತು.  ಚಂದ್ರನ ದಕ್ಷಿಣ ಧ್ರುವದ ಏಟ್‌ಕಿನ್‌ (ಎಸ್‌ಪಿಎ) ಕುಳಿಯಲ್ಲಿ ಜೂನ್‌ 2ರಂದು ಲ್ಯಾಂಡರ್‌–ಅಸೆಂಡರ್‌ ಸಂಯೋಜಿತ ಘಟಕ ಯಶಸ್ವಿಯಾಗಿ ಇಳಿದಿತ್ತು. 4ರಂದು ಚಂದ್ರನ ಮಾದರಿಗಳೊಂದಿಗೆ ಮೇಲಕ್ಕೆ ಚಿಮ್ಮಿದ್ದ ಅಸೆಂಡರ್ 6ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಅಲ್ಲಿ ಆರ್ಬಿಟರ್‌ ಮತ್ತು ರಿಟರ್ನರ್‌ ಒಳಗೊಂಡಿದ್ದ ಘಟಕದೊಂದಿಗೆ ಕೂಡಿಕೊಂಡಿತ್ತು. ಬಳಿಕ ಚಂದ್ರನ ಮಾದರಿಗಳನ್ನು ರಿಟರ್ನರ್‌ಗೆ ವರ್ಗಾಯಿಸಿತ್ತು.  ಆರ್ಬಿಟರ್‌–ರಿಟರ್ನರ್‌ ಸಂಯೋಜಿತ ಘಟಕವು 13 ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ನಂತರ ಭೂಮಿಯತ್ತ ಹೊರಟಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT