ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ ಆರೋಪ: ಆಘಾತಕಾರಿ ಎಂದ ಬ್ರಿಟನ್‌ ಸಿಖ್‌ ಸಂಸದರು

Published 20 ಸೆಪ್ಟೆಂಬರ್ 2023, 15:53 IST
Last Updated 20 ಸೆಪ್ಟೆಂಬರ್ 2023, 15:53 IST
ಅಕ್ಷರ ಗಾತ್ರ

ಲಂಡನ್‌: ಕೆನಡಾದಲ್ಲಿ ನಡೆದಿರುವ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ಮತ್ತು ಅಲ್ಲಿಂದ ಬರುತ್ತಿರುವ ವರದಿಗಳ ಬಗ್ಗೆ ಬ್ರಿಟನ್‌ ಸಂಸತ್‌ ಸದಸ್ಯರಾದ ಪ್ರೀತ್ ಕೌರ್ ಗಿಲ್ ಮತ್ತು ತನ್ಮನ್‌ಜೀತ್‌ ಸಿಂಗ್ ಧೇಸಿ ಆಘಾತ ವ್ಯಕ್ತಪಡಿಸಿದ್ದಾರೆ. 

ನಿಷೇಧಿತ ‘ಖಾಲಿಸ್ತಾನ್ ಟೈಗರ್ ಫೋರ್ಸ್’ ಮುಖ್ಯಸ್ಥ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಟ್ರುಡೊ ಮಾಡಿರುವ ಆರೋಪಗಳ ಬಗ್ಗೆ ನಮ್ಮ ಕ್ಷೇತ್ರಗಳ ಮತದಾರರು ನಮ್ಮನ್ನು ಸಂಪರ್ಕಿಸಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿರೋಧ ಪಕ್ಷವಾದ ಲೇಬರ್ ಪಾರ್ಟಿಯ ಸಂಸದರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ನಮ್ಮ ಆತಂಕವನ್ನು ಸಚಿವರ ಜತೆಯಲ್ಲಿ ಹಂಚಿಕೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ.   

‘ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯ ಕುರಿತ ಟ್ರುಡೊ ಅವರ ಹೇಳಿಕೆಯು ಆತಂಕ್ಕೀಡು ಮಾಡಿದೆ. ಕೆನಡಾದ ತನಿಖೆಯು ಮುಕ್ತವಾಗಿ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಮಗಿರುವ ಕಳವಳವನ್ನು ನಾನು ಮತ್ತು ನನ್ನ ಸಹೋದ್ಯೋಗಿಗಳು ಸಚಿವರಿಗೆ ತಿಳಿಸಿದ್ದೇವೆ. ಇದನ್ನೇ ನಮ್ಮ ಮತದಾರರಿಗೂ ತಿಳಸಬಯಸುತ್ತೇನೆ ’ಎಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್ ಎಡ್ಜ್‌ಬಾಸ್ಟನ್‌ನ ಸಂಸದೆ ಪ್ರೀತ್‌ ಕೌರ್‌ ಗಿಲ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ. 

ಆಗ್ನೇಯ ಇಂಗ್ಲೆಂಡ್‌ನ ಸ್ಲಫ್‌ನ ಸಂಸದ ತನ್ಮನ್‌ಜೀತ್‌ ಸಿಂಗ್‌ ಧೇಸಿ, ‘ಕೆನಡಾದಿಂದ ಬರುತ್ತಿರುವ ವರದಿಗಳು ಆಘಾತ ಮೂಡಿಸಿವೆ. ನನ್ನ ಕ್ಷೇತ್ರ ಸ್ಲಫ್‌ ಮತ್ತು ಇತರೆಡೆಗಳಿಂದ ಕರೆಗಳು ಬರುತ್ತಿವೆ. ಎಲ್ಲರಲ್ಲೂ ಆತಂಕ, ಕೋಪ, ಭಯವಿದೆ. ಪ್ರಕರಣದ ವಿಚಾರವಾಗಿ ಮಿತ್ರರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಕೆನಡಾ ಪ್ರಧಾನಿ ಹೇಳಿದ್ದಾರೆ. ಆದ್ದರಿಂದ, ನ್ಯಾಯ ಪಡೆಯಲು ನಾವು ಬ್ರಿಟನ್‌ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ಹೇಳಿದ್ದಾರೆ. 

ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ಸಂಸತ್ತಿನಲ್ಲಿ ಆರೋಪಿಸಿದ್ದರು. ಟ್ರೂಡೊ ಅವರ ಆರೋಪಗಳನ್ನು ಭಾರತ ತಿರಸ್ಕರಿಸಿದ್ದು, ‘ಇದು ಅಸಂಬದ್ಧ ಮತ್ತು ಅರ್ಥಹೀನ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT