ಚಿಕಾಗೊ: ಕಮಲಾ ಹ್ಯಾರಿಸ್ ಶ್ರೇಷ್ಠ ಅಧ್ಯಕ್ಷೆಯಾಗುತ್ತಾರೆ, ಜತೆಗೆ ಇಡೀ ಅಮೆರಿಕ ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ಕಮಲಾ ಪತಿ ಡೌಗ್ಲಾಸ್ ಎಮ್ಹಾಫ್ ಹೇಳಿದ್ದಾರೆ.
ಮಂಗಳವಾರ ರಾತ್ರಿ ಡೆಮಾಕ್ರೆಟಿಕ್ ನ್ಯಾಷನಲ್ ಕನ್ವೆಷನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಡೌಗ್ಲಾಸ್, ‘ ಕುಟುಂಬಕ್ಕಾಗಿ ಕಮಲಾ ಎಲ್ಲವನ್ನೂ ಮಾಡಿದ್ದಾರೆ, ಈಗ ದೇಶಕ್ಕೆ ಅವರ ಅಗತ್ಯವಿದೆ, ನಮಗೆ ತಿಳಿದಿರುವ ಕಮಲಾ ನಿಮ್ಮೆದುರು ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕತ್ವವನ್ನು ನಿಭಾಯಿಸಲು ಅವರು ಸಿದ್ಧರಿದ್ದಾರೆ’ ಎಂದರು.
‘ಕಮಲಾ ಉತ್ತಮ ಅಧ್ಯಕ್ಷೆಯಾಗಲಿದ್ದಾರೆ. ದೇಶವೇ ಹೆಮ್ಮೆಪಡುವಂತಹ ನಾಯಕತ್ವವಹಿಸಲಿದ್ದಾರೆ ಎನ್ನುವ ಭರವಸೆಯಿದೆ. ದೇಶಕ್ಕಿರುವ ಬೆದರಿಕೆಯ ವಿರುದ್ಧ ಧ್ವನಿಯೆತ್ತಲಿದ್ದಾರೆ. ಜನರು ಉತ್ತಮವಾಗಿರುವುದನ್ನು ಕಾಣಲು ಅವರು ಬಯಸುತ್ತಾರೆ. ಆದರೆ ಅನ್ಯಾಯವಾಗಿ ನಡೆಸಿಕೊಂಡಾಗ ದ್ವೇಷಿಸುತ್ತಾರೆ. ಅವರ ಸಹಾನುಭೂತಿಯೇ ಅವರ ಶಕ್ತಿ’ ಎಂದು ಪತ್ನಿ ಕಮಲಾ ಬಗ್ಗೆ ಬಣ್ಣಿಸಿದರು.
ಅಮೆರಿಕದಲ್ಲಿ ನ.5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಿದ್ದಾರೆ.