ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರೆಜಿಲ್: ದಾಂದಲೆಕೋರರ ಶಿಕ್ಷೆಗೆ ಪ್ರಜಾಪ್ರಭುತ್ವ ಪರ ಹೋರಾಟಗಾರರ ಆಗ್ರಹ

Published : 10 ಜನವರಿ 2023, 14:38 IST
ಫಾಲೋ ಮಾಡಿ
Comments

ರಿಯೊ ಡಿ ಜನೈರೊ (ಎಪಿ): ‘ಬ್ರೆಜಿಲ್‌ನ ಸಂಸತ್ತು, ಸುಪ್ರೀಂ ಕೋರ್ಟ್‌ ಮತ್ತು ಅಧ್ಯಕ್ಷರ ಅರಮನೆಗೆ ಭಾನುವಾರ ನುಗ್ಗಿ ದಾಂದಲೆ ನಡೆಸಿದವರು ಕ್ಷಮೆಗೆ ಅರ್ಹರಲ್ಲ. ಅವರಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡಬಾರದು’ ಎಂದು ಆಗ್ರಹಿಸಿ ಬ್ರೆಜಿಲ್‌ನ ರಿಯೊ ಡಿ ಜನೈರೊ ಮತ್ತು ಸಾವ್ ಪೌಲೊ ನಗರಗಳಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರು ಸೋಮವಾರ ಪ್ರತಿಭಟನೆ ನಡೆಸಿದರು.

ಸಾವ್‌ ಪೌಲೊ ಕಾನೂನು ವಿಶ್ವವಿದ್ಯಾಲಯದಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರು, ಭಾನುವಾರ ದಾಂದಲೆ ನಡೆಸಿದವರಿಗೆ ಕ್ಷಮೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತ ಘೋಷಣೆಗಳನ್ನು ವಿ.ವಿಯ ಗೋಡೆಗಳ ಮೇಲೂ ಬರೆಯಲಾಗಿತ್ತು. ಅಲ್ಲದೆ ವಿ.ವಿ ಸಭಾಂಗಣದಲ್ಲೂ ಈ ಘೋಷಣೆಗಳು ಮಾರ್ದನಿಸಿದವು.

ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳದೇ, ಸೋತ ರಾಜಕೀಯ ನಾಯಕರ ಬೆಂಬಲಿಗರು ಸಂಸತ್ತಿಗೇ ನುಗ್ಗಿ ದಾಂದಲೆ ನಡೆಸಿದ್ದನ್ನು ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದರು.

‘ದಾಂದಲೆ ನಡೆಸಿದವರು, ಅದಕ್ಕೆ ಕುಮ್ಮಕ್ಕು ನೀಡಿದವರು ಮತ್ತು ಅದಕ್ಕೆ ಆರ್ಥಿಕ ನೆರವು ಒದಗಿಸಿದವರನ್ನು ಶಿಕ್ಷಿಸಬೇಕು’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 61 ವರ್ಷದ ಮಹಿಳೆ ಬೆಟೆ ಅಮಿನ್‌ ಎಂಬುವವರು ಆಗ್ರಹಿಸಿದರು. ಅವರ ಟಿ–ಶರ್ಟ್‌ನ ಹಿಂಭಾಗದಲ್ಲಿ ‘ಡೆಮಾಕ್ರಸಿ’ ಪದ ಬರೆಯಲಾಗಿತ್ತು.

‘ಭಾನುವಾರ ದಾಂದಲೆ ನಡೆಸಿದವರು ಪ್ರಜಾಪ್ರಭುತ್ವದ ಪ್ರತಿನಿಧಿಗಳಲ್ಲ. ನಾವು ಪ್ರಜಾಪ್ರಭುತ್ವದ ಪ್ರತಿನಿಧಿಗಳು’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಘೋಷಣೆಗಳನ್ನು ಕೂಗಿದರು.

ಭಾನುವಾರ ದಾಂದಲೆ ನಡೆಸಿದ 1,500 ಗಲಭೆಕೋರರನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ. ಇವರಲ್ಲಿ 1,000ಕ್ಕೂ ಹೆಚ್ಚು ಜನರನ್ನು ಹತ್ತಿರದ ಪಾಪುಡಾ ಜೈಲಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧ್ಯಕ್ಷ ಲುಯಿಸ್‌ ಇನಾಸಿಯೊ ಲುಲ ಡ ಸಿಲ್ವ ಅವರು ಆಡಳಿತ ಈಗಷ್ಟೇ ಆರಂಭವಾಗಿದೆ ಎಂದು ಹೇಳಿದ್ದಾರೆ.

ಕಾನೂನು ಸಚಿವ ಫ್ಲೇವಿಯೊ ಡಿನೊ ಅವರು, ‘ಈ ರೀತಿ ಸಂಘಟನಾತ್ಮಕ ಅಪರಾಧ ಕೃತ್ಯದಲ್ಲಿ ಭಾಗಿಯಾದವರು ಮತ್ತು ಅದಕ್ಕೆ ವಿವಿಧ ರೀತಿಯಲ್ಲಿ ನೆರವು ನೀಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಷಯದಲ್ಲಿ ನಾವು ರಾಜೀ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಈ ರೀತಿಯ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸುತ್ತೇವೆ’ ಎಂದು ಪ್ರತಿಕ್ರಿಯಸಿದ್ದಾರೆ.

ರಾಜಧಾನಿಯಲ್ಲಿ ಭದ್ರತೆಯ ನಿಯಂತ್ರಣವನ್ನು ವಹಿಸಿಕೊಳ್ಳುವಂತೆ ಫೆಡರಲ್‌ ಸರ್ಕಾರಕ್ಕೆ ಆದೇಶ ನೀಡುವ ಸುಗ್ರೀವಾಜ್ಞೆಗೆ ಅಧ್ಯಕ್ಷ ಲುಲ ಅವರು ಭಾನುವಾರ ಸಹಿ ಹಾಕಿದ್ದಾರೆ. ಇದನ್ನು ಸೋಮವಾರ ರಾತ್ರಿ ಸಂಸತ್ತಿನ ಕೆಳಮನೆ ಅನುಮೋದಿಸಿದ್ದು, ಸೆನೆಟ್‌ ಅನುಮೋದನೆ ಬಾಕಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT