ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಯೋತ್ಪಾದನೆಯ ವೈಭವೀಕರಣ ವಿಷಾದಕರ: ಭಾರತ

Published 24 ಜೂನ್ 2024, 14:33 IST
Last Updated 24 ಜೂನ್ 2024, 14:33 IST
ಅಕ್ಷರ ಗಾತ್ರ

ಒಟ್ಟಾವ: ಕೆನಡಾದಲ್ಲಿ ಭಯೋತ್ಪಾದನೆಯನ್ನು ವೈಭವೀಕರಿಸಲು ಆಗಾಗ್ಗೆ ನಡೆಯುತ್ತಿರುವ ಕೃತ್ಯಗಳನ್ನು ‘ವಿಷಾದಕರ’ ಎಂದು ಬಣ್ಣಿಸಿದ ಭಾರತ, ರಾಜಕೀಯ ಲಾಭದ ಉದ್ದೇಶದಿಂದ ತನ್ನ ಗಡಿಯೊಳಗೆ ನಡೆಯುವ ಭಯೋತ್ಪಾದನಾ ಕೃತ್ಯಗಳನ್ನು ಯಾವುದೇ ಸರ್ಕಾರವೂ ಕಡೆಗಣಿಸಬಾರದು ಎಂದು ಪ್ರತಿಪಾದಿಸಿದೆ. 

‘ಕಾನಿಷ್ಕ’ ಬಾಂಬ್‌ ಸ್ಫೋಟ ಘಟನೆಯ 39ನೇ ವರ್ಷಾಚರಣೆ ಅಂಗವಾಗಿ ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್‌ ಕಚೇರಿ ಭಾನುವಾರ ಹೇಳಿಕೆ ಹೊರಡಿಸಿದ್ದು, ‘ಭಯೋತ್ಪಾದನೆಗೆ ಯಾವುದೇ ಗಡಿ, ರಾಷ್ಟ್ರೀಯತೆ ಮತ್ತು ಜನಾಂಗ ಎಂಬುದಿಲ್ಲ’ ಎಂದಿದೆ.

ಕೆನಡಾದ ಮಾಂಟ್ರಿಯಲ್‌ನಿಂದ ನವದೆಹಲಿಗೆ ಸಂಚರಿಸುತ್ತಿದ್ದ ಏರ್‌ ಇಂಡಿಯಾದ ‘ಕಾನಿಷ್ಕ’ ವಿಮಾನವನ್ನು ಸಿಖ್ ಉಗ್ರಗಾಮಿಗಳು 1985ರ ಜೂನ್‌ 23ರಂದು ಸ್ಫೋಟಿಸಿದ್ದರು. ವಿಮಾನದಲ್ಲಿದ್ದ 89 ಮಕ್ಕಳು ಸೇರಿ ಎಲ್ಲ 329 ಜನರು ಮೃತಪಟ್ಟಿದ್ದರು. 

‘ಹೇಡಿತನದ ಕೃತ್ಯ ನಡೆದು 39 ವರ್ಷಗಳು ಕಳೆದಿವೆ. ದುರದೃಷ್ಟವಶಾತ್‌, ಭಯೋತ್ಪಾದನೆಯು ಇಂದು ಕೂಡಾ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಾಗಿಯೇ ಉಳಿದುಕೊಂಡಿದೆ’ ಎಂದು ಪ್ರಕಟಣೆ ತಿಳಿಸಿದೆ.

‘1985ರ ಕಾನಿಷ್ಕ ಘಟನೆ ಸೇರಿದಂತೆ ಭಯೋತ್ಪಾದನೆಯನ್ನು ವೈಭವೀಕರಿಸುವ ಯಾವುದೇ ಕೃತ್ಯ ವಿಷಾದನೀಯ. ಶಾಂತಿಯನ್ನು ಬಯಸುವ ಎಲ್ಲ ದೇಶಗಳು ಮತ್ತು ಜನರು ಅದನ್ನು ಖಂಡಿಸಬೇಕು’ ಎಂದು ಹೇಳಿದೆ.

ಈ ದುರಂತ ಘಟನೆಯನ್ನು ಸ್ಮರಿಸಲು ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಹೈಕಮಿಷನರ್‌ ಸಂಜಯ್‌ ಕುಮಾರ್‌ ವರ್ಮಾ, ‘ಕ್ಷಣಿಕ ರಾಜಕೀಯ ಹಿತಾಸಕ್ತಿಗಿಂತ ಮಾನವ ಜೀವನವು ಹೆಚ್ಚು ಮುಖ್ಯವಾಗಿದೆ. ಭಯೋತ್ಪಾದಕ ಚಟುವಟಿಕೆಗಳು ಮಾನವೀಯತೆಗೆ ಹಾನಿಕರವಾಗುವ ಮುನ್ನವೇ ಅದನ್ನು ಹೊಸಕಿಹಾಕುವುದು ಅಗತ್ಯ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT