ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್‌ ಗಡುವು: ಗುಳೆ ಹೊರಟ ಪ್ಯಾಲೆಸ್ಟೀನಿಯನ್ನರು

Published 14 ಅಕ್ಟೋಬರ್ 2023, 15:42 IST
Last Updated 14 ಅಕ್ಟೋಬರ್ 2023, 15:42 IST
ಅಕ್ಷರ ಗಾತ್ರ

ದೈರ್‌– ಅಲ್‌– ಬಲಾಹ್‌, ಗಾಜಾ ಪಟ್ಟಿ (ಎಪಿ): ಇಸ್ರೇಲ್‌ ಮಿಲಿಟರಿ ಆದೇಶದ ಬಳಿಕ  ಪ್ಯಾಲೆಸ್ಟೀನಿಯನ್ನರು ಗಾಜಾ ಉತ್ತರ ಭಾಗವನ್ನು ತೊರೆದು ದಕ್ಷಿಣದತ್ತ ಧಾವಿಸಲು ಮುಗಿಬೀಳುವ ದೃಶ್ಯಗಳು ಶನಿವಾರ ಇಲ್ಲಿ ಕಂಡು ಬಂದವು.

ಸಾಮಾಜಿಕ ಮಾಧ್ಯಮ ಮತ್ತು ವಿಮಾನದಿಂದ ಕರಪತ್ರಗಳನ್ನು ತೂರುವ ಮೂಲಕ ಇಸ್ರೇಲ್‌, ಗಾಜಾದ ನಾಗರಿಕರು ಪಟ್ಟಣ ತೊರೆಯುವಂತೆ ಮತ್ತೆ ಒತ್ತಾಯಿಸಿದ್ದರೆ, ಮನೆಗಳಲ್ಲೇ ಉಳಿಯುವಂತೆ ಹಮಾಸ್‌ ಆಗ್ರಹಿಸಿದೆ.

ಈ ಮಧ್ಯೆ, ಗಾಜಾ ಪಟ್ಟಣದ ಆಸ್ಪತ್ರೆಗಳನ್ನು ತೆರವುಗೊಳಿಸಲು ನೀಡಿದ ಗಡುವಿನ ಅವಧಿಯನ್ನು ಇಸ್ರೇಲ್‌ 10 ತಾಸು ವಿಸ್ತರಿಸಿದೆ ಎಂದು ಪ್ಯಾಲೆಸ್ಟೀನಿಯನ್ನರ ರೆಡ್‌ ಕ್ರೆಸೆಂಟ್ ಸೊಸೈಟಿ  ಹೇಳಿದೆ.

ಆದರೆ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಮತ್ತು ಇತರರನ್ನು ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ. ಸಾಮೂಹಿಕವಾಗಿ ನಿರ್ಗಮನವು ವಿವರಿಸಲಾಗದ ಮಾನವ ಸಂಕಷ್ಟಕ್ಕೆ ಕಾರಣವಾಗುತ್ತದೆ ಎಂದು ವಿಶ್ವಸಂಸ್ಥೆ ಮತ್ತು ನೆರವು ತಂಡಗಳು ಅಭಿಪ್ರಾಯ ಪಟ್ಟಿವೆ.

ಸಾವಿರಾರು ಪ್ಯಾಲೆಸ್ಟೀನಿಯನ್ನರು ಈಗಾಗಲೇ ಎಚ್ಚರಿಕೆಗೆ ಓಗೊಟ್ಟಿದ್ದು ದಕ್ಷಿಣದತ್ತ ಸಾಗುತ್ತಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಪಟ್ಟಣವನ್ನು ಇಸ್ರೇಲ್‌ ಬಹುತೇಕ ವಶಕ್ಕೆ ತೆಗೆದುಕೊಂಡಿರುವುದರಿಂದ ಆಹಾರ, ಇಂಧನ ಮತ್ತು ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಿದೆ. ಕಾರು, ಟ್ರಕ್ಕು ಮತ್ತು ಕತ್ತೆ ಗಾಡಿಗಳಲ್ಲಿ ಮನೆ ಸಾಮಗ್ರಿ ಹೇರಿಕೊಂಡು ಜನರು ತೆರಳುತ್ತಿರುವುದರಿಂದ ಮುಖ್ಯ ರಸ್ತೆಯು ದಟ್ಟಣೆಯಿಂದ ಕೂಡಿದೆ.

ಕೆಲವರು 20 ಕಿ.ಮೀ ದೂರ ಹೋಗಿದ್ದಾರೆ. ಆದರೆ ರಸ್ತೆಗಳು ವಾಯುದಾಳಿಯಿಂದ ನಾಶವಾಗಿರುವುದು ಮತ್ತು ಇಂಧನ ಕೊರತೆ ಅವರ ಪಯಣಕ್ಕೆ ಅಡ್ಡಿಯಾಗಿದೆ.

ಸಾವಿರಾರು ಜನರು ದೈರ್‌ ಅಲ್‌ ಬಲಾಹ್‌ನಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವರು ರಾತ್ರಿ ಹೊರಗಡೆ ನೆಲದಲ್ಲಿ ಅಥವಾ ತರಗತಿಯಲ್ಲಿದ್ದ ಕುರ್ಚಿಗಳ ಮೇಲೆ ನಿದ್ರಿಸಿದ್ದಾರೆ.

‘ನಾನು ಮಕ್ಕಳೊಂದಿಗೆ ಬಂದಿದ್ದೇನೆ. ನೆಲದ ಮೇಲೆಯೇ ಮಲಗಿದೆವು. ನನ್ನ ಮನೆಗೆ ಮರಳಲು ಬಯಸುತ್ತೇನೆ. ಅದು ನಾಶವಾಗಿದ್ದರೂ ಪರವಾಗಿಲ್ಲ’ ಎನ್ನುತ್ತಾರೆ 63 ವರ್ಷದ ಹೌಯಿದಾ ಅಲ್‌ ಜಾನೀನ್‌.

ಗಾಜಾ ಗಡಿಯಿಂದ ದಕ್ಷಿಣ ಭಾಗಕ್ಕೆ ತೆರಳಲು ಅವಕಾಶ ಕಲ್ಪಿಸುವ ರಫಾ ಕ್ರಾಸಿಂಗ್‌ನಲ್ಲಿ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ತಡೆಗೋಡೆಯನ್ನು ಈಜಿಪ್ಟ್‌ ನಿರ್ಮಿಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್‌ ವಾಯುದಾಳಿ ಆರಂಭವಾದ ಬಳಿಕ ಈ ಕ್ರಾಸಿಂಗ್‌ ಅನ್ನು ಮುಚ್ಚಲಾಗಿದೆ.

ಬಂಡಕೋರರನ್ನು ಸದೆಬಡೆಯಲು ಮತ್ತು 150 ಒತ್ತೆಯಾಳುಗಳನ್ನು ಪತ್ತೆ ಹಚ್ಚಲು ಮಿಲಿಟರಿ ಪಡೆಗಳು ಗಾಜಾದಲ್ಲಿ ಶುಕ್ರವಾರ ತಾತ್ಕಾಲಿಕವಾಗಿ ಭೂದಾಳಿ ನಡೆಸಿದವು. ಪಡೆಗಳು ನಂತರದಲ್ಲಿ ವಾಪಸ್ಸಾಗಿವೆ ಎಂದು ಇಸ್ರೇಲ್‌ ಸೇನೆ ಹೇಳಿಕೊಂಡಿದೆ.

ಇಸ್ರೇಲ್‌ ದಾಳಿಯಿಂದ 724 ಮಕ್ಕಳು ಮತ್ತು 458 ಮಹಿಳೆಯರು ಸೇರಿದಂತೆ 2,200 ಜನರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದ್ದರೆ, ಹಮಾಸ್‌ ದಾಳಿಯಿಂದಾಗಿ ಇಸ್ರೇಲ್‌ನ 1,300ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 1500 ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸರ್ಕಾರ ಹೇಳಿದೆ.

ಗಾಜಾ ಗಡಿಯ ಸುತ್ತಲೂ ಇಸ್ರೇಲ್‌ ತನ್ನ ಪಡೆಗಳನ್ನು ನಿಯೋಜಿಸಿದೆ. ಆದರೆ ಭೂದಾಳಿ ನಡೆಸುವ ಬಗ್ಗೆ ನಿರ್ಧಾರ ಇನ್ನೂ ಪ್ರಕಟಿಸಿಲ್ಲ

‘ನಾವು ಹಮಾಸ್‌ ಬಂಡುಕೋರರನ್ನು ನಾಶಗೊಳಿಸುತ್ತೇವೆ’ ಎಂದು ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಶುಕ್ರವಾರ ರಾತ್ರಿ ಪುನರುಚ್ಚರಿಸಿದ್ದಾರೆ.

ಭೇಟಿ: ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಅವರು ಶನಿವಾರ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್‌ ಬಿನ್‌ ಫರ್ಹಾನ್‌ ಅವರನ್ನು ರಿಯಾದ್‌ನಲ್ಲಿ ಭೇಟಿಯಾಗಿದ್ದಾರೆ. ಗಾಜಾ ಪ್ರಜೆಗಳನ್ನು ಇಸ್ರೇಲ್‌ ರಕ್ಷಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT