ಸಿಂಗಪುರ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಭಾರತೀಯ ಮೂಲದ ಮಹಿಳೆ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ್ದಕ್ಕಾಗಿ 40 ವರ್ಷದ ಸಿಂಗಪುರದ ಮಹಿಳೆಯೊಬ್ಬರಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕಳೆದ ವರ್ಷ ಸೆಪ್ಟೆಂಬರ್ 3 ರಂದು ಈ ಘಟನೆ ಸಂಭವಿಸಿದೆ.
ಆಯಿಷಾ ಜಾಫರ್ ಎಂಬ ಸಿಂಗಪುರದ ಮಹಿಳೆ 33 ವರ್ಷದ ಭಾರತೀಯ ಮಹಿಳೆಯನ್ನು ‘ಸ್ಟುಪಿಡ್ ಇಂಡಿಯನ್’ಎಂದು ಕರೆದಿದ್ದರು.
ಚಾನೆಲ್ ನ್ಯೂಸ್ ಏಷ್ಯಾ ಉಲ್ಲೇಖಿಸಿದ ನ್ಯಾಯಾಲಯದ ದಾಖಲೆಗಳ ಪ್ರಕಾರ, ಸಂತ್ರಸ್ತ ಮಹಿಳೆಯು ತನ್ನ ಇಯರ್‌ಫೋನ್‌ನಲ್ಲಿ ಸಂಗೀತ ಕೇಳುತ್ತಿದ್ದಳು. ಈ ಸಂದರ್ಭ ಸಿಂಗಪುರದ ಮಹಿಳೆ ಹಲವು ಬಾರಿ ಆಕೆ ಬಗ್ಗೆ ಕಾಮೆಂಟ್ ಮಾಡಿದ್ದಾಳೆ.
‘ನಂತರ ಸಂತ್ರಸ್ತ ಮಹಿಳೆ ಮ್ಯೂಸಿಕ್ ಆಫ್ ಮಾಡಿ ಸಿಂಗಪುರದ ಮಹಿಳೆ ಕಿರುಚಾಡುತ್ತಿದ್ದ್ದನ್ನು ಆಲಿಸಿದ್ದಾರೆ. ಕಪ್ಪು ಚರ್ಮ ಹೊಂದಿರುವ ಭಾರತೀಯಳು. ಸ್ಟುಪಿಡ್ ಇಂಡಿಯನ್ ಎಂದೆಲ್ಲ ನಿಂದಿಸಿರುವುದು ಗಮನಕ್ಕೆ ಬಂದಿದೆ. ಬಳಿಕ, ಸಂತ್ರಸ್ತೆ ತನ್ನ ಮೊಬೈಲ್ ಫೋನ್ ತೆಗೆದುಕೊಂಡು ಘಟನೆಯನ್ನು ಚಿತ್ರೀಕರಿಸಿದ್ದಾರೆ.
ನ್ಯಾಯಾಲಯದಲ್ಲಿ ಪ್ಲೇ ಮಾಡಲಾದ ಎರಡು ವಿಡಿಯೊ ತುಣುಕುಗಳಲ್ಲಿ, ಆಯಿಷಾ, ಭಾರತೀಯ ಮಹಿಳೆಯನ್ನು ಸನ್ನೆ ಮಾಡಿ ಕೂಗುತ್ತಿರುವುದನ್ನು ಕಾಣಬಹುದು. ಆಕೆಯನ್ನು ‘ಅಲ್ಪಸಂಖ್ಯಾತ’ ಎಂದೂ ಕರೆದಿರುವುದು ಬೆಳಕಿಗೆ ಬಂದಿದೆ.
‘ನೀನು ಮತ್ತು ನಿನ್ನ ಬ್ಲಾಕ್ ಮ್ಯಾಜಿಕ್ ಮುಖ. ನಿನ್ನ ಹೃದಯವೂ ಕಪ್ಪು ... ಎಲ್ಲವೂ ಕಪ್ಪು.’ ಎಂದು ಸಿಂಗಪುರದ ಮಹಿಳೆ ಕಿರುಚಾಡಿರುವುದು ದೃಶ್ಯದಲ್ಲಿದೆ.
‘ನಿನ್ನ ತವರು ದೇಶ ಭಾರತ, ಸಿಂಗಪುರ ಅಲ್ಲ. ಸ್ಟುಪಿಡ್ ಇಂಡಿಯನ್ಸ್.. ನೀನೊಬ್ಬಳು ಭಾರತೀಯ ಮಹಿಳೆ. ಹಾಗಾಗಿಯೇ ಕಪ್ಪಗಿದ್ದೀಯ. ನಿನ್ನ ಬಣ್ಣವನ್ನು ನಾನು ದ್ವೇಷಿಸುತ್ತೇನೆ. ನಾನು ನಿನ್ನ ಮುಖವನ್ನು ಇಷ್ಟಪಡುವುದಿಲ್ಲ’ ದೇಶಬಿಟ್ಟು ತೊಲಗು ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ತಿಳಿದುಬಂದಿದೆ.
ಆಯಿಷಾ ಅವರ ಅಪರಾಧವು ‘ಗಂಭೀರ’ವಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಟಾನ್ ಜೆನ್ ತ್ಸೆ ತಮ್ಮ ತೀರ್ಪು ಪ್ರಕಟಿಸುವ ಸಂದರ್ಭ ಹೇಳಿದ್ದಾರೆ.