ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕೊರಿಯಾ ಗೂಢಚಾರ ಉಪಗ್ರಹ ಉಡಾವಣೆಗೆ ರಷ್ಯಾ ನೆರವು: ದಕ್ಷಿಣ ಕೊರಿಯಾ

Published 23 ನವೆಂಬರ್ 2023, 14:04 IST
Last Updated 23 ನವೆಂಬರ್ 2023, 14:04 IST
ಅಕ್ಷರ ಗಾತ್ರ

ಸೋಲ್‌: ಉತ್ತರ ಕೊರಿಯಾವು ರಷ್ಯಾದ ನೆರವಿನಿಂದ ಮಿಲಿಟರಿ ಗೂಢಚಾರ ಉಪಗ್ರಹವನ್ನು‌ ಉಡಾವಣೆ ಮಾಡಿದೆ ಎಂದು ದಕ್ಷಿಣ ಕೊರಿಯಾ ಗುರುವಾರ ಹೇಳಿದೆ.

ಉಪಗ್ರಹವು ಕಕ್ಷೆಗೆ ಸೇರಿರುವುದನ್ನು ದಕ್ಷಿಣ ಕೊರಿಯಾದ ಸೇನೆಪಡೆಯ ಮೂಲಗಳು ದೃಢೀಕರಿಸಿದ್ದು, ಇದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂ‌ಬುದು ಮುಂದಿನ ವಾರ ತಿಳಿಯಲಿದೆ ಎಂದಿವೆ.

‘ಮಲ್ಲಿಗ್ಯೊಂಗ್‌-1’ ಗೂಢಚಾರ ಉಪಗ್ರಹವನ್ನು‌ ಮಂಗಳವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ. ಈ ವರ್ಷದ ಆರಂಭದಲ್ಲಿ ಈ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಎರಡು ಪ್ರಯತ್ನಗಳು ತಾಂತ್ರಿಕ ದೋಷದಿಂದ ವಿಫಲಗೊಂಡಿದ್ದವು. 

ಈ ಉಪಗ್ರಹ ಉಡಾವಣೆಯಿಂದ ದಕ್ಷಿಣ ಮತ್ತು ಉತ್ತರ ಕೊರಿಯಾಗಳ ನಡುವಿನ ವೈರತ್ವ ಇನ್ನಷ್ಟು ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಕೊರಿಯಾದ ಉಪಗ್ರ‌ಹ ಯೋಜನೆಗಳಿಗೆ ಸಹಕಾರ ನೀಡುವುದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಭರವಸೆ ನೀಡಿದ್ದರು. ಉತ್ತರ ಕೊರಿಯಾವು ಈ ಹಿಂದೆ ಉಪಗ್ರಹ ಉಡಾವಣೆಗೆ ಬಳಸಿದ್ದ ‘ಚೊಲ್ಲಿಮಾ–1’ ರಾಕೆಟ್‌ನ್ ವಿನ್ಯಾಸದ ಮಾಹಿತಿ ಮತ್ತು ಇತರ ದತ್ತಾಂಶಗಳನ್ನು ರಷ್ಯಾಕ್ಕೆ ಕಳುಹಿಸಿತ್ತು ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ತಿಳಿಸಿದೆ.

ರಷ್ಯಾವು ಉತ್ತರ ಕೊರಿಯಾದ ಉಪಗ್ರಹ ಯೋಜನೆಗಳಿಗೆ ತಾಂತ್ರಿಕ ನೆರವು ನೀಡುತ್ತಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಶಿನ್ ವೊನ್ಸಿಕ್ ಅವರು ಸಂಸದೀಯ ಸಭೆಯಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಮತ್ತೆ ಕ್ಷಿಪಣಿ ಪರೀಕ್ಷೆ:

ಉತ್ತರ ಕೊರಿಯಾವು ಬುಧವಾರ ರಾತ್ರಿ ‘ಬ್ಯಾಲೆಸ್ಟಿಕ್‌‘ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಅದು ವಿಫಲಗೊಂಡಿರುವ ಸಾಧ್ಯತೆ ಇದೆ ಎಂದು ದಕ್ಷಿಣ ಕೊರಿಯಾದ ಸೇನಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕೊರಿಯಾದ ಜೊತೆಗಿನ 2018ರ ಒಪ್ಪಂದಗಳನ್ನು ಭಾಗಶಃ ರದ್ದುಗೊಳಿಸಲು ತೀರ್ಮಾನಿಸಿರುವುದಾಗಿ ದಕ್ಷಿಣ ಕೊರಿಯಾ ಹೇಳಿದ ಬಳಿಕ ಈ ಕ್ಷಿಪಣಿ ಪರೀಕ್ಷೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT