ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ವಿರಾಮ ನಿರ್ಣಯ: ಅಮೆರಿಕ ವಿಟೊ ಸಾಧ್ಯತೆ

Published 20 ಫೆಬ್ರುವರಿ 2024, 15:31 IST
Last Updated 20 ಫೆಬ್ರುವರಿ 2024, 15:31 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ, ಅಮೆರಿಕ: ಗಾಜಾದಲ್ಲಿ ತಕ್ಷಣವೇ ಕದನ ವಿರಾಮ ಘೋಷಣೆ ಮಾಡಬೇಕೆಂಬ ಕರಡು ನಿರ್ಣಯದ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತದಾನ ನಡೆಯಲಿದ್ದು, ಅಮೆರಿಕವು ‘ವಿಟೊ’ ಪರಮಾಧಿಕಾರ ಬಳಸಿ ನಿರ್ಣಯದ ಅನುಮೋದನೆ ತಡೆಯುವ ಸಾಧ್ಯತೆಯಿದೆ.

ಅಲ್ಜೀರಿಯಾ ಸಿದ್ಧಪಡಿಸಿರುವ ಕರಡು ನಿರ್ಣಯವನ್ನು ಮಂಗಳವಾರ ಭದ್ರತಾ ಮಂಡಳಿ ಸಭೆಯಲ್ಲಿ ಇಡಲಾಯಿತು. ‘ಮಾನವೀಯ ನೆಲೆಯಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಬೇಕು. ಎಲ್ಲ ದೇಶಗಳೂ ಇದನ್ನು ಒಪ್ಪಬೇಕು’ ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. 

ಗಾಜಾ ಪಟ್ಟಿಯ ರಫಾ ನಗರದ ಮೇಲೆ ದಾಳಿಗೆ ಇಸ್ರೇಲ್‌ ಸಿದ್ಧತೆ ನಡೆಸುತ್ತಿರುವ ಸಮಯದಲ್ಲೇ ಕರಡು ನಿರ್ಣಯದ ಮೇಲೆ ಮತದಾನ ನಡೆಯಲಿದೆ. ಪ್ಯಾಲೆಸ್ಟೀನಿಯರ ಬಲವಂತದ ಸ್ಥಳಾಂತರವನ್ನು ಕರಡು ವಿರೋಧಿಸುತ್ತದೆ. ಜೊತೆಗೆ ಬಂಧಿತ ಹಮಾಸ್ ಬಂಡುಕೋರರನ್ನು ಬಿಡುಗಡೆಗೊಳಿಸುವಂತೆಯೂ ಒತ್ತಾಯಿಸುತ್ತದೆ.

ಆದರೆ, ಅಲ್ಜೀರಿಯಾ ಸಿದ್ಧಪಡಿಸಿರುವ ಕರಡಿಗೆ ಅಮೆರಿಕ ವಿರೋಧ ವ್ಯಕ್ತಪಡಿಸಿದ್ದು, ‘ಇದು ಸ್ವೀಕಾರಾರ್ಹವಲ್ಲ’ ಎಂದು ಹೇಳಿದೆ. ಅದರ ವಿರುದ್ಧ ವಿಟೊ ಚಲಾಯಿಸುವುದಾಗಿ ಬೆದರಿಕೆ ಒಡ್ಡಿದೆ.

‘ಈ ಕರಡು ನಿರ್ಣಯ ಮತದಾನದ ಹಂತಕ್ಕೆ ಬಂದರೆ, ಅದು ಮುಂದುವರೆಯಲು ನಾವು ಬಿಡುವುದಿಲ್ಲ’ ಎಂದು ವಿಶ್ವಸಂಸ್ಥೆಗೆ ಅಮೆರಿಕದ ಉಪ ರಾಯಭಾರಿ ಆಗಿರುವ ರಾಬರ್ಟ್ ವುಡ್ ತಿಳಿಸಿದ್ದಾರೆ.

ರಾಜಕುಮಾರ ವಿಲಿಯಂ ಕಳವಳ (ಲಂಡನ್‌ ವರದಿ): ಇಸ್ರೇಲ್– ಹಮಾಸ್‌ ಯುದ್ಧದಿಂದ ಅಪಾರ ಪ್ರಾಣ ಹಾನಿ ಸಂಭವಿಸಿರುವುದಕ್ಕೆ ರಾಜಕುಮಾರ ವಿಲಿಯಂ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘ಇತರ ಅನೇಕ ಮಂದಿಯಂತೆ ನಾನು ಕೂಡಾ ಈ ಯುದ್ಧ ಬೇಗನೇ ಕೊನೆಗೊಳ್ಳಬೇಕೆಂದು ಬಯಸುತ್ತೇನೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಯುದ್ಧಪೀಡಿತ ಗಾಜಾ ಪಟ್ಟಿಗೆ ಮಾನವೀಯ ನೆರವಿನ ಅಗತ್ಯವಿದೆ. ಅಲ್ಲಿನ ಜನರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಪೂರೈಸುವುದು ಮತ್ತು ಎಲ್ಲ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ ಮುಖ್ಯವಾಗಿದೆ’ ಎಂದಿದ್ದಾರೆ.

ಬ್ರಿಟನ್‌ನ ರಾಜ ಕುಟುಂಬವು ಸಾಮಾನ್ಯವಾಗಿ ಯುದ್ಧ ಅಥವಾ ಅಂತರರಾಷ್ಟ್ರೀಯ ಮಟ್ಟದ ವಿವಾದಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT