ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರ ಅಧಿಕಾರಾವಧಿಗೆ ಮಿತಿ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಈಜಿಪ್ಟ್ ಸಂವಿಧಾನಕ್ಕೆ ತಿದ್ದುಪಡಿ ಶಿಫಾರಸು ಮಾಡಲು ನೇಮಕಗೊಂಡಿರುವ ಸಮಿತಿಯು ದೇಶದ ಅಧ್ಯಕ್ಷರ ಅಧಿಕಾರಾವಧಿಗೆ ಮಿತಿ ಸೂಚಿಸಿದೆ ಹಾಗೂ ತುರ್ತು ಸ್ಥಿತಿ ಹೇರುವ ಅಧಿಕಾರಕ್ಕೆ ಕಡಿವಾಣಗಳನ್ನು ಶಿಫಾರಸು ಮಾಡಿದೆ. ದೇಶವನ್ನು ದೀರ್ಘಾವಧಿ ಆಳಿದ್ದ ಹೋಸ್ನಿ ಮುಬಾರಕ್ ಅವರ ವಿರುದ್ಧ ಬಂಡೆದಿದ್ದ ಪ್ರಜಾಪ್ರಭುತ್ವ ಪರ ಹೋರಾಟಗಾರರು ಸಹ ಈ ಮೇಲಿನ ಅಂಶಗಳನ್ನೇ ತಮ್ಮ ಪ್ರಮುಖ ಬೇಡಿಕೆಯನ್ನಾಗಿ ಇಟ್ಟಿದ್ದರು.

ಎಂಟು ಸದಸ್ಯರ ಸಮಿತಿಯು ಸಂವಿಧಾನದ 11 ಅನುಚ್ಛೇಧಗಳಿಗೆ ತಿದ್ದುಪಡಿಯನ್ನು ಶಿಫಾರಸು ಮಾಡುವುದರ ಜತೆಗೆ ಇನ್ನೂ ಕೆಲವು ಸಲಹೆಗಳನ್ನು ನೀಡಿ ವರದಿಯನ್ನು ಸೇನೆಯ ಉನ್ನತ ಆಡಳಿತ ಮಂಡಳಿಗೆ ಸಲ್ಲಿದೆ. ಹೊಸ ಶಿಫಾರಸಿನ ಪ್ರಕಾರ ಅಧ್ಯಕ್ಷರ ಅಧಿಕಾರಾವಧಿ ನಾಲ್ಕು ವರ್ಷಗಳು ಹಾಗೂ ಎರಡು ಬಾರಿ ಮಾತ್ರ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಬಹುದು.

ಸಂಸತ್ತಿನ ಅನುಮೋದನೆ ಇಲ್ಲದೆ ಅಧ್ಯಕ್ಷರು ದೇಶದಲ್ಲಿ ತುರ್ತು ಸ್ಥಿತಿಯನ್ನು ಘೋಷಿಸುವಂತಿಲ್ಲ ಎಂಬುದು ಇನ್ನೊಂದು ಪ್ರಮುಖ ಶಿಫಾರಸು. ತುರ್ತು ಸ್ಥಿತಿ ಆರು ತಿಂಗಳು ಮಾತ್ರ ಜಾರಿಯಲ್ಲಿ ಇರಬೇಕು. ಆರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ವಿಸ್ತರಿಸಬೇಕಾದರೆ ಜನಮತಗಣನೆ ಮಾಡಬೇಕು ಎಂಬ ಷರತ್ತನ್ನು ತಿದ್ದುಪಡಿಯಲ್ಲಿ ಸೂಚಿಸಲಾಗಿದೆ. ಎರಡು ಅವಧಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ವ್ಯಕ್ತಿ ಮತ್ತೆ ಅಧ್ಯಕ್ಷರ ಹುದ್ದೆಯ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಮಹತ್ವದ ಶಿಫಾರಸು ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ತರೆಕ್-ಅಲ್-ಬಶಿರಿ  ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 40 ವರ್ಷಗಳಾಗಿರಬೇಕು ಎಂದು ಸೂಚಿಸಿರುವ ಸಮಿತಿಯು, ಗರಿಷ್ಠ ವಯೋಮಿತಿ ಬಗ್ಗೆ ಏನನ್ನೂ ಹೇಳಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ವ್ಯಕ್ತಿಯ ತಂದೆ ತಾಯಿಗಳು ಈಜಿಪ್ಟ್‌ನವರೇ ಆಗಿರಬೇಕು, ಬೇರೆ ರಾಷ್ಟ್ರದ ಪೌರತ್ವ ಹೊಂದಿರಬಾರದು ಮತ್ತು ಈಜಿಪ್ಟ್ ಮಹಿಳೆಯನ್ನೇ ಮದುವೆಯಾಗಿರಬೇಕು ಎಂಬ ಷರತ್ತುಗಳನ್ನು ಶಿಫಾರಸು ಮಾಡಲಾಗಿದೆ.

ಅಧ್ಯಕ್ಷ ಪದವಿಗೆ ಸ್ಪರ್ಧಿಸುವ ಅಭ್ಯರ್ಥಿಯನ್ನು ಜನಪ್ರತಿನಿಧಿಗಳ ಸಭೆಯ ಕನಿಷ್ಠ 30 ಸದಸ್ಯರು ಅನುಮೋದಿಸಬೇಕು ಅಥವಾ 15 ಪ್ರಾಂತ್ಯಗಳ ಕನಿಷ್ಠ 30 ಸಾವಿರ ನಾಗರಿಕರು ಅನುಮೋದಿಸಬೇಕು ಅಥವಾ ಅಸ್ತಿತ್ವದಲ್ಲಿ ಇರುವ ರಾಜಕೀಯ ಪಕ್ಷಗಳು ಸಂಸತ್ತಿನ ಯಾವುದಾದರು ಒಂದು ಸದನದ ಒಬ್ಬ ಸಂಸದನನ್ನು ಸೂಚಿಸಬೇಕು ಎಂಬ ಷರತ್ತನ್ನು ಸಮಿತಿ ಶಿಫಾರಸು ಮಾಡಿದೆ. ಸಂವಿಧಾನ ತಿದ್ದುಪಡಿಯಾದ ನಂತರ ನಡೆಯುವ ಚುನಾವಣೆಯಲ್ಲಿ ಆಯ್ಕೆಯಾಗುವ ಅಧ್ಯಕ್ಷರು 60 ದಿನಗಳ ಒಳಗಾಗಿ ಉಪಾಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT