ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ವಿರುದ್ಧ ಚೀನಾ ಪ್ರತೀಕಾರ

ನ್ಯಾಯಯುತವಲ್ಲದ ವ್ಯಾಪಾರ ನೀತಿ; ಆಮದು ಸರಕು ಮೇಲೆ ಗರಿಷ್ಠ ಸುಂಕ
Last Updated 23 ಮಾರ್ಚ್ 2018, 20:29 IST
ಅಕ್ಷರ ಗಾತ್ರ

ಬೀಜಿಂಗ್‌: ತನ್ನ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದಲ್ಲಿ ಆಮದು ಸುಂಕ ವಿಧಿಸಿರುವುದಕ್ಕೆ ಪ್ರತೀಕಾರಾರ್ಥ ಚೀನಾ ಕೂಡ ಅಮೆರಿಕದ ಉತ್ಪನ್ನಗಳಿಗೆ ಗರಿಷ್ಠ ದರದ ಆಮದು ಸುಂಕ ವಿಧಿಸಿದೆ.

ಅಮೆರಿಕದ 128 ಉತ್ಪನ್ನಗಳಿಗೆ ನೀಡಲಾಗುತ್ತಿದ್ದ ಸುಂಕ ವಿನಾಯ್ತಿಯನ್ನೂ ಚೀನಾ ರದ್ದುಪಡಿಸಿದೆ. ಸರಕುಗಳ ಆಮದು ನಿರ್ಬಂಧಿಸುವುದಕ್ಕೆ ಸಂಬಂಧಿಸಿದಂತೆ ವಿಶ್ವದ ಎರಡು ಅತಿ ದೊಡ್ಡ ಆರ್ಥಿಕತೆಗಳ ನಡುವಣ ಈ ವಿವಾದವು, ‘ವಾಣಿಜ್ಯ ಸಮರ’ಕ್ಕೆ ಎಡೆಮಾಡಿಕೊಡಲಿದೆ ಎನ್ನುವ ಭೀತಿ ಮೂಡಿಸಿದೆ.

ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಒಟ್ಟಾರೆ ₹ 3.90ಲಕ್ಷ ಕೋಟಿಗಳಷ್ಟು ತೆರಿಗೆ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ.

ಚೀನಾವು ಅಮೆರಿಕದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕದ್ದಿರುವುದು ಏಳು ತಿಂಗಳ ಕಾಲ ನಡೆದ ತನಿಖೆಯಲ್ಲಿ ಪತ್ತೆಯಾದ ನಂತರ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕವು ಈ ಸಂಬಂಧ ಚೀನಾದ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆಗೂ (ಡಬ್ಲ್ಯುಟಿಒ) ದೂರು ನೀಡಿದೆ.

2 ಲಕ್ಷ ಉದ್ಯೋಗ ನಷ್ಟ: ಚೀನಾ ಜತೆಗಿನ ವ್ಯಾಪಾರ ಕೊರತೆಯಿಂದಾಗಿ ಅಮೆರಿಕದಲ್ಲಿ ಎರಡು ಲಕ್ಷದಷ್ಟು ಉದ್ಯೋಗ ಅವಕಾಶಗಳು ನಷ್ಟವಾಗಲಿವೆ ಎಂದು ಅಂದಾಜಿಸಲಾಗಿದೆ.

ಚೀನಾದ ನ್ಯಾಯಯುತವಲ್ಲದ ವ್ಯಾಪಾರ ನೀತಿಗಳ ವಿರುದ್ಧ ಟ್ರಂಪ್‌ ಅವರು ಕೈಗೊಂಡಿರುವ ಕ್ರಮಗಳನ್ನು ಅಮೆರಿಕ ಸರ್ಕಾರವು ಬಲವಾಗಿ ಸಮರ್ಥಿಸಿಕೊಂಡಿದೆ.

ಚೀನಾ ಅನುಸರಿಸುತ್ತಿರುವ ವಾಣಿಜ್ಯ ಧೋರಣೆಯಿಂದಾಗಿ ಅದರ ಜತೆಗಿನ ತನ್ನ ಸರಕುಗಳ ವ್ಯಾಪಾರ ಕೊರತೆಯು ₹ 24 ಲಕ್ಷ ಕೋಟಿಗಳಿಗೆ ತಲುಪಲಿದೆ ಎಂದು ಅಮೆರಿಕ ಅಂದಾಜಿಸಿದೆ. ಚೀನಾ, ಇತರ ದೇಶಗಳ ಜತೆಗೂ ಇದೇ ಬಗೆಯ ತಾರತಮ್ಯದಿಂದ ಕೂಡಿದ ವಾಣಿಜ್ಯ ನೀತಿ ಅನುಸರಿಸುತ್ತಿದೆ ಎಂದೂ ಟ್ರಂಪ್‌ ಆಡಳಿತ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT