ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ರಮಣ:ಚೀನಾ ನಕಾರ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ):  ಚೀನಾದ ಸೇನಾ ಸಾಮರ್ಥ್ಯ ಮತ್ತು ಬಲಪ್ರಯೋಗದ ಬಗ್ಗೆ ನೆರೆಯ ಏಷ್ಯಾ ರಾಷ್ಟ್ರಗಳಲ್ಲಿ ಆತಂಕ ಹೆಚ್ಚಿರುವುದರ ನಡುವೆ ಪ್ರತಿಕ್ರಿಯಿಸಿರುವ ಆ ದೇಶ, ‘ತಾನು ಯಾವುದೇ ಶಸ್ತ್ರಾಸ್ತ್ರ ಪೈಪೋಟಿಯಲ್ಲಿಲ್ಲ ಅಥವಾ ಯಾವುದೇ ರಾಷ್ಟ್ರದ ಮೇಲೂ ಆಕ್ರಮಣ ಬೆದರಿಕೆ ಒಡ್ಡುವುದಿಲ್ಲ ಹಾಗೂ ಎಂದಿಗೂ ಭೂಪ್ರದೇಶವನ್ನು ವಿಸ್ತರಿಸುವ ನೀತಿ ಅನುಸರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

“ಬಿಸಿಯಾದ ಸನ್ನಿವೇಶದಲ್ಲಿರುವ ಅಂತರರಾಷ್ಟ್ರೀಯ ವಿವಾದಗಳಿಗೆ ಶಾಂತಿಯುತ ಪರಿಹಾರ ಹುಡುಕಬೇಕೆಂಬ ನಿಲುವನ್ನು ಚೀನಾ ಹೊಂದಿದ್ದು ತನ್ನನ್ನು ರಕ್ಷಿಸಿಕೊಳ್ಳುವ ಸ್ವರೂಪದ ರಾಷ್ಟ್ರೀಯ ರಕ್ಷಣಾ ನೀತಿಯನ್ನು ಅನುಸರಿಸಲು ಬಯಸಿದೆ” ಎಂದು ಅದು ತಿಳಿಸಿದೆ.

ಅಮೆರಿಕಕ್ಕೆ ನಾಲ್ಕು ದಿನಗಳ ಭೇಟಿ ನೀಡಿರುವ ಚೀನಾ ಅಧ್ಯಕ್ಷ ಹು ಜಿಂಟಾವೊ ಅವರು, ಉಭಯ ದೇಶಗಳ ವಾಣಿಜ್ಯ ಮಂಡಳಿ ಸದಸ್ಯರನ್ನುದ್ದೇಶಿಸಿ ಶುಕ್ರವಾರ ಮಾತನಾಡಿದರು. ಸುಮಾರು 13 ವರ್ಷಗಳ ನಂತರ ಚೀನಾ ಅಧ್ಯಕ್ಷರೊಬ್ಬರು ಅಮೆರಿಕಕ್ಕೆ ಈ ಭೇಟಿ ನೀಡಿದ್ದಾರೆ.

“ಉಭಯತ್ರರ ನಡುವಿನ ಸಂಬಂಧಗಳು ಗಟ್ಟಿಯಾಗಿ, ಪ್ರಬಲವಾಗಿ ಹಾಗೂ ಅಭಿವೃದ್ಧಿಯತ್ತ ಸಾಗಿದಲ್ಲಿ ಎರಡೂ ದೇಶಗಳ ಜನರ ಮೂಲಭೂತ ಹಿತಾಸಕ್ತಿಗಳು ಈಡೇರುವುವು. ಇದು ಜಾಗತಿಕ ಶಾಂತಿ ಮತ್ತು ಪ್ರಗತಿಗೆ ಬಹಳ ಮುಖ್ಯವಾದುದು.

ಪರಸ್ಪರ ಗೌರವ ಮತ್ತು ಲಾಭದಾಯಕದ ಆಧಾರದಲ್ಲಿ ಸಹಕಾರ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಬೇಕಿದೆ. ಇದರಿಂದ ಎರಡೂ ದೇಶಗಳ ಜನತೆಗೆ ಮತ್ತು ವಿಸ್ತೃತವಾಗಿ ವಿಶ್ವಮಟ್ಟದಲ್ಲಿ ಹೆಚ್ಚು ಲಾಭವಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.

‘ಎರಡೂ ದೇಶಗಳು ಹೆಚ್ಚು ಆಸಕ್ತಿ ಹೊಂದಿರುವ ಏಷ್ಯಾ-ಪೆಸಿಫಿಕ್‌ನ ಅಭಿವೃದ್ಧಿ ಮತ್ತು ಪ್ರಗತಿಗೆ ಚೀನಾ ಮತ್ತು ಅಮೆರಿಕ ಬದ್ಧವಾಗಿವೆ. ಪ್ರಾದೇಶಿಕ ಪರಿಸ್ಥಿತಿ ಮತ್ತು ದ್ವಿಪಕ್ಷೀಯ ಬಾಂಧವ್ಯದ ಬೆಳವಣಿಗೆಗೆ ಉಭಯತ್ರರ ಮಧ್ಯೆ ಸಹಕಾರ ಅತ್ಯವಶ್ಯ’ ಎಂದು ಅವರು ಹೇಳಿದರು.

“ಕೊರಿಯಾ ಅಣ್ವಸ್ತ್ರ ಕಾರ್ಯಕ್ರಮ, ಆಫ್ಘಾನಿಸ್ತಾನ, ದಕ್ಷಿಣ ಏಷ್ಯಾ ಮತ್ತಿತರ ಪ್ರಾದೇಶಿಕ ವಿಷಯಗಳಲ್ಲಿ ಚೀನಾ ಮತ್ತು ಅಮೆರಿಕ ನಿಕಟ ಸಂಪರ್ಕ ಮತ್ತು ಅನ್ಯೋನ್ಯ ಸಂಬಂಧವನ್ನು ಕಾಯ್ದುಕೊಂಡಿವೆ. ಪ್ರಾಂತ್ಯದಲ್ಲಿ ಶಾಂತಿ ಹೆಚ್ಚಳ, ಅಭಿವೃದ್ಧಿ, ಉತ್ತಮ ನೆರೆಹೊರೆಯ ಬಾಂಧವ್ಯ, ಪರಸ್ಪರ ವಿಶ್ವಾಸ ಮತ್ತು ಲಾಭದಾಯಕ ಸಹಕಾರದಲ್ಲಿ ರಚನಾತ್ಮಕ ಪಾತ್ರ ವಹಿಸುತ್ತಿವೆ” ಎಂದು ಅವರು ತಿಳಿಸಿದರು.

ಅಮೆರಿಕಕ್ಕೆ ಎಚ್ಚರಿಕೆ: ಟಿಬೆಟ್ ವಿವಾದವನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ದಲೈಲಾಮ ಅವರ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸುವಂತೆ ಗುರುವಾರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೀಡಿರುವ ಸಲಹೆಗೆ ಉತ್ತರಿಸಿದ ಜಿಂಟಾವೊ, ಟಿಬೆಟ್, ತೈವಾನ್ ಅಥವಾ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ತರುವ ಯಾವುದೇ ವಿಷಯಗಳನ್ನು ಪ್ರಸ್ತಾಪಿಸದೆ ತಟಸ್ಥವಾಗಿರುವಂತೆ ಅಮೆರಿಕವನ್ನು ಎಚ್ಚರಿಸಿದರು.

‘ತೈವಾನ್ ಮತ್ತು ಟಿಬೆಟ್ ವಿಷಯಗಳು ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿವೆ. ಇವು ದೇಶದ ಮೂಲಭೂತ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತಿದ್ದು ರಾಷ್ಟ್ರದ ಸುಮಾರು 1.3 ಶತಕೋಟಿ ಚೀನಿಯರ ಭಾವನೆಗಳನ್ನು ಕೆದಕಲಿರುವ ಸೂಕ್ಷ್ಮ ವಿವಾದಗಳು’ ಎಂದರು.

ಒಬಾಮ ಮತ್ತು ಅಮೆರಿಕದ ಸಂಸದರು ಟಿಬೆಟ್, ತೈವಾನ್ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮುಂತಾದ ವಿಚಾರಗಳನ್ನು ಜಿಂಟಾವೊ ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ಪ್ರಸ್ತಾಪಿಸಿ, ಇರುಸು-ಮುರುಸು ಉಂಟು ಮಾಡಿದ ಮಾರನೇ ದಿನವೇ ಚೀನಾದಿಂದ ಇಂತಹ ಪ್ರತಿಕ್ರಿಯೆ ವ್ಯಕ್ತವಾಗಿದೆ.

“ಇತಿಹಾಸ, ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ ಹಾಗೂ ಅಭಿವೃದ್ಧಿಯ ಮಟ್ಟದಲ್ಲಿ ಚೀನಾ ಮತ್ತು ಅಮೆರಿಕ ಭಿನ್ನವಾಗಿದ್ದು ಹೀಗಾಗಿ ಉಭಯತ್ರರ ನಡುವೆ ಕೆಲವು ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳು ಇವೆ. ಇಂತಹ ಸೂಕ್ಷ್ಮ ಹೊಣೆಗಾರಿಕೆಯ ನಡುವೆ ತಂತ್ರಕೌಶಲ್ಯ ಮತ್ತು ದೀರ್ಘಾವಧಿ ದೃಷ್ಟಿಕೋನದಿಂದ ದ್ವಿಪಕ್ಷೀಯ ಬಾಂಧವ್ಯವನ್ನು ನಿರ್ವಹಣೆ ಮಾಡಬೇಕಿದೆ” ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT