ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಸುಳ್ಳು ಹೇಳಿಕೆ ಶಂಕೆ

ಲಾಸ್‌ ವೇಗಸ್‌ ಗುಂಡಿನ ದಾಳಿ ಪ್ರಕರಣ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೈರೊ (ಎಪಿ): ಲಾಸ್‌ ವೇಗಸ್‌ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ಉಗ್ರಗಾಮಿ ಸಂಘಟನೆ ಇದುವರೆಗೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ನಡೆಸಿದ ಬಂದೂಕುಧಾರಿ ತನ್ನ ಸಂಘಟನೆಯ ಯೋಧನಾಗಿದ್ದು, ಕಳೆದ ತಿಂಗಳು ಇಸ್ಲಾಂಗೆ ಮತಾಂತರ ಹೊಂದಿದ್ದ ಎಂದು ಐಎಸ್‌ ಹೇಳಿಕೆ ನೀಡಿತ್ತು.

ಗುಂಡಿನ ದಾಳಿಗೂ ಅಂತರರಾಷ್ಟ್ರೀಯ ಭಯೋತ್ಪಾದನೆಗೂ ಯಾವುದೇ ರೀತಿಯ ಸಂಬಂಧ ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ದಾಳಿಯ ಹೊಣೆಯನ್ನು ಹೊತ್ತುಕೊಳ್ಳುವುದು ಐಎಸ್‌ಗೆ ಸಾಮಾನ್ಯವಾಗಿದೆ. ಹಲವು ಬಾರಿ ಸುಳ್ಳು ಹೇಳಿಕೆಗಳನ್ನು ನೀಡಿದೆ. ಫಿಲಿಪ್ಪಿನ್ಸ್‌ನಲ್ಲಿ ನಡೆದ ದಾಳಿಯ ಹೊಣೆಯನ್ನು ಸಹ ಐಎಸ್‌ ಹೊತ್ತುಕೊಂಡಿತ್ತು. ಆದರೆ, ಅದು ಸುಳ್ಳಾಗಿತ್ತು ಎಂದು ತಿಳಿಸಿದ್ದಾರೆ.

ಈ ದಾಳಿಯನ್ನು ಐಎಸ್‌ ನಡೆಸಿರುವ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ಎಫ್‌ಬಿಐ ತಿಳಿಸಿದೆ. ದಾಳಿ ನಡೆಸಿದ ವ್ಯಕ್ತಿ ’ಸೈಕೋಪಾತ್‌’ ಆಗಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

59ಕ್ಕೆ ಏರಿಕೆ: ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 59ಕ್ಕೆ ಏರಿದ್ದು, 527 ಮಂದಿ ಗಾಯಗೊಂಡಿದ್ದಾರೆ.

ದಾಳಿ ನಡೆಸಿದ ಬಂದೂಕುಧಾರಿ ವಾಸವಿದ್ದ ಮನೆಯಲ್ಲಿ ಸ್ಫೋಟಕಗಳು ಮತ್ತು ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗದ ಐಫೆಲ್‌ ಗೋಪುರದ ದೀಪಗಳು:  ಲಾಸ್‌ವೆಗಸ್‌ನಲ್ಲಿ ನಡೆದ ಗುಂಡಿನ ದಾಳಿಯನ್ನು ಖಂಡಿಸಿ ಸೋಮವಾರ ರಾತ್ರಿ ಪ್ಯಾರಿಸ್‌ನ ಐಫೆಲ್‌ ಗೋಪುರನ ದೀಪಗಳನ್ನು ಬೆಳಗಿಸಲಿಲ್ಲ.

ಗೊತ್ತಾಗದ ದಾಳಿ ಉದ್ದೇಶ

ಲಾಸ್‌ ವೇಗಸ್‌ (ಎಎಫ್‌ಪಿ): ಬಂದೂಕುಧಾರಿ ಸ್ಪೀಫನ್‌ ಪ್ಯಾಡೋಕ್‌ (64) ಸಾಮೂಹಿಕ ಹತ್ಯೆ ನಡೆಸಲು ಕಾರಣ ಏನು ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ನಿವೃತ್ತ ಲೆಕ್ಕಪರಿಶೋಧಕನಾಗಿದ್ದ ಪ್ಯಾಡೋಕ್‌ಗೆ ಯಾವುದೇ ರೀತಿಯ ಅಪರಾಧ ಹಿನ್ನೆಲೆ ಇಲ್ಲ. ಈತನಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ಯಾಡೋಕ್‌ಗೆ ಜತೆಗಿದ್ದ ಮಹಿಳೆ ಆಸ್ಟ್ರೇಲಿಯಾದವರು ಎನ್ನುವುದು ಸಹ ಪತ್ತೆಯಾಗಿದೆ. 62 ವರ್ಷದ ಮರಿಲೌ ಡ್ಯಾನ್ಲಿ ಎನ್ನುವ ಈ ಮಹಿಳೆ 20 ವರ್ಷಗಳ ಹಿಂದೆ ಅಮೆರಿಕಗೆ ವಲಸೆ ಹೋಗಿದ್ದರು. ದಾಳಿ ನಡೆಸಿದ ಸಂದರ್ಭದಲ್ಲಿ ಅಮೆರಿಕದಲ್ಲಿ ಇರಲಿಲ್ಲ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಪ್ಯಾಡೋಕ್‌ ಶ್ರೀಮಂತ ರಿಯಲ್‌ ಎಸ್ಟೇಟ್‌ ಹೂಡಿಕೆದಾರನಾಗಿದ್ದ ಎಂದು ಆತನ ಸಹೋದರ ಎರಿಕ್ ಪ್ಯಾಡೋಕ್‌ ತಿಳಿಸಿದ್ದಾರೆ.

ಚರ್ಚೆಗೆ ಗ್ರಾಸವಾದ ಬಂದೂಕು ನಿಯಂತ್ರಣ ಕಾಯ್ದೆ

ವಾಷಿಂಗ್ಟನ್‌(ಪಿಟಿಐ): ಲಾಸ್‌ ವೇಗಸ್‌ನಲ್ಲಿ ನಡೆದ ಗುಂಡಿನ ದಾಳಿ ಬಳಿಕ  ಅಮೆರಿಕದಲ್ಲಿ ಜಾರಿಗೊಳಿಸಿರುವ ಬಂದೂಕು ನಿಯಂತ್ರಣ ಕಾಯ್ದೆ ಚರ್ಚೆಗೆ ಗ್ರಾಸವಾಗಿದೆ.

2017ರಲ್ಲಿ ಬಂದೂಕಿನಿಂದ ನಡೆದ 273 ಹಿಂಸಾಚಾರ ಪ್ರಕರಣಗಳಲ್ಲಿ 12 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಬಂದೂಕಿನಿಂದ ನಡೆಯುವ ಹಿಂಸೆಗಳ ಕುರಿತು ನಿಗಾವಹಿಸುತ್ತಿರುವ ಸಂಸ್ಥೆ ತಿಳಿಸಿದೆ.

ಪ್ರತಿ ದಿನ ಸರಾಸರಿ 90 ಅಮೆರಿಕನ್ನರು ಬಂದೂಕಿನಿಂದ ಸಾವಿಗೀಡಾಗುತ್ತಿದ್ದಾರೆ ಎಂದು ಅದು ತಿಳಿಸಿದೆ.

‘ಬಂದೂಕಿನಿಂದ ನಡೆಯುವ ಹಿಂಸಾಚಾರಗಳನ್ನು ನಿಯಂತ್ರಿಸಲು ಸ್ಥಾಯಿ ಸಮಿತಿ ರಚಿಸಬೇಕು. ಅಮೆರಿಕನ್‌ ಜನರ ರಕ್ಷಣೆಗೆ ಸಂಸದರು ಮುಂದಾಗಬೇಕು’ ಎಂದು ಹಿರಿಯ ಡೆಮಾಕ್ರಟಿಕ್‌ ನಾಯಕ ನ್ಯಾನ್ಸಿ ಪೆಲೊಸಿ ಆಗ್ರಹಿಸಿದ್ದಾರೆ.

‘ಬಂದೂಕು ಹಿಂಸಾಚಾರ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸಾವಿರಾರು ಮಂದಿ ಬಂದೂಕಿನಿಂದ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಲೇಬೇಕಾಗಿದೆ’ ಎಂದು ಸಂಸದೆ ಪ್ರಮೀಳಾ ಜಯಪಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT