ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೊಳ್ಳುವುದೇ ಭಾರತದ ಏಕಸ್ವಾಮ್ಯ

ನೇಪಾಳ–ಚೀನಾ ಮುಕ್ತ ವ್ಯಾಪಾರ ಒಪ್ಪಂದ * ತೈನ್‌ಜಿನ್‌ ಬಂದರು ಮೂಲಕ ಸರಕು ಸಾಗಣೆ ಮಾರ್ಗ
Last Updated 27 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ನೇಪಾಳ  ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಈಚೆಗೆ ಚೀನಾ  ಪ್ರವಾಸ ಕೈಗೊಂಡ ಸಂದರ್ಭ ಆ ರಾಷ್ಟ್ರದೊಂದಿಗೆ ಮಾಡಿಕೊಂಡ ಒಪ್ಪಂದಗಳು ಈಗ ಚರ್ಚೆಯಲ್ಲಿವೆ.
ಮುಖ್ಯವಾಗಿ ಸರಕು ಪೂರೈಕೆ ಮಾರ್ಗ ಒಪ್ಪಂದ ಸೇರಿದಂತೆ 10 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.

ಪ್ರವಾಸೋದ್ಯಮ, ತೈಲ, ಅನಿಲ ವಲಯದಲ್ಲಿ ಅಲ್ಲದೇ ನೇಪಾಳದ ಪೊಖ್‌ಹರದಲ್ಲಿ ವಿಮಾನನಿಲ್ದಾಣ, ಮುಕ್ತ ವ್ಯಾಪಾರ ಒಪ್ಪಂದ ಸಾಧ್ಯತೆ, ಸೇತುವೆ ನಿರ್ಮಾಣ ಸಂಬಂಧಿಸಿದಂತೆ ಒಪ್ಪಂದಕ್ಕೆ ಬರಲಾಗಿದೆ. ಭೌಗೋಳಿಕವಾಗಿ ಭಾರತ ಮತ್ತು ಚೀನಾ ಮಧ್ಯದಲ್ಲಿ ನೇಪಾಳ ಇದೆ. ಸುತ್ತಲೂ ಭೂಮಿಯಿಂದ ಆವೃತವಾದ ರಾಷ್ಟ್ರ ಇದು.

ಹಾಗಾಗಿ ನೇಪಾಳ ಮೂರನೇ ರಾಷ್ಟ್ರದ ಜತೆಗೆ ವ್ಯಾಪಾರ ವಹಿವಾಟು ನಡೆಸಬೇಕೆಂದರೆ ಸದ್ಯಕ್ಕೆ ಭಾರತವನ್ನೇ ಅವಲಂಬಿಸಿದೆ. ಜಗತ್ತಿನ ಇತರ ದೇಶಗಳ ಜತೆ ನೇಪಾಳದ ಬಹುತೇಕ ವಹಿವಾಟು ಕೋಲ್ಕತ್ತದ ಹಲ್ದಿಯಾ ಬಂದರಿನ ಮೂಲಕವೇ  ‌ನಡೆಯುತ್ತದೆ.

ಈಗ ಚೀನಾದ ತೈನ್‌ಜಿನ್‌ ಬಂದರಿನ ಮೂಲಕವೂ ನೇಪಾಳವು ಆಮದು– ರಫ್ತು ವಹಿವಾಟಿನ ಒಪ್ಪಂದಕ್ಕೆ ಬಂದಿರುವುದು ಬಹಳ ಮಹತ್ವದ್ದು ಎಂದೇ ಹೇಳಲಾಗುತ್ತಿದೆ. ಈ ಒಪ್ಪಂದ ನೇಪಾಳಕ್ಕೆ ಮೈಲಿಗಲ್ಲು. ಭಾರತದ ಮೇಲಿನ ಅವಲಂಬನೆಯನ್ನು ಇದು ಕಡಿಮೆ ಮಾಡಲಿದೆ ಮತ್ತು ನೇಪಾಳ ಸ್ವಾವಲಂಬನೆ ಸಾಧಿಸುವಲ್ಲಿ ಉತ್ತೇಜನ ನೀಡುತ್ತದೆ ಎಂದೇ ನೇಪಾಳದ ಮಾಧ್ಯಮಗಳು ಬಣ್ಣಿಸಿವೆ.

ಒಪ್ಪಂದವು ನೇಪಾಳದಲ್ಲಿನ ಭಾರತದ ಏಕಸ್ವಾಮ್ಯವನ್ನು ಕೊನೆಗಾಣಿಸುತ್ತದೆ ಎಂಬ ವಿಶ್ಲೇಷಣೆಗಳೂ ಕೇಳಿ ಬಂದಿವೆ. ಆದರೆ ಇದು ಭಾರತದ ಬಾಂಧವ್ಯದ ಮೇಲೆ ಪರಿಣಾಮ ಬೀರದು. ನೇಪಾಳದೊಂದಿಗೆ ಭಾರತಕ್ಕಿರುವ ಬಾಂಧವ್ಯವನ್ನು ಬೇರೆ ಯಾವ ರಾಷ್ಟ್ರವೂ ಬಿಂಬಿಸಲಾರದು ಎಂಬುದು ಭಾರತದ ಪ್ರತಿಕ್ರಿಯೆ.

ವಿಶಿಷ್ಟ ಅನುಬಂಧ: ಭಾರತ– ನೇಪಾಳ 1950ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಈ ಎರಡೂ ರಾಷ್ಟ್ರಗಳ ಬಂಧ ವಿಶಿಷ್ಟವಾದದು. ಉಭಯ ರಾಷ್ಟ್ರಗಳ ಗಡಿಗಳು ಸಂಚಾರಕ್ಕೆ ಮುಕ್ತವಾಗಿವೆ. ಜನರ ನೇರ ಸಂಪರ್ಕ ಸಾಧ್ಯವಿದೆ.  ಆರ್ಥಿಕ ಬಾಂಧವ್ಯ ಸದೃಢವಾಗಿದೆ ಎಂಬ ವಿವರಣೆ ಭಾರತದ ವಿದೇಶಾಂಗ ಸಚಿವಾಲಯದ್ದು.

ನೇಪಾಳದ ಲಕ್ಷಾಂತರ ಜನರು ಭಾರತದಲ್ಲಿ ನೆಲೆಸಿದ್ದಾರೆ. ಪ್ರತಿದಿನ ಎರಡೂ ರಾಷ್ಟ್ರಗಳ ನಡುವೆ ಸಾವಿರಾರು ಜನರು ಗಡಿಯಲ್ಲಿ ಮುಕ್ತವಾಗಿ ಓಡಾಡುತ್ತಾರೆ. ಆದ್ದರಿಂದಲೇ ಈ ಎರಡೂ ರಾಷ್ಟ್ರಗಳದ್ದು ವಿಶಿಷ್ಟ ಅನುಬಂಧ.

ಆದರೆ ನೇಪಾಳದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಹೊಸ ಸಂವಿಧಾನ ಅಂಗೀಕಾರವಾದ ಬಳಿಕ ನಡೆದ ಮಾಧೇಸಿ ಸಮುದಾಯದವರ ಪ್ರತಿಭಟನೆ ಮತ್ತು ಈ ಕಾರಣಕ್ಕಾಗಿ ಭಾರತ– ನೇಪಾಳ ಗಡಿಯಲ್ಲಿ  ತಿಂಗಳುಗಟ್ಟಲೆ ಇದ್ದ ದಿಗ್ಬಂಧನ ವಾತಾವರಣವು ಉಭಯ ರಾಷ್ಟ್ರಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಯಿತು.

ಸಂವಿಧಾನದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲಎಂದು ಆರೋಪಿಸಿ ಮಾಧೇಸಿ ಸಮುದಾಯದವರು ಪ್ರತಿಭಟನೆ ನಡೆಸಿದಾಗ ಭಾರತದಿಂದ ನೇಪಾಳಕ್ಕೆ ತೈಲ ಟ್ಯಾಂಕರ್‌ಗಳು, ಅಗತ್ಯ ವಸ್ತುಗಳು ರವಾನೆಯಾಗದೆ ಅಲ್ಲಿ ಸಂಕಷ್ಟ ತಲೆದೋರಿತ್ತು.

ಪ್ರತಿಭಟನೆಗೆ ಭಾರತದ ಬೆಂಬಲವಿದೆ ಎಂದು ನೇಪಾಳ ಆರೋಪಿಸಿತು. ಆದರೆ ಭಾರತ ಇದನ್ನು ಅಲ್ಲಗಳೆಯಿತು. ಹೀಗೆ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಕುಸಿಯುತ್ತಿದ್ದಾಗ   ಈ ವರ್ಷದ ಫೆಬ್ರುವರಿಯಲ್ಲಿ ನೇಪಾಳ ಪ್ರಧಾನಿ ಒಲಿ ಅವರು ಭಾರತಕ್ಕೆ ನೀಡಿದ ಭೇಟಿಯನ್ನು ಸಂಬಂಧ ಸುಧಾರಣೆಯ ಹೆಜ್ಜೆ ಎನ್ನಲಾಯಿತು.  

ನೇಪಾಳದ ಸಂಕಷ್ಟ ಕಾಲದಲ್ಲೆಲ್ಲಾ ಭಾರತ ನೆರವು ನೀಡುತ್ತಲೇ ಬಂದಿದೆ.  ಅಲ್ಲಿ ಪ್ರಜಾಪ್ರಭುತ್ವ ಸರ್ಕಾರ ಸ್ಥಾಪಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು. 2015ರ ಏಪ್ರಿಲ್‌ನಲ್ಲಿ ಭಾರಿ ಭೂಕಂಪವಾದಾಗಲೂ ಭಾರತ ತಕ್ಷಣ ಸ್ಪಂದಿಸಿತ್ತು. ಆದರೆ ಪರಿಹಾರ ಕಾರ್ಯಾಚರಣೆ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದ ಭಾರತದ ಮಾಧ್ಯಮಗಳ ವಿರುದ್ಧ ನೇಪಾಳ ಸರ್ಕಾರ ತಿರುಗಿ ಬಿತ್ತು.

ವರದಿಗಳ ಬಗ್ಗೆ ಅಸಮಾಧಾನ ಸೂಚಿಸಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ತಂಡ ವಾಪಸ್‌ ಹೋಗುವಂತೆ ಹೇಳಿತ್ತು.  ಭಾರತ ವಿರೋಧಿ ಭಾವನೆ  ವ್ಯಕ್ತಪಡಿಸಿದ್ದ ನೇಪಾಳವು ಭಾರತದ ದೊಡ್ಡಣ್ಣನ ಭಾವನೆ ಸಹಿಸಲಾಗದು ಎಂದು ಸ್ಪಷ್ಟ ಪಡಿಸಿತ್ತು. ನೇಪಾಳದ ಈ ಅನಿರೀಕ್ಷಿತ ನಡೆ ಮುಜುಗರ ತಂದರೂ ಭಾರತ ಸರ್ಕಾರ ಬಹಿರಂಗವಾಗಿ ನಿರಾಸೆ ತೋರಿಸಿಕೊಳ್ಳಲಿಲ್ಲ.

ಭಾರತದ ಗಡಿ ಬಂದ್‌ ಆದಾಗ ತೈಲ ಪೂರೈಕೆಗೆ ನೇಪಾಳ ಚೀನಾದ ಸಹಾಯ ಹಸ್ತ ಯಾಚಿಸಿತ್ತು. ಈ ಎಲ್ಲಾ ಘಟನೆಗಳ ಬಳಿಕ ಈಗ ಸರಕು ಪೂರೈಕೆ ಮಾರ್ಗ ಒಪ್ಪಂದ ಮಾಡಿಕೊಳ್ಳುವ ಮೂಲಕ ನೇಪಾಳವು ಚೀನಾದತ್ತ ವಾಲುತ್ತಿದೆಯೇ ಎಂಬ ಆತಂಕ ಹಲವು ರಾಜಕೀಯ ವಿಶ್ಲೇಷಕರದ್ದು.

ಈಗ ಚೀನಾ– ನೇಪಾಳ ನಡುವೆ ಚೀನಾ ಗಡಿ ಭಾಗ ಕೆರುಂಗ್‌ವರೆಗೆ ಮಾತ್ರ  ರೈಲು ಸಂಪರ್ಕವಿದೆ. ಚೀನಾ ಗಡಿಯಲ್ಲಿ ಮೂಲಭೂತ ಸೌಕರ್ಯದ ಕೊರತೆಯಿದೆ. ನೇಪಾಳಕ್ಕೆ ಹತ್ತಿರದ ಚೀನಾ ಬಂದರು ತೈನ್‌ಜಿನ್‌ ನೇಪಾಳ ಗಡಿಯಿಂದ ಸುಮಾರು ಮೂರು ಸಾವಿರ ಕಿ.ಮೀ. ದೂರವಿದೆ. ಭಾರತದ ಗಡಿಯಲ್ಲಿ ಹಲ್ದಿಯಾ ಬಂದರಿಗೆ ಕೇವಲ ಒಂದು ಸಾವಿರ ಕಿ.ಮೀ ಮಾತ್ರ ಇದೆ.

ತೈನ್‌ಜಿನ್‌ ಮೂಲಕ ಕೆರುಂಗ್‌ಗೆ ವ್ಯಾಪಾರ ವಹಿವಾಟು ನಡೆಸಲು ನೇಪಾಳ ಬಯಸಿದರೆ ಲಾರಿ ಅಥವಾ ಕಂಟೈನರುಗಳ ಮೂಲಕವಂತೂ ಸಾಧ್ಯವಿಲ್ಲ. ಪರಿಹಾರವಾಗಿ ಇರುವ ಏಕೈಕ ಆಯ್ಕೆ ರೈಲು ಮಾರ್ಗ. ಚೀನಾ ಅಧಿಕಾರಿಗಳ ಪ್ರಕಾರವೇ ಇದು ಸಾಧ್ಯವಾಗುವುದು 2020ರ ನಂತರವೇ. ಈ ಕಾರಣ, ಚೀನಾ ಬಂದರಿನ ಮೂಲಕ ನೇಪಾಳ ಸದ್ಯದಲ್ಲೇ ವಹಿವಾಟು ಮಾಡುತ್ತದೆ. ಭಾರತದ ಅವಲಂಬನೆ ಕೊನೆಯಾಗುತ್ತದೆ  ಎಂಬುದು ಸರಿಯಲ್ಲ. ವಾಸ್ತವ ಹಾಗಿಲ್ಲ ಎಂಬ ವಾದಗಳೂ ಇವೆ.

ಲುಂಬಿಣಿಗೆ ರೈಲು
ನೇಪಾಳದೊಂದಿಗೆ ಐದು ರೈಲು ಮಾರ್ಗ ಸಂಪರ್ಕ ಕಲ್ಪಿಸಲು ಭಾರತ ಈಗಾಗಲೇ ಯೋಜನೆ ರೂಪಿಸಿದೆ. ಈಗ ಚೀನಾದೊಂದಿಗೆ ಸೇರಿ ಕಠ್ಮಂಡುವಿನಲ್ಲಿ ಮಾನೊ ರೈಲು ಜಾಲ ರೂಪಿಸಲು ಮತ್ತು ಚೀನಾ ಗಡಿಯಿಂದ ನೇಪಾಳ ಗಡಿ ಭಾಗ ಲುಂಬಿಣಿಗೆ ರೈಲು ಸಂಪರ್ಕ ಕಲ್ಪಿಸಲು ನೇಪಾಳ ಒಪ್ಪಿಕೊಂಡಿದೆ. ಚೀನಾ ಈಗಾಗಲೇ ಟಿಬೆಟ್‌ನ ಶಿಗಸ್ತೆಯಿಂದ ನೇಪಾಳ ಗಡಿ ಗಿರಾಂಗ್‌ವರೆಗೆ ರೈಲು ಮಾರ್ಗ ವಿಸ್ತರಿಸಲು ಚಿಂತಿಸಿದೆ. ಆದರೆ ಇದು ದೀರ್ಘಾವಧಿಯ ಯೋಜನೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT