ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಕ್ಸಿಟ್‌ಗೆ ಎರಡು ವರ್ಷದ ಗುರಿ

ವಿವಿಧ ಹಂತಗಳಲ್ಲಿ ಜಾರಿ: ಪ್ರಧಾನಿ ತೆರೆಸಾ ಮೇ ಭರವಸೆ
Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಲಂಡನ್‌ : ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರು ಮಂಗಳವಾರ 12 ಅಂಶಗಳ ಯೋಜನೆ ಮುಂದಿಟ್ಟಿದ್ದಾರೆ. ಎರಡು ವರ್ಷದೊಳಗೆ ಬ್ರೆಕ್ಸಿಟ್‌ ಒಪ್ಪಂದ ಜಾರಿಯಾಗಬೇಕು, ಆದರೆ ಜನರಿಗೆ ಆರ್ಥಿಕ ಹೊರೆಯಾಗುವುದನ್ನು ತಪ್ಪಿಸಲು ಒಪ್ಪಂದವನ್ನು ಹಂತಹಂತವಾಗಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.

ಒಕ್ಕೂಟದಿಂದ ಹೊರಬರುವ ವಿಚಾರದಲ್ಲಿ ಸ್ಪಷ್ಟ ಮಾರ್ಗಸೂಚಿಯನ್ನು ಪ್ರಕಟಿಸಬೇಕು ಎಂಬ ಸಂಸದರ ಒತ್ತಡದ ನಡುವೆ ಮಂಗಳವಾರ ಬಹು ನಿರೀಕ್ಷಿತ ಭಾಷಣ ಮಾಡಿದ ಪ್ರಧಾನಿ ಮೇ, ‘ಒಪ್ಪಂದದ ಪ್ರತಿಯನ್ನು ಎರಡೂ ಸದನಗಳಲ್ಲಿ ಪರ–ವಿರೋಧ ಮತಚಲಾವಣೆಗೆ ಅವಕಾಶ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ಬ್ರೆಕ್ಸಿಟ್‌ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳು ಹಾಗೂ ಜಾಗತಿಕ ಮಟ್ಟದ ಪ್ರತಿನಿಧಿಗಳನ್ನು ಉದ್ದೇಶಿಸಿ  ಮೇ ಅವರು ಸುಮಾರು 40 ನಿಮಿಷ  ಭಾಷಣ ಮಾಡಿದರು.


ಮುಕ್ತ ಸಂಚಾರಕ್ಕಾಗಿ ರಾಜಿ ಇಲ್ಲ: ವಲಸಿಗರನ್ನು ನಿಯಂತ್ರಿಸುವುದಕ್ಕಾಗಿ, ಐರೋಪ್ಯ ಒಕ್ಕೂಟದಲ್ಲಿ ಮುಕ್ತ ಸಂಚಾರ ಕುರಿತಂತೆ ಬ್ರಿಟನ್‌್ ರಾಜಿಯಾಗುವುದಿಲ್ಲ ಎಂದು ಮೇ ಸ್ಪಷ್ಟಪಡಿಸಿದ್ದಾರೆ. 

‘ಬ್ರಿಟನ್‌ ಮುಕ್ತ ಮತ್ತು ಸಹಿಷ್ಣು ರಾಷ್ಟ್ರ. ವಿಶೇಷವಾಗಿ ನಾವು ಹೆಚ್ಚು ಕೌಶಲ್ಯ ಉಳ್ಳ ವಲಸಿಗರನ್ನು ಎದುರು ನೋಡುತ್ತೇವೆ. ಯುರೋಪ್‌ನಿಂದ ವಲಸಿಗರನ್ನು ನಾವು ನಿರೀಕ್ಷಿಸುತ್ತೇವೆ. ಅವರನ್ನು ಸ್ನೇಹಿತರಂತೆ ಸ್ವಾಗತಿಸುತ್ತೇವೆ. ಆದರೆ ಬ್ರೆಕ್ಸಿಟ್‌ ಜನಾಭಿಪ್ರಾಯ ಅಭಿಯಾನಕ್ಕೂ ಮೊದಲು ಹಾಗೂ ಆ ಸಂದರ್ಭದಲ್ಲಿ ಜನರು ನೀಡಿದ
ಸಂದೇಶ ಸ್ಪಷ್ಟವಾಗಿತ್ತು. ಬ್ರೆಕ್ಸಿಟ್‌ ಎಂದರೆ ಯುರೋಪ್‌ನಿಂದ ಬ್ರಿಟನ್‌ಗೆ ಬರುವವರ ಸಂಖ್ಯೆ ನಿಯಂತ್ರಿಸಬೇಕು ಎಂದು ಸಂದೇಶ ನೀಡಿದ್ದರು. ನಾವು ಅದನ್ನು ಜಾರಿಗೆ ತರುತ್ತೇವೆ’ ಎಂದು ಹೇಳಿದ್ದಾರೆ.

ಬಲಗೊಂಡ ಪೌಂಡ್‌: ತೆರೆಸಾ ಮೇ ಅವರ ಭಾಷಣದ ಬಳಿಕ ಡಾಲರ್‌ ಎದುರು ಪೌಂಡ್‌ ಮೌಲ್ಯ ಇನ್ನಷ್ಟು ಬಲಗೊಂಡಿದೆ. ಆದರೆ ಷೇರು ಮಾರುಕಟ್ಟೆ ಅಲ್ಪ ಕುಸಿತ ಕಂಡಿದೆ.

ಪ್ರತೀಕಾರ ಧೋರಣೆ ಬೇಡ
ಐರೋಪ್ಯ ಒಕ್ಕೂಟದ ಉಳಿದ 27 ಸದಸ್ಯ ರಾಷ್ಟ್ರಗಳು ‘ಪ್ರತೀಕಾರ’ ಧೋರಣೆ ತೋರಬಾರದು. ಇದು ಆಯಾ ರಾಷ್ಟ್ರಗಳ ಪ್ರಜೆಗಳಿಗೆ ಸಮಸ್ಯೆ ಉಂಟು ಮಾಡುತ್ತದೆ ಎಂದು ತೆರೆಸಾ ಎಚ್ಚರಿಕೆ ನೀಡಿದ್ದಾರೆ.

‘ಯುರೋಪ್‌ ಜತೆ ಉತ್ತಮ ಸ್ನೇಹ ಮುಂದುವರಿಸಲು ಹಾಗೂ  ಉತ್ತಮ ನೆರೆ ರಾಷ್ಟ್ರವಾಗಿರಲು ಬ್ರಿಟನ್‌ ಬಯಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲು ಬಯಸುತ್ತೇನೆ. ಆದರೂ ಬ್ರಿಟನ್‌ಗೆ ಶಿಕ್ಷೆ ನೀಡುವ ರೀತಿಯಲ್ಲಿ ಪ್ರತೀಕಾರ ಧೋರಣೆ ತೋರುವ ಮಾತು ಕೇಳಿಬರುತ್ತಿದೆ ಎಂದು ನನಗೆ ತಿಳಿದಿದೆ’ ಎಂದು ಅವರು ಹೇಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT