ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ: ಭಾರತಕ್ಕೆ 141ನೇ ಸ್ಥಾನ

ಐಸ್‌ಲ್ಯಾಂಡ್‌ ಅತ್ಯಂತ ಶಾಂತಿಯುತ ರಾಷ್ಟ್ರ: ಅಫ್ಗಾನಿಸ್ತಾನಕ್ಕೆ ಕೊನೆಯ ಸ್ಥಾನ
Last Updated 12 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ವರ್ಷದ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತದ ಸ್ಥಾನ ಮತ್ತಷ್ಟು ಕುಸಿದಿದೆ. 163 ದೇಶಗಳಲ್ಲಿ ಭಾರತ 141ನೇ ಸ್ಥಾನ ಪಡೆದಿದೆ. ಕಳೆದ ವರ್ಷ 136ನೇ ಸ್ಥಾನವನ್ನು ಭಾರತ ಪಡೆದಿತ್ತು.

ಜಗತ್ತಿನಲ್ಲೇ ಅತ್ಯಂತ ಶಾಂತಿಯುತ ರಾಷ್ಟ್ರ ಎನ್ನುವ ಅಗ್ರಸ್ಥಾನವನ್ನು ಐಸ್‌ಲ್ಯಾಂಡ್‌ ಮತ್ತೊಮ್ಮೆ ಉಳಿಸಿಕೊಂಡಿದೆ. 2008ರಿಂದಲೂ ಐಸ್‌ಲ್ಯಾಂಡ್‌ ಮೊದಲ ಸ್ಥಾನದಲ್ಲಿದೆ.ನ್ಯೂಜಿಲೆಂಡ್‌, ಆಸ್ಟ್ರಿಯಾ, ಪೋರ್ಚುಗಲ್‌ ಮತ್ತು ಡೆನ್ಮಾರ್ಕ್‌ ನಂತರದ ಸ್ಥಾನದಲ್ಲಿವೆ.

ಅಫ್ಗಾನಿಸ್ತಾನ ಶಾಂತಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಪಡೆದಿದೆ. ಈ ಮೊದಲು ಹಿಂಸಾಚಾರದಿಂದ ತತ್ತರಿಸಿದ್ದ ಸಿರಿಯಾ ಕೊನೆಯ ಸ್ಥಾನದಲ್ಲಿತ್ತು.ನೆರೆಯ ರಾಷ್ಟ್ರ ಪಾಕಿಸ್ತಾನ 153ನೇ ಸ್ಥಾನದಲ್ಲಿದೆ.

ಆರ್ಥಿಕ ಮತ್ತು ಶಾಂತಿಗಾಗಿ ಇರುವ ಆಸ್ಟ್ರೇಲಿಯನ್‌ ಚಿಂತಕರ ಚಾವಡಿ ಸಂಸ್ಥೆ ಜಾಗತಿಕ ಶಾಂತಿ ಸೂಚ್ಯಂಕವನ್ನು ಸಿದ್ಧಪಡಿಸಿದೆ. ಆಸ್ಟ್ರೇಲಿಯಾದ ತಂತ್ರಜ್ಞ ಸ್ಟೀವ್‌ ಕಿಲ್ಲೆಲಿಯಾ ಈ ಸಂಸ್ಥೆಯನ್ನು ಸ್ಥಾಪಿಸಿದರು. ಈ ಬಾರಿಯ ವರದಿಯು ಶಾಂತಿ ಪರಿಸ್ಥಿತಿ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಅಂಶಗಳನ್ನು ಸಹ ಪ್ರಮುಖವಾಗಿ ಪರಿಗಣಿಸಲಾಗಿತ್ತು. 2008ರಿಂದ ಜಾಗತಿಕ ಶಾಂತಿ ಶೇಕಡ 3.8ರಷ್ಟು ಹದಗೆಟ್ಟಿರುವುದರಿಂದ ಈ ಅಂಶವನ್ನು ಸಹ ಗಮನಿಸಲಾಯಿತು ಎಂದು ವರದಿ ತಿಳಿಸಿದೆ.

ಭಾರತ, ಫಿಲಿಪ್ಪಿನ್ಸ್‌, ಜಪಾನ್‌, ಬಾಂಗ್ಲಾದೇಶ, ಮ್ಯಾನ್ಮಾರ್‌, ಚೀನಾ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನ ಅತಿ ಹೆಚ್ಚಿನ ಅಪಾಯಕಾರಿ ವಾತಾವರಣ ಎದುರಿಸುತ್ತಿವೆ ಎಂದು ಶಾಂತಿ ಸೂಚ್ಯಂಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಚೀನಾ, ಬಾಂಗ್ಲಾದೇಶ ಮತ್ತು ಭಾರತದ 39.3 ಕೋಟಿ ಜನ ಅಪಾಯಕಾರಿ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದೆ.

ಜಗತ್ತಿನ ಶೇಕಡ 99.7ರಷ್ಟು ಜನಸಂಖ್ಯೆಯನ್ನು ಪರಿಗಣಿಸಿ ಈ ವರದಿ ಸಿದ್ಧಪಡಿಸಲಾಗಿದೆ. 86 ರಾಷ್ಟ್ರಗಳಲ್ಲಿ ಶಾಂತಿಯ ವಾತಾವರಣ ಸುಧಾರಿಸಿದ್ದರೆ, 76 ರಾಷ್ಟ್ರಗಳಲ್ಲಿ ಹದಗೆಟ್ಟಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT