ಮಂಗಳವಾರ, ಸೆಪ್ಟೆಂಬರ್ 21, 2021
21 °C
ರಂಗಭೂಮಿ ನಿರ್ದೇಶಕ ಮೋಹನ ಶೇಣಿ ಅಭಿಮತ

‘ಉತ್ತರ ಕರ್ನಾಟಕದ ಮಕ್ಕಳು ಬಿಂದಾಸ್...’

ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ನೀನಾಸಂ ಕಲಾವಿದ, ರಂಗಭೂಮಿ ನಿರ್ದೇಶಕ ಮೋಹನ ಶೇಣಿ ದಕ್ಷಿಣ ಕನ್ನಡದ ಸುಳ್ಯದವರು. ನೀನಾಸಂನಲ್ಲಿ ಒಂದು ವರ್ಷ ತರಬೇತಿ, ಮೂರು ವರ್ಷ ತಿರುಗಾಟ ನಡೆಸಿದವರು.

ಎಂಟು ನಾಟಕಗಳ ನಿರ್ದೇಶನ, 30 ರಂಗ ಶಿಬಿರಗಳ ನಿರ್ದೇಶನ. ಸಾಮಾಜಿಕ ಜಾಗೃತಿ ಮೂಡಿಸುವ ಬೀದಿ ನಾಟಕಗಳನ್ನು ನಿರ್ದೇಶಿಸಿ ರಾಜ್ಯದಾದ್ಯಂತ ಪ್ರದರ್ಶನ ನೀಡಿದವರು. ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದ ‘ಪಡ್ಡಾಯ' ತುಳು ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದವರು.

ಸಿಂದಗಿಯಲ್ಲಿ ಮೇ 1ರಿಂದ 18ರವರೆಗೆ ಡ್ರಾಮಾ ಜ್ಯೂನಿಯರ್ ಕ್ಯಾಂಪ್ ಮಕ್ಕಳ ರಂಗ ಶಿಬಿರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮೋಹನ ಶೇಣಿ, ‘ಪ್ರಜಾವಾಣಿ’ ಜತೆ ಶಿಬಿರದ ಕುರಿತಂತೆ ಮಾತನಾಡಿದ್ದಾರೆ.

* ಇಲ್ಲಿನ ರಂಗ ಸಜ್ಜಿಕೆ ಬಗ್ಗೆ ತಿಳಿಸಿ ?

ತ್ಯಾಜ್ಯ ವಸ್ತುಗಳನ್ನು ಬಳಸಿ, ಮಕ್ಕಳಿಗೆ ಪ್ರಭಾವ ಬೀರುವ ರೀತಿಯಲ್ಲಿ ಆಕರ್ಷಣೀಯವಾಗಿ ರಂಗ ಸಜ್ಜಿಕೆ ಸಿದ್ಧಪಡಿಸಲಾಗಿದೆ. ತರಬೇತಿ ಸ್ಥಳ ರಂಗ ತರಬೇತಿಗೆ ಹೇಳಿ ಮಾಡಿಸಿದಂತಿದೆ. ಪ್ರಖರ ಬಿಸಿಲಲ್ಲೂ ತಂಪು ಅನುಭವ ನೀಡುವ ಗಿಡ -ಮರ -ಬಳ್ಳಿ, ಪಕ್ಷಿಗಳನ್ನೊಳಗೊಂಡ ಸುಂದರ ಪರಿಸರ ಇಲ್ಲಿದೆ.

* ಮಕ್ಕಳ ಸ್ಪಂದಿಸುವಿಕೆ ಹೇಗಿದೆ ?

ನಾಲ್ಕು ವರ್ಷದ ಪೋರರಿಂದ ಹಿಡಿದು, 13 ವರ್ಷದವರೆಗಿನ 69 ಮಕ್ಕಳಿದ್ದಾರೆ. ತುಂಬಾ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ವರ್ಗ ಕೋಣೆ ಬಂಧನದಿಂದ ಹೊರ ಬಂದು, ನಿಸರ್ಗದ ಮಡಿಲಲ್ಲಿ ಸ್ವಯಂ ಪ್ರೇರಣೆಯಿಂದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

* ಅಭಿನಯದ ಜತೆಗೆ... ಮತ್ತೇನು ?

ಮಕ್ಕಳು ಸಮಾಜಮುಖಿಯಾಗಬೇಕು ಎಂಬ ಹಿನ್ನೆಲೆಯಲ್ಲಿ ನೆಲ, ಜಲ, ಪರಿಸರ, ಅಭಿವೃದ್ಧಿ ಪರಿಕಲ್ಪನೆ ಇಟ್ಟುಕೊಂಡು ಅಭಿನಯ ತರಬೇತಿಯೊಂದಿಗೆ ಸಾಮಾಜಿಕ ಪ್ರಜ್ಞೆ, ಸಮಯ ಪ್ರಜ್ಞೆ, ಶಿಸ್ತು ಮೂಡಿಸುವ ವಾತಾವರಣ, ಜಾತಿ, ಲಿಂಗ, ತಾತರಮ್ಯ ಗಡಿ ಮೀರಿ ನಾವೆಲ್ಲ ಒಂದೆಂಬ ರೀತಿಯಲ್ಲಿ ಕಲಿಕಾ ವಾತಾವರಣವಿದೆ. ಎರಡನೇ ದಿನದಲ್ಲೇ ಮಕ್ಕಳು ಈ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದಾರೆ. ಇಲ್ಲಿಯ ಮಕ್ಕಳಿಂದ ನಾನೂ ಹೊಸತನ ಕಲಿತೆ.

* ರಂಗ ಶಿಬಿರದ ಯೋಜನೆಗಳೇನು ?

ಮಕ್ಕಳಿಂದ ಮೂರು ನಾಟಕ ಪ್ರದರ್ಶನಗೊಳ್ಳುತ್ತವೆ. ಮಕ್ಕಳಿಂದ ಸಿದ್ಧಗೊಂಡ ವಿವಿಧ ಕಲಾಕೃತಿಗಳನ್ನು ಅನಾವರಣಗೊಳಿಸಲಾಗುವುದು. ಇದೇ 7ರಂದು ‘ನೀರು ಉಳಿಸಿ’ ಪರಿಕಲ್ಪನೆ ಒಳಗೊಂಡು ಪಟ್ಟಣದ ಮುಖ್ಯ ಪ್ರದೇಶಗಳಲ್ಲಿ ಬೀದಿ ನಾಟಕ ಮಾಡಿಸಲಾಗುವುದು.

ಒಂದು ದಿನ ಮಕ್ಕಳಿಗೆ ಬಣ್ಣ ಹಚ್ಚಿ ಎತ್ತಿನ ಬಂಡಿಗಳಲ್ಲಿ ಕೂರಿಸಿ, ಪಟ್ಟಣದಲ್ಲೆಲ್ಲಾ ಮೆರವಣಿಗೆ ನಡೆಸುವ ಮೂಲಕ ರಂಗ ಶಿಬಿರದ ಬಗ್ಗೆ ಜನರಿಗೆ ಪ್ರಚಾರ ಮಾಡಲಾಗುವುದು.

* ದಕ್ಷಿಣ ಕನ್ನಡದ ಮಕ್ಕಳು ಮತ್ತು ಉತ್ತರ ಕರ್ನಾಟಕದ ಮಕ್ಕಳಲ್ಲಿ ಕಂಡು ಬರುವ ವ್ಯತ್ಯಾಸವೇನು ?

ದಕ್ಷಿಣ ಕನ್ನಡದ ಮಕ್ಕಳಿಗಿಂತ, ಉತ್ತರ ಕರ್ನಾಟಕದ ಮಕ್ಕಳು ಬಿಂದಾಸ್ ಇದ್ದಾರೆ. ಇವರೊಟ್ಟಿಗಿರುವುದು ಹೆಮ್ಮೆ ಎನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು