ವರ್ಷವಾದರೂ ಕ್ರಿಯಾ ಯೋಜನೆ ಇಲ್ಲ..!, ಸಚಿವರ ಸ್ವಕ್ಷೇತ್ರಕ್ಕಿಲ್ಲ ‘ಗಾಂಧಿ ಗ್ರಾಮ’

7

ವರ್ಷವಾದರೂ ಕ್ರಿಯಾ ಯೋಜನೆ ಇಲ್ಲ..!, ಸಚಿವರ ಸ್ವಕ್ಷೇತ್ರಕ್ಕಿಲ್ಲ ‘ಗಾಂಧಿ ಗ್ರಾಮ’

Published:
Updated:

ಸಿಂದಗಿ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಪ್ರತಿನಿಧಿಸುವ ಸ್ವಕ್ಷೇತ್ರ ಸಿಂದಗಿ ತಾಲ್ಲೂಕಿನ ಯಾವೊಂದು ಗ್ರಾಮ ಪಂಚಾಯ್ತಿಯೂ ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿಲ್ಲ.

ಇದು ಒಂದೆಡೆಯಾದರೆ, ಮತ್ತೊಂದೆಡೆ ಹಿಂದಿನ ವರ್ಷ ಆಯ್ಕೆಯಾಗಿದ್ದ ಮುಳಸಾವಳಗಿ ಗ್ರಾಮ ಪಂಚಾಯ್ತಿ ಆಡಳಿತ ಪುರಸ್ಕಾರದ ಮೊತ್ತಕ್ಕೆ ಇದೂವರೆಗೂ ಕ್ರಿಯಾ ಯೋಜನೆಯನ್ನೇ ರೂಪಿಸಿಲ್ಲ.

ಮತ್ತೊಂದು ಗಾಂಧಿ ಜಯಂತಿ ಬಂದಿದೆ. ಪ್ರಶಸ್ತಿ ಲಭಿಸಿ ವರ್ಷ ಗತಿಸಿದೆ. ಈಗಷ್ಟೇ ₹ 5 ಲಕ್ಷ ಪುರಸ್ಕೃತ ಅನುದಾನ ಪಂಚಾಯ್ತಿ ಖಾತೆಗೆ ಜಮೆ ಆಗಿದೆ. ಅಭಿವೃದ್ಧಿ ಕಾಮಗಾರಿಯ ಕ್ರಿಯಾ ಯೋಜನೆ ಮಾತ್ರ ಇನ್ನೂ ಸಿದ್ಧಗೊಂಡಿಲ್ಲ. ಇದು 2017ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಮುಳಸಾವಳಗಿ ಗ್ರಾಮ ಪಂಚಾಯ್ತಿ ಚಿತ್ರಣ.

ಗಾಂಧಿ ಗ್ರಾಮ ಪುರಸ್ಕೃತ ಗ್ರಾಮ ಪಂಚಾಯ್ತಿಯ ಮಾಹಿತಿ ಪಡೆಯಲು ಹರಸಾಹಸ ನಡೆಸಿದರೂ, ತಾಲ್ಲೂಕು ಪಂಚಾಯ್ತಿ ಆಡಳಿತ ಸ್ಪಂದಿಸಲಿಲ್ಲ. ತಾ.ಪಂ. ಕಾರ್ಯಾಲಯದಲ್ಲಿನ ಸಿಬ್ಬಂದಿಗೆ ಕೇಳಿದರೆ ‘ಈ ಸಲ ಯಾವ ಹಳ್ಳಿಗೆ ಸಿಕ್ಕಿದೆ ಗೊತ್ತಿಲ್ಲ. ಇನ್ನೊಬ್ಬರಿಗೆ ಕೇಳಿ ಎಂದರು. ಇನ್ನೊಬ್ಬರು ಮತ್ತೊಬ್ಬರಿಗೆ ಕೇಳಿ ಎಂದರು. ಒಬ್ಬರು ಇನ್ನೊಬ್ಬರ ಕಡೆ ಬೊಟ್ಟು ತೋರಿದರು. ಯಾರೊಬ್ಬರೂ ಸಮರ್ಪಕ ಮಾಹಿತಿ ನೀಡಲಿಲ್ಲ.

ತಾ.ಪಂ. ಇಒ ನಮ್ಮ ಕಾರ್ಯಾಲಯದ ವ್ಯವಸ್ಥೆ ಸರಿಯಿಲ್ಲ. ನಾನೀಗ ಹೊಸದಾಗಿ ಬಂದಿದ್ದೇನೆ. ಜಿಲ್ಲಾ ಪಂಚಾಯ್ತಿಯ ಉಪ ಕಾರ್ಯದರ್ಶಿಗೆ ಕೇಳಬಹುದು’ ಎಂದಷ್ಟೇ ಪ್ರತಿಕ್ರಿಯಿಸಿದರು.

‘ಹಿಂದಿನ ಬಾರಿಯ ಗಾಂಧಿ ಗ್ರಾಮ ಪುರಸ್ಕಾರಕ್ಕೆ ನಮ್ಮೂರು ಆಯ್ಕೆಯಾಗಿತ್ತು. ಪಂಚಾಯ್ತಿ ದಾಖಲೆಗಳ ಪ್ರಕಾರ 1230 ಶೌಚಾಲಯ ನಿರ್ಮಿಸಿ ಶೇ 100ರ ಗುರಿ ಸಾಧಿಸಿದ್ದಾರೆ. ಇಡೀ ಪಂಚಾಯ್ತಿ, ಊರು ಸುತ್ತು ಹಾಕಿದರೆ 810 ಶೌಚಾಲಯಗಳಿವೆ. ಉಳಿದವು ಕಡತದಲ್ಲಿರಬಹುದು. ಇದು ಇಲ್ಲಿನ ವಾಸ್ತವ’ ಎಂಬ ದೂರು ಮುಳಸಾವಳಗಿ ಗ್ರಾಮಸ್ಥ ಸಂಗನಗೌಡ ಬಿರಾದಾರ ಅವರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !