ಶನಿವಾರ, ಆಗಸ್ಟ್ 24, 2019
28 °C
ನಿಮ್ಹಾನ್ಸ್-– ಅಂಡರ್‌ರೈಟರ್ಸ್ ಲ್ಯಾಬೊರೇಟರೀಸ್ ವರದಿಯಲ್ಲಿ ಉಲ್ಲೇಖ

ಶಾಲೆಗಳಿಗಿಲ್ಲ ಮಕ್ಕಳ ಸುರಕ್ಷತೆ ಕಾಳಜಿ

Published:
Updated:
Prajavani

ಬೆಂಗಳೂರು: ‘ಶಾಲೆಗಳು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುತ್ತಿಲ್ಲ. ಹಾಗಾಗಿಯೇ ಗಾಯಗೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ’ ಎನ್ನುವ ಆತಂಕಕಾರಿ ಸಂಗತಿ ನಿಮ್ಹಾನ್ಸ್ ಹಾಗೂ ಅಂಡರ್‌ರೈಟರ್ಸ್ ಲ್ಯಾಬೊರೇಟರೀಸ್ (ಯುಎಲ್) ಜಂಟಿಯಾಗಿ ನಡೆಸಿದ ಅಧ್ಯಯನ ವರದಿಯಲ್ಲಿದೆ.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ, ‘ಭಾರತದಲ್ಲಿ ಮಕ್ಕಳ ಸುರಕ್ಷತಾ ಕ್ರಮಗಳ ಅನುಷ್ಠಾನ’ ಕುರಿತ ಸಭೆಯಲ್ಲಿ ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಲಾಯಿತು.

ನಿಮ್ಹಾನ್ಸ್ ಹಾಗೂ ಯುಎಲ್ ಸಂಸ್ಥೆ ಸೇರಿ ಬೆಂಗಳೂರು ಹಾಗೂ ಕೋಲಾರ ಪ್ರದೇಶಗಳ 131 ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಅಧ್ಯಯನ ನಡೆಸಿದ್ದವು. ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಅಂಶಗಳು ಇಂತಿವೆ.

ಶಾಲೆಗಳ ಒಳಗೆ ಹಾಗೂ ಹೊರಗಡೆ ಎಷ್ಟರ ಮಟ್ಟಿಗೆ ಸುರಕ್ಷತಾ ನಿಯಮವನ್ನು ಅನುಸರಿಸಲಾಗುತ್ತಿದೆ ಎನ್ನುವುದರ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಒಟ್ಟು ಶೇಕಡ 50.8ರಷ್ಟು ಶಾಲೆಗಳು ಮಾತ್ರ ಸುರಕ್ಷತಾ ಕ್ರಮ ಪಾಲಿಸುತ್ತಿವೆ.

ಬಹುತೇಕ ಶಾಲೆಗಳಲ್ಲಿ ನೆಲ, ಮೆಟ್ಟಿಲು, ಆವರಣ, ಕಟ್ಟಡ, ಕಂಬಗಳು ಸುಸ್ಥಿತಿಯಲ್ಲಿಲ್ಲ. ಶೇಕಡ 54.2ರಷ್ಟು ಶಾಲೆಗಳ ನೆಲಹಾಸು ನುಣುಪಾಗಿಲ್ಲ. ಶೇಕಡ 20.8ರಷ್ಟು ಶಾಲೆಗಳ ಬಳಿ ಮಾತ್ರ ಸುಸಜ್ಜಿತ ರಸ್ತೆ ಹಾಗೂ ಪಾದಾಚಾರಿ ಮಾರ್ಗಗಳಿವೆ. ಬಹುತೇಕ ಕಡೆ ಶಾಲಾ ಪ್ರದೇಶ ಎಂದು ಸೂಚಿಸುವ ಫಲಕಗಳೂ ಕಾಣಸಿಗುವುದಿಲ್ಲ. ಶಾಲಾ ಪ್ರದೇಶದಲ್ಲಿರುವ ಶೇಕಡ 11.5ರಷ್ಟು ರಸ್ತೆಗಳಲ್ಲಿ ಮಾತ್ರ ವೇಗದ ಮಿತಿ ಫಲಕ ಹಾಕಲಾಗಿದೆ. ಇದರಿಂದ ರಸ್ತೆ ಅಪಘಾತಗಳು ಹೆಚ್ಚುವುದರ ಜತೆಗೆ ಮಕ್ಕಳು ಭಯದಲ್ಲಿ ಸಾಗಬೇಕಾದ ಪರಿಸ್ಥಿತಿ ಇದೆ. 

ಶಾಲಾ ಬಸ್‌ಗಳು ಸಹ ಸುರಕ್ಷತಾ ನಿಯಮವನ್ನು ಉಲ್ಲಂಘಿಸುತ್ತಿರುವುದು ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ. ಶೇಕಡ 43ರಷ್ಟು ಬಸ್ಸಿನಲ್ಲಿ ಮಾತ್ರ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅದೇ ರೀತಿ, ಶೇಕಡ 58ರಷ್ಟು ಬಸ್‌ಗಳಲ್ಲಿ ಮಾತ್ರ ಜಿಪಿಎಸ್‌ ಸಾಧನ ಜೋಡಿಸಿದ್ದಾರೆ. 

ಬಹುತೇಕ ಶಾಲೆಗಳು ಅಗ್ನಿ ಸುರಕ್ಷತೆ ಪ್ರಮಾಣಪತ್ರವನ್ನು ಹೊಂದಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಯಿಂದ ಹೊರತರಲು ಕೂಡಾ ಅಗತ್ಯ ಕ್ರಮ ಕೈಗೊಂಡಿಲ್ಲ. ಶೇ 90ರಷ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳು ಗಾಯಗೊಂಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. 

ಸುರಕ್ಷತೆಗೆ ಸಿಗಲಿ ಆದ್ಯತೆ: ‘ರಸ್ತೆ ಟ್ರಾಫಿಕ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ಶೇ 40ರಷ್ಟು ಮಕ್ಕಳು ಕೊನೆಯುಸಿರೆಳೆಯುತ್ತಿದ್ದಾರೆ. ಹಾಗಾಗಿ ಶಾಲೆಯ ಒಳಗೆ ಹಾಗೂ ಹೊರಗೆ ಅನುಸರಿಸಿರುವ ಸುರಕ್ಷತಾ ಕ್ರಮಗಳನ್ನು ಅಧ್ಯಯನ ಮಾಡಿದ್ದೇವೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ರಾಷ್ಟ್ರೀಯ ಶಾಲಾ ಸುರಕ್ಷತಾ ಮಾರ್ಗದರ್ಶಿ ಸೂತ್ರಗಳು, ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಶಾಲಾ ಸುರಕ್ಷತಾ ನೀತಿ ಮಾರ್ಗದರ್ಶಿ ಸೂತ್ರಗಳು, ರಾಷ್ಟ್ರೀಯ ಕಟ್ಟಡ ನೀತಿಸಂಹಿತೆಯಂತಹ ಹಲವು ರೀತಿಯ ಕಾನೂನುಗಳಿವೆ. ಜಾರಿಯಲ್ಲಿರುವ ಮಾರ್ಗದರ್ಶಿ ಸೂತ್ರವನ್ನು ಹಾಗೂ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು’ ಎಂದು ನಿಮ್ಹಾನ್ಸ್‌ನ ಹಿರಿಯ ವೈದ್ಯ ಡಾ.ಜಿ. ಗುರುರಾಜ್ ಹೇಳಿದರು. 

‘ಶಾಲೆಗಳು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಕಳೆದ ದಶಕದಲ್ಲಿ ಈ ಲೋಪದಿಂದಾಗಿಯೇ ದೇಶದಲ್ಲಿ 5 ಲಕ್ಷ ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಶಾಲಾ ಬಸ್‌ಗಳು, ರಿಕ್ಷಾಗಳಲ್ಲಿಯೂ ಸುರಕ್ಷತೆ ಇಲ್ಲ. ಪ್ರಯೋಗಾಲಯಗಳಲ್ಲಿ ಮಕ್ಕಳ ಮೇಲೆ ಪ್ರಾಧ್ಯಾಪಕರು ನಿಗಾ ಇಡಬೇಕು. ಶಾಲೆಯಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಳ್ಳುವುದು ಕಡ್ಡಾಯ’ ಎಂದು ಯುಎಲ್‌ನ ಉಪಾಧ್ಯಕ್ಷ ಸುರೇಶ್ ಸುಗವಾನಂ ತಿಳಿಸಿದರು. 

ಅಂಕಿ–ಅಂಶಗಳು

ಅಧ್ಯಯನಕ್ಕೆ ಒಳಪಟ್ಟ ಒಟ್ಟು ಶಾಲೆಗಳು – 131

ಬೆಂಗಳೂರು ದಕ್ಷಿಣದ ಶಾಲೆಗಳು –  52

ಬೆಂಗಳೂರು ಉತ್ತರದ ಶಾಲೆಗಳು –   40

ಕೋಲಾರದ ಶಾಲೆಗಳು –  39 

 ***

ಮಕ್ಕಳು ಗಾಯಗೊಳ್ಳುವುದೆಲ್ಲಿ? (ನಿಮ್ಹಾನ್ಸ್ ಅಂಕಿ ಅಂಶ)

ಶೇ 41 – ರಸ್ತೆಯಲ್ಲಿ

ಶೇ 31 – ಮನೆಯಲ್ಲಿ

ಶೇ 11 – ಬಾವಿಗಳ ಸಮೀಪ

ಶೇ 7 – ತೋಟಗಳಲ್ಲಿ

ಶೇ 4 – ಆಸ್ಪತ್ರೆಗಳಲ್ಲಿ

ಶೇ 7 – ಇತರ ಪ್ರದೇಶದಲ್ಲಿ

 ***

ರಸ್ತೆ ಅಪಘಾತ: ಮಕ್ಕಳ ಸಾವಿನ ಪ್ರಮಾಣ

ಶೇ 45 – ನಗರದ ಮುಖ್ಯರಸ್ತೆಗಳು

ಶೇ 23 – ಅಡ್ಡ ರಸ್ತೆಗಳು

ಶೇ 21 – ಹೆದ್ದಾರಿಗಳು

ಶೇ 5 – ಗ್ರಾಮೀಣ ರಸ್ತೆಗಳು

ಶೇ 6 – ಇತರ ರಸ್ತೆಗಳು

***

ಮಕ್ಕಳ ಸಾವಿಗೆ ಕಾರಣವಾಗುವ ವಾಹನಗಳು

ಶೇ 45 – ಕಾರು

ಶೇ 30 – ದ್ವಿಚಕ್ರ ವಾಹನ

ಶೇ 7 – ಸೈಕಲ್

ಶೇ 7 – ಪಾದಾಚಾರಿಗಳು

ಶೇ 4 – ಬಸ್ಸು

ಶೇ 8 – ಇತರೆ

 

 

 

Post Comments (+)