ಶುಕ್ರವಾರ, ನವೆಂಬರ್ 22, 2019
23 °C
ಬಿಎಸ್‌ಎನ್‌ಎಲ್‌ ಕಚೇರಿಗೆ ಪೂರೈಕೆಯಾಗದ ಡೀಸೆಲ್‌

ಮಹದೇಶ್ವರ ಬೆಟ್ಟ: ವಿದ್ಯುತ್‌ ಇದ್ದರೆ ಮಾತ್ರ ಮೊಬೈಲ್‌ ನೆಟ್‌ ವರ್ಕ್‌

Published:
Updated:
Prajavani

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ತೀವ್ರವಾಗಿದ್ದು, ವಿದ್ಯುತ್‌ ಪೂರೈಕೆ ಒಂದೆರಡು ಗಂಟೆ ಸ್ಥಗಿತಗೊಂಡರೆ ದೂರವಾಣಿ ಕರೆ ಮಾಡಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬೆಟ್ಟದಲ್ಲಿರುವ ಬಿಎಸ್‌ಎನ್‌ಎಲ್‌ ವಿನಿಮಯ ಕೇಂದ್ರಕ್ಕೆ ಎರಡು ತಿಂಗಳುಗಳಿಂದ ಡೀಸೆಲ್‌ ಪೂರೈಕೆ ಸ್ಥಗಿತಗೊಂಡಿರುವುದರಿಂದ ಜನರೇಟರ್‌ ಕಾರ್ಯನಿರ್ವಹಿಸುತ್ತಿಲ್ಲ. ವಿದ್ಯುತ್‌ ಕೈಕೊಟ್ಟ ಸಂದರ್ಭದಲ್ಲಿ ಮೊಬೈಲ್‌ ಟವರ್‌ ಸ್ಥಗಿತಗೊಳ್ಳುತ್ತಿದೆ. ವಿನಿಮಯ ಕೇಂದ್ರದಲ್ಲಿರುವ ಯುಪಿಎಸ್‌ ಬ್ಯಾಟರಿಗಳು ಗರಿಷ್ಠ ಎರಡರಿಂದ ಮೂರು ಗಂಟೆ ಹೊತ್ತು ವಿದ್ಯುತ್‌ ಪೂರೈಸುವ ಸಾಮರ್ಥ್ಯ ಹೊಂದಿವೆ. ಅದಕ್ಕಿಂತ ಹೆಚ್ಚು ಸಮಯ ವಿದ್ಯುತ್‌ ಇಲ್ಲದಿದ್ದರೆ ಮೊಬೈಲ್‌, ಸ್ಥಿರ ದೂರವಾಣಿಗಳು, ಇಂಟರ್‌ನೆಟ್‌ ಸೇವೆ ಸ್ಥಗಿತಗೊಳ್ಳುತ್ತಿವೆ.

ಬಿಎಸ್‌ಎನ್‌ಎಲ್ ಮಾತ್ರ ಗತಿ: ಬಿಎಸ್‌ಎನ್‌ಎಲ್‌ ಮಾತ್ರವಲ್ಲದೆ ಏರ್‌ಟೆಲ್‌, ವೊಡಾಫೋನ್‌ ಸೇರಿದಂತೆ ಇತರೆ ಖಾಸಗಿ ದೂರಸಂಪರ್ಕ ಕಂಪನಿಗಳು ಸೇವೆ ನೀಡುತ್ತಿವೆ. ಆದರೆ, ಎಲ್ಲ ಕಂಪನಿಗಳ ಸಿಗ್ನಲ್‌ಗಳು ದುರ್ಬಲವಾಗಿದ್ದು, ಕರೆ ಮಾಡುವುದಕ್ಕೆ ಆಗುವುದಿಲ್ಲ, ಇಂಟರ್‌ನೆಟ್ ಕೂಡ ಸಿಗುವುದಿಲ್ಲ. ಹಾಗಾಗಿ, ಬೆಟ್ಟದಲ್ಲಿ ಜನರು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಅನ್ನೇ ನಂಬಿದ್ದಾರೆ. 

ಈ ಮಧ್ಯೆ, ನಾಲ್ಕು ದಿನಗಳಿಂದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ಸಿಬ್ಬಂದಿ ಬೆಟ್ಟದ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್‌ ಕಂಬಗಳನ್ನು ಅಳವಡಿಸುತ್ತಿದ್ದು, ಪ್ರತಿ ದಿನ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆವಿದ್ಯುತ್‌ ಕಡಿತ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

‘ಮಲೆಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಜಾತ್ರೆ ಹಾಗೂ ವಿಶೇಷ ದಿನಗಳಲ್ಲಿ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ನೆಟ್‌ವರ್ಕ್‌ ಸಮಸ್ಯೆ ಎದುರಾದರೆ ಸ್ಥಳೀಯರು ಸೇರಿದಂತೆ ಎಲ್ಲರೂ ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ತುರ್ತು ಸಂದರ್ಭದಲ್ಲೂ ಸಂಪರ್ಕಿಸಲು ಸಾಧ್ಯವಾಗದಂತೆ ಆಗುತ್ತದೆ’ ಎಂದು ಸ್ಥಳೀಯರು ಹೇಳುತ್ತಾರೆ.

‘ಮೊಬೈಲ್‌ ನೆಟ್‌ವರ್ಕ್‌ ಸರಿ ಇಲ್ಲದೆ ಇರುವುದರಿಂದ ಸ್ಥಳೀಯರಿಗೆ, ಭಕ್ತರಿಗೆ ತೊಂದರೆಯಾಗುತ್ತಿದೆ. ನಾಲ್ಕು ಕಂಪನಿಗಳ ಟವರ್‌ಗಳಿದ್ದರೂ ಯಾವುದರ ಸಿಗ್ನಲ್‌ ಕೂಡ ಸಿಗುವುದಿಲ್ಲ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ ಹಾಗೂ ಪೊಲೀಸರಿಗೂ ಕರೆ ಮಾಡಲು ಹರಸಾಹಸ ಪಡಬೇಕು. ಕೆಲವು ದಿನಗಳಿಂದ ಈಚೆಗೆ ವಿದ್ಯುತ್‌ ದುರಸ್ತಿ ಕೆಲಸ ನಡೆಯುತ್ತಿದ್ದು,  ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈ ಸಮಯದಲ್ಲಿ ಯಾವ ಮೊಬೈಲ್‌ ಕಾರ್ಯನಿರ್ವಹಿಸುವುದಿಲ್ಲ’ ಎಂದು ಸ್ಥಳೀಯ ನಿವಾಸಿ ಯೋಗೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಡೀಸೆಲ್‌ ಪೂರೈಕೆಯಾಗದೆ ಇರುವುದರಿಂದ ಜನರೇಟರ್‌ ಉಪಯೋಗಿಸುವುದಕ್ಕೆ ಆಗುತ್ತಿಲ್ಲ. ವಿದ್ಯುತ್‌ ಹೆಚ್ಚು ಹೊತ್ತು ಕಡಿತವಾದರೆ ಸಮಸ್ಯೆಯಾಗುತ್ತಿದೆ. ವಿನಿಯಮ ಕೇಂದ್ರಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡುವಂತೆ ಸೆಸ್ಕ್‌ಗೆ ಕೇಳಿದ್ದೇವೆ’ ಎಂದು ಬಿಎಸ್‌ಎನ್‌ಎಲ್‌ ಕಿರಿಯ ಎಂಜಿನಿಯರ್‌ ರಶ್ಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಇಡೀ ದೇಶದಲ್ಲಿ ಸಮಸ್ಯೆ

ರಾಜ್ಯ ಮಾತ್ರ ಅಲ್ಲ ಇಡೀ ದೇಶದಲ್ಲಿ ಡೀಸೆಲ್‌ ಪೂರೈಕೆ ಸಮಸ್ಯೆ ಇದೆ. ಸಂಸ್ಥೆ ನಷ್ಟದಲ್ಲಿರುವುದರಿಂದ ಕೆಲವು ದಿನಗಳಿಂದ ವಿನಿಮಯ ಕೇಂದ್ರಗಳಿಗೆ ಡೀಸೆಲ್‌ ಬರುತ್ತಿಲ್ಲ. ವಿದ್ಯುತ್‌ ಹೆಚ್ಚು ಹೊತ್ತು ಕೈಕೊಟ್ಟರೆ ಎಲ್ಲ ಕಡೆಯೂ ಸಮಸ್ಯೆ ಆಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರತಿಕ್ರಿಯಿಸಿ (+)