ದೇಶ ಮುನ್ನಡೆಸಲು ಹಣವಿಲ್ಲ: ಬದಲಾವಣೆಗಾಗಿ ದೇವರು ತಂದ ಸಂಕಷ್ಟವಿದು –ಇಮ್ರಾನ್ ಖಾನ್

7

ದೇಶ ಮುನ್ನಡೆಸಲು ಹಣವಿಲ್ಲ: ಬದಲಾವಣೆಗಾಗಿ ದೇವರು ತಂದ ಸಂಕಷ್ಟವಿದು –ಇಮ್ರಾನ್ ಖಾನ್

Published:
Updated:

ಇಸ್ಲಾಮಾಬಾದ್‌: ‘ದೇಶವನ್ನು ಮುನ್ನಡೆಸಲು ಸರ್ಕಾರದ ಬಳಿ ಹಣವಿಲ್ಲ’ ಎಂದು ಪಾಕಿಸ್ತಾನ ಪ್ರಧಾನಮಂತ್ರಿ, ತೆಹ್ರಿಕ್‌ ಇ ಇನ್ಸಾಫ್‌(ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಹೇಳಿದರು.

ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದಿನ ಸರ್ಕಾರದ ಅವಧಿಯಲ್ಲಿ ದುಂದು ವೆಚ್ಚದಾಯಕ ಯೋಜನೆಗಳನ್ನು ಕೈಗೊಳ್ಳಲಾಗಿದೆ’ ಎಂದು ಮಾಜಿ ಪ್ರಧಾನಿ ಶಾಹಿದ್‌ ಕೌನಾನ್‌ ಅಬ್ಬಾಸಿ ವಿರುದ್ಧ ಹರಿಹಾಯ್ದರು. ಜೊತೆಗೆ, ‘ಸರ್ಕಾರವು ಸಾಲದ ಸುಳಿಯಲ್ಲಿ ಸಿಲುಕಿದೆ. ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಬದಲಾಗಬೇಕಿದೆ. ನಮ್ಮ ಜನರೂ ಬದಲಾಗಬೇಕಾದ ಅಗತ್ಯವಿದ್ದು, ಬದಲಾಗದಿದ್ದರೆ ಸಂಕಷ್ಟ ತಲೆದೋರಲಿದೆ’ ಎಂದರು.

‘ಸರ್ಕಾರವನ್ನು ನಡೆಸಲು ಹಣವಿಲ್ಲ. ದೇಶದ ಶೇ. 70 ರಷ್ಟು ಜನರು 30 ವಯಸ್ಸಿಗಿಂತ ಕೆಳಗಿನವರಾಗಿದ್ದಾರೆ. ಪ್ರತಿ ದಿನವು ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅವರಿಗೆ ಉದ್ಯೋಗಾವಕಾಶಗಳು ಸಿಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ದೇಶವು ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬುದಕ್ಕೆ ಉದಾಹರಣೆ ನೀಡಿದ ಅವರು, ಇತ್ತೀಚೆಗೆ ಕ್ಯಾಬಿನೆಟ್‌ನಲ್ಲಿ ಅಂಕಿಅಂಶವೊಂದನ್ನು ಪ್ರಕಟಿಸಲಾಗಿತ್ತು. ಅದರಲ್ಲಿ ದೇಶದ ಜನರಿಗೆ ಮೆಟ್ರೋ ಬಸ್‌ ಸೇವೆಯನ್ನು ನಷ್ಟದಲ್ಲಿದ್ದುಕೊಂಡು ಒದಗಿಸಲಾಗುತ್ತಿದ್ದು, ನಷ್ಟ ತುಂಬುವ ಸಲುವಾಗಿ ಸಾಲ ಪಡೆಯಲಾಗುತ್ತಿದೆ ಎಂಬುದಾಗಿ ವಿವರಿಸಲಾಗಿತ್ತು. ಕೇವಲ ಇದರ ಬಡ್ಡಿಗಾಗಿಯೇ ಪ್ರತಿವರ್ಷ ₹ 600 ಕೋಟಿ ಪಾವತಿಸಲಾಗುತ್ತಿದೆ ಎಂದರು.

ಮಾತು ಮುಂದುವರಿಸಿದ ಅವರು, ‘ನಮ್ಮ ಬದಲಾವಣೆಯನ್ನು ಬಯಸಿ ಬಹುಶಃ ದೇವರೇ ಈ ಸಂಕಷ್ಟ ಸೃಷ್ಟಿಸಿರಬಹುದು. ಜನರು ಹಾಗೂ ಸರ್ಕಾರ ಒಟ್ಟಾಗಿ ಮುಂದುವರಿದರೆ ಯಾವ ಸಮಸ್ಯೆಗಳೂ ಎದುರಾಗುವುದಿಲ್ಲ’ ಎಂದು ಹೇಳಿದರು.

‘ಜನನಾಯಕರು ಜನರ ತೆರಿಗೆ ಹಾಗೂ ವೋಟು ಪಡೆದು ಅಧಿಕಾರ ಅನುಭವಿಸುತ್ತಿದ್ದಾರೆ. ಅದನ್ನು ಜನರಿಗಾಗಿ ಸೇವೆ ಸಲ್ಲಿಸಲು ತಮಗಿರುವ ಜವಾಬ್ದಾರಿ ಎಂದು ಭಾವಿಸಬೇಕು. ಅಧಿಕಾರಿಗಳು ಜನರ ಶ್ರೇಯಾಭಿವೃದ್ಧಿಗಾಗಿ ಶ್ರಮಿಸಬೇಕು. ಯಾವುದೇ ರೀತಿಯ ರಾಜಕೀಯ ಒತ್ತಡಗಳಿದ್ದರೂ ತೊಂದರೆ ಬರದಂತೆ ನೋಡಿಕೊಳ್ಳಲಾಗುವುದು’ ಎಂದು ಅಭಯ ನೀಡಿದರು.

 

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !