ಚಾಮರಾಜನಗರ: ಮೇವಿಗಿಲ್ಲ ‘ಬರ’, 2.53 ಲಕ್ಷ ಟನ್‌ ಲಭ್ಯ

7
ಜಿಲ್ಲೆಯಲ್ಲಿ ಬರ ಸ್ಥಿತಿ ಇದ್ದರೂ ಮುಂಗಾರುವರೆಗೂ ಪಶುಗಳ ಆಹಾರಕ್ಕೆ ಕೊರತೆ ಇಲ್ಲ

ಚಾಮರಾಜನಗರ: ಮೇವಿಗಿಲ್ಲ ‘ಬರ’, 2.53 ಲಕ್ಷ ಟನ್‌ ಲಭ್ಯ

Published:
Updated:
Prajavani

ಚಾಮರಾಜನಗರ: ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನೂ (ಹನೂರು ಸೇರಿದಂತೆ) ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದರೂ ಈ ಬಾರಿ ಮುಂಗಾರು ಆರಂಭವಾಗುವವರೆಗೂ ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಕೊರತೆ ಉಂಟಾಗದು ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಡಿಸೆಂಬರ್‌ ಅಂತ್ಯದವರೆಗೆ ಜಿಲ್ಲೆಯಾದ್ಯಂತ ರೈತರ ಜಮೀನಿನಲ್ಲಿ 2.53 ಲಕ್ಷ ಟನ್‌ ಮೇವು ಲಭ್ಯವಿದೆ. ಇದು ಮುಂದಿನ ಮೇ ತಿಂಗಳವರೆಗೂ ಸಾಕಾಗಬಹುದು ಎಂಬುದು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರ.  

‘ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಉತ್ತಮ ಬಿತ್ತನೆಯಾಗಿದೆ. ರೈತರು ಭತ್ತ, ಜೋಳ, ಮುಸುಕಿನ ಜೋಳ, ಹುರುಳಿ, ರಾಗಿ, ಕಬ್ಬು ಸೇರಿದಂತೆ ಹಲವು ಬೆಳೆ ಬೆಳೆದಿದ್ದಾರೆ. ಹಿಂಗಾರು ಅವಧಿಯಲ್ಲಿ 18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದ್ದರೂ, ಅದನ್ನು ಜಾನುವಾರುಗಳ ಮೇವಿಗೆ ಬಳಸಬಹುದು’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಆನಂದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೃಷಿ ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದ್ದೇವೆ. ನಾವು ಕೂಡ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿದ್ದೇವೆ. ಡಿಸೆಂಬರ್‌ ತಿಂಗಳಲ್ಲಿ ಜಿಲ್ಲೆಯಾದ್ಯಂತ ಬೆಳೆಗಳ ಕಟಾವು ಆರಂಭವಾಗಿದೆ. ಹಾಗಾಗಿ ಈ ವರ್ಷ ನಮಗೆ ಮೇವಿನ ಕೊರತೆಯಾಗದು’ ಎಂದು ಅವರು ಮಾಹಿತಿ ನೀಡಿದರು.

ಗೋಶಾಲೆಯೂ ಬೇಡ: 2016ರಲ್ಲಿ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇತ್ತು. ಹಸುಗಳು ಸೇರಿದಂತೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ಹೋಬಳಿ ಕೇಂದ್ರ ಮತ್ತು ತಾಲ್ಲೂಕುಗಳಲ್ಲಿ ಜಿಲ್ಲಾಡಳಿತ ಗೋಶಾಲೆಗಳನ್ನು ತೆರೆದಿತ್ತು. ಮೇವು ಖರೀದಿಸಿ ಜಾನುವಾರುಗಳಿಗೆ ಒದಗಿಸಿತ್ತು. ಆದರೆ, ಈ ವರ್ಷ ಗೋಶಾಲೆ  ತೆರೆಯುವ ಅಗತ್ಯವೇ ಇಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

ಜಿಲ್ಲೆಯಾದ್ಯಂತ ರೈತರು, ಭತ್ತದ ಹುಲ್ಲು ಸೇರಿದಂತೆ ಇತರೆ ಮೇವನ್ನು ಅಗತ್ಯವಿರುವಷ್ಟು ಖರೀದಿಸಿ ಸಂಗ್ರಹಿಸಿಡುತ್ತಿದ್ದಾರೆ. ಅಲ್ಲದೇ, ತಮ್ಮ ಜಮೀನಿನಲ್ಲಿರುವ ಹೆಚ್ಚುವರಿ ಮೇವನ್ನು ಮಾರಾಟ ಮಾಡುತ್ತಿದ್ದಾರೆ. 

ಜಿಲ್ಲೆಯಿಂದ ಹೊರ ಹೋಗದಿದ್ದರೆ ಸಾಕು: ಜಿಲ್ಲೆಯ ಗಡಿ ಭಾಗಗಳಲ್ಲಿ ರೈತರು ಹೊರಜಿಲ್ಲೆಯವರಿಗೆ, ಗುಂಡ್ಲುಪೇಟೆ ಭಾಗದಲ್ಲಿ ನೆರೆ ರಾಜ್ಯದವರಿಗೆ ಮೇವನ್ನು ಮಾರಾಟ ಮಾಡುತ್ತಾರೆ. ಇದನ್ನು ತಡೆಯುವ ಅಗತ್ಯವಿದೆ. ಮೇವು ಜಿಲ್ಲೆಯಿಂದ ಹೊರ ಹೋಗದಿದ್ದರೆ, ಧಾರಾಳ ಎನ್ನುವಷ್ಟು ಮೇವು ನಮ್ಮಲ್ಲಿಯೇ ಸಿಗಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಮಳೆಯ ನಿರೀಕ್ಷೆ: ಫೆಬ್ರುವರಿ –ಮಾರ್ಚ್‌ನಲ್ಲಿ ಬರ ಪರಿಸ್ಥಿತಿ ತೀವ್ರವಾದರೆ ನಂತರದ ತಿಂಗಳಲ್ಲಿ ಮೇವಿನ ಅಗತ್ಯ ಬಂದರೂ ಬರಬಹುದು. ಆದರೆ, ಕಳೆದ ವರ್ಷ ಜಿಲ್ಲೆಯಲ್ಲಿ ಫೆಬ್ರುವರಿ ಅಂತ್ಯದಲ್ಲೇ ಮುಂಗಾರುಪೂರ್ವ ಮಳೆ ಅರಂಭವಾಗಿತ್ತು. ಅದೇ ರೀತಿ ಈ ವರ್ಷವೂ ಬಂದರೆ  ಯಾವುದೇ ಸಮಸ್ಯೆ ಎದುರಾಗದು ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು.

ಮೇವು ಬ್ಯಾಂಕ್‌ ಸ್ಥಾಪಿಸಲು ಪ್ರಸ್ತಾವ
ಮುಂಗಾರಿನವರೆಗೆ ಮೇವಿನ ಕೊರತೆ ಉಂಟಾಗದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ 10 ಕಡೆಗಳಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸುವ ಪ್ರಸ್ತಾವವನ್ನು ಪಶುಸಂಗೋಪನಾ ಇಲಾಖೆಯು ಜಿಲ್ಲಾಧಿಕಾರಿಯವರ ಮುಂದಿಟ್ಟಿದೆ.

‘2019ರ ಮಾರ್ಚ್‌ ನಂತರ ತೀವ್ರ ಕೊರತೆ ಸಂದರ್ಭದಲ್ಲಿ ಮೇವು ಪೂರೈಸಲು ಈಗಲೇ ಮೇವು ಸಂ‌ಗ್ರಹ ಮಾಡಬಹುದಾಗಿದೆ. ಭತ್ತದ ಹುಲ್ಲು, ಜೋಳದ ಕಡ್ಡಿ, ರಾಗಿ ಹುಲ್ಲು ಸೇರಿದಂತೆ ಇನ್ನಿತರ ಮೇವು ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ರೈತರು ಭತ್ತದ ಕಟಾವು ಮಾಡುತ್ತಿದ್ದು, ಅವರಿಂದ ಭತ್ತದ ಹುಲ್ಲು ಖರೀದಿಸಲು ಅವಕಾಶ ಇದೆ’ ಎಂದು ಇಲಾಖೆಯ ಉಪನಿರ್ದೇಶಕ ಡಾ.ಆನಂದ್‌ ಅವರು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಮೇವು ಬ್ಯಾಂಕ್‌ ಸ್ಥಾಪಿಸಲು ಗುರುತಿಸಿರುವ ಸ್ಥಳಗಳು
ಮೇವು ಬ್ಯಾಂಕ್‌ ಸ್ಥಾಪನೆಗೆ ಪಶುಸಂಗೋಪನಾ ಇಲಾಖೆ ನಾಲ್ಕು ತಾಲ್ಲೂಕುಗಳಲ್ಲಿ 10 ಸ್ಥಳಗಳನ್ನು ಗುರುತಿಸಿದೆ.

ಚಾಮರಾಜನಗರ ತಾಲ್ಲೂಕು: ಹರದನಹಳ್ಳಿ (ಕೆವಿಕೆ), ಹರವೆ (ರೇಷ್ಮೆ ಇಲಾಖೆ ಆವರಣ) ಮತ್ತು ಮಂಗಲ ಗ್ರಾಮ (ನಿರ್ಮಿತಿ ಕೇಂದ್ರ)

ಗುಂಡ್ಲುಪೇಟೆ ತಾಲ್ಲೂಕು: ತೆರಕಣಾಂಬಿ (ಎಪಿಎಂಸಿ) ಮತ್ತು ಬರ್ಗಿ ಫಾರಂ

ಕೊಳ್ಳೇಗಾಲ ತಾಲ್ಲೂಕು: ಹನೂರು (ಎಪಿಎಂಸಿ), ರಾಮಾಪುರ, ಬಂಡಳ್ಳಿ ಮತ್ತು ಲೊಕ್ಕನಹಳ್ಳಿ (ರೈತರ ಜಮೀನುಗಳಲ್ಲಿ)

ಯಳಂದೂರು ತಾಲ್ಲೂಕು: ತೋಟಗಾರಿಕೆ ಇಲಾಖೆಯ ಆವರಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !