ಚುನಾವಣಾ ಪ್ರಚಾರಕ್ಕಿಲ್ಲ ‘ತಾರಾ’ ವರ್ಚಸ್ಸು..!

ಶನಿವಾರ, ಏಪ್ರಿಲ್ 20, 2019
32 °C
ದಕ್ಷಿಣ–ಮಧ್ಯ ಕರ್ನಾಟಕದ 14 ಕ್ಷೇತ್ರಗಳಲ್ಲಿನ ಮತದಾನದ ಬಳಿಕವೇ ಉತ್ತರದತ್ತ ಮುಖಂಡರ ಹುಮ್ಮಸ್ಸು

ಚುನಾವಣಾ ಪ್ರಚಾರಕ್ಕಿಲ್ಲ ‘ತಾರಾ’ ವರ್ಚಸ್ಸು..!

Published:
Updated:
Prajavani

ವಿಜಯಪುರ: ಮತದಾನಕ್ಕೆ 13 ದಿನ ಬಾಕಿ ಉಳಿದಿದೆಯಷ್ಟೇ. ಬಹಿರಂಗ ಪ್ರಚಾರಕ್ಕೆ 11 ದಿನವಷ್ಟೇ ಅವಕಾಶವಿದೆ. ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಅಖಾಡ ದಿನದಿಂದ ದಿನಕ್ಕೆ ರಂಗೇರಿದೆ.

ಬಿಜೆಪಿಯ ಪ್ರಚಾರದ ಅಬ್ಬರ ತುಸು ಹೆಚ್ಚಿದೆ. ಈಚೆಗೆ ದೋಸ್ತಿಗಳು ಸಹ ನಾವೇನು ಕಮ್ಮಿಯಿಲ್ಲ ಎಂಬಂತೆ ಕ್ಷೇತ್ರದಾದ್ಯಂಥ ಸಂಚರಿಸುತ್ತಿದ್ದಾರೆ. ಕಮಲ, ತೆನೆ ಹೊತ್ತ ಮಹಿಳೆಯ ಚಿಹ್ನೆ ನಡುವೆ, ಅಲ್ಲಲ್ಲೇ ಆನೆಯೂ ಹೆಜ್ಜೆ ಹಾಕುತ್ತಿರುವುದು ಚುನಾವಣಾ ಕಣದ ಚಿತ್ರಣದಲ್ಲಿ ಗೋಚರಿಸುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿನ ಪ್ರಚಾರಕ್ಕೆ ಕೊಂಚ ಮಂಕು ಕವಿದಿದೆ. ಹಿಂದಿನ ಅಬ್ಬರ, ಆರ್ಭಟವಿಲ್ಲ. ಮತದಾನ ಸಮೀಪಿಸಿದಂತೆ ಮತ್ತೆ ಸಕ್ರಿಯಗೊಳ್ಳಲಿದೆ. ಇದೀಗ ತಳ ಹಂತದ ಕಾರ್ಯಕರ್ತರ ಪಡೆ ಮನೆ ಮನೆ ಭೇಟಿಗೆ ಸೀಮಿತವಾಗಿದೆ. ಪ್ರತಿಯೊಂದು ಮನೆ ಬಾಗಿಲಿಗೆ ತೆರಳಿ ಮತ ಯಾಚಿಸುವ ಚಿತ್ರಣ ಎಲ್ಲೆಡೆ ಕಂಡು ಬರುತ್ತಿದೆ. ಮುಂಜಾನೆಯ ವಾಯು ವಿಹಾರದಲ್ಲೂ ಮತ ಯಾಚನೆ ನಡೆದಿದೆ.

ಬಿಜೆಪಿ, ಜೆಡಿಎಸ್‌ ಪೈಪೋಟಿಯಿಂದ ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯಾಲಯಗಳನ್ನು ತಾಲ್ಲೂಕು ಕೇಂದ್ರಗಳಲ್ಲಿ ಆರಂಭಿಸುತ್ತಿವೆ. ಆ ಚುನಾವಣಾ ಕಾರ್ಯಾಲಯಗಳಲ್ಲೇ ಪಕ್ಷದ ಕಾರ್ಯಕರ್ತರ ಸಭೆ, ಮುಖಂಡರ ಮಾತುಕತೆ, ಕಾರ್ಯತಂತ್ರ ರೂಪುಗೊಳ್ಳುತ್ತಿವೆ.

ಉತ್ತರ ಕರ್ನಾಟಕದ ಪ್ರಭಾವಿ ನಾಯಕರು ಸಹ ಕ್ಷೇತ್ರದಲ್ಲಿ ಸಕ್ರಿಯರಾಗಿಲ್ಲ. ಜಾತಿ ಲೆಕ್ಕಾಚಾರದಲ್ಲಿ ಪಕ್ಷದ ಸೂಚನೆಯಂತೆ ‘ಮತ ಬೇಟೆ’ಗಾಗಿ ದಕ್ಷಿಣಕ್ಕೆ ಲಗ್ಗೆಯಿಟ್ಟಿದ್ದಾರೆ. ರಾಜ್ಯದಲ್ಲಿ ಏ.18ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಆ ಬಳಿಕವೇ ಉತ್ತರದ ಕಣ ಬಿರುಸುಗೊಳ್ಳಲಿದೆ ಎಂಬ ಮಾತು ಆಯಾ ಪಕ್ಷಗಳ ವಲಯದಿಂದಲೇ ಕೇಳಿ ಬಂದಿದೆ.

ರಾಷ್ಟ್ರೀಯ ನಾಯಕರಿಲ್ಲ ಪ್ರಚಾರಕ್ಕೆ..?
ಮತದಾನಕ್ಕೆ ಬೆರಳೆಣಿಕೆ ದಿನ ಬಾಕಿ ಉಳಿದಿದ್ದರೂ; ಯಾವೊಬ್ಬ ರಾಷ್ಟ್ರೀಯ ನಾಯಕರ ಪ್ರಚಾರ ಸಭೆಯ ದಿನ ಇದೂವರೆಗೂ ನಿಗದಿಯಾಗಿಲ್ಲ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಬಿಎಸ್‌ಪಿ ಮುಖಂಡರನ್ನು ಈ ಕುರಿತು ಪ್ರಶ್ನಿಸಿದರೂ; ‘ಸಂಭವನೀಯವಿದೆ. ಸಾಧ್ಯತೆಯಿದೆ’ ಎಂಬ ಸಬೂಬಿನ ಉತ್ತರ ನೀಡುತ್ತಿದ್ದಾರೆ ಹೊರತು, ನಿಖರ ಮಾಹಿತಿ ಕೊಡುತ್ತಿಲ್ಲ.

ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ತಾರಾ ಪ್ರಚಾರಕಿ ಪ್ರಿಯಾಂಕ ಗಾಂಧಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಯಾವತಿ ಕ್ಷೇತ್ರದ ವಿವಿಧೆಡೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಸಮಾವೇಶ ನಡೆಸಿ, ಮತ ಯಾಚಿಸುವುದು ಬಹುತೇಕ ಅನುಮಾನ ಎಂಬ ಮಾತು ಆಯಾ ಪಕ್ಷದ ವಲಯದಿಂದಲೇ ಕೇಳಿ ಬಂದಿದೆ.

ಬಿಜೆಪಿಗರು ಚುನಾವಣೆಯ ‘ಹವಾ’ವನ್ನು ಕಾಪಾಡಿಕೊಳ್ಳಲು ಅಮಿತ್‌ ಶಾ ಕ್ಷೇತ್ರಕ್ಕೆ ಬರಲಿದ್ದಾರೆ ಎಂಬುದನ್ನು ಎಲ್ಲೆಡೆ ಹೇಳಿಕೊಂಡರೂ; ದಿನ ನಿಗದಿಯಾಗಿಲ್ಲ. ನಾಯಕಿ ಸ್ಮೃತಿ ಇರಾನಿ ಅವರ ಸಂಭವನೀಯ ಪ್ರವಾಸ ಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದರೂ; ಯಾವೊಬ್ಬ ಮುಖಂಡರು ಖಚಿತ ಪಡಿಸುತ್ತಿಲ್ಲ.

‘ನಾಮಪತ್ರ ಸಲ್ಲಿಕೆಗೆ ಕೆ.ಎಸ್.ಈಶ್ವರಪ್ಪ ಬಂದಿದ್ದಾರೆ. ಮೊದಲ ಹಂತದ ಮತದಾನ ಮುಗಿದ ಬಳಿಕ ಬಿ.ಎಸ್.ಯಡಿಯೂರಪ್ಪ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ’ ಎಂದು ಬಿಜೆಪಿಯ ವಿಶ್ವಾಸನೀಯ ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ.

ರಾಷ್ಟ್ರೀಯ, ರಾಜ್ಯ ಕಾಂಗ್ರೆಸ್‌ ನಾಯಕರ ಕ್ಷೇತ್ರದೊಳಗಿನ ಚುನಾವಣಾ ಪ್ರಚಾರದ ಪ್ರವಾಸ ಪಟ್ಟಿ ಕುರಿತಂತೆ ಜಿಲ್ಲಾ ಕಾಂಗ್ರೆಸ್‌ ಘಟಕದ ಪ್ರಮುಖ ಪದಾಧಿಕಾರಿಗಳನ್ನು ಸಂಪರ್ಕಿಸಿದರೂ, ಮಾಹಿತಿಯೇ ಲಭ್ಯವಿಲ್ಲ.

‘ದೇವೇಗೌಡರಿಗೆ ಪ್ರಚಾರಕ್ಕೆ ಬರುವಂತೆ ಆಹ್ವಾನ ನೀಡಿದ್ದೇವೆ. ಇನ್ನೂ ಯಾವ ದಿನ ಬರಲಿದ್ದಾರೆ ಎಂಬುದು ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಬಂಡೆಪ್ಪ ಕಾಶೆಂಪುರ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮುಖಂಡ ಎನ್.ಎಚ್‌.ಕೋನರೆಡ್ಡಿ, ಮೈತ್ರಿ ನಾಯಕರಾದ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್, ಸಿ.ಎಂ.ಇಬ್ರಾಹಿಂ ದೋಸ್ತಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲಿದ್ದಾರೆ’ ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ತಿಳಿಸಿದರು.

ನಟಿ ತಾರಾ ಇಂದು; ನಟ ಉಪೇಂದ್ರ ನಾಳೆ ಕ್ಷೇತ್ರಕ್ಕೆ
ಚಲನಚಿತ್ರ ನಟಿ ತಾರಾ ಗುರುವಾರ ವಿಜಯಪುರದಲ್ಲಿ ಮತ ಯಾಚಿಸಲಿದ್ದಾರೆ. ಮಹಿಳಾ ಸಮಾವೇಶದಲ್ಲೂ ಭಾಗಿಯಾಗಲಿದ್ದಾರೆ. ಸಿಂದಗಿ, ಇಂಡಿ ಪಟ್ಟಣಗಳಲ್ಲಿ ರೋಡ್‌ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮತ ಯಾಚಿಸಲಿದ್ದಾರೆ.

ನಟ ಉಪೇಂದ್ರ ಶುಕ್ರವಾರ ವಿಜಯಪುರದಲ್ಲಿ ಪಾದಯಾತ್ರೆ ನಡೆಸಿ, ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಗುರುಬಸವ ಪ.ರಬಕವಿ ಪರ ಮತ ಯಾಚಿಸಲಿದ್ದಾರೆ. ಇದಕ್ಕೂ ಮುನ್ನ ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !