ನನಗೀಗ ರಾಜಕೀಯದ ಹುಚ್ಚಿಲ್ಲ: ದೇವೇಗೌಡ

7

ನನಗೀಗ ರಾಜಕೀಯದ ಹುಚ್ಚಿಲ್ಲ: ದೇವೇಗೌಡ

Published:
Updated:
Deccan Herald

ಬೆಂಗಳೂರು: ‘ರಾಜಕೀಯದಲ್ಲಿ 60 ವರ್ಷಗಳನ್ನು ಸವೆಸಿದ್ದೇನೆ. ನನಗೀಗ ಅದರ ಹುಚ್ಚು ಸಾಕಾಗಿದೆ. ಪ್ರಜೆಯಾಗಿ ನಾಡಿಗೆ ಏನು ಮಾಡಬೇಕು ಎನ್ನುವುದನ್ನಷ್ಟೇ ಆಲೋಚಿಸುತ್ತಿದ್ದೇನೆ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಮನದ ಮಾತನ್ನು ಹಂಚಿಕೊಂಡರು.

ಅಂಕಿತ ಪುಸ್ತಕ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಭಾರತದ ಸಂಸತ್ತು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಮೂಲ ಕಾಂಗ್ರೆಸಿಗ ಅಲ್ಲಿ ಆದ ಕಹಿ ಅನುಭವಗಳಿಂದ ಬಂಡಾಯ ಕಾಂಗ್ರೆಸ್‌ಗೆ ಸೇರಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದವರು ನೆಹರೂ. ಆದರೆ, ಸಂಸತ್ತಿನಲ್ಲಿ ಇತ್ತೀಚೆಗೆ ನೆಹರೂ ಬಗ್ಗೆ ಬಹಳ ಲಘುವಾಗಿ ಮಾತನಾಡಿದ್ದನ್ನು ಕೇಳಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸಿದರು.

‘1952ರಲ್ಲಿ ಮೊದಲ ಚುನಾವಣೆ ನಡೆದಾಗ ಜಾತಿ ವ್ಯವಸ್ಥೆ ದೇಶದಲ್ಲಿರಲಿಲ್ಲ. ನನ್ನ ಕ್ಷೇತ್ರದಿಂದ ಎ.ಜಿ.ರಾಮಚಂದ್ರರಾಯರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿದ್ದದ್ದು ಕೇವಲ 800 ಬ್ರಾಹ್ಮಣ ಓಟುಗಳು. ಜಾತಿಯ ಜಾಡ್ಯ ಆಗ ಇರಲಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್‌ ಎಂಬ ಮಾತಷ್ಟೇ ಮೊಳಗುತ್ತಿತ್ತು’ ಎಂದು ನೆನಪಿಸಿಕೊಂಡರು.

‘ಏನೇ ಆದರೂ ನೆಹರೂ ಹಾಕಿದ ಅಡಿಪಾಯ ನಮ್ಮೊಳಗೆ ಆಳವಾಗಿ ಬೇರೂರಿದೆ. ಯಾವ ಜಾತಿ ರಾಜಕಾರಣವೂ ಇಲ್ಲಿ ನಡೆಯುವುದಿಲ್ಲ. ಪ್ರಜಾ‍ಪ್ರಭುತ್ವ ವ್ಯವಸ್ಥೆಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ‘ಪ್ರಧಾನಿ, ಮುಖ್ಯಮಂತ್ರಿ ಏನು ತೀರ್ಮಾನಿಸುತ್ತಾರೊ ಅದೇ ಆಗುತ್ತಿದೆ. ವಿಧಾನಸಭೆ, ವಿಧಾನಪರಿಷತ್ತುಗಳು ಶಕ್ತಿ ಕಳೆದುಕೊಳ್ಳುತ್ತಿವೆ. ಹಣ ಮತ್ತು ಅಧಿಕಾರ ಕೆಲವರ ಬಳಿಯಷ್ಟೇ ಸೇರಿಕೊಂಡಿದೆ’ ಎಂದು ತಿಳಿಸಿದರು.

‘540 ಮಂದಿ ಇರುವ ಸಂಸತ್ತು ದೇಶದಲ್ಲಿ ಜಾತಿ ವ್ಯವಸ್ಥೆ ಇರಬಾರದು ಎಂಬ ನಿರ್ಧಾರವನ್ನು ಏಕೆ ತೆಗೆದುಕೊಳ್ಳುವುದಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದ್ದರೂ ಅದರ ಆಶಯಗಳನ್ನು ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಾಗಿಲ್ಲ ಎಂಬ ವಿಚಾರವನ್ನು ನಾವೆಲ್ಲ ಆಲೋಚಿಸಬೇಕು’ ಎಂದರು.

ಪುಸ್ತಕದಲ್ಲಿ ಏನೆಲ್ಲ ಓದಬಹುದು
ಸಂಸತ್ತಿನ ಪರಿಚಯ, ಒಳನೋಟ, ಸಂಸತ್ತು–ನ್ಯಾಯಾಂಗದ ನಡುವಿನ ಸಂಬಂಧ, ರಾಜ್ಯಸಭೆ–ಲೋಕಸಭೆಯ ನಡುವಿನ ಸಂಬಂಧಗಳ ಬಗ್ಗೆ ಈ ಪುಸ್ತಕ ವಿವರಿಸುತ್ತದೆ. ಜೊತೆಗೆ ಸಂಸತ್ತಿನ ಪ್ರಮುಖ ನಾಲ್ಕು ವೈಶಿಷ್ಟಗಳನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಅವುಗಳೆಂದರೆ,

* 70 ವರ್ಷಗಳಲ್ಲಿ ಭಾರತದ ಸಂಸತ್ತು ಜನಸಾಮಾನ್ಯರ ಕಡೆ ವಾಲುತ್ತಿರುವ ಪ್ರತಿನಿಧಿ ಸಂಸ್ಥೆಯಾಗಿದೆ. ಆದರೆ, ಇನ್ನೂ ಇದರಲ್ಲಿ ಮಹಿಳೆ ಮತ್ತು ಮುಸ್ಲಿಮರ ಉಪಸ್ಥಿತಿ ಗಣನೀಯವಾಗಿಲ್ಲ.

* 1950ರಲ್ಲಿ ಸಂಸತ್ತಿನ ಸದಸ್ಯರಲ್ಲಿ ತಾವು ದೇಶದ ವಕ್ತಾರರು ಎಂಬ ಕಲ್ಪನೆ ಪ್ರಬಲವಾಗಿತ್ತು. ಆದರೆ, ಈಗ ಆ ಪ್ರಜ್ಞೆಯನ್ನು ಕಳೆದುಕೊಂಡಿರುವ ಸಂಸದರು, ಅವರ ಕ್ಷೇತ್ರ, ಜಾತಿ ಸಮುದಾಯಗಳಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಇದರಿಂದ ಕಾರ್ಯಾಂಗ ಹಾಗೂ ಆಯಾ ರಾಜಕೀಯ ಪಕ್ಷಗಳ ಹೈಕಮಾಂಡ್‌ ಪ್ರಭಾವ ಬಲಗೊಂಡಿದೆ.

* ಸಂವಿಧಾನ ಸಭೆಯಲ್ಲಿ ಹಾಗೂ ಸ್ವಾತಂತ್ರ್ಯದ ಮೊದಲೆರಡು ದಶಕಗಳಲ್ಲಿ ರಾಷ್ಟ್ರೀಯ ಭಾಷೆಯ ಪ್ರಶ್ನೆ ಬಹಳ ವಿವಾದಾಸ್ಪದವಾಗಿತ್ತು. ಇಂದು ಅದು ಮುಖ್ಯ ವಿಷಯವಾಗಿಲ್ಲ. 

* ರಾಷ್ಟ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧದಲ್ಲಿ ಆದ ಪರಿವರ್ತನೆಗಳು ಸಂಸತ್ತಿನ ರೂಪುರೇಷೆಯನ್ನು ಗಣನೀಯವಾಗಿ ಬದಲಿಸಿವೆ.

***

ಪ್ರಕಾಶನ : ಅಂಕಿತ ಪ್ರಕಾಶನ

ಬೆಲೆ: 800

ಇಂಗ್ಲಿಷ್‌ ಮೂಲ ಲೇಖಕರು: ಬಿ.ಎಲ್‌.ಶಂಕರ್‌, ಪ್ರೊ. ವಲೇರಿಯನ್‌ ರೊಡ್ರಿಗನ್

ಕನ್ನಡಕ್ಕೆ ಅನುವಾದ: ಜೆ.ಎಸ್‌.ಸದಾನಂದ

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !