ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

7
ಚಾಮರಾಜನಗರದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿ ಶ್ರೀಗಳಿಗೆ ಗೌರವ ನಮನ, ಜನ ಸಂಚಾರ ವಿರಳ

ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

Published:
Updated:
Prajavani

ಚಾಮರಾಜನಗರ: ಸೋಮವಾರ ಶಿವಸಾಯುಜ್ಯ ಹೊಂದಿದ ತುಮಕೂರಿನ ಸಿದ್ಧಗಂಗಾ ಡಾ.ಶಿವಕುಮಾರ ಸ್ವಾಮಿಗಳಿಗೆ ಮಂಗಳವಾರ ಜಿಲ್ಲೆಯಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿವಿಧ ಸಂಘಟನೆಗಳು ತಮ್ಮ ಕಚೇರಿಗಳಲ್ಲಿ, ಆಟೋ ಚಾಲಕರು ನಿಲ್ದಾಣಗಳಲ್ಲಿ, ಮಠಗಳಲ್ಲಿ, ಸಂಘ–ಸಂಸ್ಥೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀಗಳ ಭಾವಚಿತ್ರವಿರಿಸಿ ಪುಷ್ಪನಮನ ಸಲ್ಲಿಸಿದ ದೃಶ್ಯ ಎಲ್ಲೆಡೆ ಕಂಡು ಬಂತು. ಸಾರ್ವಜನಿಕ ಸ್ಥಳಗಳಲ್ಲಿ ಶ್ರೀಗಳ ದೊಡ್ಡ ಭಾವಚಿತ್ರ ಅಳವಡಿಸಿ, ಹೂವಿನ ಮಾಲೆ ಹಾಕಿದ್ದ ದೃಶ್ಯ ಸಾಮಾನ್ಯವಾಗಿತ್ತು. 

ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಮಂಗಳವಾರ ಭಾಗಶಃ ಬಂದ್‌ ಆಗಿದ್ದಂತಹ ವಾತಾವರಣ ಇತ್ತು. ಜನ, ವಾಹನಗಳ ಸಂಚಾರ ವಿರಳವಾಗಿತ್ತು. ಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮಾಲೀಕರು ಸ್ವಯಂಪ್ರೇರಿತರಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಅಗಲಿದ ಮಹಾನ್‌ ಸಂತನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಕೆಲವರು ತಮ್ಮ ಅಂಗಡಿಗಳ ಎದುರು, ಶ್ರೀಗಳ ಭಾವಚಿತ್ರವಿರಿಸಿ ದೀಪ ಉರಿಸಿ, ಅಗರಬತ್ತಿ ಹೊತ್ತಿಸಿ ನಮನ ಸಲ್ಲಿಸಿದರು. 

ಎಲ್‌ಇಡಿ ಪರದೆ ವ್ಯವಸ್ಥೆ: ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಸಿದ್ಧಮಲ್ಲೇಶ್ವರ ವಿರಕ್ತಮಠದಲ್ಲಿ ತುಮಕೂರಿನಲ್ಲಿ ನಡೆಯುವ ಶ್ರೀಗಳವರ ಅಂತಿಮ ದರ್ಶನ ಹಾಗೂ ಕ್ರಿಯಾ ಸಮಾಧಿಯ ವಿಧಿ ವಿಧಾನಗಳ ನೇರ ಪ್ರಸಾರವನ್ನು ಎಲ್‌ಇಡಿ ಪರದೆ ಮೂಲಕ ಭಕ್ತರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗಿನಿಂದಲೇ ಭಕ್ತರು ಮಠದ ಆವರಣದಲ್ಲಿ ನೆರೆದಿದ್ದರು. ಭಕ್ತರಿಗೆ ತಿಂಡಿ, ಊಟದ ವ್ಯವಸ್ಥೆ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ನಗರದಲ್ಲಿ ವರ್ತಕರ ಭವನದಲ್ಲಿ ವರ್ತಕರ ಸಂಘ, ಜವಳಿ ವರ್ತಕರ ಸಂಘ ಹಾಗೂ ವಿತರಕರ ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಸಭೆಯಲ್ಲಿ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ಸಿ.ವಿ.ಶ್ರೀನಿವಾಸ್ ಅವರು, ‘2007ರಲ್ಲಿ ವರ್ತಕರ ಸಂಘದ ಸದಸ್ಯರು ಸಿದ್ಧಗಂಗಾ ಮಠಕ್ಕೆ ತೆರಳಿದ್ದೆವು. ಈ ವೇಳೆ ಅವರಿಗೆ ನೂರು ವರ್ಷ ತುಂಬಿತ್ತು. ಇದರ ಅಂಗವಾಗಿ ‘ಗುರುವಂದನೆ’ ಸಲ್ಲಿಸಲಾಯಿತು. ಮಕ್ಕಳಿಗೆ ವಿದ್ಯೆ, ದಾಸೋಹ ವ್ಯವಸ್ಥೆ ಮಾಡಿರುವ ಅವರೇ ನಮಗೆ ಸ್ಫೂರ್ತಿಯಾಗಿದ್ದರು. ಅಲ್ಲಿನ ಮಕ್ಕಳಿಗೆ ಟವಲ್‌ಗಳನ್ನು (ಕೆಂಪು ಟವಲ್‌) ಉಡುಗೊರೆಯಾಗಿ ನೀಡಿದೆವು’ ಎಂದು ಹೇಳಿದರು.

‘ಶ್ರೀಗಳು ಅನ್ನದಾನ, ವಿದ್ಯಾದಾನ ಮಾಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮರಣ ನಂತರದಲ್ಲಾದರೂ ಶ್ರೀಗಳಿಗೆ ಭಾರತರತ್ನ ನೀಡಿ ಗೌರವ ಸೂಚಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಹಿರಿಯ ಸದಸ್ಯ ಎ.ಜಯಸಿಂಹ, ಶ್ರೀನಿವಾಸಶೆಟ್ಟಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಎಂ.ಶಂಕರ್, ಉಪಾಧ್ಯಕ್ಷ ಕೆ.ಎಸ್.ರವಿಶಂಕರ್, ಸಹ ಕಾರ್ಯದರ್ಶಿ ವಿ.ಶ್ರೀಧರ್, ಖಜಾಂಚಿ ವಿ.ಶ್ರೀಧರ್, ನಿರ್ದೇಶಕರಾದ ಚಿದಾನಂದಗಣೇಶ್, ಸಿ.ಜೆ.ಪದ್ಮಕುಮಾರ್, ಎ.ಶ್ರೀನಿವಾಸ, ಜಿ.ರಮೇಶ್, ಡಿ.ರಾಮಚಂದ್ರ, ರಾಜಶೇಖರ್, ಎಪಿಎಂಸಿ ನಿರ್ದೇಶಕ ವಿಶ್ವಕುಮಾರ್, ಹಿರಿಯ ಸದಸ್ಯರಾದ ಜಿ.ಆರ್.ಅಶ್ವಥ್‌ನಾರಾಯಣ, ಆರ್.ಎಸ್.ವರ್ಧಮಾನಯ್ಯ, ಸಿ.ಪಿ.ರಾಜಣ್ಣ, ಬಾಲಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ಶ್ರದ್ಧಾಂಜಲಿ ಸಭೆ ನಡೆಯಿತು. ಜಿಲ್ಲಾ ಪರಿಷತ್‌ ಅಧ್ಯಕ್ಷ ಬಿ.ಎಸ್‌.ವಿನಯ್‌ ಮಾತನಾಡಿ, ‘ಸಿದ್ಧಗಂಗೆಯ ಗುರುಪೀಠಾಧಿಪತಿಯಾಗಿ ಜಾತಿ ಮತ ಭೇದವಿಲ್ಲದೆ ಸುಧೀರ್ಘ 88 ವರ್ಷಗಳ ಕಾಲ ಅನ್ನ, ವಿದ್ಯೆ, ವಸತಿ ಕಲ್ಪಿಸಿ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದವರು ಶ್ರೀಗಳು’ ಎಂದರು.

ಶಿಕ್ಷಕರಾದ ಮಹದೇವಸ್ವಾಮಿ, ಪ್ರಭಸ್ವಾಮಿ, ಗಮಕಿ ವೀರಶೆಟ್ಟಿ, ಶ್ವೇತಾದ್ರಿ, ಎಂ.ನಾಗನಂದನ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಜಿ.ರಾಜಪ್ಪ, ಟಿ.ಬಂಗಾರಗಿರಿನಾಯಕ, ಎಸ್‌.ನಿರಂಜನಕುಮಾರ್, ಶಿವಪ್ರಸಾದ್, ನಾಗೇಂದ್ರ, ಮಲ್ಲಶೆಟ್ಟಿ ಇದ್ದರು.

ಗೂಡ್ಸ್ ಆಟೊ ಚಾಲಕರು ಹಾಗೂ ಮಾಲೀಕರ ಸಂಘ: ಚಾಮರಾಜನಗರ ತಾಲ್ಲೂಕು ಗೂಡ್ಸ್ ಆಟೊ ಚಾಲಕರು ಮತ್ತು ಮಾಲೀಕರ ಸಂಘದಿಂದ ನಗರದ ಸತ್ಯಮಂಗಲ ರಸ್ತೆಯ ಎಪಿಎಂಸಿ ಸಮೀಪದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಹೋರಾಟಗಾರ ನಿಜಧ್ವನಿ ಗೋವಿಂದರಾಜು, ಸಂಘದ ಸದಸ್ಯರಾದ ನವೀನ್, ಹುಂಡಿ ವೀರಭದ್ರಪ್ಪ, ಮಹೇಶ್ ಟಿ.ಕೆ.ಮೋಳೆ, ಮುಖಂಡರಾಧ ನಾಗರಾಜು, ಆಟೊ ಅಪ್ಪು, ಮಹೇಶ್‌ ಮಂಗಲ, ಚಂದ್ರಕುಮಾರ್ ಇದ್ದರು.

ಭಕ್ತರಿಂದ ಮೌನಾಚರಣೆ, ಶ್ರದ್ಧಾಂಜಲಿ: ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಮುಂಭಾಗ ಭಕ್ತರು ಶಿವಕುಮಾರ ಸ್ವಾಮಿಳವರಿಗೆ ಶ್ರದ್ಧಾ ಭಕ್ತಿ ಪೂರ್ವ ನಮನ ಸಲ್ಲಿಸಿ, ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕೃಷ್ಣಪ್ರಸಾದ್, ನಗರಸಭಾ ಸದಸ್ಯ ಆರ್.ಎಂ.ರಾಜಪ್ಪ. ಡೈರಿ ಸ್ವಾಮಿ, ಮಹದೇವಪ್ಪ ಮಹದೇವಸ್ವಾಮಿ, ಮಹೇಶ್, ವೀರಭದ್ರಸ್ವಾಮಿ, ರಾಜೇಶ್ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಜಿಲ್ಲೆಯಿಂದಲೂ ಸಿದ್ಧಗಂಗಾಕ್ಕೆ: ಜಿಲ್ಲೆಯಿಂದ ನೂರಾರು ಜನರು ತುಮಕೂರಿಗೆ ಭೇಟಿ ನೀಡಿ ಶ್ರೀಗಳ ಅಂತಿಮ ದರ್ಶನ ಪಡೆದರು.

ಮಠ, ಗ್ರಾಮಗಳಲ್ಲಿ ಇಡೀ ರಾತ್ರಿ ಭಜನೆ
ತಾಲ್ಲೂಕಿನ ಬದನಗುಪ್ಪೆ ಸೇರಿದಂತೆ ವಿವಿಧ ಗ್ರಾಮಗಳು ಹಾಗೂ ಇನ್ನೂ ಕೆಲವು ಮಠಗಳಲ್ಲಿ ಸೋಮವಾರ ರಾತ್ರಿ ಭಜನೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಇಡೀ ರಾತ್ರಿ ಭಜನೆ ನಡೆಸಿ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು. ಯುವಕರು ಮುಖ್ಯರಸ್ತೆ, ಬಸ್‌ ನಿಲ್ದಾಣ ಸೇರಿದಂತೆ ಹಲವೆಡೆ ಡಾ.ಶಿವಕುಮಾರ ಸ್ವಾಮಿಗಳ ಭಾವಚಿತ್ರದ ಫ್ಲೆಲೆಕ್ಸ್‌ಗಳನ್ನು ಹಾಕಿ, ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.

ದಾಸೋಹ ವ್ಯವಸ್ಥೆ: ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಶ್ರೀಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ದಾಸೋಹ ವ್ಯವಸ್ಥೆ ಹಾಗೂ ಅನೇಕ ಗ್ರಾಮಗಳಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !