ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿಗಳ ನಿರ್ಲಕ್ಷ್ಯ: ನಕ್ಸಲ್ ಸಮಸ್ಯೆ ಮೂಲ

Last Updated 16 ಜೂನ್ 2018, 9:27 IST
ಅಕ್ಷರ ಗಾತ್ರ

ಗುಂಡಿನ ಚಕಮಕಿ (ಎನ್‌ಕೌಂಟರ್) ಹೆಸರಿನಲ್ಲಿ ಪೊಲೀಸರು ದೇಶದ ಪ್ರಜೆಗಳನ್ನು ಬೇಟೆಯಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿದ್ದರೂ, ನಮ್ಮ ನಾಗರಿಕ ಸಮಾಜ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕಂಡು ನನಗೆ ಸೋಜಿಗ ಎನಿಸುತ್ತದೆ. ಖಾಸಗಿ ಶಾಂತಿ ಸಂಧಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ನಕ್ಸಲೀಯರನ್ನು ಪೊಲೀಸರು ಕೊಂದು ಹಾಕಿದ ಘಟನೆಗೆ ಕೋರ್ಟ್ ಈ ರೀತಿ ಪ್ರತಿಕ್ರಿಯಿಸಿ ಪೊಲೀಸ್‌ರಿಗೆ ಛೀಮಾರಿ ಹಾಕಿತ್ತು.

ಭಿನ್ನಮತ ಬಗ್ಗುಬಡಿಯಲು ಬಲಪ್ರಯೋಗ ನಡೆಸುವುದಕ್ಕೇನೆ ಸರ್ಕಾರ ದೃಢವಾಗಿ ನಿಲ್ಲುವುದು ಏಕೆ ಎನ್ನುವುದು ನನಗೆ ಇದುವರೆಗೂ ಅರ್ಥವಾಗಿಲ್ಲ. ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳಲು  ಹಿಂಸಾಮಾರ್ಗ ತುಳಿಯುವುದನ್ನು ನಾನು ಯಾವತ್ತೂ ಇಷ್ಟಪಡುವುದಿಲ್ಲ. ಮಾವೊವಾದಿಗಳು ಮತ್ತು ನಕ್ಸಲೀಯರು  ಬಂದೂಕು ಬಳಸುವುದರ ಮೂಲ ತಮ್ಮ ಹೋರಾಟಕ್ಕೇ ಕಳಂಕ ಹಚ್ಚಿಕೊಂಡಿದ್ದಾರೆ.

ನಕ್ಸಲೀಯರ ಹೋರಾಟವು ದೇಶದ ಆಂತರಿಕ ಭದ್ರತೆಗೆ ಅತಿ ದೊಡ್ಡ ಬೆದರಿಕೆಯಾಗಿದೆ ಎಂದು  ಬಿಂಬಿಸುತ್ತಲೇ ಬಂದಿರುವ ಸರ್ಕಾರ, ಅವರ ವಿರುದ್ಧ ಗರಿಷ್ಠ ಪ್ರಮಾಣದ ಪೊಲೀಸ್ ಬಲ ಬಳಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ದಂಡಕಾರಣ್ಯ ಪ್ರದೇಶದಲ್ಲಿ ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ತೀವ್ರ ಸ್ವರೂಪದ ಗುಂಡಿನ ಚಕಮಕಿಗಳು ನಡೆಯುತ್ತಲೇ ಇವೆ. ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ 1958ರಲ್ಲಿಯೇ ಪ್ರಧಾನಿ ಜವಾಹರಲಾಲ್ ನೆಹರೂ, ದಂಡಕಾರಣ್ಯ ಅಭಿವೃದ್ಧಿ ಪ್ರಾಧಿಕಾರದ ಉದ್ಘಾಟನೆ ನೆರವೇರಿಸಿ ವಿಶೇಷ ಪುನರ್ವಸತಿ ಯೋಜನೆ ಕಾರ್ಯಗತಗೊಳಿಸುವುದಾಗಿ ಪ್ರಕಟಿಸಿದ್ದರು. ಆ ಯೋಜನೆಯನ್ನು ಇದುವರೆಗೂ ಕೈಗೆತ್ತಿಕೊಂಡಿಲ್ಲ.

ಈ ಪ್ರದೇಶದಲ್ಲಿ ಬಂದೂಕುಗಳು 1960ರಲ್ಲಿಯೇ ಗುಂಡಿನ ಸದ್ದು ಮೊಳಗಿಸತೊಡಗಿದವು. ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ನಕ್ಸಲ್‌ಬಾರಿ ಹೋರಾಟ ಇದೇ ಹೊತ್ತಿಗೆ ಆರಂಭಗೊಂಡಿತು. 1980ರಲ್ಲಿ ಆಂಧ್ರಪ್ರದೇಶದ ಕೆಲ ನಕ್ಸಲ್ ಗುಂಪುಗಳು ಆಶ್ರಯ ಮತ್ತು ತರಬೇತಿಗಾಗಿ ಮಧ್ಯಪ್ರದೇಶದ ಬಸ್ತರ್ ಪ್ರದೇಶ ಪ್ರವೇಶಿಸಿದವು. ಆದಿವಾಸಿಗಳು ನೆಲೆಸಿರುವ ಪ್ರದೇಶದಲ್ಲಿ ನಕ್ಸಲೀಯರ ಉಪಸ್ಥಿತಿಯ ಫಲವಾಗಿ ‘ಪಟ್ವಾರಿ - ಹವಾಲ್ದಾರ್ ಮತ್ತು ದಫೇದಾರ್’ಗಳ ಉಪಟಳಕ್ಕೆ ಮಾತ್ರ ಕೆಲಮಟ್ಟಿಗೆ ಕಡಿವಾಣ ಬಿದ್ದಿತು.

ಬಸ್ತರ್‌ನಲ್ಲಿ ನಕ್ಸಲೀಯರು ಬಲವಾಗಿ ಬೇರೂರಲು ಭಾಷಾ ಅಡಚಣೆಯೂ ನೆರವಿಗೆ ಬಂದಿತು. ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯಲ್ಲಿಯೇ ಶಿಕ್ಷಣ ಇರಬೇಕೆಂಬ ರಾಷ್ಟ್ರೀಯ ನೀತಿಗೆ, ಹಿಂದಿ ಭಾಷೆ ಹೇರಿಕೆಯು ಅಡ್ಡಿಯಾಗಿ ಪರಿಣಮಿಸಿತು. ರಾಜ್ಯ ಸರ್ಕಾರಗಳ ಅಧಿಕಾರಿಗಳು ಆದಿವಾಸಿಗಳ ಭಾಷೆ ಕಲಿಯುವುದನ್ನೂ ನಿರ್ಲಕ್ಷಿಸಲಾಯಿತು.

ಹೀಗಾಗಿ ಆದಿವಾಸಿಗಳು ಮಧ್ಯವರ್ತಿಗಳು ಅಥವಾ ಕೆಲವೇ ಕೆಲ ಜನರ ಮೂಲಕವೇ ಬಾಹ್ಯ ಪ್ರಪಂಚದ ಜೊತೆ ವ್ಯವಹರಿಸಲು ಸಾಧ್ಯವಾಯಿತು. ಆದಿವಾಸಿಗಳ ಜೊತೆ ನೇರವಾಗಿ ವಿಶ್ವಾಸ ಕುದುರಿಸಲು ನಕ್ಸಲೀಯರು ವಿಳಂಬ ಮಾಡಲೇ ಇಲ್ಲ. ಬೇರೆ ಮಾಹಿತಿ ಮತ್ತು ವಿಚಾರಗಳ ಅನುಪಸ್ಥಿತಿಯಲ್ಲಿ ನಕ್ಸಲೀಯರು ಆದಿವಾಸಿ ಯುವಕರನ್ನು ಮರಳು ಮಾಡುವಲ್ಲಿ ಸಾಕಷ್ಟು ಸಫಲರೂ ಆದರು. ನಕ್ಸಲೀಯರು ಅಬುಜಾಮರ್ ಪ್ರದೇಶವು  ಸರ್ಕಾರದ ಆಡಳಿತದ ವ್ಯಾಪ್ತಿಗೆ ಬರದಂತೆ ನೋಡಿಕೊಂಡರು. ಹೊರಗಿನವರು ಈ ಪ್ರದೇಶ ಪ್ರವೇಶಿಸದಂತೆಯೂ ನಿರ್ಬಂಧ ವಿಧಿಸಿದರು. ಹೀಗಾಗಿ ನಕ್ಸಲೀಯರು ಬಸ್ತರ್ ಪ್ರದೇಶದಲ್ಲಿ  ತಮ್ಮ ಹಿಡಿತ ಗಟ್ಟಿ ಮಾಡಿಕೊಳ್ಳುವಲ್ಲಿ ಸಫಲರಾದರು.

ಆಂತರಿಕ ಭದ್ರತೆಗೆ ಬೆದರಿಕೆ ಒಡ್ಡಿದ್ದನ್ನು  ಸವಾಲಾಗಿ ಸ್ವೀಕರಿಸಿದ ರಾಜ್ಯ ಸರ್ಕಾರವು  ಈ ಪ್ರದೇಶದಲ್ಲಿನ ನಕ್ಸಲೀಯರ ಹಾವಳಿ ಮತ್ತು ಪ್ರಭಾವ ಬಗ್ಗುಬಡಿಯಲು ಸೇನೆ ಹೊರತುಪಡಿಸಿ ಎಲ್ಲ ಬಗೆಯ ಶಕ್ತಿಗಳನ್ನು  ಬಳಸಿಕೊಂಡಿದೆ. ಸರ್ಕಾರಿ ಭದ್ರತಾ ಪಡೆಗಳ ದಾಳಿ, ಕಿರುಕುಳದಿಂದ ತಪ್ಪಿಸಿಕೊಳ್ಳಲು ನೂರಾರು ಗ್ರಾಮಸ್ಥರು  ಈ ಪ್ರದೇಶ ತೊರೆದಿದ್ದಾರೆ ಇಲ್ಲವೇ ಅಡಗುದಾಣಗಳಲ್ಲಿ ತಲೆಮರೆಸಿಕೊಂಡಿದ್ದಾರೆ.  ಅನೇಕರು ನೆರೆಹೊರೆ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇಲ್ಲಿ ನಕ್ಸಲೀಯರು ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಂಧಾನ ಮಾತುಕತೆ ನಡೆಯುವ ಸಾಧ್ಯತೆಗಳೇ ಇಲ್ಲ. ಈ ನಿಟ್ಟಿನಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಪ್ರಯತ್ನಗಳು ಯಾವುದೇ ಫಲ ನೀಡಲಾರವು ಎನ್ನುವುದನ್ನು ಸಾಬೀತುಪಡಿಸಿವೆ.

ನಿರ್ಲಕ್ಷಿತ ಬಡ ಆದಿವಾಸಿಗಳ ಉದ್ಧಾರದ ಹೆಸರಿನಲ್ಲಿ ಮೂಲ ಸೌಕರ್ಯ ಮತ್ತು ಸಮಾಜ ಕಲ್ಯಾಣ ಯೋಜನೆಗಳಿಗಾಗಿ ಸಾಕಷ್ಟು ಹಣ ವೆಚ್ಚ ಮಾಡಲಾಗಿದೆ. ಅವು ನಿರೀಕ್ಷಿತ ಫಲಿತಾಂಶವನ್ನೂ ನೀಡಿಲ್ಲ.

ಆದಿವಾಸಿ ಜನರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಮೊದಲ ಹೆಜ್ಜೆಯಲ್ಲಿಯೇ ಸರ್ಕಾರಿ ಪ್ರಭುಗಳು ಎಡವಿದ್ದಾರೆ.

ಬಡ ಆದಿವಾಸಿಗಳ ಅಭಿವೃದ್ಧಿ ಹೆಸರಿನಲ್ಲಿ ಆಧಿಕಾರಿಗಳು ಮತ್ತಿತರರು  ಸಾಕಷ್ಟು ಅವ್ಯವಹಾರ ನಡೆಸಿರುವುದು ಸ್ವಾಭಿಮಾನಿ ಆದಿವಾಸಿಗಳನ್ನು ಗಾಸಿಗೊಳಿಸಿದೆ. ‘ನಾವೆಲ್ಲ ಆದಿವಾಸಿಗಳ ಹಿತಚಿಂತಕರು’ ಎಂದು ರಾಜಕಾರಣಿಗಳು, ಅಧಿಕಾರಿಗಳು ಮತ್ತಿತರರು ಹೇಳಿಕೊಳ್ಳುತ್ತಲೇ ಅವರನ್ನು ವಂಚಿಸಿದ್ದಾರೆ. ಆದಿವಾಸಿಗಳು ನಿಜವಾಗಿಯೂ ಬಡವರಲ್ಲ, ಅವರನ್ನು ಅವರ ಆನುವಂಶಿಕ ಹಕ್ಕುಗಳಿಂದ ವಂಚಿತಗೊಳಿಸಲಾಗಿದೆ ಎನ್ನುವುದೇ ಕಹಿ ಸತ್ಯ.

ಆದಿವಾಸಿ ಪ್ರದೇಶಗಳಲ್ಲಿ ಅಮಲು ಪದಾರ್ಥಗಳ ವಾಣಿಜ್ಯ ಮಾರಾಟವನ್ನು 1974ರಲ್ಲಿಯೇ ನಿಷೇಧಿಸುವ ಮೂಲಕ  ಮತ್ತು ಸಣ್ಣಪುಟ್ಟ ಅರಣ್ಯ ಉತ್ಪನ್ನಗಳ ಮೇಲೆ ಆದಿವಾಸಿಗಳಿಗೆ 1976ರಲ್ಲಿ  ಅಧಿಕಾರ ನೀಡುವುದರ ಮೂಲಕ ಅವರ ಬದುಕಿಗೆ ತಿರುವು ನೀಡುವ ನಿಟ್ಟಿನಲ್ಲಿ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಯಿತು. ಆದರೆ, 70ರ ದಶಕದ ಅಂತ್ಯದ ಹೊತ್ತಿಗೆ ಈ ಮಹತ್ವದ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವುದನ್ನು ನಿರ್ಲಕ್ಷಿಸಲಾಯಿತು. ಜತೆಗೆ ಈ ಪ್ರದೇಶಗಳಲ್ಲಿ ಆಡಳಿತಾತ್ಮಕ ಸ್ವರೂಪ ಹೆಚ್ಚಿಸುವುದನ್ನೂ ಮರೆತು ಬಿಡಲಾಯಿತು. ಅರಣ್ಯ ಉತ್ಪನ್ನಗಳ ಲೂಟಿ ಮಾಡಲು ಅವಕಾಶ ಮಾಡಿಕೊಡಲಾಯಿತು.

ದೇಶದಲ್ಲಿನ ವಿವಿಧ ಆದಿವಾಸಿ ಪಂಗಡಗಳು ತಮ್ಮದೇ ಆದ ವಿಶಿಷ್ಟ ಭೂ ಪ್ರದೇಶ ಹೊಂದಿವೆ. ತಮ್ಮ ತಮ್ಮ ಸಂಪ್ರದಾಯ ಮತ್ತು ಆಚರಣೆಗೆ ಅನುಗುಣವಾಗಿ ಆದಿವಾಸಿ  ಪಂಗಡಗಳು ‘ಗ್ರಾಮ ಸ್ವರಾಜ್ಯ’ ಪರಿಕಲ್ಪನೆಯಡಿ ತಮ್ಮೆಲ್ಲ ವ್ಯವಹಾರಗಳನ್ನು ನಿಭಾಯಿಸಿಕೊಂಡು ಬರುತ್ತಿವೆ. ತಾವು ನೆಲೆಸಿದ್ದ ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನೇ ಅವರು ತಮ್ಮ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ.

ಸರ್ಕಾರಗಳು ವೈಯಕ್ತಿಕ ಮಾಲೀಕತ್ವ ಮಾದರಿ ಜಾರಿಗೆ ಒತ್ತಾಯಿಸುತ್ತಿದ್ದರೂ, ಅವರ ಪಾಲಿಗೆ ಭೂಮಿಯು ಇನ್ನೂ ಆಸ್ತಿಯಾಗಿಲ್ಲ. ‘ಸಮುದಾಯ ಮಾಲೀಕತ್ವ ಮತ್ತು ವೈಯಕ್ತಿಕ ಬಳಕೆ’ಯ ಸಾಂಪ್ರದಾಯಿಕ ನಂಬಿಕೆಯನ್ನೇ ಇನ್ನೂ ಅವರು ನೆಚ್ಚಿಕೊಂಡಿದ್ದಾರೆ. ಬಹುತೇಕ ಆದಿವಾಸಿ ಸಮುದಾಯಗಳಲ್ಲಿ ಅದರಲ್ಲೂ ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಇದೇ ವ್ಯವಸ್ಥೆ ರೂಢಿಯಲ್ಲಿದೆ.

ಸದ್ಯಕ್ಕೆ ಆದಿವಾಸಿಗಳಲ್ಲಿ  ಭವಿಷ್ಯದ ಬಗ್ಗೆ ಯಾವುದೇ ಆತಂಕ ಮನೆ ಮಾಡಿಲ್ಲ. ಅನೇಕ ಆದಿವಾಸಿ ಪಂಗಡಗಳಲ್ಲಿ ಭವಿಷ್ಯ ಎಂದರೆ ಏನು ಎಂಬುದೇ ಗೊತ್ತಿಲ್ಲ. ನಿಸರ್ಗವು ಅಪಾರ ಪ್ರಮಾಣದಲ್ಲಿ ಉಂಬಳಿಯಾಗಿ ನೀಡಿರುವ ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನೇ ಇವರು ಬಹುವಾಗಿ ನೆಚ್ಚಿಕೊಂಡಿದ್ದಾರೆ.

ಆದಿವಾಸಿಗಳು ಮಾತಿಗೆ ತಪ್ಪದ ಜಾಯಮಾನದವರು. ಆ ಬಗ್ಗೆ ಅವರಿಗೆ ಸಾಕಷ್ಟು ಅಭಿಮಾನವೂ ಇದೆ. ನಾಗಾ ಮುಖಂಡರೊಬ್ಬರನ್ನು ಕೋರ್ಟ್‌ನಲ್ಲಿ ವಕೀಲನೊಬ್ಬ ವಿಚಾರಣೆಗೆ ಗುರಿಪಡಿಸಿದಾಗ ಅವರು ಕೋರ್ಟ್‌ಗೆ ಇನ್ನೆಂದೂ ಕಾಲಿಡಲಾರೆ ಎಂದು ಹೇಳಿ ನಿರ್ಗಮಿಸಿದ ಘಟನೆ ನನಗೆ ಈ ಸಂದರ್ಭದಲ್ಲಿ ನೆನಪಾಗುವುದು.


ಆದಿವಾಸಿಗಳ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಹಲವಾರು ಪ್ರಯತ್ನಗಳು ವಿಫಲವಾದ ನಂತರ, ಆದಿವಾಸಿ ಜನರ ಸ್ವಾತಂತ್ರ್ಯವನ್ನು ಉತ್ಕಟವಾಗಿ ಪ್ರೀತಿಸುವ ಸ್ವಭಾವವನ್ನು ಬ್ರಿಟಿಷರೂ ಒಪ್ಪಿಕೊಂಡಿದ್ದರು. ಆದಿವಾಸಿಗಳನ್ನು ಎದುರು ಹಾಕಿಕೊಳ್ಳುವುದು ಸರಿಯಲ್ಲ ಎನ್ನುವ ನಿರ್ಧಾರಕ್ಕೂ ಬಂದಿದ್ದರು. ಬ್ರಿಟಿಷರು ಆದಿವಾಸಿಗಳ ನೆಲೆಗಳ ಮೇಲೆ ನಿಯಂತ್ರಣ ಸಾಧಿಸಿದ್ದರು ಎನ್ನುವುದು ಇತಿಹಾಸವನ್ನೇ ತಿರುಚಿದಂತೆ. ಬ್ರಿಟಿಷರ ಆಡಳಿತ ಒಪ್ಪಿಕೊಳ್ಳಲು ಜನರು ತಿರಸ್ಕರಿಸಿದ್ದೇ, ಆದಿವಾಸಿ ಪ್ರದೇಶಗಳಲ್ಲಿ ಕೆಲ ಪ್ರಮುಖ ದಂಗೆಗಳು ಕಂಡು ಬರಲು ಪ್ರಮುಖ ಕಾರಣವಾಗಿತ್ತು.

ಸಂವಿಧಾನ ಅಂಗೀಕರಿಸಿದ ನಂತರ ಆದಿವಾಸಿಗಳ ಪ್ರದೇಶಗಳಲ್ಲಿ ಗುಣಾತ್ಮಕ ಬದಲಾವಣೆ ಕಂಡು ಬರಲಾರಂಭಿಸಿತು. ಸಂವಿಧಾನದ 5ನೇ ಪರಿಚ್ಛೇದದಡಿ ವಿವಿಧ ಪ್ರಾಂತ್ಯಗಳು ಮತ್ತು ಈ ಮೊದಲಿನ ಅರಸರ ಆಳ್ವಿಕೆಯಲ್ಲಿದ್ದ ಪ್ರದೇಶಗಳನ್ನು ವಿಶಿಷ್ಟವಾಗಿ ಗುರುತಿಸಲಾಯಿತು.

ಸಂವಿಧಾನದ ಆಶಯದಂತೆ ಕಾಯ್ದೆ ಕಾನೂನುಗಳು ಜಾರಿಗೆ ಬಂದ ನಂತರವೂ ಬಸ್ತರ್‌ನಲ್ಲಿ ವಿವಾದಗಳನ್ನು ಇತ್ಯರ್ಥಪಡಿಸುವ ಸ್ಥಳೀಯ ವಿಧಾನವು ಸಾಕಷ್ಟು ಜನಪ್ರಿಯವಾಗಿತ್ತು. ಇಡೀ ಜಿಲ್ಲೆಯಲ್ಲಿ ವರ್ಷಕ್ಕೆ ಒಂದೊ ಎರಡು ಪ್ರಕರಣಗಳು ಮಾತ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದವು. ಆದರೆ, ಈ ವ್ಯವಸ್ಥೆಗೆ ಕಾನೂನಿನ ಮಾನ್ಯತೆ ಇದ್ದಿರಲಿಲ್ಲ. ಹೀಗಾಗಿ ಗ್ರಾಮ ಮಂಡಳಿಗಳಲ್ಲಿ ಅದರಲ್ಲೂ ಜಾಮೀನುರಹಿತ ಪ್ರಕರಣಗಳಲ್ಲಿ ಕಾಯ್ದೆ ಉಲ್ಲಂಘಿಸಲಾಗುತ್ತಿತ್ತು. ಈ ಕಾರಣಕ್ಕೆ ಪೊಲೀಸರು ಗ್ರಾಮ ಮಂಡಳಿಗಳ ಸದಸ್ಯರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲು ಆರಂಭಿಸಿದರು. ವಿವಾದಕ್ಕೆ ಸಂಬಂಧಿಸಿದ ಎಲ್ಲರೂ ತೀರ್ಪಿನ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬಂದಿದ್ದರೂ ಪೊಲೀಸರು ಇಂತಹ ಕ್ರಮಕ್ಕೆ ಮುಂದಾಗುತ್ತಿದ್ದರು.

ಆನಂತರ ರಾಜ್ಯ ಸರ್ಕಾರವು ಬಸ್ತರ್ ಜಿಲ್ಲೆಯಲ್ಲಿನ ಕೆಲ ಗ್ರಾಮಗಳನ್ನು (ಡಿನೋಟಿಫಿಕೇಷನ್) ಅಧಿಸೂಚನೆಯಿಂದ ಕೈಬಿಟ್ಟಿತು. ‘ಪಂಚಾಯತ್  (ಷೆಡೂಲ್ಡ್ ಪ್ರದೇಶ ವಿಸ್ತರಣೆ) ಕಾಯ್ದೆ-1966’ಯು ಈ ಗ್ರಾಮಗಳಿಗೆ ಅನ್ವಯಿಸುವುದಿಲ್ಲ ಎಂದೂ ಹೇಳಿತು. ತಮ್ಮ ಭೂಮಿ ಮೇಲೆ ನಿಯಂತ್ರಣ ಹೊಂದಲು ಆದಿವಾಸಿಗಳು ಅಧಿಕಾರ ಸಿಗುವಂತೆ ಈ ಕಾಯ್ದೆಯನ್ನು ವಿಶೇಷವಾಗಿ ರೂಪಿಸಲಾಗಿತ್ತು.  ರಾಜ್ಯ ಸರ್ಕಾರವು ಇದುವರೆಗೂ ತನ್ನ ತಪ್ಪಿನಿಂದ ಪಾಠ ಕಲಿತಿಲ್ಲ. ಇದು ನಮ್ಮ ವ್ಯವಸ್ಥೆಯ ವೈಫಲ್ಯವೇ ಸರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT