ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗಿತು ಐಷಾರಾಮ

Last Updated 2 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಡಾನ್ಸ್ ರಾಜಾ ಡಾನ್ಸ್' ಆದಮೇಲೆ ನಾನು ಮಾಡಿದ ಚಿತ್ರ `ಕೃಷ್ಣ ನೀ ಕುಣಿದಾಗ'. ವಿನೋದ್ ರಾಜ್- ಸುಧಾರಾಣಿ ಜೋಡಿ. ಜಗ್ಗೇಶ್ ಕೂಡ ಆ ಚಿತ್ರದಲ್ಲಿ ಇದ್ದ. ಮಂಗಳೂರು ಸೇಂಟ್ ಮೇರೀಸ್ ದ್ವೀಪದಲ್ಲಿ ಮೊದಲ ಶಾಟ್ ಚಿತ್ರೀಕರಿಸಬೇಕಿತ್ತು. ಹಲವು ಡಾನ್ಸರ್‌ಗಳು ಅಲ್ಲಿದ್ದರು. ದುರದೃಷ್ಟವಶಾತ್ ಸುಧಾರಾಣಿ ಕಾಲಿಗೆ ಆ ದಿನ ಪೆಟ್ಟುಬಿತ್ತು.

ಎರಡು ತಿಂಗಳು ಆಕೆಗೆ ವಿಶ್ರಾಂತಿ. ಬೇರೆ ನಟಿಯ ಜೊತೆ ಆ ಹಾಡನ್ನು ಚಿತ್ರೀಕರಿಸಿ, ತೀರ್ಥಹಳ್ಳಿಯತ್ತ ಪ್ರಯಾಣ ಬೆಳೆಸಿದೆವು. ಅಲ್ಲಿ ವಿನೋದ್ ಆರೋಗ್ಯ ಕೈಕೊಟ್ಟಿತು. ಕೆಟ್ಟಕಾಲ ಬಂದರೆ ಹೀಗೆಲ್ಲಾ ಆಗುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಕೆಟ್ಟ ಸುದ್ದಿ ಟೆಲಿಗ್ರಾಂನಲ್ಲಿ ಬರುತ್ತದೆ ಎಂದೂ ಆಗ ಅಭಿಪ್ರಾಯವಿತ್ತು. ನನಗೆ ಒಂದು ಟೆಲಿಗ್ರಾಂ ಬಂತು. `ಕೃಷ್ಣಾ ನೀ ಕುಣಿದಾಗ ಚಿತ್ರ ನಿಲ್ಲಿಸಿ' ಎಂದು ಅದರಲ್ಲಿ ಬರೆದಿತ್ತು.

ವಿನೋದ್, ಸುಧಾರಾಣಿ ಇಬ್ಬರಿಗೂ ಹುಷಾರಿರಲಿಲ್ಲ. ಎರಡು ತಿಂಗಳು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಆ ಅವಧಿಯಲ್ಲೇ `ಗಂಡ ಮನೆ ಮಕ್ಕಳು' ಎಂಬ ಇನ್ನೊಂದು ಸಿನಿಮಾ ಮಾಡಿದೆ. ಶ್ರೀನಾಥ್-ವಾಣಿಶ್ರೀ ಜೋಡಿ. ಬಲವಂತ ಮಾಡಿ, ಹತ್ತು ವರ್ಷಗಳಿಂದ ಬಣ್ಣವನ್ನೇ ಹಚ್ಚದಿದ್ದ ವಾಣಿಶ್ರೀ ಅವರನ್ನು ಆ ಪಾತ್ರಕ್ಕೆ ಒಪ್ಪಿಸಿದೆ. ಎರಡು ತಿಂಗಳಲ್ಲಿ ಚಿತ್ರ ಮುಗಿಸಿ, ಬಿಡುಗಡೆ ಮಾಡಿದೆ. ಗಿಟ್ಟಲಿಲ್ಲ.

ಸುಮಾರು ಚಿತ್ರಗಳು ಕೈಜಾರಿದವು. ಅದೇ ಸಮಯದಲ್ಲಿ ಪ್ಯಾಲೆಸ್ ಆರ್ಚರ್ಡ್‌ನಲ್ಲಿದ್ದ ನನ್ನ ಮನೆಯನ್ನು ಫ್ಲಾಟ್ ಆಗಿ ಪರಿವರ್ತಿಸಿದ್ದರು. ಒಂದು ದೊಡ್ಡ ಪೆಂಟ್ ಹೌಸ್ ಹಾಗೂ ಐದು ಫ್ಲಾಟ್‌ಗಳು ನನ್ನದಾಗಿದ್ದವು. `ನಂದಗೋಕುಲ' ಎಂದು ಫ್ಲಾಟ್ ಹೆಸರು. ಮುಗ್ಗರಿಸಿದಾಗಲೆಲ್ಲಾ ಒಂದೊಂದೇ ಫ್ಲಾಟ್ ಮಾರುತ್ತಾ ಬಂದೆ.

ನಾನು ಫ್ಲಾಟ್‌ಗಳನ್ನು ಕಟ್ಟಿದ್ದೇ ದೊಡ್ಡ ಸುದ್ದಿಯಾಗಿ ಮದ್ರಾಸ್, ಬೆಂಗಳೂರು ಎರಡೂ ಕಡೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದರು. ಅದರಿಂದ ಕಷ್ಟಪಟ್ಟು ಹೊರಬಂದೆ. ಸಾಲ ಕೊಟ್ಟ ಬ್ಯಾಂಕ್ ಹಾಗೂ ಜನರಿಗೆ ನಾನು ಜಾರುತ್ತಿರುವ ವಿಷಯ ಗೊತ್ತಾಯಿತು. ಕೊಟ್ಟವರು ತಮ್ಮ ಹಣ ವಾಪಸ್ ಬೇಕೆಂದು ಒತ್ತಡ ಹಾಕಿದರು. ಬ್ಯಾಂಕ್ ಒಂದರ ಅಧ್ಯಕ್ಷರೇ ನನ್ನ ಆಪ್ತರಾಗಿದ್ದರು. ಆದರೂ ಆ ಬ್ಯಾಂಕ್ ಒಂದು ತಿಂಗಳ ಅವಧಿಯಲ್ಲಿ ಹಣ ಕಟ್ಟಬೇಕೆಂದು ಗಡುವು ನೀಡಿತು.

`ಆಫ್ರಿಕಾದಲ್ಲಿ ಶೀಲಾ' ಚಿತ್ರ ಮಾಡಿದಾಗ ರಾತ್ರೋರಾತ್ರಿ ಹಣ ಕೊಟ್ಟಿದ್ದ ಆ ಬ್ಯಾಂಕ್‌ಗೆ ಇಲ್ಲವೆನ್ನಲು ಆಗಲಿಲ್ಲ. ಕೆಲವರು ನ್ಯಾಯಾಲಯಕ್ಕೆ ಹೋದರೆ ಬಡ್ಡಿದರ ಕಡಿಮೆ ಆಗುತ್ತದೆ ಎಂದು ಸಲಹೆ ಕೊಟ್ಟರೂ ಯಾವುದಕ್ಕೂ ಒಪ್ಪದೆ ಸಾಲ ತೀರಿಸಲು ಹಣ ಹೊಂದಿಸುವ ದಾರಿ ಹುಡುಕತೊಡಗಿದೆ.

ಒಮ್ಮೆ ಇಂಪೋರ್ಟೆಡ್ ಕಾರ್‌ನಲ್ಲಿ ಹೋಗುತ್ತಾ ಇದ್ದೆ. ಆಟೊ ಒಂದು ಹಿಂದೆ ಬರತೊಡಗಿತು. ಸ್ವಲ್ಪ ದೂರ ಹೋದಮೇಲೆ ಅದರಿಂದ ಒಬ್ಬ ಮಾರ್ವಾಡಿ ಕೆಳಗಿಳಿದು, ನನ್ನ ಹೆಸರು ಕೂಗತೊಡಗಿದ. ಅವನೂ ನನಗೆ ಸಾಲ ಕೊಟ್ಟವನೇ. `ನೀವು ಕಾರ್‌ನಲ್ಲಿ ಹೋಗುತ್ತಿದ್ದೀರಿ, ನಾನು ಆಟೊದಲ್ಲಿ ಇದ್ದೇನೆ. ಇದು ನ್ಯಾಯವಲ್ಲ, ನನ್ನ ಹಣ ಕೊಡಿ' ಎಂದು ಪಟ್ಟುಹಿಡಿದ. ಅವನಿಗೆ ನನ್ನ ಕಾರ್ ಕೀ ಕೊಟ್ಟು, `ನಿಮ್ಮ ಸಾಲ ತೀರಿ ಬಾಕಿ ಹಣ ಕೊಡಬೇಕು ಎನ್ನಿಸಿದರೆ ಕೊಟ್ಟುಬಿಡಿ' ಎಂದು ಹೇಳಿ, ಮನೆಗೆ ಹೋದೆ. ಕೊಟ್ಟವನು ಪರಮಾತ್ಮ; ಕಿತ್ತುಕೊಂಡವನೂ ಅವನೇ.

ಮೋಹನ್‌ಲಾಲ್ ಅಭಿನಯದ `ಚಿತ್ರಂ' ಮಲಯಾಳಿ ಸಿನಿಮಾದ ಕನ್ನಡ ಹಾಗೂ ತಮಿಳು ಹಕ್ಕನ್ನು ಪಡೆದುಕೊಂಡಿದ್ದ ಸಂಗತಿಯನ್ನು ನಾನು ಹಿಂದೆ ಪ್ರಸ್ತಾಪಿಸಿದ್ದೆ. ತಮಿಳಿನ ನಿರ್ಮಾಪಕ ಕೆ.ಬಾಲಾಜಿ ಖುದ್ದು ನಟ. ಶಿವಾಜಿ ಗಣೇಶನ್ ಸ್ನೇಹಿತ.

ಹಳೆಹುಲಿ. ಅವರು ಫೋನ್ ಮಾಡಿ, `ಚಿತ್ರಂ' ಸಿನಿಮಾವನ್ನು ತಮಿಳಿನಲ್ಲಿ ತೆಗೆಯಬೇಕೆಂದುಕೊಂಡಿರುವ ವಿಷಯ ಹೇಳಿಕೊಂಡರು. ಆಗ ಅವರು ಭಾಗ್ಯರಾಜ್‌ನನ್ನು ನಾಯಕನಾಗಿಸಿ ಹಿಂದಿಯ `ಮಿಸ್ಟರ್ ಇಂಡಿಯಾ' ಚಿತ್ರವನ್ನು ತಮಿಳಿನಲ್ಲಿ ರೀಮೇಕ್ ಮಾಡುತ್ತಿದ್ದ ಸಂಗತಿ ಹಂಚಿಕೊಂಡರು. `ಅದನ್ನು ಕನ್ನಡದಲ್ಲಿ ನೀನೇ ಯಾಕೆ ಮಾಡಬಾರದು' ಎಂದು ಸಲಹೆ ಕೊಟ್ಟಿದ್ದೇ ನನ್ನ ಕಿವಿ ನಿಮಿರಿತು. `ಚಿತ್ರಂ' ರೀಮೇಕ್ ಹಕ್ಕನ್ನು ಕೊಟ್ಟೆ; `ಮಿಸ್ಟರ್ ಇಂಡಿಯಾ' ಹಕ್ಕು ಪಡೆದೆ. ಮೊಟ್ಟ ಮೊದಲ ಬಾರಿಗೆ ಅಂಬರೀಷ್ ಕಾಲ್‌ಷೀಟ್ ಪಡೆದುಕೊಂಡು `ಜೈ ಕರ್ನಾಟಕ' ಹೆಸರಿನಲ್ಲಿ ಆ ಚಿತ್ರ ಮಾಡಿದೆ.

ಅಂಬರೀಷ್‌ಗೂ ನಾನು ಮುಗ್ಗರಿಸಿದ್ದು, ಹಣದ ತೊಂದರೆ ಅನುಭವಿಸುತ್ತಿದ್ದದ್ದು ಗೊತ್ತಿತ್ತು. ಅದಕ್ಕೇ ಸಂಭಾವನೆಯನ್ನು ಕೇಳದೆ, ನಾನು ಕೊಟ್ಟಷ್ಟನ್ನೇ ಪಡೆದು ನಟಿಸಲು ಒಪ್ಪಿದ. ಅಂಬರೀಷ್ ತೊಂದರೆ ಕೊಡುತ್ತಾನೆ ಎಂದು ಅನೇಕರು ದೂರುತ್ತಿದ್ದರು. ನನಗೆ ಒಂದು ದಿನವೂ ಅವನಿಂದ ಸಮಸ್ಯೆ ಆಗಲಿಲ್ಲ. ಸರಿಯಾದ ಸಮಯಕ್ಕೆ ಬಂದು, ಚಿತ್ರೀಕರಣ ಮುಗಿಸಿ ಹೋಗುತ್ತಿದ್ದ. ಮೂರು ತಿಂಗಳಲ್ಲಿ ಸಿನಿಮಾ ಮುಗಿಯಿತು. ತೆರೆಕಂಡ ಮೇಲೆ ಆ ಸಿನಿಮಾದಿಂದಲೂ ಪ್ರಯೋಜನವಾಗಲಿಲ್ಲ. ಆ ಚಿತ್ರದ ಒಂದು ಪ್ರೀಮಿಯರ್ ಶೋ ಆಯೋಜಿಸಿದ್ದೆ. ಮದ್ರಾಸ್‌ನ ಒಬ್ಬ ಮಿತ್ರ ಅದನ್ನು ನೋಡಲು ಬರುತ್ತಿದ್ದಾಗ ಅವರ ಬೆಂಜ್ ಕಾರು ಅಪಘಾತಕ್ಕೀಡಾಯಿತು. ಕಾರ್‌ನ ಚಾಲಕ ಹಾಗೂ ಸಂಬಂಧಿಕರನ್ನು ಕಳೆದುಕೊಂಡರು. ಅದು ಚಿತ್ರಕ್ಕೆ ಕೆಟ್ಟ ಶಕುನದಂತಾಯಿತು.

ಮದ್ರಾಸ್‌ನಲ್ಲಿದ್ದ ನನ್ನ ಮನೆಯ ವಾಸ್ತು ಸರಿಯಿಲ್ಲ ಎಂದು ಕೆಲವರು ತಲೆಕೆಡಿಸಿದರು. ಟ್ಯಾಂಕ್ ಅಲ್ಲಿರಬೇಕಿತ್ತು, ಬೆಡ್‌ರೂಮ್ ಮಂಚ ತಲೆಕೆಳಗಾಗಿರಬೇಕಿತ್ತು ಎಂದು ತಲೆಗೊಂದು ವಿಚಿತ್ರ ಸಲಹೆಗಳನ್ನು ಕೊಟ್ಟರು. ನಾನಿದ್ದ ಆ ಮನೆಯಲ್ಲಿ ಹಿಂದೆ ಜಿ.ವೇಲುಮಣಿ ಎಂಬ ನಿರ್ಮಾಪಕರಿದ್ದರಂತೆ. ಶಮ್ಮಿ ಕಪೂರ್, ಸಾಧನಾ ಜೋಡಿಯನ್ನಿಟ್ಟು ಅವರು `ರಾಜ್‌ಕುಮಾರ್' ಸಿನಿಮಾ ಮಾಡಿ ನಷ್ಟ ಅನುಭವಿಸಿದ್ದರೆಂದು ಕೆಲವರು ಹೇಳಿದರು.

ವಾಸ್ತು, ಫೈನಾನ್ಶಿಯರ್‌ಗಳ ಒತ್ತಡ ಎಲ್ಲಾ ಸೇರಿ ಆ ಮನೆ ಮಾರಲು ನಿರ್ಧರಿಸಿದೆ. ಮಾರುವ ಮೊದಲು ಮಹಡಿಯ ಮೇಲೆ ಕೂತು ಒಬ್ಬನೇ ಗೊಳೋ ಎಂದು ಅತ್ತೆ. ಆಗ ನನ್ನವರು ಅಂತ ಯಾರೂ ಇರಲಿಲ್ಲ. ಒಬ್ಬ ಹೀರೊ ಕೂಡ ಜೊತೆಗಿರಲಿಲ್ಲ. ಮತ್ತೆ ರಜನಿ ಭೇಟಿಗೆ ಯತ್ನಿಸಿದೆ. ಅವನು ಒಂದಲ್ಲ ಒಂದು ದಿನ ಮತ್ತೆ ಸಿಗುತ್ತಾನೆ ಅಂತ ನನಗೆ ನಂಬಿಕೆ ಇತ್ತು. ಆದರೆ, ನನ್ನ ನಿರೀಕ್ಷೆ ನಿಜವಾಗಲೇ ಇಲ್ಲ. 

ಟಿ-ನಗರದ ಆ ಮನೆ ಬಿಟ್ಟು ಕೀಳಪಾಕ್ಕಂನಲ್ಲಿ ಬೇರೆ ಬಾಡಿಗೆ ಮನೆಗೆ ಹೋದೆ. ಹಿಂದೆ ಮಾಡಿದ್ದ ಚಿತ್ರಗಳ ಸ್ಯಾಟಲೈಟ್ ಹಕ್ಕುಗಳನ್ನು ಕೇಳಿದ ಬೆಲೆಗೆ ಮಾರಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ನನ್ನದಾಯಿತು. ಮಕ್ಕಳು ಬೆಳೆಯುತ್ತಿದ್ದರು, ನಾನು ಇಳಿಯುತ್ತಿದ್ದೆ. ಗೊತ್ತಿಲ್ಲದೆಯೇ ಮಕ್ಕಳ ಮೇಲೆ ಜವಾಬ್ದಾರಿ ಹೊರಿಸಿದ್ದೆ. ಐಷಾರಾಮ ಕರಗಿತು. ಎಲ್ಲಾ ಕಾರ್‌ಗಳೂ ಹೋಗಿ, ಉಳಿದದ್ದು ಒಂದು ಅಂಬಾಸಿಡರ್ ಮಾತ್ರ.

ದೊಡ್ಡ ಮಗ ಸಂತೋಷ್ ಮೈಸೂರಿನ ಎನ್‌ಐಇನಲ್ಲಿ ಎಂಜಿನಿಯರಿಂಗ್ ಓದಿದ. ಅವನು ಆಗ ಹೇಳಿದ್ದು ಒಂದೇ ಮಾತು- `ಅಪ್ಪ, ಯಾವುದೇ ಕಾರಣಕ್ಕೂ ಕಾಲೇಜಿನಲ್ಲಿ ನಾನು ದ್ವಾರಕೀಶ್ ಮಗ ಅಂತ ಯಾರಿಗೂ ಗೊತ್ತಾಗಬಾರದು'. ತನ್ನ ಪಾಡಿಗೆ ತಾನು ಓದಿ ಅವನು ಡಿಸ್ಟಿಂಕ್ಷನ್‌ನಲ್ಲಿ ಎಂಜಿನಿಯರಿಂಗ್ ಪಾಸ್ ಮಾಡಿದ. ಅವನೀಗ ಅಮೆರಿಕದ ಕೊಲಂಬಸ್‌ನಲ್ಲಿದ್ದಾನೆ. ಐದೂ ಮಕ್ಕಳು ಚೆನ್ನಾಗಿ ಓದಿದರು.

ಮಾನಸಿಕವಾಗಿ ಕುಸಿದಿದ್ದ ಸಂದರ್ಭದಲ್ಲಿ ಸೂಪರ್‌ಗುಡ್ ಫಿಲ್ಮ್ಸ್‌ನ ಚೌಧರಿ ಎಂಬುವರು `ಅಡತ್ತವಾರಿಸ್' ಚಿತ್ರವನ್ನು ವಿದೇಶಗಳಲ್ಲಿ ಬಿಡುಗಡೆ ಮಾಡಲು ಹಕ್ಕು ಪಡೆದಿದ್ದರು. `ಪುದುವಸಂತಂ' ತಮಿಳು ಚಿತ್ರ ಮಾಡಿದ ಅವರು ಅದರ ಪ್ರಿವ್ಯೆಗೆ ನನ್ನನ್ನು ಕರೆದರು. ಆ ಚಿತ್ರ ನೋಡಲು ಹೋದಾಗ ಜನ ಕಿಕ್ಕಿರಿದಿದ್ದರು. ಸರಿಯಾದ ಸ್ಥಳ ಸಿಗದೇ ಇದ್ದರೂ ಹೇಗೋ ಅಡ್ಜಸ್ಟ್ ಮಾಡಿಕೊಂಡೇ ಸಿನಿಮಾ ನೋಡಿದೆ. ಚಿತ್ರ ಬಹಳ ಇಷ್ಟವಾಯಿತು. ಅದು ಖಂಡಿತ ಹಿಟ್ ಎಂದು ಆಗಲೇ ಹೇಳಿದೆ. ನಾನು ಕೇಳಿದ ದುಡ್ಡಿಗೆ ಕನ್ನಡ ರೀಮೇಕ್ ಹಕ್ಕು ಕೊಡುವುದಾಗಿ ಹೇಳಿದರು. ಅದೇ ನಾನು ತೆಗೆದ `ಶ್ರುತಿ'.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT