ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನೀಕಾಂತ್ ಔದಾರ್ಯ

Last Updated 27 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪೋಯೆಸ್ ಗಾರ್ಡನ್‌ನಲ್ಲಿ ರಜನೀಕಾಂತ್ ಮನೆ ಇತ್ತು. ಬೆಳಿಗ್ಗೆ ಸುಮಾರು 8.30ರ ಹೊತ್ತಿಗೆ ಅಲ್ಲಿಗೆ ಹೋದೆ. ಅಲ್ಲಿ ಎಂಟ್ಹತ್ತು ನಿರ್ಮಾಪಕರು ಕುಳಿತಿದ್ದರು. ಎಂ.ಜಿ.ಆರ್. ಚಿತ್ರಗಳಲ್ಲಿ ನಟಿಸಿದ್ದ ಪಿ.ಎಸ್.ವೀರಪ್ಪ ಎಂಬ ಹೆಸರಾಂತ ಖಳನಾಯಕ ಕೂಡ ಆ ಸಾಲಿನಲ್ಲಿ ಇದ್ದರು.

ಸತ್ಯ ಮೂವೀಸ್‌ನವರೂ ಇದ್ದರು. ಸ್ವಲ್ಪ ಹೊತ್ತಿನಲ್ಲೇ ರಜನೀಕಾಂತ್ ಮೆಟ್ಟಿಲಿಳಿದು ಕೆಳಗೆ ಬಂದ. ಸಾಲಿನಲ್ಲಿ ಕುಳಿತಿದ್ದ ಒಬ್ಬೊಬ್ಬರನ್ನೇ ಮಾತನಾಡಿಸುತ್ತಾ ನಿಂತ. ಇದ್ದಕ್ಕಿದ್ದಂತೆ ಅವನ ನೋಟ ನನ್ನತ್ತ ಹರಿಯಿತು. `ದ್ವಾರಕೀಶ್, ನೀವಾ... ಇಲ್ಲಿಗೇಕೆ ಬಂದಿರಿ... ಎಲ್ಲಿದ್ದೀರಿ...~ ಎಂದ. `ವುಡ್‌ಲ್ಯಾಂಡ್ಸ್ ಹೋಟೆಲ್‌ನ ರೂಮ್ ನಂಬರ್ 114ರಲ್ಲಿ ಇದೀನಿ~ ಎಂದು ಹೇಳಿದೆನಷ್ಟೆ. `ನಡೀರಿ... ನಡೀರಿ~ ಎಂದು ನನ್ನನ್ನು ಕಳಿಸಿಬಿಟ್ಟ.

ಹೋಟೆಲ್ ರೂಮ್‌ಗೆ ಹೋದವನೇ ಪೇಚಾಡಿಕೊಂಡೆ. ಯಾಕಾದರೂ ರಜನೀಕಾಂತ್ ಬಳಿಗೆ ಹೋದೆನೋ ಎನ್ನಿಸತೊಡಗಿತ್ತು. ಸಂಜೆ ನಾಲ್ಕು ಗಂಟೆ. ಅಂಬುಜಾ ಹತ್ತಿರ ನಡೆದದ್ದನ್ನು ಹೇಳಿಕೊಳ್ಳುತ್ತಾ ನೊಂದುಕೊಂಡೆ. ಕಿಟಕಿ ಕಡೆ ಇಣುಕಿದೆ. ಒಂದು ಫಿಯೆಟ್ ಕಾರ್ ನಿಂತಿತು. ನನಗಿನ್ನೂ ಚೆನ್ನಾಗಿ ನೆನಪಿದೆ- ಆ ಕಾರ್‌ನ ನಂಬರ್ 5004. ಅದರಿಂದ ಒಬ್ಬ ವ್ಯಕ್ತಿ ಇಳಿದ. ನೋಡಿದರೆ, ರಜನೀಕಾಂತ್. ಸಿನಿಮಾ ಸ್ಟೈಲ್‌ನಲ್ಲೇ ಅವನು ನಾನಿದ್ದ ರೂಮ್‌ಗೆ ಬಂದ. ಗಂಟೆಗಟ್ಟಲೆ ಮಾತನಾಡಿದ. ಮಾತಿನ ಭರಾಟೆಯ ನಡುವೆಯೇ ನಾನು ಡೇಟ್ಸ್ ಕೇಳಿದೆ. ಅವನು ತಕ್ಷಣಕ್ಕೆ ಡೇಟ್ಸ್ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ.

`ಬೆಂಗಳೂರಲ್ಲಿದ್ದಾಗ ನನಗೆ ಒಂದೂ ಚಾನ್ಸ್ ಕೊಡಲಿಲ್ಲ. ಈಗ ಡೇಟ್ಸ್ ಬೇಕಾ~ ಎಂದು ಕಿಚಾಯಿಸಿದ. `ಮುಂದಿನ ಗುರುವಾರ ಮತ್ತೆ ಸಿಗೋಣ. ಡೇಟ್ಸ್ ವಿಷಯ ನೋಡೋಣ~ ಎಂದು ಹೇಳಿ ಹೊರಟ.

ಕ್ಯಾಮೆರಾಮನ್ ರಾಜಾರಾಂ ಅವರ ನೆರವಿನಿಂದ ನನ್ನ ಮಕ್ಕಳನ್ನು ಶಾಲೆಗೆ ಸೇರಿಸಿದೆ. ಮೂರನೇ ಮಗ ಗಿರೀಶ `ವಾಂತಿ ಆಯಿತು~ ಎನ್ನುತ್ತಾ ಒಂದು ದಿನ ಮನೆಗೆ ಬಂದ. ಅವನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ತೋರಿಸಿದೆವು. ಎರಡು ದಿನಗಳ ನಂತರ ಮತ್ತೆ ಶಾಲೆಗೆ ಕಳುಹಿಸಿದೆವು. ವಾಂತಿ ನಿಲ್ಲಲಿಲ್ಲ. ನಮಗೆ ಆತಂಕ. ಬೇರೆ ವೈದ್ಯರಲ್ಲಿ ತೋರಿಸಿದೆವು.
 
ನರದ ಸಮಸ್ಯೆ ಇರಬಹುದು ಎಂದು ಅವರು ಇನ್ನೊಬ್ಬ ವೈದ್ಯರಲ್ಲಿ ತೋರಿಸುವಂತೆ ಹೇಳಿದರು. ಆ ವೈದ್ಯರು ಕಣ್ಣಿನ ತೊಂದರೆ ಇರಬೇಕೆಂದು ನೇತ್ರವೈದ್ಯರಲ್ಲಿಗೆ ಹೋಗುವಂತೆ ಸೂಚಿಸಿದರು.

ಹತ್ತು ಹನ್ನೆರಡು ದಿನಗಳು ಹೀಗೆ ವೈದ್ಯರನ್ನು ಕಾಣುವುದರಲ್ಲಿಯೇ ಕಳೆದುಹೋದವು. ಅಣ್ಣಾನಗರದ ಚಿಂತಾಮಣಿ ಸರ್ಕಲ್‌ನಲ್ಲಿ ಒಬ್ಬ ನೇತ್ರತಜ್ಞರಿದ್ದರು. ಅವರ ಬಳಿಗೆ ಗಿರೀಶನನ್ನು ಕರೆದುಕೊಂಡು ಹೋದೆ. ಅಲ್ಲಿ ತಲುಪುವ ಹೊತ್ತಿಗಾಗಲೇ ಅವನು ಮಂಕಾದ.
 
ವೈದ್ಯರು ಪರೀಕ್ಷಿಸುವ ಮೊದಲೇ ಅವನಿಗೆ ದೃಷ್ಟಿ ಹೋಗಿಬಿಟ್ಟಿತು. `ಪಪ್ಪ... ಪಪ್ಪ... ಮಮ್ಮಾ... ಮಮ್ಮಾ... ಐ ವಾಂಟ್ ಟು ಸೀ ಯೂ~ ಎನ್ನುತ್ತಿದ್ದ ಆ ಕಂದನಿಗೆ ಏನೂ ಕಾಣುತ್ತಿರಲಿಲ್ಲ. ಏಳು ವರ್ಷದ ಹುಡುಗನಿಗೆ ಹೀಗಾಯಿತಲ್ಲ ಎಂದು ನನಗೆ ದಿಕ್ಕೇ ತೋಚದಂತಾಯಿತು. ವೈದ್ಯರು ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿದರು.

`ಕರೆಂಟ್ ಹೋಗಿದೆ ಮಗನೇ~ ಎಂದು ಅವನಿಗೆ ಸುಳ್ಳು ಹೇಳಿದೆವು. ಚಿಂತಾಮಣಿ ಸರ್ಕಲ್‌ನಲ್ಲಿ ನಿಂತು ಸಂಜೆ 4 ಗಂಟೆಯ ಹೊತ್ತಿಗೆ ರಾಘವೇಂದ್ರ ಸ್ವಾಮಿಯನ್ನು ಬಾಯಿಗೆ ಬಂದಂತೆ ಬೈದೆ. `ನನ್ನ ಸಕಲ ಆಸ್ತಿಯನ್ನು ನಿಮಗೆ ಧಾರೆ ಎರೆಯುತ್ತಿದ್ದೇನೆ.
 
ನಾಳೆ ಸಂಜೆ ಇಷ್ಟು ಹೊತ್ತಿಗೆ ನನ್ನ ಮಗನಿಗೆ ದೃಷ್ಟಿ ಬರದೇ ಇದ್ದರೆ ನೀವು ಬೆಳೆಸಿದ ಈ ದ್ವಾರಕೀಶ್ ಮಂತ್ರಾಲಯಕ್ಕೆ ಬಂದು ನೇಣುಹಾಕಿಕೊಳ್ಳುವುದು ಗ್ಯಾರಂಟಿ~ ಎಂದು ಅವರಿಗೇ ಸವಾಲು ಹಾಕಿದೆ. ನನ್ನ ಮಗ ದೃಷ್ಟಿ ಕಳೆದುಕೊಂಡ ವಿಷಯ ಬೆಂಗಳೂರಿಗೂ ತಲುಪಿತ್ತು.

`ದ್ವಾರಕೀಶ್ ಏನು ಮೆರೀತಾ ಇದ್ದ. ಅವನ ಶೋಕಿಗಳೇನು. ಸ್ವರ್ಗ, ನರಕ ಎರಡೂ ಇಲ್ಲೇ ಇದೆ ಅನ್ನೋದು ಇದಕ್ಕೇ~ ಎಂದು ಕೆಲವರು ಮಾತನಾಡಿದ್ದೂ ನನ್ನ ಕಿವಿಮುಟ್ಟಿತು. ಯಾರೋ ಮಾಟ ಮಾಡಿಸಿದ್ದರಿಂದ ಮಗನಿಗೆ ಕಣ್ಣುಹೋಗಿದೆ ಎಂದು ಕೆಲವರು ಹೇಳಿದರು.

ಮರುದಿನ ಮಧ್ಯಾಹ್ನ. ರಣಬಿಸಿಲು. ಫ್ಯಾನ್‌ಗಳು ಕಿರಕಿರ ಸದ್ದು ಮಾಡುತ್ತಾ ತಿರುಗುತ್ತಿದ್ದವು. ಅಂಬುಜಾ, ನಾನು ದಿಕ್ಕೇ ತೋಚದಂತೆ ಆಸ್ಪತ್ರೆಯಲ್ಲಿದ್ದೆವು.

ವುಡ್‌ಲ್ಯಾಂಡ್ಸ್ ಹೋಟೆಲ್ ರೂಮಿನಲ್ಲಿ ಉಳಿದ ನಾಲ್ಕು ಮಕ್ಕಳಿದ್ದರು. ರಾಮದೊರೈ ಮನೆಯಿಂದ ಅವರಿಗೆ ಊಟ ಬರುತ್ತಿತ್ತು. ಅಂಬುಜಾ ಎರಡೂ ಕಡೆ ನೋಡಬೇಕು. ನನ್ನ ಮಗ ಗಿರೀಶನಿಗೆ ಕಣ್ಣು ಕಾಣದೆ ಕತ್ತಲಾಗಿತ್ತು.
 
ಇನ್ನೊಂದು ಕಡೆ ಮುಂದೇನು ಎಂಬ ಪ್ರಶ್ನೆ ಇಟ್ಟುಕೊಂಡು ಕುಳಿತಿದ್ದ ನನಗೆ ಬದುಕೇ ಕತ್ತಲಾದಂಥ ಆತಂಕ. ಸುಮಾರು 3.30ರ ಸಮಯ. ನನ್ನ ಮಗ `ಪಪ್ಪಾ ಹಾರ್ಲಿಕ್ಸ್... ಪಪ್ಪಾ ಫ್ಯಾನ್... ಪಪ್ಪಾ ಐ ಕ್ಯಾನ್ ಸೀ ಯೂ~ ಎನ್ನತೊಡಗಿದ. ಕಗ್ಗತ್ತಲಲ್ಲಿ ಬೆಳಕು ಮೂಡಿದಂತಾಯಿತು.
 
ವೈದ್ಯರು ಬಂದು ಪರೀಕ್ಷಿಸಿ ಹೋದರು. ಅವರಿಂದಲೇ ದೃಷ್ಟಿ ಬಂದದ್ದು ಎಂದು ಮಗನಿಗೆ ಹೇಳಿದೆ. ಅದಕ್ಕವನು, `ನೋ, ಮೈ ಡಾಕ್ಟರ್ ಕೇಮ್ ಅಂಡ್ ಸ್ಯಾಟ್ ಆನ್ ದಿ ಫ್ಯಾನ್. ಹಿ ವಾಸ್ ವಿತ್ ವೈಟ್ ಬಿಯರ್ಡ್. ಹೀ ಟೋಲ್ಡ್ ಯುವರ್ ಫಾದರ್ ಈಸ್ ಮೈ ಡಿವೋಟಿ.

ಯೂ ವಿಲ್ ಬಿ ಫೈನ್...~ (ನನ್ನ ವೈದ್ಯರು ಫ್ಯಾನ್ ಮೇಲೆ ಕುಳಿತಿದ್ದರು. ಬಿಳಿ ಗಡ್ಡವಿತ್ತು. ನಿನ್ನ ತಂದೆ ನನ್ನ ಭಕ್ತ. ನೀನು ಹುಷಾರಾಗುತ್ತೀಯಾ ಯೋಚಿಸಬೇಡ ಎಂದರು) ಎಂದು ತನ್ನ ಕೈಗಳನ್ನು ನೋಡಿಕೊಂಡು ನನ್ನ ಮಗ ಹೇಳಿದ.

`ಕತ್ತಿನ ಭಾಗದ ನರದಲ್ಲಿ ಏನೋ ಬ್ಲಾಕ್ ಆಗಿತ್ತು. ಅದಕ್ಕೇ ದೃಷ್ಟಿ ಕಾಣುತ್ತಿರಲಿಲ್ಲ. ದಿಢೀರನೆ ಅದು ಹೇಗೆ ಸರಿಹೋಯಿತೋ~ ಎಂದು ಅಲ್ಲಿನ ವೈದ್ಯರು ಹೇಳಿದರು. ಆಮೇಲೆ ಎರಡು ವರ್ಷ ಅದೇ ವೈದ್ಯರ ಬಳಿಗೆ ನನ್ನ ಮಗನನ್ನು `ಎಲೆಕ್ಟ್ರಿಕ್ ಟ್ರೀಟ್‌ಮೆಂಟ್~ಗೆಂದು ಕರೆದುಕೊಂಡು ಹೋದೆ.

ದೃಷ್ಟಿ ಬಂದ ಒಂದು ವಾರದ ನಂತರ ಮಗನನ್ನು ಮಂತ್ರಾಲಯಕ್ಕೆ ಕರೆದುಕೊಂಡು ಹೋಗಿ, ಮೂರು ದಿನ ಸೇವೆ ಮಾಡಿಸಿದೆ.

ನಾವಿನ್ನೂ ಆಗ `ನ್ಯಾಯ ಎಲ್ಲಿದೆ~ ಸಿನಿಮಾವನ್ನು ಇನ್ನೂ ಯಾರಿಗೂ ಮಾರಿರಲಿಲ್ಲ. ಅದೇ ಚಿತ್ರ ಹಿಂದಿಯಲ್ಲಿ `ಅಂಧಾ ಕಾನೂನ್~ ಹೆಸರಿನಲ್ಲಿ ಬರುತ್ತಿತ್ತು. ಅದರಲ್ಲಿ ರಜನೀಕಾಂತ್ ನಾಯಕ. ರಾಮದೊರೈ ಸಲಹೆಯ ಮೇರೆಗೆ ಸಫೈರ್ ಹೋಟೆಲ್‌ನಲ್ಲಿದ್ದ ಥಿಯೇಟರ್‌ನಲ್ಲಿ `ನ್ಯಾಯ ಎಲ್ಲಿದೆ~ ಚಿತ್ರವನ್ನು ರಜನೀಕಾಂತ್‌ಗೆ ತೋರಿಸಿದೆ. ಚಿತ್ರ ನೋಡಲು ರಜನೀಕಾಂತ್ ತನ್ನ ಪತ್ನಿ ಲತಾ ಅವರನ್ನೂ ಕರೆದುಕೊಂಡು ಬಂದ. ಅಷ್ಟು ಹೊತ್ತಿಗೆ ನನ್ನ, ರಜನೀ ನಡುವೆ ನಂಟು ಬೆಳೆದಿತ್ತು.

ಇಂಟರ್‌ವಲ್ ಹೊತ್ತಿಗೆ ನನ್ನ ತೊಡೆಯನ್ನು ತಟ್ಟಿದ ರಜನೀ, `ನಮ್ಮ ದ್ವಾರಕೀಶ್ ಎಷ್ಟು ಚೆನ್ನಾಗಿ ಸಿನಿಮಾ ಮಾಡಿದಾರೆ ನೋಡು~ ಎಂದು ತನ್ನ ಹೆಂಡತಿಗೆ ಹೇಳಿದ.

ಶೌಚಾಲಯದಲ್ಲಿ ಇಬ್ಬರೂ ಪಕ್ಕಪಕ್ಕದ ಬೇಸಿನ್ ಎದುರು ನಿಂತಾಗ, `ನಾಳೆ ಹನ್ನೊಂದು ಗಂಟೆ ಹೊತ್ತಿಗೆ ನನಗೆ ಇಷ್ಟು ಹಣ ಬೇಕು, ತಲುಪಿಸುತ್ತೀರಾ~ ಎಂದು ರಜನೀಕಾಂತ್ ಕೇಳಿದ. ಒಂದು ಕನ್ನಡ ಸಿನಿಮಾ ತೆಗೆಯಬಹುದಾದಷ್ಟು ಮೊತ್ತ ಅದು. ಕೊಡಲು ಒಪ್ಪಿದೆ.

ಪ್ರಭುದಾಸ್ ಗುರುಮುಖ್ ಸಿಂಗ್ ಎಂಬ ಫೈನಾನ್ಶಿಯರ್‌ಗೆ ಫೋನ್ ಮಾಡಿ ಹಣ ಹೊಂದಿಸಿದೆ. ಮತ್ತೆ ರಜನೀಕಾಂತ್ ಫೋನ್ ಮಾಡಿ, `ಅಷ್ಟೊಂದು ಹಣ ಬೇಡ. ಸ್ವಲ್ಪ ಕಡಿಮೆ ಮಾಡಿಕೊಂಡೇ ಕೊಡಿ~ ಎಂದು ಇನ್ನೊಂದು ಮೊತ್ತ ಹೇಳಿದ. ಸತ್ಯನಾರಾಯಣ ಎಂಬ ತನ್ನ ಆಪ್ತರಿಗೆ ಆ ಹಣವನ್ನು ಮುಟ್ಟಿಸುವಂತೆ ಸೂಚಿಸಿದ. ಅವನು ಹೇಳಿದ ಸಮಯಕ್ಕೆ ಅವರಿಗೆ ಹಣ ತಲುಪಿಸಿದೆ.

ಹಣ ನೀಡಿದ್ದಕ್ಕೆ ಫೋನ್ ಮೂಲಕ ಧನ್ಯವಾದ ಎಂದ ರಜನೀ, ಮರುದಿನ ಬೆಳಿಗ್ಗೆ 11ಕ್ಕೆ ಎವಿಎಂ ಸ್ಟುಡಿಯೋಗೆ ಬರಲು ಹೇಳಿದ. ಒಂದು ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದ. ನನ್ನ ಕಂಡವನೇ, ಕುಳಿತುಕೊಳ್ಳಲು ಸೂಚಿಸಿದ. ಶಾಟ್ ಮುಗಿದದ್ದೇ ಬಳಿಗೆ ಬಂದ. ತೊಟ್ಟಿದ್ದ ಕಾಸ್ಟ್ಯೂಮ್ ಜೇಬಿನಿಂದ ಒಂದು ಕಾಗದ ತೆಗೆದು ಕೊಟ್ಟ. ರಜನೀ ಆರ್ಟ್ಸ್ ಲೆಟರ್‌ಹೆಡ್ ಅದು. ಅದರಲ್ಲಿ ನನಗೆ ಡೇಟ್ಸ್ ಬರೆದು ಕೊಟ್ಟಿದ್ದ. ಕೆಳಗಡೆ ಅವನ ಸಹಿ ಇತ್ತು. ಹಣ ಪಡೆದ ಮರುದಿನವೇ ಡೇಟ್ಸ್ ಕೊಟ್ಟ ರಜನೀ ಔದಾರ್ಯ ದೊಡ್ಡದು.

ಮಧ್ಯಾಹ್ನ 2ರ ಹೊತ್ತಿಗೆ ವುಡ್‌ಲ್ಯಾಂಡ್ಸ್ ಹೋಟೆಲ್‌ಗೆ ಬಂದೆ. ಹದಿನೈದು ಕಾರುಗಳು ನಿಂತಿದ್ದವು. ನಾನು ನಿರ್ಮಿಸಲಿರುವ ರಜನೀ ಚಿತ್ರಕ್ಕೆ ಬಂಡವಾಳದ ಮೂರು ಪಟ್ಟು ವ್ಯಾಪಾರ ಆಗಿಬಿಟ್ಟಿತು.
 
ಸಂಜೆ ಹೊತ್ತಿಗೆ ಮದ್ರಾಸ್ ತುಂಬೆಲ್ಲಾ ನನ್ನದೇ ಸುದ್ದಿ. `ಯಾರೋ ಬೆಂಗಳೂರಿಂದ ಬಂದಿದ್ದಾನಂತೆ. ರಜನೀ ಆಪ್ತನಂತೆ. ಅವನಿಗೆ ಡೇಟ್ಸ್ ಸಿಕ್ಕಿದೆಯಂತೆ~ ಎಂದೆಲ್ಲಾ ಮಾತುಗಳು ಹರಿದಾಡಿದವು. ನನ್ನ ಅಭಿಮಾನಿಗಳ ಸಂಘ ಹುಟ್ಟಿಕೊಂಡಿತು. ಪಾಂಡಿಚೆರಿಯಲ್ಲಿ `ದ್ವಾರಕೀಶ್ ಮಂಡ್ರಂ~ (ದ್ವಾರಕೀಶ್ ಮಂದಿರ)ವನ್ನೂ ಕಟ್ಟಿಬಿಟ್ಟರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT