ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥೂ... ಅವನ ಜನ್ಮಕ್ಕೆ

Last Updated 25 ಜೂನ್ 2014, 19:30 IST
ಅಕ್ಷರ ಗಾತ್ರ

ಅವರು ನಮ್ಮ ಪ್ರಿನ್ಸಿಪಾಲರು. ತುಂಬಾ ಒಳ್ಳೆಯ ಮನುಷ್ಯ. ಅವರಲ್ಲಿರುವುದು ಮುಗ್ಧತೆಯೋ? ದಡ್ಡತನವೋ? ನಾನರಿಯೆ! ಸದಾ ಗಡಿಬಿಡಿಯ ಸ್ವಭಾವದವರು. ಕೆಲವೊಮ್ಮೆ ಅಷ್ಟೇ ಕೂಲ್ ಆಗಿ ಇರುತ್ತಿದ್ದರು. ಹಿಂದೆ ಮುಂದೆ ಆಲೋಚಿಸದೆ ಫಟ್ಟಂತ ಮಾತಾಡಿಬಿಡುತ್ತಿದ್ದರು. ಅವರ ಮನಸ್ಸಿಗೂ ಮಾತಿಗೂ ನಡುವೆ ಯಾವುದೇ ಫಿಲ್ಟರ್ ಇರಲಿಲ್ಲ.

ನಾವು ಹೇಳೋಕೆ ಕೇಳೋಕೆ ಸಂಕೋಚ ಮಾಡಿಕೊಂಡು ಮನಸ್ಸಿನಲ್ಲಿ  ಮಂಡಿಗೆ ತಿನ್ನುತ್ತಿದ್ದರೆ ಅವರು ಎಲ್ಲಾ ಮಾತಾಡಿ ಮುಗಿಸಿ ಬಿಡುತ್ತಿದ್ದರು. ಏನನ್ನೂ ಉಳಿಸುತ್ತಿರಲಿಲ್ಲ. ಅನಿಸಿದ್ದನ್ನು ತಕ್ಷಣಕ್ಕೆ ಹೇಳುವ ಅವರ ಈ ಸ್ವಭಾವದಿಂದ ನಮಗಾಗಿರುವ ಅನುಕೂಲಗಳು ಬಲು ಕಡಿಮೆ. ಅನಾಹುತ ಮತ್ತು ಅಪಘಾತಗಳೇ ಹೆಚ್ಚು. ಇವರ ಜೊತೆ ಹೊರಗೆ ಹೋದಾಗ ಆಗಿರುವ ಫಜೀತಿಗಳಿಗೆ ಲೆಕ್ಕವೇ ಇಲ್ಲ.  ಯಾವ ಗುಟ್ಟೂ ಒಂದು ಕ್ಷಣವೂ ಇವರಲ್ಲಿ ಉಳಿಯುತ್ತಿರಲಿಲ್ಲ.

ಹೀಗಾಗಿ ತಮ್ಮ ಸ್ವಂತ ವಿಷಯಗಳನ್ನು ಇವರಲ್ಲಿ ಹೇಳಿಕೊಳ್ಳಲು ಎಲ್ಲರೂ ಹಿಂದೆ ಮುಂದೆ ನೋಡುತ್ತಿದ್ದರು. ಇದನ್ನು ದಯವಿಟ್ಟು ಯಾರಿಗೂ ಹೇಳಬೇಡಿ ತುಂಬಾ ಪರ್ಸನಲ್ ಸಾರ್ ಎಂದು ತಮ್ಮ ಮಾತಿನ ನಡುವೆ ಅಪ್ಪಿತಪ್ಪಿ ಹೇಳಿಬಿಟ್ಟರಂತೂ ಮುಗಿದೇ ಹೋಯಿತು. ಆ ಮಾತನ್ನೇ ಮೊದಲು ಪ್ರಸಾರ ಮಾಡುತ್ತಿದ್ದರು. ಸ್ಪಷ್ಟ ಹೃದಯವಂತಿಕೆ, ಬೋಳೇತನ, ವಿಶಾಲ ಮನಸ್ಸಿರುವ ಜನರ ಹಣೇಬರ ಹೀಗೇನೆ ಇರ್ಬೇಕು!.

ಒಮ್ಮೆ ನಮ್ಮ ಮಹಿಳಾ ಸಹೋದ್ಯೋಗಿಯೊಬ್ಬರು ಯಾವುದೋ ಪೂಜೆಯ ನಿಮಿತ್ತ ಊಟಕ್ಕೆ ಕರೆದಿದ್ದರು. ಹೀಗಾಗಿ ಕಾಲೇಜಿನವರೆಲ್ಲಾ ತಪ್ಪದೆ ಹೋದೆವು. ನಮ್ಮ ಮಹಿಳಾ ಸಹೋದ್ಯೋಗಿ ಅವರ ಮನೆಯವರನ್ನೆಲ್ಲಾ ಆತ್ಮೀಯವಾಗಿ ಪರಿಚಯ ಮಾಡಿಸತೊಡಗಿದರು. ಅಷ್ಟರಲ್ಲಿ ಒಬ್ಬರು ಮನೆ ಒಳಗಿಂದ ನಮ್ಮನ್ನ ಸ್ವಾಗತಿಸಲು ನಗುನಗುತ್ತಾ ಬಂದರು. ಅವರು ಯುವಕರಾಗಿದ್ದರೂ ತಲೆ ಕೂದಲೆಲ್ಲಾ ಅಕಾಲಿಕವಾಗಿ ಉದುರಿ ಬಿದ್ದ ಕಾರಣ ತಕ್ಷಣಕ್ಕೆ ಕೊಂಚ ವಯಸ್ಸಾದವರಂತೆ ಕಾಣುತ್ತಿದ್ದರು. ಅವರು ನಮ್ಮ ಸಹೋದ್ಯೋಗಿಯ ಗಂಡ.

ಈ ಹಿಂದೆ ಅವರನ್ನು ನೋಡಿ, ಮಾತಾಡಿಸಿ ನಾವೆಲ್ಲಾ ಪರಿಚಯ ಮಾಡಿಕೊಂಡಿದ್ದೆವು. ಆದರೆ ಅವರು ಯಾರೆಂಬುದು ಪಾಪ ನಮ್ಮ ಪ್ರಿನ್ಸಿಪಾಲರಿಗೆ ಗೊತ್ತಿರಲಿಲ್ಲ. ನಮ್ಮ ಮಹಿಳಾ ಸಹೋದ್ಯೋಗಿ ತಮ್ಮ ಪತಿಯನ್ನು ನಮ್ಮ ಪ್ರಿನ್ಸಿಪಾಲರಿಗೆ ಪರಿಚಯಿಸಲು ಇನ್ನೇನು ನಗುತ್ತಾ ಬಾಯಿ ತೆಗೆಯುತ್ತಿದ್ದರು. ಅಷ್ಟರಲ್ಲೇ ಫಟ್ಟಂತ ಶುರು ಮಾಡಿಕೊಂಡ ನಮ್ಮ ಪರಮಪೂಜ್ಯ ಪ್ರಿನ್ಸಿಪಾಲರು ಓಹೋಹೋ ಗೊತ್ತಾಯ್ತು ಬಿಡಿ ಮೇಡಂ.

ಇವರು ನಿಮ್ಮ ತಂದೆ ತಾನೆ? ನೋಡಿ ಎಷ್ಟು ಕರೆಕ್ಟಾಗಿ ಗೆಸ್ ಮಾಡಿದೆ. ಅಯ್ಯೋ ನೋಡಿದ್ರೆ ಗೊತ್ತಾಗುತ್ತಲ್ವೇ? ಒಂದೇ ಫೇಸ್‌ಕಟ್ಟು. ಅಂದಹಾಗೆ ನಮಸ್ಕಾರ ಯಜಮಾನರೆ. ನಿಮ್ಮ ಮಗಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದ್ದೀರಿ. ನಮ್ಮ ಕಾಲೇಜಿನಲ್ಲಿ ತುಂಬಾ ಒಳ್ಳೇ ಮೇಡಂ ಅಂತ ನಿಮ್ಮ ಮಗಳು ಹೆಸರು ಮಾಡಿದ್ದಾರೆ.  ಮಕ್ಕಳು ಹೆಸರು ಮರ್ಯಾದೆ ಗಳಿಸಿದರೆ ಹೆತ್ತವರಿಗೆ ಎಷ್ಟು ಹೆಮ್ಮೆ ನೋಡಿ. ಅಂದ ಹಾಗೆ ಈ ನಿಮ್ಮ ಮಗಳೂ ಸೇರಿ ಒಟ್ಟು ನಿಮ್ಮ ಮಕ್ಕಳೆಷ್ಟು? ಎಂದು ಸೀದಾ ಮಕ್ಕಳ ಲೆಕ್ಕವನ್ನೇ ಕೇಳಿಬಿಟ್ಟರು.

ನಾವು ಕೈ ಹಿಡಿದು ನಿಲ್ಲಿಸಲು ಪ್ರಯತ್ನಿಸಿದ್ದು, ಕಣ್ಣು ಮಿಟುಕಿಸಿದ್ದು, ಹಣೆ ಚಚ್ಚಿಕೊಂಡಿದ್ದು, ಸನ್ನೆ ಮಾಡಿದ್ದು, ಇದ್ಯಾವುದನ್ನೂ ನಮ್ಮ ಪ್ರಿನ್ಸಿಪಾಲರು ಅಂಥ ಹೊತ್ತಿನಲ್ಲಿ ಗಮನಿಸುವುದೇ ಇಲ್ಲ. ಸಾರ್.. ಸಾರ್.. ಎಂಬ ಎಚ್ಚರಿಕೆಯ ಸಂದೇಶಗಳನ್ನೂ ಕೇಳಿಸಿಕೊಳ್ಳುವುದಿಲ್ಲ. ಯಾವುದಕ್ಕೂ ಹೊರಟ ಅವರ ರೈಲು ತಾನಾಗಿಯೇ ನಿಲ್ಲಬೇಕು. ಅಷ್ಟು ಮಾತಾಡಿದ ಮೇಲೆಯೇ ನಮ್ಮ ಕಡೆಗೆ ತಿರುಗಿದರು. ನಾನು ಕಿವಿ ಹತ್ತಿರ ಹೋಗಿ ಅವರು ಅಪ್ಪ ಅಲ್ಲ ಗಂಡ ಸಾರ್ ಎಂದು ಹೇಳಿದೆ.

ಎಚ್ಚರಗೊಂಡು ಸಾವರಿಸಿಕೊಂಡ ಪ್ರಿನ್ಸಿಪಾಲರು ಒಮ್ಮೆಗೇ ಪ್ರಾಯಶ್ಚಿತ್ತಕ್ಕೆ ಇಳಿದು ಸಾರಿ ಎಂದರು. ಅಲ್ಲಿದ್ದ ಎಲ್ಲರ ಮುಖಗಳು ಗಾಬರಿಬಿದ್ದು ಕಂಗಾಲಾಗಿದ್ದವು. ಅವರ ಗಂಡ ಗರಬಡಿದವರಂತೆ ನಿಂತು ಸುಧಾರಿಸಿಕೊಳ್ಳುತ್ತಿದ್ದರು. ನಮ್ಮ ಸಹೋದ್ಯೋಗಿ ಯಾಕಾದರೂ ಊಟಕ್ಕೆ ಕರೆದೆನೋ ಎಂಬ ಫಜೀತಿಯಲ್ಲಿದ್ದರು. ಮತ್ತೆ ಚಾಲುಗೊಂಡ ನಮ್ಮ ಪ್ರಿನ್ಸಿಪಾಲರು ಅವರ ಗಂಡನಿಗೆ ನಾನು ಯಾಕೆ ಹಾಗೆ ಹೇಳಿದೆ ಎಂದರೆ ಎಂದು ಮತ್ತೆ ಪೀಠಿಕೆ ಶುರು ಮಾಡಿಕೊಂಡರು.

ನಾನು ಓಹೋ ಈಗ ಮತ್ತೆ ಕೆಲಸ ಕೆಡುತ್ತೆ ಎಂಬ ಅರಿವಾಗಿ ತಕ್ಷಣ ಸಾರ್ ಊಟ ರೆಡಿ ಇದೆ ಬನ್ನಿ ಎಂದು ಎಳೆದುಕೊಂಡು ಹೋದೆ. ಆದರೂ ಅವರು ಅವರಿಗೆ ಸಮಾಧಾನ ಹೇಳಬೇಕಿತ್ತು ಕಣ್ರಿ. ನಾನು ಯಾಕೆ ಹಾಗಂದ್ರೆ ಅಂದ್ರೆ... ಎಂದು ಗೊಣಗುತ್ತಲೇ ಇದ್ದರು.
ಸಂಬಂಧಗಳನ್ನು ಕೇಳಿ ಸ್ಪಷ್ಟಪಡಿಸಿಕೊಂಡು ನಂತರ ಮಾತಾಡುವ ಜನರೇ ಈಗ ಕಡಿಮೆಯಾಗುತ್ತಿದ್ದಾರೆ. ಬೇರೆಯವರು ತಮ್ಮನ್ನು ತಾವು ಪೂರ್ಣ ಪರಿಚಯಿಸಿಕೊಳ್ಳುವಷ್ಟು ಅವಕಾಶವನ್ನು ಈ ಅವಸರದ ಜನ ನೀಡುವುದಿಲ್ಲ.

ಬದಲಾಗಿ ಇವರೇ ಮೊದಲಾಗಿ ಇವರು ನಿಮ್ಮ ತಂಗೀನಾ? ಇವರು ನಿಮ್ಮ ಗಂಡನಾ? ಇವರು ಅಪ್ಪನಾ? ಇವರು ಹೆಂಡತೀನಾ? ಇವರು ತಮ್ಮನಾ? ಎಂದು ಮನುಷ್ಯ ಸಂಬಂಧಗಳನ್ನು ತಾವೇ ನಿರ್ಧರಿಸಿ ಘೋಷಿಸಿ ಬಿಡುತ್ತಾರೆ. ಫಜೀತಿ ಪ್ರಾಣ ಸಂಕಟ ಬೇರೆಯವರಿಗೇ ಹೊರತು ಇವರಿಗೆ ಏನೇನೂ ಆಗಿರುವುದಿಲ್ಲ. ಈ ಫಿಲ್ಟರ್‌ಲೆಸ್ ಜನ ಪೂರ್ವ ನಿರ್ಧರಿಸಿ ಹೇಳುವ ಸಂಬಂಧಗಳು ಎಂಥವರಲ್ಲೂ ಪೀಕಲಾಟ ಹುಟ್ಟಿಸಿಬಿಡುತ್ತವೆ.

ಮತ್ತೊಂದು ಸಲವೂ ಹೀಗೆ ಆಯಿತು. ಎ.ಟಿ.ಎಂ.ನಲ್ಲಿ ಹಣ ತೆಗೆಯಲು ನಾನು ಮತ್ತು ನಮ್ಮ ಪ್ರಿನ್ಸಿಪಾಲರು ಹೋಗಿದ್ದೆವು. ಅದು ಸಂಜೆಯ ಸಮಯ. ಅಲ್ಲಿ ನಮ್ಮ ಪ್ರಿನ್ಸಿಪಾಲರಿಗೆ ಹಾಯ್ ಹಲೋ ಪರಿಚಯವಿದ್ದ ಒಬ್ಬರು ಬೈಕಿನಲ್ಲಿ ತಮ್ಮ ಹೆಂಡತಿಯನ್ನು ಕೂರಿಸಿಕೊಂಡು ಬಂದರು. ಆ ಹೆಂಡತಿ ಜೀನ್ಸ್ ಪ್ಯಾಂಟ್ ತೊಟ್ಟು ಟೀ ಷರ್ಟ್ ಹಾಕಿದ್ದರು. ಅವರನ್ನು ನೋಡಿ ಮಾತಾಡಿಸಿದ ನಮ್ಮ ಪರಮ ಪೂಜ್ಯ ಪ್ರಿನ್ಸಿಪಾಲರು ಅವರ ಹೆಂಡತಿಯ ಕಡೆ ನೋಡಿ, ಇವರು ನಿಮ್ಮ ಮಗಳಾ? ಏನು ಓದ್ತಾ ಇದ್ದಾರೆ ಎಂದು ಪುಸಕ್ಕನೆ ಕೇಳಿ ಬಿಟ್ಟರು. ಆ ಮಾತಿಗೆ ಅವರ ಹೆಂಡತಿ ನಾಚಿಕೊಂಡು ತಮ್ಮ ಸಂತೋಷವನ್ನು ನೂರ್ಮಡಿ ಹೆಚ್ಚಿಸಿಕೊಂಡು ಗಂಡನ ಕಡೆ ಓರೆಗಣ್ಣಿನಲ್ಲಿ ನೋಡಿದರು.

ಇದರಿಂದ ಕೆರಳಿದ ಆತ ತನ್ನ ಹೆಂಡತಿ ಕಡೆಗೆ ತಿರುಗಿ ನಾನು ನಿನಗೆ ಬೊಂಬಡ ಬಡ್ಕೊಂಡೆ. ನೀನು ಕೇಳಲ್ಲ ಅಲ್ವಾ? ಈ ಜೀನ್ಸು ಟೀ ಶರ್ಟ್ ಬ್ಯಾಡ ಬ್ಯಾಂಡದ್ರೂ ಹಾಕಿ ನನ್ನ ಮರ್ಯಾದಿ ತೆಗೀತೀಯಾ? ನಿನಗೆ ಶೋಕಿ ಅಲ್ವಾ. ಮನೆಗೆ ನಡೀ ನಿನಗೆ ಮಾಡ್ತೀನಿ ಎಂದು ಕಟಕಟ ಹಲ್ಲು ಕಡಿಯತೊಡಗಿದರು. ಆಗಲೂ ಅಲ್ಲಿನ ಪರಿಸ್ಥಿತಿಯನ್ನು ಕಿಂಚಿತ್ತೂ ಅರ್ಥ ಮಾಡಿಕೊಳ್ಳದ ನಮ್ಮ ಪ್ರಿನ್ಸಿಪಾಲರು ಮುಂದುವರೆದು, ಇರಲಿ ಬಿಡಿ ಸಾರ್. ಮಕ್ಕಳು ಹಾಕಿಕೊಳ್ಳಲಿ.

ಯಾಕೆ ಸುಮ್ಮನೆ ಮಗಳಿಗೆ ಜೋರು ಮಾಡುತ್ತೀರ? ಇನ್ನೇನು ವಯಸ್ಸಾದ ನಾವು ನೀವು ಇದೆಲ್ಲಾ ಹಾಕ್ಕೊಳಕ್ಕೆ ಆಗುತ್ತಾ ಎಂದು ಸಮಾಧಾನ ಹೇಳತೊಡಗಿದರು. ಇಡೀ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾದ ಆ ಮನುಷ್ಯ ಹೇಳದೆ ಕೇಳದೆ ಅವರ ಹೆಂಡತಿಯನ್ನು ದರದರ ಎಳೆದು ಬೈಕಿನಲ್ಲಿ ಕೂರಿಸಿಕೊಂಡು ಕಣ್ಣಿಗೆ ಕಾಣದಂತೆ ಹೊರಟು ಹೋದರು. ನಮ್ಮ ಪ್ರಿನ್ಸಿಪಾಲರು ಮಾತ್ರ  ಅವನೇನ್ರಿ ಮಗಳು ಒಂದು ಒಳ್ಳೆ ಬಟ್ಟೆ ಹಾಕಿದ್ರೂ ಅದನ್ನೂ ಸಹಿಸೋದಿಲ್ವಲ್ರಿ? ಥೂ....ಅವನ ಜನ್ಮಕ್ಕೆ ಎಂದು ಬೈಯುತ್ತಾ ನಿಂತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT