ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಪೇಯಿಗೆ ಅರ್ಥವಾಗದ್ದು, ನೈಪಾಲ್‌ಗೆ ಅರ್ಥವಾಗಿದ್ದು...

Last Updated 20 ಆಗಸ್ಟ್ 2018, 3:59 IST
ಅಕ್ಷರ ಗಾತ್ರ

ಇಬ್ಬರು ಜನಪ್ರಿಯ ವ್ಯಕ್ತಿಗಳ ಜೀವನ ಕೊನೆಗೊಂಡಿದೆ. ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಬರೆಯಲಾಗಿದೆ. ಸತ್ತವರ ಬಗ್ಗೆ ಒಳ್ಳೆಯ ಮಾತುಗಳನ್ನು ಮಾತ್ರ ಹೇಳುವುದು ಭಾರತದಲ್ಲಿ ಹಾಗೂ ಸಾಮಾನ್ಯವಾಗಿ ಇಡೀ ಜಗತ್ತಿನಲ್ಲಿ ಒಂದು ಸಂಪ್ರದಾಯ. ಯಾವ ವ್ಯಕ್ತಿಯೂ ಪರಿಪೂರ್ಣ ಅಲ್ಲ, ಈ ವಿಚಾರದಲ್ಲಿ ಪ್ರಾಮಾಣಿಕರಾಗಿರುವ ಹೊಣೆ ನಮ್ಮ ಮೇಲಿದೆ.

ಇದನ್ನು ಗಮನದಲ್ಲಿ ಇರಿಸಿಕೊಂಡು, ನಮ್ಮನ್ನು ಅಗಲಿದ ಇಬ್ಬರು ವ್ಯಕ್ತಿಗಳಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಪರಿಶೀಲಿಸೋಣ. ಇವರಿಬ್ಬರಲ್ಲಿ ಹೆಚ್ಚು ಆಸಕ್ತಿ ಕೆರಳಿಸಿದವರು ಬರಹಗಾರ ವಿ.ಎಸ್. ನೈಪಾಲ್. ಅವರ ಮೊದಲ ಹೆಸರು ವಿದಿಯಾಧರ್. ಅವರ ಮೂಲ ಇರುವುದು ಟ್ರಿನಿಡಾಡ್‌ನಲ್ಲಿ. ಕ್ರಿಕೆಟ್ ಆಟಗಾರರಾದ ಸುನೀಲ್ ನಾರಾಯಣ್, ದಿನೇಶ್ ರಾಮದಿನ್ ಅವರಂತಹವರ ಕಾರಣದಿಂದಾಗಿ ಈ ಸ್ಥಳದ ಬಗ್ಗೆ ಭಾರತೀಯರಿಗೆ ಗೊತ್ತಿದೆ.

ಇಲ್ಲಿನವರ ಬಿಹಾರಿ ಪೂರ್ವಿಕರು ಅಂದಾಜು 150 ವರ್ಷಗಳ ಹಿಂದೆ ಇಲ್ಲಿಗೆ ಗುತ್ತಿಗೆ ಜೀತದಾಳುಗಳಾಗಿ, ಸೀಮಿತ ಅವಧಿಗೆ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಬಂದವರು. ನಾವು ಈ ಪ್ರದೇಶವನ್ನು ವೆಸ್ಟ್ ಇಂಡೀಸ್ ಎಂದು ಕರೆಯುತ್ತೇವೆ. ಆದರೆ, ಸೀಮಿತ ಅವಧಿ ಪೂರ್ಣಗೊಂಡ ನಂತರ ಅವರಿಗೆ ತಮ್ಮ ಊರುಗಳಿಗೆ ಮರಳಲು ಸಾಕಾಗುವಷ್ಟು ಹಣ ಇರಲಿಲ್ಲ. ಹಾಗಾಗಿ ಅಲ್ಲಿಯೇ ಉಳಿದುಕೊಂಡರು. ಅಲ್ಲಿ ‘ಇಂಡೊ-ಕೆರಿಬಿಯನ್’ ಸಂಸ್ಕೃತಿಯನ್ನು
ಬೆಳೆಸಿದರು.

ನೈಪಾಲ್ ಅವರಿಗೆ ಭಾರತದ ಯಾವ ಭಾಷೆಯೂ ಗೊತ್ತಿರಲಿಲ್ಲ. ಆದರೆ ಅವರಿಗೆ ಸ್ಪ್ಯಾನಿಶ್ ಮತ್ತು ಇಂಗ್ಲಿಷ್ ತಿಳಿದಿತ್ತು. ತಮ್ಮ ಮೊದಲ ಹೆಸರು ‘ವಿದಿಯಾ’ ಎಂಬುದರ ಮೂಲ ಹಾಗೂ ಲ್ಯಾಟಿನ್ ಮತ್ತು ಇಂಗ್ಲಿಷ್‌ನ ‘ವಿಡಿಯೊ’ (ನಾನು ನೋಡುತ್ತಿದ್ದೇನೆ) ಪದದ ಮೂಲ ಒಂದೇ ಎಂಬುದು ಅವರಿಗೆ ಗೊತ್ತಿತ್ತು.

ಅವರು ವಿದ್ಯಾರ್ಥಿವೇತನ ಪಡೆದು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ನಂತರ ಲಂಡನ್‌ನಲ್ಲಿ ಬಿ.ಬಿ.ಸಿ. ಸಂಸ್ಥೆಯಲ್ಲಿ ಕೆಲಸ ಮಾಡಿದರು. 20ರ ಹರೆಯದಲ್ಲಿದ್ದಾಗ ಸರಣಿ ಕಾದಂಬರಿಗಳು ಮತ್ತು ಪ್ರವಾಸ ಕಥನಗಳನ್ನು ಬರೆಯಲು ಆರಂಭಿಸಿದರು. ಅವುಗಳಲ್ಲಿ ನೈಪಾಲ್ ಅವರು ವಿವಿಧ ಸಂಸ್ಕೃತಿಗಳು, ಅವುಗಳ ನಡುವಣ ವ್ಯತ್ಯಾಸಗಳು ಹಾಗೂ ಅವುಗಳಲ್ಲಿನ ದೋಷಗಳನ್ನು ಪರಿಶೀಲಿಸಿದರು. ತಮ್ಮ ಎದುರು ಇರುವುದನ್ನು ಸೂಕ್ಷ್ಮವಾಗಿ ಅವಲೋಕಿಸುವ ಶಕ್ತಿ ಅವರಲ್ಲಿ ಇತ್ತು. ಕಣ್ಣೋಟದ ಮೂಲಕವೇ ವಿಷಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಇತ್ತು. ಉದಾಹರಣೆಗೆ, ಇರಾನ್‌ಗೆ ಹೋದಾಗ ಶಿಯಾ ಧರ್ಮಗುರುಗಳು ಧರಿಸುವ ಕಪ್ಪು ನಿಲುವಂಗಿ ಮತ್ತು ತಲೆಗೆ ಸುತ್ತಿಕೊಳ್ಳುವ ವಸ್ತ್ರವನ್ನು ಗಮನಿಸಿ ನೈಪಾಲ್ ಅವರು ಇದು ಆಕ್ಸ್‌ಫರ್ಡ್‌ ಮತ್ತು ಕೇಂಬ್ರಿಜ್‌ ವಿಶ್ವವಿದ್ಯಾಲಯಗಳಲ್ಲಿ ಘಟಿಕೋತ್ಸವದ ದಿನ ಧರಿಸುವ ಗೌನ್‌ನ ಮೂಲ ಎಂದು ಗುರುತಿಸಿದರು. ಇಂತಹ ಗೌನ್‌ ಧರಿಸುವುದು ಈಗ ವಿಶ್ವದ ಎಲ್ಲೆಡೆ ಇದೆ.

ಹೀಗೆ ಸೂಕ್ಷ್ಮವಾಗಿ ಗಮನಿಸುವ ಗುಣ ಭಾರತೀಯರಲ್ಲಿ ಇಲ್ಲ ಎಂದು ನೈಪಾಲ್ ಬರೆದರು. ವಿದೇಶಗಳಿಗೆ ಪ್ರಯಾಣಿಸುವ ಭಾರತೀಯರು ತಮ್ಮ ಸಂಸ್ಕೃತಿ ಹಾಗೂ ವಿದೇಶದ, ಅದರಲ್ಲೂ ಮುಖ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿಯ ನಡುವಣ ವ್ಯತ್ಯಾಸವನ್ನು ಗುರುತಿಸಲು ಆಗದ ಹಳ್ಳಿಗರಂತೆ, ವಿಶ್ವವನ್ನು ಕುರುಡಾಗಿ ಗಮನಿಸಿದರು ಎಂದು ಅವರು ಬರೆದರು.

ಭಾರತೀಯರಲ್ಲಿ ದೋಷ ಇದೆ ಎನ್ನುವ ಸಿದ್ಧಾಂತವನ್ನು ಅವರು ತಮ್ಮ ಜೀವನದ ಉತ್ತರಾರ್ಧದಲ್ಲಿ ರೂಪಿಸಿದರು. ಅವರು 1960ರ ದಶಕದಲ್ಲಿ ಭಾರತಕ್ಕೆ ಭೇಟಿ ನೀಡಿ, ಈ ದೇಶ ಏಕೆ ಇಷ್ಟು ಗಲೀಜಾಗಿ, ಅಸಾಮರ್ಥ್ಯದಿಂದ ಕೂಡಿದೆ ಎಂದು ಬಿಟ್ಟ ಕಣ್ಣು ಬಿಟ್ಟಂತೆ ನೋಡಿದರು. ಭಾರತದ ಕುರಿತು ಅವರು ಬರೆದ ಮೊದಲ ಪುಸ್ತಕ ‘ಆ್ಯನ್ ಏರಿಯಾ ಆಫ್‌ ಡಾರ್ಕ್‌ನೆಸ್‌’ ಇರುವುದು ಇಲ್ಲಿನ ಬಹುತೇಕ ಸಂಗತಿಗಳು ಎಷ್ಟು ಕೆಟ್ಟದ್ದಾಗಿವೆ ಎಂಬುದರ ಬಗ್ಗೆ. ಭಾರತ ಎಂದರೆ ಒಂದು ರೀತಿಯ ಅದ್ಭುತ ನಾಡು ಎಂಬ ಕಥೆಗಳನ್ನು ಅವರ ಪಾಲಕರು ಮತ್ತು ಸಂಬಂಧಿಕರು ಹೇಳಿದ್ದರಂತೆ. ಹಾಗಾಗಿ, ಭಾರತಕ್ಕೆ ಬಂದು ನೋಡಿದಾಗ ಅವರಿಗೆ ಆಘಾತ ಉಂಟಾಯಿತಂತೆ. ‘ಆ್ಯನ್ ಏರಿಯಾ ಆಫ್‌ ಡಾರ್ಕ್‌ನೆಸ್‌’ ಪುಸ್ತಕ ಬರೆಯುವುದು ತಮ್ಮ ಪಾಲಿಗೆ ಸುಲಭದ ಕೆಲಸ ಆಗಿರಲಿಲ್ಲ ಎಂದು ನೈಪಾಲ್ ಹೇಳಿಕೊಂಡಿದ್ದಾರೆ.

ಭಾರತದಲ್ಲಿ ಅವರ ಪುಸ್ತಕ ಓದಿದ ಬಹುತೇಕರು (ಹೆಚ್ಚು ಜನ ಅದನ್ನು ಓದಲಿಲ್ಲ) ಅಥವಾ ಅವರು ಹೇಳಿದ್ದೇನು ಎಂಬುದನ್ನು ಮಾಧ್ಯಮ ವರದಿಗಳ ಮೂಲಕ ತಿಳಿದುಕೊಂಡವರು ನೈಪಾಲರನ್ನು ಇಷ್ಟಪಡಲಿಲ್ಲ. ಈ ಹೆಸರಿನ ಬರಹಗಾರ ಇದ್ದಾರೆ ಎಂಬುದನ್ನು ಜನ ಅರಿತುಕೊಂಡಿದ್ದು ಬಹುತೇಕ ಮಾಧ್ಯಮ ವರದಿಗಳ ಮೂಲಕ. ಭಾರತೀಯರು ಓದುವುದಿಲ್ಲ ಎಂಬುದು ನೈಪಾಲ್ ಅವರು ನಮ್ಮ ಮೇಲೆ ಮಾಡಿದ ಇನ್ನೊಂದು ಆರೋಪ. ಗಾಂಧೀಜಿ ಮತ್ತು ನೆಹರೂ ಬಗ್ಗೆ ಭಾರತೀಯರು ತಮ್ಮದೇ ಆದ ಗಟ್ಟಿ ಅಭಿಪ್ರಾಯಗಳನ್ನು ಹೊಂದಿದ್ದಾರಾದರೂ, ಅವರಿಬ್ಬರ ಜೀವನಚರಿತ್ರೆಯನ್ನು ಬಹುತೇಕರು ಓದಿಲ್ಲ ಎಂದು ನೈಪಾಲರು ಹೇಳಿದರು. ಮುಂಬೈನ ಕವಿ ನಿಸ್ಸಿಮ್ ಎಜೆಕೀಲ್ ಅವರು ‘ಆ್ಯನ್ ಏರಿಯಾ ಆಫ್ ಡಾರ್ಕ್‌ನೆಸ್‌’ ಪುಸ್ತಕ ಓದಿ, ‘ನೈಪಾಲರ ಭಾರತ ಮತ್ತು ನನ್ನ ಭಾರತ’ ಎನ್ನುವ ಪ್ರತಿಕ್ರಿಯೆ ಬರೆದರು.

ನಂತರದ ದಿನಗಳಲ್ಲಿ ನೈಪಾಲ್ ಅವರು ತಮ್ಮ ಸಿದ್ಧಾಂತವನ್ನು ಇನ್ನಷ್ಟು ಬೆಳೆಸಿದರು. ಹಿಂದೂಗಳು ಹೊರ ಜಗತ್ತನ್ನು ನೋಡುವವರಲ್ಲ, ಅವರು ಒಂದು ರೀತಿಯಲ್ಲಿ ಕುರುಡಾಗಿದ್ದಾರೆ, ಶತಮಾನಗಳ ಅವಧಿಯ ಇಸ್ಲಾಮಿಕ್ ಆಡಳಿತದ ಪರಿಣಾಮವಾಗಿ ಹಿಂದೂಗಳು ಬೌದ್ಧಿಕವಾಗಿ ವಸಾಹತುಶಾಹಿ ಪ್ರಭಾವಕ್ಕೆ ತುತ್ತಾಗಿದ್ದಾರೆ, ಅವರಿಗೆ ಯಾವುದನ್ನೂ ಗಮನಿಸಲು ಆಗುತ್ತಿಲ್ಲ ಎಂದು ನೈಪಾಲ್ ತೀರ್ಮಾನಿಸಿದರು. ಬಾಬ್ರಿ ಮಸೀದಿ ವಿರೋಧಿ ಚಳವಳಿಯು ಒಳ್ಳೆಯದು, ಈ ಮಸೀದಿಯ ಧ್ವಂಸದಿಂದ ಒಳ್ಳೆಯದಾಗುತ್ತದೆ ಎಂದು ಅವರಿಗೆ ಅನಿಸಿತು. ಹಿಂಸಾಚಾರವು ಯಾವುದೋ ಒಂದು ರೀತಿಯಲ್ಲಿ ಹಿಂದೂ ಚೇತನವನ್ನು ಬಡಿದೆಬ್ಬಿಸುತ್ತದೆ, ಅದನ್ನು ಇನ್ನಷ್ಟು ಜಾಗೃತವಾಗಿಸುತ್ತದೆ ಎಂದು ಅವರು ಹೇಳಿದರು. ಅವರು ಇದನ್ನು ಹೇಳಿದ್ದು ಕೂಡ ಭಾರತದಲ್ಲಿ ಅನೇಕರಿಗೆ ಇಷ್ಟವಾಗಲಿಲ್ಲ. ಈ ವಾದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ನೀಡಲು ಅವರಿಗೆ ಸಾಧ್ಯವಾಗಲಿಲ್ಲ ಎಂಬುದು ನಿಜ. ಅದು ಅವರ ಅನಿಸಿಕೆ ಮಾತ್ರ ಆಗಿತ್ತು.

ಈಗ ನಾವು ನಮ್ಮನ್ನು ಅಗಲಿದ ಇನ್ನೊಬ್ಬ ಜನಪ್ರಿಯ ವ್ಯಕ್ತಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರತ್ತ ನೋಟ ಹರಿಸೋಣ. ಅವರ ಪಕ್ಷದಲ್ಲಿನ ಇತರರಿಗಿಂತ ಹಲವು ಬಗೆಗಳಲ್ಲಿ ಭಿನ್ನವಾಗಿದ್ದ ಸುಸಂಸ್ಕೃತ ಎಂದು ವಾಜಪೇಯಿ ಅವರನ್ನು ಇಂದು ಕಾಣಲಾಗುತ್ತಿದೆ. ಇದು ಅವರಲ್ಲಿನ ಅಸಾಮಾನ್ಯ ಗುಣ. ಪಕ್ಷಭೇದ ಮೀರಿ ವಾಜಪೇಯಿ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದರು. ಏಕೆಂದರೆ, ಅಲ್ಪಸಂಖ್ಯಾತರನ್ನು ಗುರಿಮಾಡಿಕೊಂಡಿರುವ ರಾಜಕೀಯ ಮತ್ತು ಸಂಸ್ಕೃತಿಯ ಹಿನ್ನೆಲೆ ಹೊಂದಿದ್ದರೂ ವಾಜಪೇಯಿ ಅವರು ಉದಾರವಾದಿಯಾಗಿ ಕಾಣುತ್ತಿದ್ದರು. ಅವರ ನೇತೃತ್ವದಲ್ಲಿದ್ದ ಬಿಜೆಪಿಯ ಮೂರು ಮುಖ್ಯ ರಾಜಕೀಯ ಉದ್ದೇಶಗಳು ಬಾಬ್ರಿ ಮಸೀದಿ ಮೇಲೆ ನಿಯಂತ್ರಣ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ಸಾಂವಿಧಾನಿಕ ಸ್ವಾಯತ್ತೆಯನ್ನು ತೆಗೆಯುವುದು ಹಾಗೂ ಭಾರತದ ಮುಸ್ಲಿಮರ ವೈಯಕ್ತಿಕ ಕಾನೂನುಗಳನ್ನು ತೆಗೆಯುವುದು ಆಗಿದ್ದವು. ಈ ಮೂರೂ ವಿಚಾರಗಳನ್ನು ವಾಜಪೇಯಿ ಗಟ್ಟಿಯಾಗಿಯೇ ಪ್ರತಿಪಾದಿಸಿದರು. ಎಲ್.ಕೆ. ಅಡ್ವಾಣಿ ಅವರ ಜೊತೆಯಾಗಿ ನಮ್ಮ ರಾಜಕೀಯದಲ್ಲಿ ಶಕ್ತಿಯುತವಾದ, ಧರ್ಮ ಆಧಾರಿತ ಭಾವನೆಗಳನ್ನು ಸೇರಿಸುವಲ್ಲಿ ಯಶಸ್ವಿಯಾದರು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೊದಲ ನಾಲ್ಕು ದಶಕಗಳ ಅವಧಿಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಇಂತಹ ರಾಜಕೀಯ ಇರಲಿಲ್ಲ. ಇದರಿಂದಾಗಿ ಬಿಜೆಪಿಗೆ ದೊಡ್ಡ ಲಾಭವೇ ಆಯಿತು. ನಮ್ಮ ಪ್ರಮುಖ ರಾಜಕೀಯ ಪಕ್ಷವಾಗಿ ಬಿಜೆಪಿ ಬೆಳೆದಿರುವುದಕ್ಕೆ ವಾಜಪೇಯಿ ಮತ್ತು ಅಡ್ವಾಣಿ ಮಾಡಿದ ಈ ಕೆಲಸಗಳು ಕಾರಣ.

ವಾಜಪೇಯಿ ಅವರಲ್ಲಿ ಸೈದ್ಧಾಂತಿಕ ಬದ್ಧತೆ ಇತ್ತು. ಅಂದರೆ, ಅವರು ಹಿಂದುತ್ವದಲ್ಲಿ ಪ್ರಾಮಾಣಿಕವಾಗಿ ನಂಬಿಕೆ ಇರಿಸಿದ್ದರು. ಆದರೆ ತೀವ್ರವಾದವನ್ನು ಅಥವಾ ಹಿಂಸೆಯನ್ನು ಅವರು ಇಷ್ಟಪಡಲಿಲ್ಲ. ಬೀದಿಯಲ್ಲೇ ಕ್ರಮ ಜರುಗಿಸುವ ಉತ್ಸಾಹ ಹೊಂದಿರುವ (ನೈಪಾಲ್ ಅವರಿಗೆ ಬೇಕಿದ್ದಿದ್ದು ಇಂಥದ್ದೇ) ತಮ್ಮ ಪಕ್ಷದಲ್ಲಿ ಅವರು ಸೂಕ್ತವಲ್ಲದ ವ್ಯಕ್ತಿಯಾದರು. ವಾಜಪೇಯಿ ಅವರಲ್ಲಿನ ಈ ಎರಡು ಗುಣಗಳ ಕಾರಣದಿಂದಾಗಿ ನಾವು ಎನ್‌ಡಿಎ ಸರ್ಕಾರ ಮೊದಲ ಅವಧಿಯಲ್ಲಿ ಗೋರಕ್ಷಕರ ಹಿಂಸೆಯನ್ನು ಕಾಣಲಿಲ್ಲ. ಗೋವುಗಳ ಸಂರಕ್ಷಣೆ ಆಗಬೇಕು ಎಂದು ಅವರು ಬಯಸಿದ್ದರು. ಆದರೆ ಈ ಬಯಕೆಯು ಹುಟ್ಟಿಸುವ ಬೀದಿ ಹಿಂಸಾಚಾರ ಅವರಿಗೆ ಒಪ್ಪಿತವಾಗುತ್ತಿರಲಿಲ್ಲ. ಇದರಿಂದಾಗಿ ವಾಜಪೇಯಿ ಅವರು ಇಷ್ಟವಾದರು. ಜಾರ್ಜ್‌ ಫರ್ನಾಂಡಿಸ್‌, ಮಮತಾ ಬ್ಯಾನರ್ಜಿ ಅವರಂತಹ ವ್ಯಕ್ತಿಗಳು ವಾಜಪೇಯಿ ನೇತೃತ್ವದ ಸರ್ಕಾರವನ್ನು ಸೇರುವಂತೆ ಆಯಿತು.

ಆದರೆ, ಇಂತಹ ನಿಲುವಿನ ಸಮಸ್ಯೆ 2002ರಲ್ಲಿ ಬಹಿರಂಗವಾಯಿತು. ವಾಜಪೇಯಿ ಅವರು ಗುಜರಾತಿನ ಮುಖ್ಯಮಂತ್ರಿಯನ್ನು ಆ ಸ್ಥಾನದಿಂದ ಇಳಿಸಲು ಯತ್ನಿಸಿದರೂ ಕಾರ್ಯಕರ್ತರು ಅದಕ್ಕೆ ಅವಕಾಶ ಕೊಡಲಿಲ್ಲ. ಭಾವುಕ ಸಿದ್ಧಾಂತಕ್ಕೆ ಬದ್ಧವಾದ ಯಾವುದೇ ಸಂಸ್ಥೆಯಲ್ಲಿ ಉದಾರವಾದಿ ನಾಯಕ ತೀವ್ರವಾದಿಗಿಂತ ಯಾವತ್ತೂ ದುರ್ಬಲನಾಗಿರುತ್ತಾನೆ. ಏಕೆಂದರೆ ಅದರ ಬೆಂಬಲಿಗರಿಗೆ ಬೇಕಿರುವುದೇ ಅದಾಗಿರುತ್ತದೆ. ವಾಜಪೇಯಿ ಮತ್ತು ಅಡ್ವಾಣಿ ಶುರು ಮಾಡಿದಂತಹ ಚಳವಳಿಯು ಸಹಜವಾಗಿಯೇ ಈ ರೀತಿ ಪರ್ಯವಸಾನ ಕಾಣುತ್ತದೆ. ವಾಜಪೇಯಿ ಬಹುಶಃ ಇದನ್ನು ಅರ್ಥ ಮಾಡಿಕೊಳ್ಳದಿದ್ದರೂ ನೈಪಾಲ್‌ ಅವರಿಗೆ ಖಂಡಿತ ಅರ್ಥವಾಗಿತ್ತು.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT