ಈ ವಿಶೇಷ ಗ್ಯಾಜೆಟ್ ತಯಾರಿಸಿರುವುದು ನಮ್ಮ ಬೆಂಗಳೂರಿನ ಹೈ-ಟೆಕ್ ಸಲ್ಯೂಶನ್ಸ್ ಎಂಬ ಕಂಪೆನಿ. ಈ ಸಾಧನದಲ್ಲಿ ಪ್ರಮುಖ ಮೂರು ಅಂಗಗಳಿವೆ. ಗಣಕದ ಪರದೆಗೆ ಜೋಡಿಸುವ ಪ್ರೇಷಕ-ಗ್ರಾಹಕ(transmitter-receiver),, ಇದನ್ನು ಗಣಕಕ್ಕೆ ಜೋಡಿಸಲು ಯುಎಸ್ಬಿ ಕೇಬಲ್ ಮತ್ತು ಪರದೆಯ ಮೇಲೆ ಬರೆಯಲು/ಬಳಸಲು ವಿಶೇಷ ಪೆನ್. ಪ್ರೇಷಕ/ಗ್ರಾಹಕವನ್ನು ಪರದೆಗೆ ಅಂಟಿಸಲು ಒಂದು ಅಯಸ್ಕಾಂತೀಯ ಪಟ್ಟಿ ಇದೆ. ಇದರ ಪೆನ್ ವಿಶಿಷ್ಟ ಪೆನ್ ಆಗಿದೆ. ಅದರ ತುದಿಯಲ್ಲಿ ಚಿಕ್ಕ ಬ್ರಶ್ ಇದೆ. ಪೆನ್ ಎರಡು ಬಟನ್ ಸೆಲ್ಗಳನ್ನು ಬಳಸುತ್ತದೆ. ಅದು ಪ್ರೇಷಕ/ಗ್ರಾಹಕದ ಜೊತೆ ಅವಕೆಂಪು(infrared) ಮತ್ತು ಶಬ್ದಾತೀತ (ultrasound) ತರಂಗಗಳ ಮೂಲಕ ಸಂಪರ್ಕಗೊಳ್ಳುತ್ತದೆ. ಬಳಕೆದಾರರು ಈ ಪೆನ್ ಬಳಸಿ ಪರದೆ ಮೇಲೆ ಬರೆಯಬಹುದು, ಚಿತ್ರ ಬಿಡಿಸಬಹುದು, ಟೈಲ್ಗಳನ್ನು ಜಾರಿಸಬಹುದು ಅಥವಾ ಆಟ ಆಡಬಹುದು. ಸರಳವಾಗಿ ಹೇಳುವುದಾದರೆ ಸ್ಪರ್ಶಸಂವೇದಿ ಪರದೆಯ ಮೇಲೆ ಬೆರಳು ಇಟ್ಟು ಮಾಡಬಹುದಾದ ಎಲ್ಲ ಕೆಲಸಗಳನ್ನು ಈ ಪೆನ್ ಬಳಸಿ ಪರದೆಯ ಮೇಲೆ ಇಟ್ಟು ಮಾಡಬಹುದು. ಪೆನ್ನಿನಲ್ಲಿ ಒಂದು ಗುಂಡಿ (ಬಟನ್) ಕೂಡ ಇದೆ. ಅದು ಮೌಸ್ನ ಬಲಗುಂಡಿಯ ಕೆಲಸ ಮಾಡುತ್ತದೆ.