ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿನಿಷ್ಠೆ ಮತ್ತು ಹೊಣೆಗಾರಿಕೆಯ ನಡುವೆ...

Last Updated 12 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ನನ್ನ ಆತ್ಮೀಯ ಗೆಳೆಯರಲ್ಲಿ, ಈಗ ನಿವೃತ್ತರಾಗಿರುವ ಹಿರಿಯ ಐಎಎಸ್‍ ಅಧಿಕಾರಿಯೊಬ್ಬರು ಕೂಡ ಸೇರಿದ್ದಾರೆ. ಅಧಿಕಾರಿಗಳು ಮತ್ತು ವಿದ್ವಾಂಸರ ಕುಟುಂಬದಲ್ಲಿ ಜನಿಸಿದ ಅವರು, ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯದಿಂದ ಎರಡು ಪದವಿ ಪಡೆದಿದ್ದಾರೆ. ಶಿಕ್ಷಣ ಮತ್ತು ಆರೋಗ್ಯದಂತಹ ವಿಚಾರಗಳಲ್ಲಿ ಅವರು ಪರಿಣತರು. ನಾಲ್ಕು ಭಾರತೀಯ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಯಾವುದೇ ಲಾಬಿ ಮಾಡದೇ ಅಥವಾ ಯಾವುದೇ ರಾಜಕಾರಣಿಯ ಕೃಪೆಗೆ ಪಾತ್ರನಾಗದೆ ತಮ್ಮ ಈ ಕೌಶಲಗಳನ್ನೇ ನಂಬಿಕೊಂಡು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾದರು.

ಕರ್ತವ್ಯದಲ್ಲಿದ್ದಾಗ ಅವರು ದೀರ್ಘ ಸಮಯ ಕೆಲಸ ಮಾಡುತ್ತಿದ್ದರು. ಯಾವುದೇ ಹುದ್ದೆಗೆ ಹೋದರೂ ಅಲ್ಲಿ ಅವರು ಬದ್ಧತೆ, ಜ್ಞಾನ ಮತ್ತು ದೇಶ
ಪ್ರೇಮವನ್ನು ತುಂಬುತ್ತಿದ್ದರು. ಸಂವಿಧಾನದ ಆಶಯ ಏನು ಎಂಬುದನ್ನು ಅವರು ಗ್ರಹಿಸಿದ್ದರೋ ಅದಕ್ಕೆ ಅನುಗುಣವಾಗಿ ನೀತಿಗಳನ್ನು ರೂಪಿಸುತ್ತಿದ್ದರು ಮತ್ತು ಅದು ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ತಮ್ಮ ಸಹೋದ್ಯೋಗಿಗಳು ಅಥವಾ ಇಲಾಖೆಯ ಸಚಿವರ ಭ್ರಷ್ಟಾಚಾರ ಅಥವಾ ಸ್ವಜನಪಕ್ಷಪಾತ ಅಥವಾ ಅದಕ್ಷತೆಯಿಂದಾಗಿ ಯೋಜನೆ ವಿಫಲವಾದರೆ ತಪ್ಪು ಮಾಡಿದವರ ಬಗೆಗಿನ ಪುರಾವೆಗಳನ್ನು ಮಾಧ್ಯಮಕ್ಕೆ ಸೋರಿಕೆ ಮಾಡುತ್ತಿರಲಿಲ್ಲ. ತಮ್ಮ ಇಲಾಖೆಯ ಸಚಿವರ ಸಮ್ಮುಖದಲ್ಲಿ ಮಾಧ್ಯಮಗೋಷ್ಠಿ ನಡೆಸುವಾಗ ಸಂಪಾದಕರು ಮತ್ತು ವರದಿಗಾರರ ಜತೆಗೆ ಅವರು ಸೌಜನ್ಯದಿಂದ ಮಾತನಾಡುತ್ತಿದ್ದರು. ಆದರೆ ಗೋಪ್ಯ ದಾಖಲೆಗಳು ಅವರಿಗೆ ಸಿಗುವಂತೆ ಮಾಡುತ್ತಿರಲಿಲ್ಲ. ಹಾಗೆಯೇ ‘ಆಫ್‍ ದಿ ರೆಕಾರ್ಡ್’ ಎಂದು ಯಾವುದೇ ಗೋಪ್ಯ ಸಂಗತಿಗಳನ್ನು ಹೇಳುತ್ತಿರಲಿಲ್ಲ.

ನನ್ನ ಗೆಳೆಯ ಈಗ ನಿವೃತ್ತರಾಗಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಇದ್ದಾರೆ. ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಲೇಖನಗಳನ್ನು ಬರೆಯುತ್ತಾರೆ ಮತ್ತು ಅವರು ಒಪ್ಪುವ ವಿಚಾರಕ್ಕೆ ಸಂಬಂಧಿಸಿದ ಸಹಿ ಸಂಗ್ರಹ ಅಭಿಯಾನಗಳನ್ನು ಬೆಂಬಲಿಸುತ್ತಾರೆ. ಅವರು ಈಗ ನಿರ್ಬಂಧಗಳಿಲ್ಲದ ಪೌರ, ತಮ್ಮ ಹುದ್ದೆಯ ನಿರ್ಬಂಧ ಮತ್ತು ಬದ್ಧತೆಗಳು ಅವರಿಗೆ ಇಲ್ಲದಿರುವುದು ಇದಕ್ಕೆ ಕಾರಣ.

ನೂರಾರು ಐಎಎಸ್‍ ಅಧಿಕಾರಿಗಳು ನನಗೆ ಗೊತ್ತು. ಕೆಲವರು ನನ್ನ ಗೆಳೆಯನಷ್ಟೇ ಬುದ್ಧಿವಂತರು. ಆದರೆ, ವಿಶ್ವಬ್ಯಾಂಕ್‍ನಲ್ಲಿ ಯಾವುದೇ ಹೊಣೆಗಾರಿಕೆ ಇಲ್ಲದೆ ದೊಡ್ಡ ಪ್ರತಿಫಲದ ಹುದ್ದೆ ಬಯಸುವವರು. ಕೆಲವರು ಪ್ರಾಮಾಣಿಕರು, ಆದರೆ ದಾಖಲೆಗಳನ್ನು ಸೋರಿಕೆ ಮಾಡಿ ಮತ್ತು ಕರ್ತವ್ಯದಲ್ಲಿದ್ದಾಗಲೇ ಮಾಧ್ಯಮದ ಜತೆ ಮಾತನಾಡಿ ಕೆಲವು ವಿಚಾರಗಳನ್ನು ಜಗತ್ತಿಗೇ ತಿಳಿಸಲು ಬಯಸಿದವರು.

ಬುದ್ಧಿವಂತಿಕೆ ಮತ್ತು ಬದ್ಧತೆಯಲ್ಲಿ ನನ್ನ ಗೆಳೆಯ ಅಸಾಧಾರಣ ಅಧಿಕಾರಿ. ತಮ್ಮ ಸಹೋದ್ಯೋಗಿಗಳು ಅಥವಾ ಮೇಲಧಿಕಾರಿಗಳು ಭಾರತದ ಪ್ರಜಾತಂತ್ರವನ್ನು ಮತ್ತು ಅದರ ಸಂಸ್ಥೆಗಳನ್ನು ದುರ್ಬಲಗೊಳಿಸುವ ಗಂಭೀರ ಅಕ್ರಮಗಳನ್ನು ಎಸಗಿದಾಗ ಮಾಧ್ಯಮದ ಮೂಲಕ ಅದನ್ನು ಬಹಿರಂಗಪಡಿಸಬೇಕು ಎಂದು ನನ್ನ ಗೆಳೆಯನಿಗೆ ಒಮ್ಮೆಯೂ ಅನಿಸಿಲ್ಲವೇ ಎಂಬ ಪ್ರಶ್ನೆ ನನಗೆ ಕಾಡುತ್ತಿದೆ. ಸುಪ್ರೀಂ ಕೋರ್ಟ್‍ನ ಅತ್ಯಂತ ಹಿರಿಯ ನ್ಯಾಯಮೂರ್ತಿ, ದೆಹಲಿಯ ಕಾನ್‌ಸ್ಟಿಟ್ಯೂಷನ್‍ ಕ್ಲಬ್‍ನಲ್ಲಿ ಕಳೆದ ಶುಕ್ರವಾರ ಪತ್ರಕರ್ತ ಕರಣ್‍ ಥಾಪರ್ ಅವರಿಗೆ ಒಂದು ತಾಸು ಅವಧಿಯ ಸಂದರ್ಶನ ನೀಡಿದಾಗ ನಾನು ಪ್ರೇಕ್ಷಕರ ಸಾಲಿನಲ್ಲಿ ಇದ್ದೆ. ಹಾಗಾಗಿ ನನಗೆ ಈ ಪ್ರಶ್ನೆ ಬಂತು.

ನಾನು ಬೆಂಗಳೂರಿನ ನಿವಾಸಿ. ಕಾನೂನು ವಿಷಯದಲ್ಲಿ ನನಗೆ ಅಂತಹ ಪರಿಣತಿ ಏನೂ ಇಲ್ಲ. ಆದರೆ, ಕಳಕಳಿ ಇರುವ ಎಲ್ಲ ಪೌರರ ಹಾಗೆ ನಾನು ಕೂಡ ಸುಪ್ರೀಂ ಕೋರ್ಟ್‍ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಹಾಗಾಗಿ, ಈಗಿನ ಮುಖ್ಯ ನ್ಯಾಯಮೂರ್ತಿಯ ಮೇಲೆ ಕೆಲವು ಹಿರಿಯ ವಕೀಲರು ಮತ್ತು ಕೆಲವು ನ್ಯಾಯಮೂರ್ತಿಗಳು ಕೂಡ ನಂಬಿಕೆ ಕಳೆದುಕೊಂಡಿರುವುದು ನನಗೆ ಗೊತ್ತು. ನ್ಯಾಯಮೂರ್ತಿ ಚೆಲಮೇಶ್ವರ್ ಮತ್ತು ಇತರ ಮೂವರು ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರವನ್ನು ನಾನು ಓದಿದ್ದೇನೆ ಮತ್ತು ಈ ವಿಚಾರದಲ್ಲಿ ಅವರು ನಡೆಸಿದ ಮಾಧ್ಯಮಗೋಷ‍್ಠಿಯ ವರದಿಗಳನ್ನು ನೋಡಿದ್ದೇನೆ.

ಕಳೆದ ವಾರ ನಾನು ದೆಹಲಿಯಲ್ಲಿದ್ದೆ. ಸುಪ್ರೀಂ ಕೋರ್ಟ್‍ನ ಹಿರಿಯ ವಕೀಲೆಯಾಗಿರುವ ನನ್ನ ಕಾಲೇಜು ದಿನಗಳ ಗೆಳತಿಯ ಜತೆ ಕಳೆದ ಶುಕ್ರವಾರ ಊಟ ಮಾಡಿದೆ. ಮರುದಿನದ ಸಂವಾದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲೇಬೇಕು ಎಂದು ಆಕೆ ಒತ್ತಾಯಿಸಿದರು. ಆದರೆ, ‘ಕಾನೂನಿನ ವಿಚಾರ ನನಗೇನೂ ಗೊತ್ತಿಲ್ಲ’ ಎಂದು ಹೇಳಿ ನಾನು ಹಿಂಜರಿದೆ. ನಾವಿಬ್ಬರೂ ಹಳೆಯ ಗೆಳೆಯರಾಗಿರುವುದರಿಂದ ಕಾನೂನಿನ ಬಗ್ಗೆ ನನಗೇಗೂ ಗೊತ್ತಿಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ತಿಳಿದಿದೆ. ಹಾಗಿದ್ದರೂ, ಆ ಕಾರ್ಯಕ್ರಮಕ್ಕೆ ನಾನು ಹಾಜರಾಗಬೇಕು. ಇದು ಭಾರತದ ಪ್ರಜಾತಂತ್ರದ ವಿದ್ಯಾರ್ಥಿಯೊಬ್ಬನಿಗೆ ಆಸಕ್ತಿ ಹುಟ್ಟಿಸುವ ವಿಚಾರ ಎಂದು ಆಕೆ ಹೇಳಿದರು.

ಹಾಗಾಗಿ ನಾನು ಹೋದೆ, ಹೋದದ್ದರ ಬಗ್ಗೆ ನನಗೆ ಈಗ ಖುಷಿ ಇದೆ. ಕರಣ್‌ ಥಾಪರ್‌ ಇತರ ನಿರೂಪಕರ ರೀತಿ ಅಲ್ಲ, ಅವರು ಉತ್ತಮವಾಗಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಎಂದಿನಂತೆ, ಅವರು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಹಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ನ್ಯಾಯಮೂರ್ತಿಗೆ ಅವರು ಹೆಚ್ಚಿನ ಸಮಯ ಕೊಡಬೇಕಿತ್ತೇನೋ ಎಂದು ನನಗೆ ಅನಿಸಿತು. ಚೆಲಮೇಶ್ವರ್‌ ನಿಧಾನವಾಗಿ, ನಡು ನಡುವೆ ನಿಲ್ಲಿಸಿ ಮಾತನಾಡುತ್ತಾರೆ. ಹಾಗಾಗಿ ಅವರು ಉತ್ತರಗಳನ್ನು ರೂಪಿಸಿಕೊಳ್ಳಲು ಮತ್ತು ವಿವರಿಸಲು ಸಮಯದ ಅಗತ್ಯ ಇತ್ತು ಅನಿಸುತ್ತದೆ (ನಿರಂತರವಾಗಿ, ನಿರರ್ಗಳವಾಗಿ ಪ್ರತಿಕ್ರಿಯೆ ನೀಡುವ ವಾಚಾಳಿಯಾದ ರಾಜಕಾರಣಿಗಳು ಮತ್ತು ವಿದ್ವಾಂಸರ ಸಂದರ್ಶನಗಳಿಗೆ ಒಗ್ಗಿಕೊಂಡಿರುವ ವ್ಯಕ್ತಿ ಥಾಪರ್).

ಅಂದಿನ ಪ್ರೇಕ್ಷಕ ಸಮೂಹ ದೊಡ್ಡದಿತ್ತು ಮತ್ತು ವೈವಿಧ್ಯದಿಂದ ಕೂಡಿತ್ತು- ಹಿರಿಯ, ಕಿರಿಯ, ಪ್ರಸಿದ್ಧ ಮತ್ತು ನೇರ ನಿಷ್ಠುರ ವ್ಯಕ್ತಿತ್ವದ ವಕೀಲರಿದ್ದರು ಮತ್ತು ಕೆಲವು ಪತ್ರಕರ್ತರೂ ಇದ್ದರು. ಅತ್ಯಂತ ತಲ್ಲೀನತೆಯಿಂದ ಸಂದರ್ಶನವನ್ನು ನಾವು ಆಲಿಸಿದೆವು. ನ್ಯಾಯಮೂರ್ತಿ ಆಡಿದ ಕೆಲವು ಮಾತುಗಳಿಗೆ ಆಗೊಮ್ಮೆ ಈಗೊಮ್ಮೆ ಸಿಕ್ಕ ಚಪ್ಪಾಳೆ ನಮ್ಮ ತಲ್ಲೀನತೆಯ ನಡುವಣ ಅಡ್ಡಿಯಾಗಿತ್ತು ಅಷ್ಟೇ.

ವಾರದ ಬಳಿಕ ಈ ಸಂದರ್ಶನದ ಬಗ್ಗೆ ಚಿಂತಿಸಿದಾಗ ಚೆಲಮೇಶ್ವರ್ ಅವರು ನೀಡಿದ ಮೂರು ಹೇಳಿಕೆಗಳು ವಿಶೇಷ ಮಹತ್ವ ಹೊಂದಿವೆ ಎಂಬುದು ನನ್ನ ಅರಿವಿಗೆ ಬಂತು. ದೀಪಕ್‍ ಮಿಶ್ರಾ ಅವರ ಬಳಿಕ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರುವವರು ಯಾರು ಎಂಬ ಪ್ರಶ್ನೆಗೆ ಚೆಲಮೇಶ್ವರ್ ನೀಡಿದ ಉತ್ತರ ಅತಿ ಹೆಚ್ಚು ಚಪ್ಪಾಳೆ ಗಿಟ್ಟಿಸಿತ್ತು. ಈಗಿರುವ ಮಾನದಂಡಗಳ ಪ್ರಕಾರ ನ್ಯಾಯಮೂರ್ತಿ ರಂಜನ್‍ ಗೊಗೊಯ್‍ ಅವರು ಈ ಹುದ್ದೆಗೆ ಮುನ್ನೆಲೆಯಲ್ಲಿರುವ ಅಭ್ಯರ್ಥಿ; ಆದರೆ, ನಾಲ್ವರು ನ್ಯಾಯಮೂರ್ತಿಗಳು ಬರೆದ ಪತ್ರಕ್ಕೆ ಗೊಗೊಯ್‍ ಅವರೂ ಸಹಿ ಮಾಡಿದ್ದರಿಂದ ಅವರ ಬಡ್ತಿ ತಡೆಯಲು ಸರ್ಕಾರ ಪ್ರಯತ್ನಿಸಬಹುದು. ‘ಇಂತಹ ಸಾಧ್ಯತೆ ಇದೆಯೇ’ ಎಂದು ಥಾಪರ್ ‍ಪ್ರಶ್ನಿಸಿದರು. ‘ಇದು ಬಹಳ ವಿರಳ ಸಾಧ‍್ಯತೆ’ ಎಂದು ಚೆಲಮೇಶ್ವರ್ ಹೇಳಿದರು. ಒಂದು ವೇಳೆ ಹಾಗೆ ಆದರೆ ತಮ್ಮ ಪತ್ರದಲ್ಲಿ ಹೇಳಿದ ವಿಚಾರಗಳು ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ಇಂದಿರಾ ಗಾಂಧಿ ಅವರ ರೀತಿಯಲ್ಲಿಯೇ ನ್ಯಾಯಾಂಗವನ್ನು ತನ್ನ ಮುಷ್ಟಿಯಲ್ಲಿ ಇರಿಸಿಕೊಳ್ಳಲು ಯತ್ನಿಸುತ್ತಿರುವಂತೆ ಕಾಣಿಸುತ್ತಿರುವುದರಿಂದ ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡುವ ನಿಟ್ಟಿನಲ್ಲಿ ಇದೊಂದು ಪೂರ್ವಭಾವಿ ಹೆಜ್ಜೆ.

ಅನೈಚ್ಛಿಕವಾಗಿ ಬಂದ ಒಂದು ಹೇಳಿಕೆಯು ಚಪ್ಪಾಳೆಯ ದೃಷ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. ನಿವೃತ್ತಿಯ ಬಳಿಕ ಈ ಸರ್ಕಾರ ಅಥವಾ ಇನ್ನಾವುದೇ ಸರ್ಕಾರದ ಅಡಿಯಲ್ಲಿ ಬೇರೊಂದು ಹುದ್ದೆಯನ್ನು ಪಡೆದುಕೊಳ್ಳುವುದಿಲ್ಲ ಎಂಬುದನ್ನು ಸಾಕಷ್ಟು ಒತ್ತು ನೀಡಿಯೇ ಚೆಲಮೇಶ್ವರ್ ಹೇಳಿದರು. ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ. ಸದಾಶಿವಂ ಅವರು ನಿವೃತ್ತಿಯ ಬಳಿಕ ರಾಜ್ಯಪಾಲ ಹುದ್ದೆಯನ್ನು ಸ್ವೀಕರಿಸುವ ಮೂಲಕ ತಮ್ಮ ಸಮುದಾಯದ ವರ್ಚಸ್ಸನ್ನು ಬಹಳವಾಗಿ ಕುಗ್ಗಿಸಿದ್ದರು. ಚೆಲಮೇಶ್ವರ್ ಅವರ ಈ ಹೇಳಿಕೆ ವೃತ್ತಿಯ ಬಗ್ಗೆ ಅವರು ಹೊಂದಿರುವ ಗೌರವ ಮತ್ತು ಆತ್ಮಗೌರವಕ್ಕೆ ಪ್ರಮಾಣವಾಗಿದೆ.

ಈ ಹೇಳಿಕೆಗಳು ದಿಟ್ಟವೂ, ಅಗತ್ಯವಾದಂತಹವೂ ಆಗಿದ್ದವು. ಮೂರನೆಯ ಮತ್ತೊಂದು ಹೇಳಿಕೆಗೆ ಸ್ವಲ್ಪ ಕಡಿಮೆ ಚಪ್ಪಾಳೆ ಬಿತ್ತು. ಆದರೆ ಆ ಹೇಳಿಕೆಯೂ ಇಷ್ಟೇ ಮಹತ್ವದ್ದಾಗಿತ್ತು. ಈಗಿನ ಮುಖ್ಯ ನ್ಯಾಯಮೂರ್ತಿಯನ್ನು ವಾಗ್ದಂಡನೆಗೆ ಒಳಪಡಿಸುವ ಪ್ರಯತ್ನವನ್ನು ಸ್ಪಷ್ಟವಾಗಿ ವಿರೋಧಿಸಿ ಆಡಿದ ಮಾತು ಅದು. ‘ವ್ಯವಸ್ಥೆಯ ಬಿಕ್ಕಟ್ಟಿಗೆ ಒಬ್ಬ ವ್ಯಕ್ತಿಯನ್ನು ವಾಗ್ದಂಡನೆಗೆ ಒಳಪಡಿಸುವುದು ಪರಿಹಾರ ಅಲ್ಲ’ ಎಂದು ಅವರು ಹೇಳಿದರು. ಅವರ ಈ ಅಭಿಪ್ರಾಯ ಸಂಪೂರ್ಣವಾಗಿ ಸರಿ. ಜನೋನ್ಮಾದ ಮತ್ತು ಪಕ್ಷಪಾತಿ ರಾಜಕಾರಣವು ನಮ್ಮ ಹಲವು ಸಂಸ್ಥೆಗಳನ್ನು ಈಗಾಗಲೇ ಕುಗ್ಗಿಸಿಬಿಟ್ಟಿವೆ. ಈ ಎರಡೂ ಅಂಶಗಳಿಂದ ಸುಪ್ರೀಂ ಕೋರ್ಟ್‌ಅನ್ನು ರಕ್ಷಿಸಲೇಬೇಕು. ಚೆಲಮೇಶ್ವರ್ ಅವರು ಆ ಸಂಜೆ ಹೇಳಿದ ವಿಚಾರಗಳಷ್ಟೇ ಮುಖ್ಯವಾದದ್ದು ಅವರು ಹೇಳದೆ ಉಳಿಸಿದ ವಿಚಾರಗಳು. ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದಲ್ಲಿ ಏನಿತ್ತು ಮತ್ತು ಚೆಲಮೇಶ್ವರ್ ಅವರೂ ಭಾಗವಾಗಿದ್ದ ತೀರ್ಪುಗಳಲ್ಲಿ ಅಡಕವಾಗಿದ್ದ ಅಂಶಗಳು ಯಾವುವು ಎಂಬುದನ್ನು ವಿವರಿಸುವಂತೆ ಮಾಡಲು ಥಾಪರ್ ಹಲವು ಬಾರಿ ಶ್ರಮಿಸಿದರು. ಆದರೆ, ಈಗ ಎಷ್ಟು ವಿಚಾರಗಳು ಬಹಿರಂಗ ಆಗಿವೆಯೋ ಅಷ್ಟನ್ನು ಮಾತ್ರವೇ ಚೆಲಮೇಶ್ವರ್‌ ಉಲ್ಲೇಖಿಸಿ ಉತ್ತರಿಸಿದರು.

ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಯೊಬ್ಬರು ಪತ್ರಕರ್ತರಿಗೆ ಮುಖಾಮುಖಿ ಸಂದರ್ಶನ ನೀಡುವುದು, ಅದರಲ್ಲೂ ಪ್ರೇಕ್ಷಕರನ್ನು ಮುಂದೆ ಇರಿಸಿಕೊಂಡು ಮಾತನಾಡುವುದು ಅಭೂತಪೂರ್ವವಾದುದು. ಈ ನಿಟ್ಟಿನಲ್ಲಿ ಇದೊಂದು ಚಾರಿತ್ರಿಕ ವಿದ್ಯಮಾನ. ಹಾಗಾಗಿ, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ನನ್ನ ಗೆಳತಿ ನನ್ನ ಮನವೊಲಿಸಿದ್ದು ಸರಿಯಾಗಿಯೇ ಇತ್ತು. ಆದರೆ, ನನ್ನ ಇನ್ನೊಬ್ಬ ಗೆಳೆಯ, ನಿವೃತ್ತ ನಾಗರಿಕ ಸೇವಾ ಅಧಿಕಾರಿಗೆ ಈ ಬಗ್ಗೆ ಏನನಿಸಬಹುದು? ಚೆಲಮೇಶ್ವರ್ ಆ ದಿನ ಮಾಡಿದ್ದನ್ನು ನನ್ನ ಗೆಳೆಯ ಅನುಮೋದಿಸಬಹುದು ಎಂದು ನಾನು ಭಾವಿಸಿದ್ದೇನೆ. ಅಧಿಕಾರಿಗಳು ಮತ್ತು ಸಚಿವರು ಸಮರ್ಪಕವಾಗಿ ಕೆಲಸ ಮಾಡುವುದಕ್ಕಿಂತ ಸುಪ್ರೀಂ ಕೋರ್ಟ್‌ ಸರಿಯಾಗಿ ಕಾರ್ಯನಿರ್ವಹಿಸುವುದು ಭಾರತದ ಪ್ರಜಾಪ್ರಭುತ್ವದ ರಕ್ಷಣೆಗೆ ಹೆಚ್ಚು ಮುಖ್ಯ ಎಂಬುದನ್ನು ಬಹಳಷ್ಟು ಐಎಎಸ್‍ ಅಧಿಕಾರಿಗಳು ಒಪ್ಪುವುದಿಲ್ಲ ಎಂಬುದು ಅವರಿಗೂ ಗೊತ್ತು.

ಸುಪ್ರೀಂ ಕೋರ್ಟ್ ತನ್ನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಬಿಕ್ಕಟ್ಟು ಎದುರಿಸುತ್ತಿದೆ. ಅಸಾಧಾರಣ ಸಂದರ್ಭಗಳಲ್ಲಿ ಅಸಾಧಾರಣ ಕ್ರಮಗಳು ಅನಿವಾರ್ಯವಾಗುತ್ತವೆ. ಸುಪ್ರೀಂ ಕೋರ್ಟ್‌ನಿಂದ ಹೊರಗೆ, ಬಹಳ ದೂರದಲ್ಲಿರುವ ನಮಗೇ ಇದು ಗೋಚರಿಸುತ್ತಿದೆ. ಸುಪ್ರೀಂ ಕೋರ್ಟ್‍ನ ಒಳಗೇ ಇರುವ ಹಿರಿಯನ್ಯಾಯಮೂರ್ತಿಗಳಿಗೆ ಇದು ಗೊತ್ತು ಮತ್ತು ಅವರ ಅನುಭವಕ್ಕೂ ಬರುತ್ತಿದೆ. ಸುಪ್ರೀಂ ಕೋರ್ಟನ್ನು ಅತ್ಯಂತ ಹತ್ತಿರದಿಂದ ನೋಡುತ್ತಿರುವುದರಿಂದಾಗಿ ಕರ್ತವ್ಯದಲ್ಲಿ ಇರುವಾಗಲೇ ಮಾಧ್ಯಮಕ್ಕೆ ಸಂದರ್ಶನ ನೀಡಬೇಕು ಎಂಬ ಒತ್ತಡ ಅವರಲ್ಲಿ ಸೃಷ್ಟಿಯಾಗಿರಬಹುದು. ತಮ್ಮ ಸಂದರ್ಶಕನನ್ನು ಅವರು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡಿದ್ದಾರೆ. ಜತೆಗೆ ತಮ್ಮ ಮಾತುಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ವಹಿಸಿದ್ದಾರೆ. ಕಾನ್‌ಸ್ಟಿಟ್ಯೂಷನ್‍ ಕ್ಲಬ್‍ನಲ್ಲಿ ಕಳೆದ ಶನಿವಾರ ಕರಣ್‍ ಥಾಪರ್‌ಗೆ ಸಂದರ್ಶನ ನೀಡುವ ಮೂಲಕ ಚೆಲಮೇಶ್ವರ್ ಅವರು ತಮ್ಮ ಭುಜದ ಮೇಲಿರುವ ಅವಳಿ ಹೊಣೆಗಾರಿಕೆಗಳನ್ನು ಸಮರ್ಥವಾಗಿ ಪೂರೈಸಿದ್ದಾರೆ. ತಮ್ಮ ಹುದ್ದೆಯ ಮೇಲಿನ ನೀತಿನಿಷ್ಠೆಗೆ ಅನುಗುಣವಾಗಿ ಅವರು ಗೋಪ್ಯವಾದ ಯಾವುದೇ ವಿಚಾರವನ್ನು ಬಹಿರಂಗಪಡಿಸಿಲ್ಲ; ಹಾಗೆಯೇ ವೈಯಕ್ತಿಕ ಹೇಳಿಕೆಗಳು ಮತ್ತು ದೋಷಾರೋಪವನ್ನೂ ಮಾಡಿಲ್ಲ. ಅದರ ಜತೆಗೆ, ದೇಶದ ಬಗ್ಗೆ ತಮಗೆ ಇರುವ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದ್ದಾರೆ. ಸುಪ್ರೀಂ ಕೋರ್ಟ್‍ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಅವರು ತಮ್ಮ ಸಹ ಪೌರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT