ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ನಂಬರ್ ಒನ್ ಸಮಸ್ಯೆ ಯಾವುದು?

Last Updated 16 ಜೂನ್ 2018, 9:15 IST
ಅಕ್ಷರ ಗಾತ್ರ

ದೇಶದ ನಿರಂತರ ಸಮಸ್ಯೆಗಳಿಗೆ ಗಮನ ಕೊಡುವುದೂ ದಿನಾ ಸಾಯುವವರಿಗೆ ಅಳುವುದೂ ಒಂದೇ ಎಂದನ್ನಿಸಬಹುದು. ಘರ್ ವಾಪಸಿಯಿಂದ ಹಿಡಿದು ಪ್ರಶಸ್ತಿ ವಾಪಸಿ ತನಕ ವಾರಕ್ಕೊಂದು ಹೊಸ ವಿಷಯ ಹುಟ್ಟಿಕೊಂಡು ಒಂದಲ್ಲಾ ಒಂದು ಬಗೆಯಲ್ಲಿ ಜನರ ತಲೆಕೆಡಿಸುತ್ತಿದೆ. ಹಾಗಾಗಿ ಹಳೆಯ ಸಮಸ್ಯೆಗಳನ್ನು ಕುರಿತು ಯಾರು ಯೋಚಿಸಲು ಹೋಗುತ್ತಾರೆ, ಅವುಗಳನ್ನೆಲ್ಲಾ ‘ಹಿಂದಿನಿಂದ ಬಂದದ್ದು’ ಎಂದು ನಮ್ಮ ‘ಪರಂಪರೆ’ಯ ಮಡಿಲಿಗೆ ಹಾಕಿಬಿಟ್ಟರಾಯಿತು ಅಂದುಕೊಳ್ಳಬಹುದೇ? ನಮ್ಮ ದೇಶದ ಇತಿಹಾಸದ ರಾಜಮಾರ್ಗದಲ್ಲಿ ಸುಮ್ಮನೆ ನಡೆಯುತ್ತಾ ಬಂದೆವೆನ್ನಿ, ಅನೇಕ ಸಂಗತಿಗಳ ಬಗ್ಗೆ ಅಲ್ಲಲ್ಲಿ ಕಣ್ಣು ಕಿವಿ ಮುಚ್ಚಬೇಕಾಗಬಹುದು. ಆದರೆ ಉದ್ದಕ್ಕೂ ಮೂಗು ಮುಚ್ಚಿಕೊಂಡೇ ಸಾಗಬೇಕಾಗುವುದು ಖಚಿತ! ಅದರ ಬಗ್ಗೆ ಬಾಯಿ ತೆರೆಯದೇ ಇರಬಾರದು.

ನಾಗರಿಕತೆಗೂ ಶೌಚಾಲಯಕ್ಕೂ ಅವಿನಾಭಾವ ಸಂಬಂಧ. ಜಗತ್ತಿನಲ್ಲಿ ನಾಗರಿಕತೆಯ ಕುರುಹುಗಳನ್ನು ಶೋಧಿಸುವಾಗ, ಶೌಚಾಲಯದ ಅವಶೇಷಗಳನ್ನೂ ಹುಡುಕಲಾಗುತ್ತದೆ. ಏಕೆಂದರೆ ಅದು ಬರೀ ನಾಗರಿಕತೆಯ ವಿಷಯ ಮಾತ್ರವಲ್ಲ, ಸಂಸ್ಕೃತಿಯ ವಿಷಯವೂ ಹೌದು. ಕ್ರಿಸ್ತಪೂರ್ವ 2500 ವರ್ಷಗಳ ಹಿಂದಿನ ಮೊಹೆಂಜೊದಾರೊ ನಾಗರಿಕತೆಯಲ್ಲಿ ಶೌಚಾಲಯವನ್ನು ಹೋಲುವ ರಚನೆ ಇತಿಹಾಸಕಾರರ, ಪ್ರಾಚ್ಯಶಾಸ್ತ್ರಜ್ಞರ ವಿಶೇಷ ಗಮನ ಸೆಳೆದಿದೆ. ಅತ್ಯಂತ ಪ್ರಾಚೀನ ನಾಗರಿಕತೆಗಳು ಏಕೆ ಅವನತಿ ಹೊಂದಿದವು ಎಂಬುದನ್ನು ಕುರಿತ ಊಹೆಗಳಲ್ಲಿ ಶೌಚಾಲಯ- ಒಳಚರಂಡಿ ವ್ಯವಸ್ಥೆಯ ಕೊರತೆಯೂ ಮುಖ್ಯ ಅಂಶವಾಗುತ್ತದೆ.

ಅರಮನೆಗಳ ವಿಶಾಲ ವಿನ್ಯಾಸಗಳನ್ನು ಮೆಚ್ಚುಗೆಯಿಂದ ಕಾಣುವಾಗ ಅದರಲ್ಲಿ ಸಿಂಹಾಸನದಂತೆ ಅಲಂಕೃತವಾದ ಶೌಚಾಲಯ ಎಲ್ಲಿದೆ ಎಂಬ ಹುಡುಕಾಟ ನಡೆದಿದೆ. ಒಟ್ಟಾರೆ ಮನುಷ್ಯರ ಮನೆಯಲ್ಲಿ ಮರೆಯಲ್ಲಿ ಇರಬೇಕಾಗುವ ಈ ಪುಟ್ಟ ಕೋಣೆ, ಚರಿತ್ರೆಯಲ್ಲೂ ಮರೆಯಲ್ಲಿ ಸೇರಿಹೋಗಿದೆ. ಇಂಥ ಶೌಚಾಲಯದ ಚಾರಿತ್ರಿಕ ಶೋಧನೆಗೇ ಮೀಸಲಾದ ಅಧ್ಯಯನ ಯೋಜನೆಗಳಿವೆ, ಸಿಕ್ಕ ಅಲ್ಪಸ್ವಲ್ಪ ಕುರುಹುಗಳನ್ನು ರಕ್ಷಿಸಿಡುವ ಸಂಗ್ರಹಾಲಯಗಳೂ ಜಗತ್ತಿನಲ್ಲಿವೆ. ನಮ್ಮಲ್ಲೂ ಈ ಕ್ಲಿಷ್ಟ ಸಮಸ್ಯೆಗೇ ಮೀಸಲಾದ ‘ಸುಲಭ್ ಇಂಟರ್‌ನ್ಯಾಷನಲ್ ಮ್ಯೂಸಿಯಂ ಆಫ್ ಟಾಯ್ಲೆಟ್ಸ್’ ಅನ್ನು ನವದೆಹಲಿಯಲ್ಲಿ ಡಾ.ಬಿಂದೇಶ್ವರ ಪಾಠಕ್ ಸ್ಥಾಪಿಸಿದ್ದಾರೆ.

ಅಂತರಂಗ ಶುದ್ಧಿಯಷ್ಟೇ ಬಹಿರಂಗ ಶುದ್ಧಿಯೂ ಮುಖ್ಯ ಎಂಬುದು ನಿರ್ವಿವಾದ. ಬಹಿರ್ದೆಸೆಗೆ ಅಂತರ್ಗತ ಶೌಚ ವ್ಯವಸ್ಥೆ ಕಲ್ಪಿಸುವುದು ಮನುಷ್ಯರಿಗೆ ಸಿಗಬಹುದಾದ ಕನಿಷ್ಠ ಸೌಲಭ್ಯ. ಆದರೆ ನಮ್ಮಲ್ಲಿ ಇದೊಂದು ಗರಿಷ್ಠ ಸಮಸ್ಯೆಯಾಗಿ ಪ್ರಗತಿಯ ಕಥನಗಳನ್ನು ಅಣಕಿಸುತ್ತಿದೆ. ಅಭಿವೃದ್ಧಿಯನ್ನು ಅಳೆಯಲು ಇರುವ ಬೃಹತ್ ಮಾನದಂಡಗಳಲ್ಲಿ ಈ ಪುಟ್ಟ ಕೋಣೆಗೂ ಸ್ಥಾನವಿದೆ; ಈ ವೈಯಕ್ತಿಕ ಸೌಲಭ್ಯ ಸಾರ್ವತ್ರಿಕ ನೆಲೆ ಪಡೆಯುತ್ತದೆ. ಮನುಷ್ಯರಿಗೆ ಮೂಲವ್ಯಾಧಿ ಕೊಡುವ ಕಷ್ಟ ಗೊತ್ತಲ್ಲ? ಶೌಚಾಲಯ ವ್ಯವಸ್ಥೆಯ ಕೊರತೆ ನಿಜಕ್ಕೂ ದೇಶದ ಅಭಿವೃದ್ಧಿಗೆ ಕಷ್ಟ ಕೊಡುವ ಮೂಲವ್ಯಾಧಿ. ಇದರ ನಿವಾರಣೆಗೆ ಶೌಚಾಲಯ ಕ್ರಾಂತಿಯೇ ಸರಿಯಾದ ಮದ್ದು. 

ಮರೆಯಲ್ಲಿ ಆಗಬೇಕಾದ ಶೌಚದ ಬಗ್ಗೆ ಬಹಿರಂಗವಾಗಿ ಆಗಿರುವ ಮಾತುಕತೆ ನಮ್ಮ ದೇಶಕ್ಕೆ ಹೊಸತೇನಲ್ಲ. ಎಲ್ಲ ಸಮಸ್ಯೆಗಳ ಬಗ್ಗೆ ಮಾತನಾಡಿರುವ ಗಾಂಧೀಜಿ ಅದನ್ನು ಮರೆಯಲು ಸಾಧ್ಯವಿಲ್ಲವಷ್ಟೆ. ಅವರೇ ಒಂದು ಕಡೆ ‘ಶೌಚ ವ್ಯವಸ್ಥೆ ಸ್ವಾತಂತ್ರ್ಯಕ್ಕಿಂತ ಹೆಚ್ಚು ಮುಖ್ಯ’ ಎಂದು ಘೋಷಿಸಿರುವುದೇ ಅವರು ಈ ಸಮಸ್ಯೆಯನ್ನು ಗ್ರಹಿಸಿದ ರೀತಿಯನ್ನು ಹೇಳುತ್ತದೆ. ಶೌಚಾಲಯ ಸಮಸ್ಯೆ ಖಾಸಗಿ ಅಷ್ಟೇ ಅಲ್ಲ, ಅದು ಮಾನವ ಘನತೆಯ, ಸಾರ್ವಜನಿಕ ಆರೋಗ್ಯದ, ಪೌಷ್ಟಿಕತೆಯ, ಶಿಕ್ಷಣದ ಪ್ರಶ್ನೆ ಎಂದು ಹೇಳುವ ಮೂಲಕ ಗಾಂಧೀಜಿ ಈ ಸಮಸ್ಯೆಯನ್ನು ಒಂದು ರಾಷ್ಟ್ರೀಯ ನೆಲೆಗೆ ಕೊಂಡೊಯ್ದರು. ಗಾಂಧೀಜಿ- ಕಸ್ತೂರಬಾ ಸಂಬಂಧದಲ್ಲಿ ಶೌಚಾಲಯ ತೊಳೆಯುವ ವಿಚಾರಕ್ಕೆ ಎಷ್ಟೊಂದು ಮಹತ್ವ ದೊರೆತಿದೆ ಎನ್ನುವುದು ಎಲ್ಲರಿಗೂ ಗೊತ್ತು. ನಂತರ ಅನೇಕ ಸಮಾಜ ಸುಧಾರಕರು ಇದನ್ನು ಕುರಿತು ಚಿಂತನೆ, ಚಳವಳಿ ನಡೆಸಿದರು.

ಪ್ರಧಾನಿಯಾದ ನಂತರ ಮಾಡಿದ ಮೊದಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲೇ ನರೇಂದ್ರ ಮೋದಿ ಸ್ವಚ್ಛ ಭಾರತಕ್ಕೆ ಶೌಚಾಲಯ ನಿರ್ಮಾಣ ಅತ್ಯಗತ್ಯ ಎಂದರು. ಸಂಸತ್ ಸದಸ್ಯರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಇದಕ್ಕೆ ಪ್ರಾಶಸ್ತ್ಯ ಕೊಡಬೇಕು ಎಂದು ಆದೇಶಿಸಿದರು. ಇದಿರಲಿ, 2014ರ ಮಹಾಚುನಾವಣೆಯಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ಮೋದಿ, ಅದಕ್ಕೆ ಕೆಲವೇ ತಿಂಗಳ ಹಿಂದೆ ಒಂದು ಭಾಷಣದಲ್ಲಿ ‘ಶೌಚಾಲಯಗಳು ಮೊದಲು, ದೇವಾಲಯಗಳು ನಂತರ’ ಎಂದು ಹೇಳುವ ಧೈರ್ಯ ತೋರಿದ್ದರು. ಅವರಿಗೂ ಮೊದಲು ಅದೇ ಮಾತನಾಡಿದ್ದ ಕಾಂಗ್ರೆಸ್ ಪಕ್ಷದ ಜೈರಾಮ್ ರಮೇಶ್‌ಗೆ ಬಿಜೆಪಿ ಎಷ್ಟು ತೆಗಳಿತು ಎನ್ನುವುದು ಬೇರೆ ವಿಷಯ. ಒಟ್ಟಿನಲ್ಲಿ ಹಿಂದುತ್ವ ಚಳವಳಿಯ ಅಧಿದೇವತೆಯ ಬಾಯಲ್ಲೇ ದೇವಾಲಯಕ್ಕಿಂತ ಶೌಚಾಲಯ ಮುಖ್ಯ ಎಂಬ ಮಾತು ಬಂತು- ಅದೂ ಚುನಾವಣೆಗೆ ಮುನ್ನ!

ಹೀಗಿರುವಾಗ ಕಳೆದ ತಿಂಗಳು ವಿಜಯಪುರ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರದೇ ಪಕ್ಷದ ಶಾಸಕ ರಾಜು ಅಲಗೂರ ಏನಂದರು ಗೊತ್ತೇ? ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಶೌಚಾಲಯ ನಿರ್ಮಾಣಕ್ಕೆ ಹಣ ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಕ್ಕೆ ಈ ಜನ ಪ್ರತಿನಿಧಿ ‘ಗುಡಿಗೆ ಹಣ ಕೊಟ್ರೆ ಜನ ಮೆಚ್ಚಿಕೋತಾರೆ, ಶೌಚಾಲಯಕ್ಕೆ ಕೊಟ್ರೆ ಜನ ನೆನಪಿಡಂಗಿಲ್ಲ. ನಮ್ಗೆ ವೋಟ್‌ಬ್ಯಾಂಕ್ ಮುಖ್ಯ. ನೀವ್ ಏನಾದ್ರೂ ಮಾಡ್ಕೋರಿ’ ಎಂದರು. ಶೌಚಾಲಯಕ್ಕಿಂತ ದೇವಾಲಯ ನಿರ್ಮಾಣವೇ ಮುಖ್ಯವಂತೆ.

ಆದರೆ ಅದಕ್ಕೆ ಕೊಡಬೇಕಾದ ಹಣ ಅವರ ತಾತನ ಮನೆಯಿಂದ ತಂದದ್ದಲ್ಲ, ಸರ್ಕಾರ ಅವರ ಮೂಲಕ ಜನರಿಗೆ ತಲುಪಿಸುವ ಜನರ ಹಣ. ಶೌಚಾಲಯ ನನ್ನ ಆದ್ಯತೆ ಅಲ್ಲ ಎಂದು ಸಭೆಯಲ್ಲಿ ಹೇಳಲು ಈ ಶಾಸಕರು ಒಂದಿಷ್ಟೂ ಅಳುಕಲಿಲ್ಲ. ಈ ಅಕ್ಷಮ್ಯ ಹೇಳಿಕೆಯನ್ನು ಪ್ರಶ್ನಿಸಿದರೆ ‘ಶಾಸಕರು ದೇವಾಲಯ ನಿರ್ಮಾಣಕ್ಕೆ ಹಣ ನೀಡುವುದನ್ನು ವಿರೋಧಿಸಿ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ’ ಎಂಬ ಆರೋಪ ಬರಬಹುದು! ದೇವರುಗಳ ರಾಜ್ಯದಲ್ಲಿ ಶೌಚಾಲಯಗಳ ಅಗತ್ಯ ಇಲ್ಲದಿರಬಹುದು- ದೇವತೆಗಳು ಅಮೃತಪಾನ ಮಾಡಿರುವುದರಿಂದ ಅವರಿಗೆ ಹಸಿವೂ ಇಲ್ಲ, ಪಚನದ ಸಮಸ್ಯೆಯೂ ಇಲ್ಲ. ಆದರೆ ‘ದೇವರು ಕೊಟ್ಟದ್ದನ್ನು’ ತಿನ್ನುವ ಹುಲುಮಾನವರಿಗೆ ಶೌಚಾಲಯ ಅತ್ಯಗತ್ಯ.

ಶೌಚಾಲಯಕ್ಕೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳಿರುವ ಕಾರಣಕ್ಕೇ ಅದೊಂದು ರಾಷ್ಟ್ರೀಯ ವಿಷಯ ಆಗಬೇಕು. ಅದು ನಮ್ಮ ಸರ್ಕಾರದ ಆದ್ಯತೆ ಎಂದು ಪ್ರಧಾನ ಮಂತ್ರಿಗಳೇ ಘೋಷಿಸಿ ಅದರ ಮಹತ್ವ ಎತ್ತಿಹಿಡಿದಿರುವಾಗ, ದೇಶದ 2.51 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಅದು ಆದ್ಯತೆ ಆಗಬಾರದೇ? ನರೇಂದ್ರ ಮೋದಿ ಅವರು ಇತ್ತೀಚಿನ ಬ್ರಿಟನ್ ಪ್ರವಾಸದಲ್ಲೂ ಶೌಚಾಲಯಗಳ ನಿರ್ಮಾಣ ಕುರಿತು ಮಾತನಾಡುವಾಗ, ನಮ್ಮ ಸಾರ್ವಜನಿಕ ಮಾತುಕತೆಯಲ್ಲಿ ಅದಕ್ಕೆ ಸ್ಥಾನ ಅಗತ್ಯವಲ್ಲವೇ? ಇದುವರೆಗೆ ಸರ್ಕಾರೇತರ ಸಂಸ್ಥೆಗಳು ಅದಕ್ಕಾಗಿ ಎಷ್ಟೋ ಶ್ರಮಿಸುತ್ತಿರಬಹುದು; ಆದರೆ ದೇಶದ ಜನಸಂಖ್ಯೆಯಲ್ಲಿ ಶೇ 60.4 ಮಂದಿಗೆ ಶೌಚಾಲಯ ಸೌಲಭ್ಯ ಇನ್ನೂ ಸಿಕ್ಕಿಲ್ಲ ಎಂಬ ಇತ್ತೀಚಿನ ವರದಿ ಏನನ್ನು ಹೇಳುತ್ತದೆ? ಅದು ಬಹಿರ್ದೆಸೆಯೇನೋ ಹೌದು, ಆದರೆ ಬಯಲೇ ಶೌಚಾಲಯವಾಗುವಷ್ಟು ಬಹಿರಂಗವಾಗಿರಬೇಕೆ?

ಬಹಿರ್ದೆಸೆಯ ಸಮಸ್ಯೆಯ ಸಾಮಾಜಿಕ ಆಯಾಮ ಬಹಳ ದೊಡ್ಡದು. ಒಂದು ಜಾಹೀರಾತಿನಲ್ಲಿ ತಾಯಿಗೆ ಮಗಳು ‘ಅಮ್ಮಾ ನಿನಗೆ ಮನೆಯಲ್ಲಿ ಮುಖಕ್ಕೆ ಮುಸುಕು ಇರುತ್ತದೆ, ಆದರೆ ಬಯಲಿನಲ್ಲಿ ಬಹಿರ್ದೆಸೆಗೆ ಕೂರುತ್ತೀಯ’ ಎಂಬರ್ಥದ ಪ್ರಶ್ನೆ ಹಾಕುತ್ತಾಳೆ. ಇನ್ನೊಂದರಲ್ಲಿ ಮನೆಗೆ ಬಂದ ನವವಧು ನೀರು ಕುಡಿಯಲೆಂದು ಮುಸುಕು ಸರಿಸಿದಾಗ ಮಾವ ‘ಗೂಂಘಟ್’ ಎಂದು ಗದರುತ್ತಾನೆ. ಮನೆಗೆ ಬಂದಿದ್ದ ಮಹಿಳೆ ‘ನಿಮ್ಮ ಮನೆಯಲ್ಲಿ ಶೌಚಾಲಯ ಇದೆಯೇ?’ ಎಂದು ಪ್ರಶ್ನಿಸಿ, ಮನೆಯಲ್ಲಿ ಮುಸುಕು ಹಾಕುವ ಅದೇ ಹೆಣ್ಣು ಬಯಲಿನಲ್ಲಿ ಕೂರುವ ವಿಚಾರ ಬಿಡಿಸಿಡುತ್ತಾಳೆ. ಶೌಚಾಲಯ ಸಮಸ್ಯೆ ಹೆಣ್ಣು ಮಕ್ಕಳನ್ನು ಎಂಥೆಂಥ ರೀತಿಯಲ್ಲಿ ಬಾಧಿಸುತ್ತದೆ ಎಂಬುದನ್ನು ವಿವರಿಸಲು ಮಾತುಗಳು ಸಾಲುವುದಿಲ್ಲ. ಅದರ ಕೊರತೆಯೇ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸುತ್ತದೆ. ಬೆಳಕು ಹರಿವ ಮುನ್ನ ಬಯಲಿಗೆ ಹೋಗುವ ಹೆಂಗಸರು ನಂತರ ಕತ್ತಲಾಗುವವರೆಗೆ ಕಾಯುತ್ತಾರೆ. ಬಸುರಿ ಬಾಣಂತಿಯರ ಪಾಡಂತೂ ಹೇಳುವಂತೆಯೇ ಇಲ್ಲ.

ಬಹಿರ್ದೆಸೆಗೆ ಬಂದ ಹೆಣ್ಣು ಮಕ್ಕಳ ಮಾನಭಂಗ ಮಾಡಿ ಬಾಲಕಿಯರನ್ನು ಮರಕ್ಕೆ ನೇಣು ಹಾಕುವುದೂ ಇದೆ, ಮನೆಯಲ್ಲಿ ಶೌಚಾಲಯ ನಿರ್ಮಿಸಲು ತಂದೆ ಒಪ್ಪದಿದ್ದಾಗ ಬೇಸರಗೊಂಡ ಶಾಲಾ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವುದೂ ಇದೆ. ಗಂಡು ಹೆಣ್ಣನ್ನು ಕುರಿತ ವಿಭಿನ್ನ, ವಿಪರ್ಯಾಸದ, ವಿರೋಧಾಭಾಸದ ಚಿಂತನೆಯನ್ನು ಶೌಚಾಲಯದ ಸಮಸ್ಯೆಯೂ ಬಟಾಬಯಲಿನಲ್ಲಿ ನಿಲ್ಲಿಸುತ್ತದೆ. ಹೆಣ್ಣು ಮಕ್ಕಳು ಸರಿಯಾಗಿ ಮೈತುಂಬ ಬಟ್ಟೆ ಧರಿಸದಿರುವುದೇ ಅತ್ಯಾಚಾರಕ್ಕೆ ಕಾರಣ ಎಂದು ಕೆಲವರು ವಾದಿಸುತ್ತಾರೆ, ಆದರೆ ಹೆಣ್ಣು ಮಕ್ಕಳು ಬಟ್ಟೆ ಎತ್ತಿ ಕೂರಲೇ ಬೇಕಾದ ಈ ದುಃಸ್ಥಿತಿಯೂ ನಮ್ಮ ಸಂಸ್ಕೃತಿಯೇ ಎಂದವರು ಯೋಚಿಸುವುದಿಲ್ಲ.

ಮಲ ವಿಸರ್ಜನೆಯೇನೋ ಗಂಡಸರು ಹೆಂಗಸರು ಇಬ್ಬರಿಗೂ ಸಮಾನ ಸಮಸ್ಯೆ. ಆದರೆ ಮೂತ್ರ ವಿಸರ್ಜನೆ ವಿಚಾರದಲ್ಲಿ ಗಂಡಸರಿಗೆ ಬಿಡಿ, ಇಡೀ ದೇಶವೇ ಒಂದು ಮೂತ್ರಾಲಯ- ಹೆಂಗಸರಿಗೆ ಶೌಚಾಲಯ ಬೇಕೇಬೇಕು. ಗಂಡಸರಿಗೆ ಮನೆ ಪಕ್ಕದ ಮೋಟು ಗೋಡೆಯೂ ಆದೀತು, ಪಾರ್ಲಿಮೆಂಟ್ ಭವನದ ಬೃಹತ್ ಗೋಡೆಯೂ ಆದೀತು. ಒಂದೇ ವಿಚಾರ ಅವರಿಗೆ ಸಲೀಸು, ಇವರಿಗೆ ಸಮಸ್ಯೆ. ಗಂಡಸರ ಸಲೀಸು ಬಿಡಿಸದೇ ಸ್ವಚ್ಛ ಭಾರತ ಸಾಧ್ಯವಿಲ್ಲ. ‘ವಿಶ್ವ ಶೌಚಾಲಯ ದಿನ’ ಮತ್ತು ‘ವಿಶ್ವ ಪುರುಷರ ದಿನ’ ಇವೆರಡೂ ನವೆಂಬರ್ 19ರಂದೇ ಇರುವುದಕ್ಕೆ ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ. ಗಂಡಸರ ಸಲೀಸು ಬಿಡಿಸುವ ಕಷ್ಟ ದೇವರಿಗೂ ಗೊತ್ತು! ಮುಂಬೈನ ಪ್ರಸಿದ್ಧ ಕಲಾಗ್ಯಾಲರಿಯ ಒಂದು ಗೋಡೆ ಗಂಡಸರ ಸಲೀಸಿಗೆ ನೆಂದು ಮುದ್ದೆಯಾಗುತ್ತಿತ್ತಂತೆ. ನೊಂದ ಅದರ ನಿರ್ದೇಶಕರು ಅದನ್ನು ನಿಲ್ಲಿಸಲು ಸ್ವತಃ ಗೋಡೆಯ ತುಂಬಾ ದೇವರುಗಳನ್ನು ಚಿತ್ರಿಸಿದರಂತೆ. ಆದರೇನು ಗಂಡಸರ ಗುರಿ ಬದಲಾಗದೇ ಅವರು ಮತ್ತಷ್ಟು ನೊಂದುಕೊಂಡರು. ಗೋಡೆಗಳನ್ನು ರಕ್ಷಿಸಲು ಅದಕ್ಕೆ ದೇವರುಗಳ ಟೈಲ್ಸ್ ಹಚ್ಚುವುದು ಮುಂದುವರೆದಿದೆ.

ಹಳ್ಳಿಗಳಲ್ಲಿ ಇರುವ ಶೌಚಾಲಯಗಳಲ್ಲೂ ಮಲ ಬಾಚುವ, ಮಲ ಹೊರುವ ಕೆಲಸ ಯಾರದು ಎನ್ನುವುದು ನಮಗೆಲ್ಲ ಗೊತ್ತು. ಯಾರಿಗೆ ಅದರ ಸೌಲಭ್ಯವೇ ಇಲ್ಲವೋ ಅಂಥವರಿಗೆ ಅದನ್ನು ಶುಚಿ ಮಾಡುವ ಜವಾಬ್ದಾರಿ. ನಿಷೇಧದ ನಂತರವೂ ಅದು ಮುಂದುವರೆಯುತ್ತಿದೆ ಎನ್ನುವುದು ಕಹಿ ಸತ್ಯ. ಶೌಚಾಲಯದ ಸಮಸ್ಯೆ ಬರೀ ಬಡತನದ್ದಲ್ಲ. ಆದರೆ ಶೌಚಾಲಯದ ಸ್ವಚ್ಛತೆಗೆ ಮಾತ್ರ ಈಗಲೂ ಬಡವರೇ ಬಂಧು. ಈ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರೆ ಅವರ ತಲೆ ಮೇಲೆ ಮಲ ಸುರಿಯಲು ಮಾತ್ರ ಈ ದೊಡ್ಡವರು ಅದನ್ನು ಮುಟ್ಟುತ್ತಾರೆ. ಸಂಸ್ಕೃತಿ ಎನ್ನುವುದು ಸದಾ ಸುವಾಸನೆ ಬೀರುವ ಸಂಗತಿಯಲ್ಲ.

ಶೌಚಾಲಯ ಸಮಸ್ಯೆ ಬರೀ ಕೋಣೆ ನಿರ್ಮಾಣದಿಂದ ಬಗೆಹರಿಯುವುದಿಲ್ಲ. ಜನರ ಚಿಂತನೆ ಬದಲಿಸುವ ಪ್ರಯತ್ನವೂ ಅಗತ್ಯ. ನಮ್ಮ ದೇಹ ‘ಅಮೇಧ್ಯದ ಮಡಕೆ, ಮೂತ್ರದ ಕುಡಿಕೆ’ ಎನ್ನಲಾಗಿದೆ.  ದೇಹದೊಳಗೇ ಅದನ್ನು ಗಂಟೆಗಟ್ಟಲೆ ಇಟ್ಟುಕೊಳ್ಳುವ ಜನ, ಅದರ ವಿಸರ್ಜನೆಗೆ ಮನೆಯೊಳಗೆ, ಮನೆಯಂಗಳದಲ್ಲಿ ಶೌಚಾಲಯ ಕಟ್ಟಲು ಒಪ್ಪುವುದಿಲ್ಲ. ಸರ್ಕಾರ ಕಟ್ಟಿಸಿಕೊಟ್ಟರೆ ಅದರೊಳಗೆ ಮಳೆಯಿಂದ ರಕ್ಷಿಸಲು ಸೌದೆ ತುಂಬುವುದುಂಟು. ವಾಸ್ತು ಎಂಬ ವ್ಯಾಧಿ ಇದನ್ನೂ ಕಾಡಿಸುತ್ತಿದೆ.

ಆದ್ದರಿಂದ, ಜಯಂತಿಗಳ ಬದಲು ಶೌಚಾಲಯಕ್ಕೆ ವ್ಯಾಪಕ ಜಾಹೀರಾತು ಹಾಕಬೇಕು. ‘ಎಲ್ಲರೂ ಶೌಚಾಲಯ ಕಟ್ಟಿಸಿಕೊಳ್ಳದಿದ್ದರೆ ನಿಮ್ಮ ಹಳ್ಳಿಗೆ ನಮ್ಮ ನಾಟಕೋತ್ಸವ ಬರುವುದಿಲ್ಲ’ ಎಂದು ಸಾಣೇಹಳ್ಳಿ ಮಠಾಧೀಶರು ಹೇಳುವುದು, ಜಿಲ್ಲಾಧಿಕಾರಿ ರೋಹಿಣಿ ಬೆಳಿಗ್ಗೆ ಎದ್ದು ಹೊಲಗದ್ದೆಗಳಲ್ಲಿ ಸೀಟಿ ಊದುತ್ತ ಓಡಾಡುವುದು, ಇನ್ನೊಬ್ಬ ಅಧಿಕಾರಿ ಟಾರ್ಚ್ ಹಿಡಿದು ಹೆದರಿಸುವುದು, ಪಂಚಾಯತ್ ಚುನಾವಣೆ ಅಭ್ಯರ್ಥಿ ಆಗಲು ಮನೆಯಲ್ಲಿ ಶೌಚಾಲಯ ಕಡ್ಡಾಯ ಮಾಡುವುದು ಇಂಥ ಎಲ್ಲವನ್ನೂ ಬೆಂಬಲಿಸಬೇಕು. ಏಕೆಂದರೆ ಮೊದಲು ಜನರ ಸ್ವಚ್ಛ ಮಸ್ತಕ ಇಲ್ಲದೆ ಸ್ವಚ್ಛ ಭಾರತ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT