ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಭಾಷೆಗಳಲ್ಲೂ ಅಭಿವೃದ್ಧಿಯ ಮಾತೊಂದೇ

Last Updated 16 ಜೂನ್ 2018, 9:15 IST
ಅಕ್ಷರ ಗಾತ್ರ

ಮಹಾಭಾರತದಲ್ಲಿ ಎಲ್ಲರಿಗಿಂತ ಹೆಚ್ಚು ಸಂಚಾರ ಮಾಡಿದವನು, ಹಾಗೇ ಹೆಚ್ಚು ಸಂಸಾರ ಮಾಡಿದವನು ಅರ್ಜುನ. ಶಾಪ ವಿಮೋಚನೆಗಾಗಿ ಅರಮನೆ ಬಿಟ್ಟು ವಿವಿಧ ಪ್ರದೇಶಗಳನ್ನು ಸುತ್ತುತ್ತಾ ಬಹುದೂರ ಬಂದ ಅವನು ಮಣಿಪುರ ಎಂಬಲ್ಲಿ ಉಲೂಪಿಯನ್ನು ಸಂಧಿಸುತ್ತಾನೆ. ವಿವಿಧ ಪ್ರದೇಶಗಳಿಗೆ ಸೇರಿದ ಅವರಿಬ್ಬರ ಭಾಷೆ ಒಂದೇ ಆಗಿರಲು ಸಾಧ್ಯವಿರಲಿಲ್ಲ.

ಪರಸ್ಪರ ಮೋಹಗೊಂಡಾಗ ದೇಹದ ಬಯಕೆಗಳೇ ಭಾಷೆಯಾಗಿ ಅವರಿಬ್ಬರೂ ಮಾತನಾಡಿಕೊಂಡರು ಎಂಬರ್ಥದ ವಿವರಣೆಯನ್ನು ಕವಿ ಕೊಡುತ್ತಾನೆ. ಹಾಗೆಯೇ ಭೀಮಸೇನನೂ ಕಾಡಿನಲ್ಲಿ ರಾಕ್ಷಸ ಅಥವಾ ಬುಡಕಟ್ಟು ಜನಾಂಗದ ಕನ್ಯೆ ಹಿಡಿಂಬೆಯನ್ನು ಕಂಡಾಗಲೂ ಭಾಷೆಯ ಅಗತ್ಯ ಬಿದ್ದಿರಲಿಕ್ಕಿಲ್ಲ. 

ಆದರೆ ಮಹಾಭಾರತ ಯುದ್ಧದಲ್ಲಿ ಹಲವಾರು ದೇಶಗಳ, ವಂಶಗಳ ರಾಜರು, ಪ್ರಾಂತಗಳ ಸಾಮಂತರು ಮತ್ತು ಅವರ ಸೈನ್ಯಗಳು ಪಾಲ್ಗೊಂಡಿದ್ದವು ಎಂಬ ಬಗ್ಗೆ ಸುದೀರ್ಘ ವಿವರಣೆಯೇ ಸಿಗುತ್ತದೆ. ‘ಯುದ್ಧ ಮತ್ತು ಪ್ರೀತಿಯಲ್ಲಿ ಏನು ಮಾಡಿದರೂ ಸರಿ’ ಎಂಬ ಮಾತು ಒಪ್ಪಬಹುದಾದರೂ ಭಾಷೆಯ ಅಗತ್ಯ, ಪ್ರೀತಿಗಲ್ಲದಿದ್ದರೂ ಯುದ್ಧಕ್ಕಂತೂ ಬೇಕೇ ಬೇಕಾಗುತ್ತದೆ.

ಏಕೆಂದರೆ ಯುದ್ಧದ ಷಡ್ಯಂತ್ರಗಳು, ಯೋಜನೆಗಳು, ಶೈಲಿಗಳು, ವ್ಯೂಹಗಳು ಮುಂತಾದ್ದರ ಬಗ್ಗೆ ಅದರಲ್ಲಿ ಪಾಲ್ಗೊಳ್ಳುವ ರಾಜರು, ಸೇನಾಧಿಪತಿಗಳು ಚರ್ಚೆ ನಡೆಸಬೇಕು. ವಿವಿಧ ಭಾಷೆಗಳ ಜನರು ಸೇರಿದಾಗ ಹೇಗೆ ಚರ್ಚೆ ಮಾಡಿದರು? ‘ಹೀಗೆ ಯುದ್ಧ ಮಾಡಿದರು’ ಎಂದು ಕವಿ ವರ್ಣಿಸುವುದು ಬೇರೆ ಮಾತು.

ಅದರಂತೆ ರಾಮಾಯಣದಲ್ಲಿ ರಾಮ–ಲಕ್ಷ್ಮಣರೊಡನೆ ಯುದ್ಧವನ್ನು ಕುರಿತು ವಿಭಿನ್ನ ಜನಾಂಗ, ಭಾಷೆಗಳಿಗೆ ಸೇರಿದ ಹನುಮಂತ, ವಾಲಿ, ಸುಗ್ರೀವ ಹೇಗೆ ಒಪ್ಪಂದಕ್ಕೆ ಬಂದರೆನ್ನುವುದೂ ವಿಶೇಷ. ಭಾಷೆಯ ಕಾರಣಕ್ಕೇ ಹನುಮ ಲಂಕೆಯಲ್ಲಿ ಸೀತೆಯನ್ನು ಕಂಡಾಗ ರಾಮನ ಅವಸ್ಥೆ ಕುರಿತು ಏನೇನು ಹೇಳಿದನೋ ಅವೆಲ್ಲ ಒಂದು ರಾಜಮುದ್ರೆಯ ರೂಪಕದಲ್ಲಿ ಅಡಗುತ್ತದೆ.

ಶತಶತಮಾನಗಳ ಹಿಂದೆಯೇ ಗೊತ್ತುಗುರುತು ಇಲ್ಲದ ರಾಜ್ಯಗಳನ್ನು ಸೋಲಿಸಿ ಸಾಮ್ರಾಜ್ಯ ವಿಸ್ತರಿಸಲು ಕಾತರಿಸಿದ ಚಕ್ರವರ್ತಿಗಳು, ಸಮುದ್ರಯಾನದ ಮೂಲಕ ಕಾಣದ ದೂರದೇಶಗಳನ್ನು ಅರಸಿ ಹೊರಟ ವ್ಯಾಪಾರಿ ನಾವಿಕರು ಭಾಷೆಯ ಬಗ್ಗೆ ಯೋಚಿಸಲೇ ಇಲ್ಲ. ಆದರೆ ಅವರಿಗೆ ಅರಿವಿಲ್ಲದೆ ಬೇರೆಲ್ಲದರ ಜೊತೆಗೆ ಅವರ ಭಾಷೆಗಳ ಪರಿಕರಗಳೂ ವಿನಿಮಯವಾದವು. ಭಾಷೆಯ ಹಂಗಿಲ್ಲದೆಯೇ ಜಗತ್ತಿನ ಇತಿಹಾಸ ಚಕ್ರ ಉರುಳುತ್ತಿದೆಯೇ ಎಂಬ ಸಂಶಯ ಬರುತ್ತದೆ. ಆದರೆ ನಿಜಸ್ಥಿತಿ ಹಾಗಿಲ್ಲ.

ಸಾಮ್ರಾಜ್ಯಶಾಹಿ, ರಾಜಕಾರಣ- ಧರ್ಮಕಾರಣಗಳ ಜೊತೆ ಭಾಷೆಗೆ ಅವಿನಾಭಾವ ಸಂಬಂಧವಿದೆ. ಭಾಷೆಯ ಹಣೆಬರಹವನ್ನು, ಅದರ ಬೆಲೆಯನ್ನು, ಅಳಿವು ಉಳಿವುಗಳನ್ನು ರಾಜರು ಮತ್ತು ಧರ್ಮಗುರುಗಳು ನಿರ್ಧರಿಸಿದ್ದಾರೆ. ಒಂದು ಧರ್ಮ ಬೇರೂರಬೇಕಾದರೆ, ರಾಜರ ಒಪ್ಪಿಗೆ ಎಷ್ಟು ಮುಖ್ಯವೋ ಜನಸಾಮಾನ್ಯರ ಅಪ್ಪುಗೆಯೂ ಅಷ್ಟೇ ಅಥವಾ ಅದಕ್ಕಿಂತ ಮುಖ್ಯವಾಗಿದೆ.

ಜನರು ಆಡುವ ಭಾಷೆಯನ್ನು ಬಳಸದಿದ್ದರೆ ಹೊಸ ಧರ್ಮವೂ ಬೆಳೆಯುವುದಿಲ್ಲ ಎಂದೇ ವೈದಿಕ ಸಂಸ್ಕೃತವನ್ನು ಬಿಟ್ಟು, ಸಂಸ್ಕೃತದ ಉಪಭಾಷೆಯಲ್ಲದ ಪಾಲಿ ಭಾಷೆಯನ್ನು ಬುದ್ಧ ಆಯ್ದುಕೊಳ್ಳಬೇಕಾಯಿತು. ಬೌದ್ಧ ಧರ್ಮಕ್ಕೂ ಪಾಲಿ ಭಾಷೆಗೂ ಇರುವ ಸಂಬಂಧ ಎಂಥದೆಂದರೆ, ಜಗತ್ತಿನ ಯಾವ್ಯಾವ ದೇಶಗಳಲ್ಲಿ ಬೌದ್ಧ ಧರ್ಮ ಪ್ರಸಾರವಾಯಿತೋ ಅಲ್ಲೆಲ್ಲಾ ಪಾಲಿ ಭಾಷೆಯೂ ಬೆಳೆಯಿತು.

ಕಾಲಕ್ರಮೇಣ, ಕ್ಷೀಣಿಸಿದ ಬೌದ್ಧ ಧರ್ಮವನ್ನು ಅಭ್ಯಾಸ ಮಾಡುವುದೆಂದರೆ, ಟಿಬೆಟ್ ಜನಭಾಷೆಯನ್ನು ಕಲಿಯುವುದು ಎಂದಾಯಿತು. ಜೈನ ಧರ್ಮದ ಪ್ರಸಾರಕ್ಕೆ ಆಯಾ ಪ್ರದೇಶ ಭಾಷೆಗಳಲ್ಲಿ ಸಾಹಿತ್ಯ ರಚನೆ ಅನಿವಾರ್ಯವಾಗಿ ಧರ್ಮ ಮತ್ತು ಕಾವ್ಯಧರ್ಮಗಳು ಒಂದಾಗಬೇಕಾಯಿತು. ಆಧುನಿಕ ಜಗತ್ತಿನಲ್ಲಿ ಬೈಬಲ್ ಮತ್ತು ಕುರಾನ್ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿರುವ ದಾಖಲೆ, ಧರ್ಮ ಪ್ರಸಾರದ ಬದ್ಧತೆಯಿಂದಲೇ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ.  

ಕ್ರೈಸ್ತ, ಯೆಹೂದ್ಯ, ಇಸ್ಲಾಂ, ಸಿಖ್ ಧರ್ಮಗಳಿಂದಾಗಿ ಕೆಲವು ಭಾಷೆಗಳ ನೆಲೆ ಎಷ್ಟು ವಿಸ್ತಾರ ಆಗಿದೆಯೆಂದರೆ, ಆಯಾ ಧರ್ಮವನ್ನು ಆಯಾ ಭಾಷೆಯ ಚೌಕಟ್ಟಿನಲ್ಲೇ ಆಚರಿಸಬೇಕಾಗುತ್ತದೆ. ಧರ್ಮದಿಂದ ಭಾಷೆಗೂ ಬೆಲೆ ಬಂದಿದೆ, ಭಾಷೆಯಿಂದ ಧರ್ಮಕ್ಕೂ ಮೌಲ್ಯ ಹೆಚ್ಚಿದೆ. ಆದ್ದರಿಂದಲೇ ಕಳೆದೆರಡು ದಶಕಗಳಲ್ಲಿ ಭಾಷೆ ಮತ್ತು ಧರ್ಮ ಇವೆರಡರ ಸಮಾಜೋಭಾಷಿಕ ಅಧ್ಯಯನ ಇನ್ನಿಲ್ಲದ ಮಹತ್ವ ಪಡೆದಿದೆ.

ಸಮಾಜದ ಬೆಳವಣಿಗೆಯನ್ನು ಅರಿಯಲು ಭಾಷೆಯೂ ಒಂದು ಮುಖ್ಯ ಮಾಧ್ಯಮವಾಗಿದೆ. ವಿದ್ವಾಂಸರು ಹೇಳುವಂತೆ, ಕೆಲವು ಭಾಷೆಗಳು ಉಳಿದುಕೊಂಡಿರುವುದೇ ಧರ್ಮದ ಆಚರಣೆಗಳಲ್ಲಿ ಅದಕ್ಕೆ ಮಹತ್ವ ಇರುವುದರಿಂದ. ಹಾಗೆಯೇ ಅಮೆರಿಕ ಮತ್ತು ಆಫ್ರಿಕ ಖಂಡಗಳ ಮೂಲನಿವಾಸಿಗಳು ಹೊಸ ನಾಗರಿಕತೆಗೆ ತೆರೆದುಕೊಂಡಂತೆ, ಅವರ ಧರ್ಮ ಮತ್ತು ಭಾಷೆಗಳು ಒಟ್ಟಿಗೆ ನಶಿಸಿಹೋದುದನ್ನೂ ಗುರುತಿಸಲಾಗುತ್ತದೆ.

ಭಾರತದಂಥ ಬಹುಭಾಷಾ ದೇಶದಲ್ಲಿ ಧರ್ಮಕ್ಕೂ ಭಾಷೆಗೂ ಇರುವ ಸಂಬಂಧ ವಿಪರೀತ ಸಂಕೀರ್ಣ ಸ್ವರೂಪದ್ದು. ಸಂಸ್ಕೃತ ನಾಟಕಗಳಲ್ಲಿ ಕೆಳ ಹಂತದ ಪಾತ್ರಗಳು ಪ್ರಾಕೃತ ಭಾಷೆಯನ್ನು ಆಡುವಂತೆ, ವರ್ಣ ವ್ಯವಸ್ಥೆಯ ಸಾಮಾಜಿಕ ಶ್ರೇಣೀಕರಣ ಮತ್ತು ಶ್ರೀಮಂತ-ಬಡವ ವರ್ಗೀಕರಣ ಅವರಿಗೆ ಭಾಷೆಯನ್ನೂ ಕೊಡುತ್ತದೆ. ಕೆಳ ಹಂತದವರು ಅದನ್ನು ಮೀರುವ ಪ್ರಯತ್ನಗಳಲ್ಲಿ, ಮೇಲ್ವರ್ಗದ ಭಾಷೆಯ ಕಲಿಕೆಯೂ ಮುಖ್ಯ ಪಾತ್ರ ವಹಿಸುತ್ತದೆ. ಗಾಯತ್ರಿ ಮಂತ್ರದ ಪಠಣ ಶೂದ್ರಾತಿಶೂದ್ರರಿಗೆ ಸಂಸ್ಕೃತ ಭಾಷೆಯನ್ನು ಕಲಿತ ಹೆಮ್ಮೆಯನ್ನೂ ಕೊಡುತ್ತದೆ ಎನ್ನುವುದು ಈಗಲೂ ಸತ್ಯ.

ಅದರ ಜೊತೆಗೆ ತಮ್ಮ ಭಾಷೆಗೆ ಪ್ರಾಮುಖ್ಯ ಕೊಡುವುದೆಂದರೆ ವಿವಿಧ ಧರ್ಮಗಳ ಪೂಜೆ ಪುನಸ್ಕಾರಗಳಲ್ಲಿ, ಪೂಜಾ ಮಂದಿರಗಳ ಆಚರಣೆಗಳಲ್ಲಿ ದೇಸೀ ಭಾಷೆಗೆ ಆದ್ಯತೆ ನೀಡುವುದು ಎಂದೂ ಆಗುತ್ತದೆ. ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ ದೇವಾಲಯಗಳು ಮತ್ತು ಚರ್ಚುಗಳಲ್ಲಿ ಪೂಜೆಗೆ ಬಳಸುವ ಭಾಷೆಯೇ ಸಂಘರ್ಷಕ್ಕೆ ಮೂಲವಾಗಿರುವುದನ್ನು ಗಮನಿಸಬಹುದು.

ನ್ಯಾಯಾಲಯದಲ್ಲಿ ಕನ್ನಡದ ಬಳಕೆಗಿಂತ ದೇವಾಲಯದಲ್ಲಿ ಕನ್ನಡ ಪೂಜೆ ಮುಖ್ಯವೆನಿಸುವುದು ಅನೇಕ ಸಂಗತಿಗಳನ್ನು ಹೇಳುತ್ತದೆ. ‘ಮೌನವೇ ದೇವರ ಭಾಷೆ, ಮಿಕ್ಕಿದ್ದೆಲ್ಲ್ಲ ಅದರ ಕಳಪೆ ಅನುವಾದ’ ಎಂದು ಧಾರ್ಮಿಕ ಮಂತ್ರ ಮತ್ತು ಗ್ರಂಥಗಳ ಬಗ್ಗೆ ಸೂಫಿ ಸಂತ ರೂಮಿ ಹೇಳಿರುವುದು ಯಾರಿಗೂ ಕೇಳಿಸುವುದಿಲ್ಲ.  

ಧರ್ಮ ಪ್ರಸಾರ ಮತ್ತು ಭಾಷೆಯ ಕಲಿಕೆಗೆ ಸಂಬಂಧಿಸಿದಂತೆ ಇನ್ನೊಂದು ಕುತೂಹಲಕರ ಅಂಶವನ್ನೂ ಗಮನಿಸಬಹುದು. ಹದಿನೇಳನೇ ಶತಮಾನದಿಂದ ಆರಂಭಿಸಿ, ಕ್ರೈಸ್ತ ಧರ್ಮ ಪ್ರಸಾರಕ್ಕೆ ಹೊರಟ ಜರ್ಮನ್ ಪಾದ್ರಿಗಳು ಮತ್ತು ವಿದ್ವಾಂಸರು ಆಫ್ರಿಕ, ಏಷ್ಯ, ಆಸ್ಟ್ರೇಲಿಯಗಳಲ್ಲಿ ಧರ್ಮ ಪ್ರಸಾರ, ಮತಾಂತರಗಳ ಜೊತೆಗೆ ಪ್ರದೇಶ ಭಾಷೆಯನ್ನು ಕಲಿತು ಅದರಲ್ಲಿ ಕ್ಷೇತ್ರಕಾರ್ಯ, ಅಧ್ಯಯನಗಳನ್ನು ನಡೆಸಿ ಐರೋಪ್ಯ ಮಾದರಿಯ ವ್ಯಾಕರಣ ಗ್ರಂಥಗಳು ಮತ್ತು ನಿಘಂಟುಗಳನ್ನು ರಚಿಸಿದ್ದಾರೆ.

ಭಾರತದಲ್ಲಿ ಇವರ ವಿದ್ವತ್ ಕಾರ್ಯ ಬಹಳ ವಿಸ್ತಾರವಾಗಿದೆ. ಸಂಸ್ಕೃತ ಕಲಿತ ಹೆನ್ರಿಚ್ ರೋಕ್, ಒಪ್ಪರ್ಟ್, ಟ್ರಂಪ್, ಗುಂಡರ್ಟ್, ಮೋಗ್ಲಿಂಗ್ ಮೊದಲಾದವರಲ್ಲದೆ ನಮ್ಮವರೇ ಆಗಿಬಿಟ್ಟಿದ್ದ ಕಿಟೆಲ್ ಇವರೆಲ್ಲರ ಕೆಲಸ ಬಹಳ ಪ್ರಸಿದ್ಧ. ಮ್ಯಾಕ್ಸ್ ಮುಲ್ಲರ್ ಅಂಥವರ ಅಧ್ಯಯನ ಮತ್ತು ಅನುವಾದ, ಇಂಡಾಲಜಿ ಎಂಬ ಹೊಸ ಅಧ್ಯಯನ ಶಾಖೆಯನ್ನೂ ಆರಂಭಿಸಿತು. ಅರುಣ್ ಶೌರಿ ಈ ಕುರಿತು ಏನೇ ಹೇಳಲಿ, ಕನ್ನಡವೂ ಸೇರಿ ಅನೇಕ ಭಾಷೆಗಳು ಅವರಿಂದ ಲಾಭ ಪಡೆದವು.

ಶತಮಾನದ ಹಿಂದೆ ಅಗಸ್ಟ್ ಫ್ರಾಂಕ್ ಎಂಬಾತ ಬೇರೆಲ್ಲವನ್ನೂ ಮರೆತು ಎಲ್ಲೋ ಮೂಲೆಯಲ್ಲಿದ್ದ ಲಡಾಖಿ ಭಾಷೆಗೊಂದು ವ್ಯಾಕರಣ ಗ್ರಂಥ ರಚಿಸಿದ ಎಂದ ಮೇಲೆ ಹೆಚ್ಚು ಹೇಳಬೇಕಿಲ್ಲ. ಹಳೆಯದೆಲ್ಲ ಇರಲಿ, ಭಾರತದ ಭಾಷಾ ಸಮೀಕ್ಷೆಯ ಪ್ರಕಾರ ದೇಶದಲ್ಲಿ 780 ಭಾಷೆಗಳನ್ನು ಜನರು ಮಾತನಾಡುತ್ತಾರೆ. ಸುಮಾರು 86 ಬಗೆಯ ಲಿಪಿಗಳು ಬಳಕೆಯಲ್ಲಿವೆ. ಆದರೆ ಕೇವಲ 50 ವರ್ಷಗಳಲ್ಲಿ ಸುಮಾರು 250 ಭಾಷೆಗಳು ಸತ್ತುಹೋಗಿವೆ.

ಪಶ್ಚಿಮ ಬಂಗಾಳ ರಾಜ್ಯವೊಂದರಲ್ಲೇ ಜನರು 38 ವಿವಿಧ ಭಾಷೆಗಳನ್ನು ಆಡುತ್ತಾರೆ; ಒಂಬತ್ತು ಬಗೆಯ ಲಿಪಿಗಳನ್ನು ಬಳಸುತ್ತಾರೆ. ಇಂಥ ಭಾಷಾ ಶ್ರೀಮಂತಿಕೆ ಇದ್ದರೂ ಹಿಂದಿ ಹೇರಿಕೆ ಮತ್ತು ಇಂಗ್ಲಿಷ್ ಬಯಕೆಗಳ ನಡುವೆ ಮಕ್ಕಳ ಕಲಿಕೆ ಸಿಕ್ಕಿಕೊಂಡಿರುವ ಈ ಹೊತ್ತಿನಲ್ಲಿ ಧರ್ಮ, ಜಾತಿ ಎಲ್ಲವನ್ನೂ ಮೀರಿದ ಸಾಮಾಜಿಕ- ರಾಜಕೀಯ ಆಯಾಮವೊಂದು ಭಾಷೆಗೆ (ಅಂದರೆ ಇಂಗ್ಲಿಷ್ ಭಾಷೆಗೆ) ಪ್ರಾಪ್ತವಾಗಿದೆ.

ಹಳೆಯ ಮತ್ತು ಹೊಸ ಆಳುವ ಸರ್ಕಾರಗಳು ಹಿಂದಿಯನ್ನು ಹಿಂಬಾಗಿಲ ಮೂಲಕ ನುಗ್ಗಿಸುತ್ತಿದ್ದರೆ, ಇಂಗ್ಲಿಷ್ ಭಾಷೆ ಕಲಿಯುವುದೇ ಸಾಮಾಜಿಕ ಮೋಕ್ಷಕ್ಕೆ ಮಾರ್ಗ ಎಂದು ಭಾವಿಸಿ ಇಂಗ್ಲಿಷ್ ದೇವಿಗೆ ಗುಡಿ ಕಟ್ಟಿದವರೂ ಇದ್ದಾರೆ. ಆದರೆ, ಬೀದಿಗೊಂದು ಇಂಗ್ಲಿಷ್ ಶಾಲೆ ಬಂದರೂ, ಹಿಂದಿಯೇ ರಾಷ್ಟ್ರದ ಭಾಷೆ ಎಂದು ಹೇರಿದರೂ ಜನಕ್ಕೆ ಅಗತ್ಯವಾದ ಕೆಲಸಗಳು, ತಲುಪಬೇಕಾದ ವಿಚಾರಗಳು ಆ ಎರಡೇ ಭಾಷೆಗಳಿಂದ ನಡೆಯುವುದು ಸಾಧ್ಯವಿಲ್ಲ.

ಈಗ ಅಗತ್ಯವಾಗಿರುವುದು ಭಾಷೆಯ ಸಾಮಾಜಿಕ ಶಕ್ತಿಯನ್ನು ಕುರಿತ ಪ್ರಬಲ ಚಿಂತನೆ. ಎಲ್ಲ ಜನಪರ ಆಲೋಚನೆಗಳು ಮತ್ತು ಸಮಾಜಮುಖಿ ಸಂಕಥನಗಳು ಎಲ್ಲರಿಗೂ ಅವರದೇ ಭಾಷೆಯಲ್ಲಿ ಅರ್ಥವಾಗುವ ವ್ಯವಸ್ಥೆ. ಹಿಂದೆ ಧರ್ಮ ಪ್ರಸಾರಕ್ಕೆ ಭಾಷೆ ಬಳಕೆಯಾದಂತೆ, ಈಗ ಅಭಿವೃದ್ಧಿ ಸಂಗತಿಗಳ ಪ್ರಚಾರಕ್ಕೆ, ಧಾರ್ಮಿಕ ಸಹನೆಯ ಬೋಧನೆಗೆ, ವೈಜ್ಞಾನಿಕ ಮನೋಭಾವದ ಪ್ರಸಾರಕ್ಕೆ ಜನರ ಭಾಷೆಗಳೆಲ್ಲವೂ ಬಳಕೆಯಾಗಬೇಕು. ಇಲ್ಲದಿದ್ದರೆ, ಕೇವಲ ತುಳು ಮಾತ್ರ ಮಾತನಾಡಬಲ್ಲ ಕರಾವಳಿಯ ಹಲವು ಹೆಣ್ಣುಮಕ್ಕಳಿಗೆ ಆರೋಗ್ಯ ಮತ್ತು ಶೌಚಾಲಯದ ಬಗ್ಗೆ ಅರಿವು ಮೂಡಿಸುವುದು ಹೇಗೆ?

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT