ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ: ಬೆಲ್ಲವೂ ಅಲ್ಲ, ಬೀಗವೂ ಅಲ್ಲ!

Last Updated 16 ಜೂನ್ 2018, 9:15 IST
ಅಕ್ಷರ ಗಾತ್ರ

ನಾಗರಿಕ ಜಗತ್ತಿನಲ್ಲಿ ಪ್ರಜೆಗಳ ನಡವಳಿಕೆಯ ರೀತಿನೀತಿಗಳನ್ನು ಹೇಳಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರ, ಸಂವಿಧಾನ, ನ್ಯಾಯಾಲಯ, ಪೊಲೀಸ್ ಇಲಾಖೆ ಮುಂತಾದುವೆಲ್ಲವೂ  ಇರುತ್ತವೆ. ಅಲ್ಲದೆ ಜೀವನದಲ್ಲಿ ನಡೆನುಡಿಗೆ ಸಂಬಂಧಿಸಿದಂತೆ ಜನರಿಗೆ ಒಂದು ವೈಯಕ್ತಿಕ ಸಂಹಿತೆಯೂ ಇರುತ್ತದೆ. ಹಾಗಿದ್ದೂ ಅಪರಾಧಗಳು ಘಟಿಸುವುದರಿಂದ, ಆ ಉಲ್ಲಂಘನೆಗಳನ್ನು ಗುರುತಿಸುವುದು ಮತ್ತು ಗದರುವುದು ಆಡಳಿತ ವ್ಯವಸ್ಥೆಯ ಕೆಲಸ. ಈ ಮುಖ್ಯ ಅಧಿಕಾರವು ಕೆಲವರ ಕೈಯಲ್ಲಿ ಇರುವುದಿಲ್ಲ, ಮತ್ತು ಹಾಗೆ ಇರುವುದೂ ಸರಿಯಲ್ಲ.

ಆದರೆ ಜಗತ್ತು ಒಪ್ಪಿದ ಈ ಸತ್ಯಕ್ಕಿಂತ ಭಿನ್ನವಾದ ಬೆಳವಣಿಗೆ ನಮ್ಮ ನಡುವೆ ಆಗುತ್ತಿದೆಯಲ್ಲ ಎಂಬುದೇ ಸದ್ಯದ ತಲ್ಲಣ-ತಳಮಳ. ನಮ್ಮ ಸಾರ್ವಜನಿಕ ಬದುಕಿನ ಮೇಲೆ ಸುಮ್ಮನೆ ಕಣ್ಣು ಹಾಯಿಸಿದರೆ ಅನೇಕ ಸಂಗತಿಗಳು ರಾಚುತ್ತವೆ. ಎಲ್ಲ ಪ್ರಜೆಗಳೂ ನಾವು ಹೇಳಿದಂತೆಯೇ ಯೋಚಿಸಬೇಕು ಮತ್ತು ಮಾತನಾಡಬೇಕು ಎಂದು ಕೆಲವರು ಕಟ್ಟುನಿಟ್ಟಿನ ಆದೇಶ ಕೊಡುತ್ತಿದ್ದಾರಲ್ಲ, ಯಾರಿವರು? ‘ನೀವು ಬೇರೆ ಏನು ಹೇಳುವುದೂ ಸರಿಯಲ್ಲ, ಹೇಳುವ ಹಕ್ಕೂ ನಿಮಗಿಲ್ಲ, ನಾವು ಹೇಳಿದಂತೆಯೇ ನೀವು ಹೇಳಬೇಕು. ನೀವೇನು ಹೇಳುತ್ತೀರೋ ಅದೆಲ್ಲ ಸುಳ್ಳು, ನಾವು ಹೇಳುವುದೇ ಸತ್ಯ’ ಎನ್ನುವುದು ಅವರು ಮಂಡಿಸುವ ಏಕೈಕ ವಾದ.

‘ನಾವು ಹೇಳಿದ್ದನ್ನೆಲ್ಲಾ ಕೇಳಿಸಿಕೊಂಡು ನೀವು ಬಾಯಿ ಮುಚ್ಚಿಕೊಂಡು ಬಿದ್ದಿರಬೇಕು, ನೀವೇನಾದರೂ ಬಾಯಿ ತೆರೆದರೆ ಅದು ಭಿನ್ನಮತ ಆಗುತ್ತದೆ’ ಎಂದು ಇವರು ಬೆದರಿಸುತ್ತಾರೆ. ಯಾವುದು ನ್ಯಾಯ–ಧರ್ಮ, ಯಾವುದು ಸಂಸ್ಕೃತಿ, ಯಾವುದು ಇತಿಹಾಸ ಎನ್ನುವುದಕ್ಕೆಲ್ಲ ಇವರದೇ ವ್ಯಾಖ್ಯಾನ ಇರುತ್ತದೆ. ಯಾರು ಏನು ಉಡಬೇಕು, ಏನು ಉಣಬೇಕು ಎಂಬುದನ್ನೂ ಇವರೇ ಕಟ್ಟುನಿಟ್ಟು ಮಾಡುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಜನ ಸ್ವತಂತ್ರವಾಗಿ ಬದುಕಬಹುದು ಎಂದು ಸಂವಿಧಾನ ಹೇಳುತ್ತದೆ- ಆದರೆ ‘ನಂ ವಿಧಾನ’ವೇ ಬೇರೆ ಎಂದು ಇವರು ಗರ್ಜಿಸುತ್ತಾರೆ. ‘ಪ್ರತಿರೋಧ ತೋರುವಂಥ ಪಾಪ ಮಾಡಿದರೆ ನಿಮ್ಮನ್ನು ಕೊಂದು ತಿಂದೇ ಪರಿಹಾರ ಕೊಡುತ್ತೇವೆ. ನಿಮ್ಮ ಪ್ರಾಣದ ಮೇಲೆ ನಮ್ಮ ನಿಯಂತ್ರಣ ಇದೆ’ ಎನ್ನುತ್ತಾರೆ ಧರ್ಮಾಧಿಕಾರ ಕೈಯಲ್ಲಿ ಹಿಡಿದು ಸ್ವಯಂ ಪಟ್ಟಾಭಿಷೇಕ ಮಾಡಿಕೊಂಡ ಈ ಧರ್ಮಸಾಮ್ರಾಟರು.

ಜಗತ್ತಿಗೆ ಈ ಬೆಳವಣಿಗೆ ಅಪರಿಚಿತವಲ್ಲ. ಹಲವಾರು ದೇಶಗಳಲ್ಲಿ ಧರ್ಮದ ಹೆಸರಿನಲ್ಲಿ ಆಗಿರುವ, ದಿನದಿನಕ್ಕೆ ವಿಸ್ತರಿಸುತ್ತಿರುವ ಇಂಥ ಬೆಳವಣಿಗೆ ಎಲ್ಲರಿಗೂ ಗೊತ್ತೇ ಇದೆ. ಧರ್ಮಾಂಧತೆ ಮತ್ತು ಮೂಲಭೂತವಾದ ಎರಡೂ ಸೇರಿ ಭಯೋತ್ಪಾದನೆಗೆ ಜನ್ಮಕೊಟ್ಟು ಬಹಳ ಕಾಲವಾಗಿದೆ. ಮೊದಲು ಅದರ ಹೆಸರು ಕೇಳಿರದಿದ್ದ ದೇಶಪ್ರದೇಶಗಳಲ್ಲೂ ಈಗ ಅದು ನವಧರ್ಮದಂತೆ ಹರಡುತ್ತಿದೆ. ಧಾರ್ಮಿಕತೆಯಿಂದ, ಧರ್ಮಾಂಧತೆಯಿಂದ ಮನುಕುಲವನ್ನು ಉದ್ಧಾರ ಮಾಡುವ ಅವರ ಕನಸು ಬೇರೆಯವರ ಪಾಲಿಗೆ ದುಃಸ್ವಪ್ನ. ಇತಿಹಾಸದ ಯಾವ ಹುಣ್ಣಿಗೂ ಧರ್ಮಾಧಿಕಾರ ಮುಲಾಮು ಹಚ್ಚಿರುವುದನ್ನು ಯಾರೂ ನೋಡಿಲ್ಲ. 

ಧರ್ಮದ ಹೆಸರೆತ್ತದೆಯೂ ಸರ್ಕಾರಗಳು, ಅದರ ನೇತಾರರು ಹೀಗೆಯೇ ಮಾತನಾಡಿದಾಗ ಅದನ್ನು ಸರ್ವಾಧಿಕಾರ ಎಂದು ಕರೆಯುತ್ತೇವೆ. ಅಂಥವೆಷ್ಟನ್ನೋ ಜಗತ್ತು ನೋಡಿಬಿಟ್ಟಿದೆ. ನಲವತ್ತು ವರ್ಷಗಳ ಹಿಂದೆ ಪ್ರಜಾಸತ್ತಾತ್ಮಕ ದೇಶದ ಮೇಲೆ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ತುರ್ತು ಪರಿಸ್ಥಿತಿ ಹೇರಿದಾಗ ನಮಗೂ ಸರ್ವಾಧಿಕಾರದ ಅನುಭವ ಆಯಿತು. ನಾವು ಊದುವ ಸೀಟಿಗೆ ತಕ್ಕಂತೆ ರೈಲ್ವೆ ಟೈಂಟೇಬಲ್‌ನಂತೆ ದೇಶ ಚಲಿಸಬೇಕು ಎಂಬ ಆದೇಶ ಹೇಗೆ ಪ್ರಜಾಪ್ರಭುತ್ವಕ್ಕೇ ಹಳಿ ತಪ್ಪಿಸಿತು ಎನ್ನುವುದನ್ನೂ ಕಂಡಾಯಿತು. ಸರ್ವಾಧಿಕಾರ ಹೆಚ್ಚು ಕಾಲ ಬಾಳುವುದಿಲ್ಲ ನಿಜ, ಆದರೆ ಅದು ವೇಷಾಂತರಗಳಲ್ಲಿ ಮತ್ತೆ ಹುಟ್ಟದೇ ಇರುವುದಿಲ್ಲ.

ದೇಶದಲ್ಲಿ ಏನಾದರೂ ಅನಪೇಕ್ಷಿತ ಬೆಳವಣಿಗೆ ಆದಾಗ ಅದು ವಿಸ್ತಾರವಾದ ಸಾರ್ವಜನಿಕ ಪ್ರತಿಕ್ರಿಯೆಯನ್ನು ಪಡೆಯುವುದು ಸಹಜ. ಇಂಥದೊಂದು ಬೆಳವಣಿಗೆ ಕುರಿತು ಹಲವು ಮೂಲೆಗಳಿಂದ ಹಲವು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಹಾಗೆ ಸೃಜನಶೀಲರ ಗುಂಪಿನಿಂದ ಹೊರಟ ಒಂದು ಪ್ರತಿಕ್ರಿಯೆ, ಕ್ರಮೇಣ ಒಂದು ಸಾಮೂಹಿಕ ಪ್ರತಿರೋಧದ ಸ್ವರೂಪವನ್ನು ಪಡೆಯುತ್ತಿದೆ. ಸಾಹಿತಿ–ಕಲಾವಿದರ ಸಮೂಹದ ಇಂಥ ಪ್ರತಿಕ್ರಿಯೆಯ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಟಿಪ್ಪಣಿಗಳು ಅವಕ್ಕಿರುವ ಲಕ್ಷ್ಮಣ ರೇಖೆಯನ್ನು ಎಂದೋ ದಾಟಿಬಿಟ್ಟಿವೆ. ವಿಷಯ ಕೈಗೆತ್ತಿಕೊಂಡವರೆಲ್ಲ ನಡೆಸುತ್ತಿರುವ ಪ್ರಹಾರಗಳು ಸಾಂಸ್ಕೃತಿಕ ಸಿಡಿಲುಗಳಂತೆ ಎರಗುತ್ತಿವೆ. ಧಾರ್ಮಿಕತೆಯೂ ಅಧಿಕಾರವೂ ಒಂದೆಡೆ ಸೇರಿದಾಗ ಏನಾಗಬೇಕೋ ಅದು ಆಗುತ್ತಿದೆ.

‘ನಾವು ಮೆಚ್ಚುವ ಧಾರ್ಮಿಕ ಸಿದ್ಧಾಂತವನ್ನು ನೆಚ್ಚಿದ ನಮ್ಮ ರಾಜಕೀಯ ಪಕ್ಷವೇ ಬಹುಮತ ಪಡೆದು ದೇಶವನ್ನಾಳುವ ಅಧಿಕಾರ ಪಡೆದಿದೆ. ಆದ್ದರಿಂದ ಇದು ನಮ್ಮ ಹೆಮ್ಮೆಯ ಸರ್ಕಾರ. ಇದನ್ನು ಕುರಿತು ಯಾರೂ ಏನೂ ಟೀಕೆ ಮಾಡಬಾರದು. ನಮ್ಮ ಸರ್ಕಾರವನ್ನು ಟೀಕಿಸಿದರೆ ನಮ್ಮ ಧರ್ಮವನ್ನು ಟೀಕಿಸಿದಂತೆ. ನಾವು ಸಹಿಸಿಕೊಂಡು ಸುಮ್ಮನಿರುವುದಿಲ್ಲ’ ಎಂಬರ್ಥದ ಸವಾಲು, ಆಕ್ರೋಶ ಮತ್ತು ಬೆದರಿಕೆ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಇದನ್ನು ಸರ್ಕಾರವೇ ತಮ್ಮದು ಅಂದುಕೊಂಡ ಕೆಲವರ ಗರ್ವಾಧಿಕಾರ ಎಂದು ಕರೆಯೋಣವೇ?

ಪ್ರಜಾಸತ್ತಾತ್ಮಕ ದೇಶದಲ್ಲಿ ಏನು ಬೆಳವಣಿಗೆ ಆದರೂ ಅದಕ್ಕೆ ಟೀಕೆ, ಪ್ರತಿಕ್ರಿಯೆ, ವ್ಯಾಖ್ಯಾನ, ವಿಶ್ಲೇಷಣೆ, ಪ್ರತಿರೋಧ ಇವೆಲ್ಲ ಇದ್ದೇ ಇರುತ್ತವೆ. ಇವೆಲ್ಲ ಬರೀ ವಿರೋಧ ಪಕ್ಷಗಳ ಗುತ್ತಿಗೆ ಅಲ್ಲ. ಒಂದು ರಾಜಕೀಯ ಪಕ್ಷ ಒಂದೇ ಸ್ವರೂಪದ ಘಟನೆಯನ್ನು ಕುರಿತು, ಅಧಿಕಾರದಲ್ಲಿ ಇದ್ದಾಗ ಮತ್ತು ಇಲ್ಲದಿದ್ದಾಗ ಬೇರೆ ಬೇರೆ ರೀತಿಗಳಲ್ಲಿ ಪ್ರತಿಕ್ರಿಯೆ ನೀಡುತ್ತದೆ. ಕಳೆದ ಒಂದೂವರೆ ವರ್ಷದಲ್ಲಿ ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಇನ್ನಿತರ ವಲಯಗಳಿಂದ ಪ್ರತಿಕ್ರಿಯೆಗಳು ಬರುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ, ಪ್ರತಿಕ್ರಿಯೆಗಳನ್ನು ಆಹ್ವಾನಿಸುವ ಹೆಚ್ಚು ಕ್ರಿಯೆಗಳು ಅಥವಾ ಘಟನೆಗಳು ಇವೆ ಎಂದಷ್ಟೇ ಅರ್ಥ.

ಯಾರು ಯಾವುದನ್ನು ಯಾವ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಾರೆ ಎನ್ನುವ ವ್ಯಾಖ್ಯಾನ ಇರಲಿ, ಅಸಲಿಗೆ ಏನೋ ಒಂದು ಘಟನೆ ಮೊದಲು ಸಂಭವಿಸಿರಬೇಕು- ಆಮೇಲೆ ಅದರ ದುರ್ಬಳಕೆ, ದುರುಪಯೋಗದ ಮಾತು. ಘಟನೆಗಳು, ಸಂಕೇತಗಳ ಮೂಲಕವೇ ಸಾಮಾಜಿಕ-ರಾಜಕೀಯ ಬೆಳವಣಿಗೆಯನ್ನು ವಿಶ್ಲೇಷಣೆ ನಡೆಯುವುದು ಎನ್ನುವುದೂ ಇದರಷ್ಟೇ ಮುಖ್ಯ. ಉತ್ತರ ಪ್ರದೇಶದ ದಾದ್ರಿಘಟನೆ ಸಾಮರಸ್ಯದ ಕದಡುವಿಕೆಗೆ ಹೇಗೆ ಒಂದು ಸಂಕೇತವೋ ಹಾಗೆ ಅದನ್ನು ಕುರಿತ ಅಸಮಾಧಾನ, ಆತಂಕ ಪ್ರಕಟಮಾಡಲು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ವಾಪಸ್ ಮಾಡುವುದೂ ಒಂದು ಸಂಕೇತ.

ಪ್ರಶಸ್ತಿಯನ್ನು ವಾಪಸ್ ಮಾಡುವುದು, ಸಮಾಜದ ಆ ಅನಪೇಕ್ಷಿತ ಬೆಳವಣಿಗೆಯ ಕಾರಣಗಳು ಮತ್ತು ಅದರ ಕಾರಣಕರ್ತರನ್ನು ಪ್ರಶ್ನಿಸುತ್ತಿದೆ. ಪ್ರಶ್ನೆ ಮಾಡಲು ಮತ್ತು ಪ್ರತಿರೋಧ ವ್ಯಕ್ತಪಡಿಸಲು ಕೆಲವು ಲೇಖಕರು, ಕಲಾವಿದರಿಗೆ ಈ ತೀರ್ಮಾನ ಸರಿಯೆನ್ನಿಸಿದೆ. ಪ್ರಶಸ್ತಿ ವಾಪಸ್ ಮಾಡದವರು ಸಾಮಾಜಿಕ ಸಂವೇದನೆ ಇಲ್ಲದವರು ಎಂದೇನೂ ತೀರ್ಮಾನಿಸಬೇಕಿಲ್ಲ. ನೊಬೆಲ್ ಪ್ರಶಸ್ತಿ ಸೇರಿ ಎಲ್ಲವನ್ನೂ ಗಮನಿಸಿದರೆ ಚರಿತ್ರೆಯಲ್ಲಿ ಇದು ಮೊದಲೂ ಅಲ್ಲ, ಕೊನೆಯದೂ ಅಲ್ಲ.

ಯಾರು ಏನು ಸಮರ್ಥನೆಗಳನ್ನು ಕೊಟ್ಟರೂ ಸಾಹಿತ್ಯ ಅಕಾಡೆಮಿ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ ಎನ್ನುವುದು ಎಲ್ಲರಿಗೂ ಗೊತ್ತು. (ಪ್ರಸಾರ ಭಾರತಿ ಒಂದು ಸ್ವಾಯತ್ತ ಸಂಸ್ಥೆ, ದೂರದರ್ಶನ ಒಂದು ಸ್ವತಂತ್ರ ವಾಹಿನಿ ಎಂಬುದನ್ನೂ ನಾವು ಕೇಳುತ್ತಲೇ ಇದ್ದೇವೆ. ಹಾಗೆಯೇ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯುವ ವಿಜಯದಶಮಿ  ಆಚರಣೆ ಮತ್ತು ಅದರ ಮುಖ್ಯಸ್ಥರ ಭಾಷಣದ ನೇರ ಪ್ರಸಾರ ಅದರಲ್ಲಿ ಆಗುತ್ತದೆ ಎನ್ನುವುದನ್ನೂ ನೋಡಿದ್ದೇವೆ.

ಈ ಬಾರಿ ಪ್ರಸಾರ ಭಾರತಿಯಲ್ಲಿ ವಿಶೇಷೋಪನ್ಯಾಸವನ್ನು ಕೇಂದ್ರ ಸಚಿವರೇ ಮಾಡಲಿದ್ದಾರೆ ಎಂಬುದನ್ನೂ ಇದೀಗ ಓದಿದ್ದೇವೆ.) ಹೀಗಿರುವಾಗ ಪ್ರಶಸ್ತಿಗೂ ಸರ್ಕಾರಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗೆ ಹಲವು ಬಣ್ಣದ ಉತ್ತರಗಳಿರುತ್ತವೆ. ‘ಪ್ರಶಸ್ತಿ ವಾಪಸ್ ಮಾಡಿದರೆ ನಮ್ಮ ಸರ್ಕಾರವನ್ನು ದೂಷಿಸಿದಂತೆ, ನಮ್ಮ ಪ್ರಧಾನ ಮಂತ್ರಿಯನ್ನು ಟೀಕಿಸಿದಂತೆ’ ಎಂದು ಕೆಲವರು ಕೆಂಡ ಕಾರುತ್ತಾರೆ- ಯಾಕೆ ಅವು ಮಾಡಬಾರದ ಕೆಲಸಗಳೇ? ಅಪರಾಧ ಖಂಡಿತಾ ಅಲ್ಲ. ಅವನ್ನು ನಾವಷ್ಟೇ ಅಲ್ಲ, ನೀವೂ ಮಾಡಬಹುದು ಎಂದವರಿಗೆ ಹೇಳಬೇಕು.

ಪ್ರಶಸ್ತಿ ವಾಪಸ್ ಮಾಡಿದ ಈ ಸಾಹಿತಿ ಕಲಾವಿದರು ದೇಶದಲ್ಲಿ ಈ ಹಿಂದೆ, ಇತ್ತೀಚಿನ ದಶಕಗಳಲ್ಲಿ ನಡೆದ ಅಮಾನವೀಯ, ರಾಜಕೀಯ ದುರುದ್ದೇಶದ ದುರ್ಘಟನೆಗಳಿಗೆ ಏಕೆ ಪ್ರತಿಕ್ರಿಯೆ ವ್ಯಕ್ತ ಪಡಿಸಲಿಲ್ಲ, ಆಗೇಕೆ ಪ್ರಶಸ್ತಿ ವಾಪಸ್ ಮಾಡಲಿಲ್ಲ ಎಂಬುದು ಇನ್ನೊಂದು ಟೀಕೆ. ಹಿಂದಿನ ಸರ್ಕಾರದ ತುರ್ತು ಪರಿಸ್ಥಿತಿ ಹೇರಿಕೆ, ಸ್ವರ್ಣ ಮಂದಿರದ ಮೇಲಿನ ದಾಳಿ ಮುಂತಾದ ಹಲವು ಅಪದ್ಧಗಳಿಗೆ ಪದ್ಮಪ್ರಶಸ್ತಿಗಳ ವಾಪಸಾತಿಯೇ ಲೇಖಕರ ವಿರೋಧದ ಸಂಕೇತವಾಗಿದೆ.

ಪ್ರತಿಭಟನೆ ಎಲ್ಲ ಕಾಲಕ್ಕೂ ಎಲ್ಲದರ ಬಗ್ಗೆಯೂ ಒಂದೇ ರೀತಿ ಇರಲು ಸಾಧ್ಯವಿಲ್ಲ ಎನ್ನುವುದು ನಮಗೆಲ್ಲ ಗೊತ್ತು. ‘ನಮ್ಮ ದೇಶದ ಸ್ವಾತಂತ್ರ್ಯಕ್ಕೆ ನಡೆದ ಚಳವಳಿ ಇನ್ನೂ ಐವತ್ತು ವರ್ಷಗಳ ಮೊದಲೇ ಯಾಕೆ ತೀವ್ರವಾಗಿ ನಡೆಯಲಿಲ್ಲ, ಆಗಲೂ ಬ್ರಿಟಿಷರ ದುರಾಡಳಿತ ಇತ್ತಲ್ಲ, ನಡೆದಿದ್ದರೆ 47 ಕ್ಕೆ ಮೊದಲೇ ಸ್ವಾತಂತ್ರ್ಯ ಬರುತ್ತಿತ್ತಲ್ಲ’ ಎಂದು ಯಾರಾದರೂ ಪ್ರಶ್ನಿಸಿದರೆ ನನಗಂತೂ ಉತ್ತರಿಸಲು ಆಗುವುದಿಲ್ಲ.

ಪ್ರತಿಭಟನೆಗೂ ಪಕ್ಷನಿಷ್ಠೆಗೂ ಸಂಬಂಧ ಇರಬಹುದು, ಇಲ್ಲದಿರಬಹುದು. ‘ಪ್ರಶಸ್ತಿ ವಾಪಸ್’ ಎಂಬ ಪ್ರತಿಭಟನೆಯನ್ನು ಪ್ರತಿಭಟಿಸಲು ಇವರಿಗೆ ಪಕ್ಷನಿಷ್ಠೆ ಇರಬಹುದಾದರೆ, ಅವರಿಗೂ ಇದ್ದುಕೊಂಡುಹೋಗಲಿ. ಪ್ರಶಸ್ತಿ ವಾಪಸ್ ಮಾಡುವ ಅದನ್ನು ಬೆಂಬಲಿಸುವ ಸಾಹಿತಿಗಳೆಲ್ಲ ಕಾಂಗ್ರೆಸ್ ಬಾಲಬಡುಕರು, ಎಡಪಂಥೀಯರು ಎಂಬ ಆರೋಪವೂ ಬಿರುಸಾಗಿಯೇ ಇದೆ.

ಪ್ರಶಸ್ತಿ ವಾಪಸ್ ಮಾಡಿದ ಸಾಹಿತಿಗಳ ಹಿನ್ನೆಲೆ ತನಿಖೆ ಮಾಡಿ ಎಂದೊಬ್ಬ ಸಚಿವರು ಅಬ್ಬರಿಸಿದರು, ಬೇಕಾದರೆ ಅಂಥವರ ಜಾತಕ ವನ್ನೂ ಸಂಗ್ರಹಿಸಲಿ, ಅದನ್ನು ಅಧ್ಯಯನ ಮಾಡಲು ಹೇಗೂ ಜ್ಯೋತಿಷಶಾಸ್ತ್ರ ಬೋಧಿಸುವ ವಿಶ್ವವಿದ್ಯಾಲಯವಿದೆ. ಕಾಂಗ್ರೆಸ್ ಇರುವ ಹಾಗೆ ಬಿಜೆಪಿಯೂ ಇದೆ, ಎಡಪಂಥ ಇರುವ ಹಾಗೆ ಬಲಪಂಥವೂ ಇದೆ ಎನ್ನುವುದು ಯಾರಿಗೆ ಗೊತ್ತಿಲ್ಲ?  ಬಲಗೈ ಮಾತ್ರ ಇರಲಿ, ಎಡಗೈ ಬೇಡ ಎಂದು ಹೇಳುವುದು ಚಂದವಲ್ಲ. ಪ್ರಶಸ್ತಿ ವಾಪಸ್ ಮಾಡಿದ ಸಾಹಿತಿಗಳ ಹಿನ್ನೆಲೆ ತನಿಖೆ ಮಾಡಿ ಎಂದೊಬ್ಬ ಸಚಿವರು ಅಬ್ಬರಿಸಿದರು. ಬೇಕಾದರೆ ಅಂಥವರ ಜಾತಕಗಳನ್ನೂ ಸಂಗ್ರಹಿಸಲಿ, ಅವನ್ನು ಅಧ್ಯಯನ ಮಾಡಲು ಹೇಗೂ ಜ್ಯೋತಿಷಶಾಸ್ತ್ರ ಬೋಧಿಸುವ ವಿಶ್ವವಿದ್ಯಾಲಯವಿದೆ.

ಸಾಹಿತ್ಯ ಅಕಾಡೆಮಿ ಸಾಹಿತಿಗಳ ಸಾಧನೆಯನ್ನು ಗಮನಿಸಿ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿ ಅನ್ನುವುದು ಅದು ತನಗೆ ಬೇಕಾದ ಸಾಹಿತಿಗಳ ಬಾಯಿಗೆ ಇಡುವ ಬೆಲ್ಲ ಅಲ್ಲ. ಈ ಬೆಲ್ಲವನ್ನು ತಿಂದು ನೀವು ಅಕಾಡೆಮಿ, ಸರ್ಕಾರ ಕುರಿತು ಸವಿಯಾದ ಮಾತುಗಳನ್ನೇ ಆಡಬೇಕು, ಕೆಟ್ಟದ್ದನ್ನು ಕಂಡರೆ ಕೋಪದ ಮಾತು ಆಡಬಾರದು ಎಂದೇನೂ ಹೇಳಲಾಗಿರುವುದಿಲ್ಲ. ಹಾಗೆಯೇ ಅಕಾಡೆಮಿಯ ಪ್ರಶಸ್ತಿ ಅನ್ನುವುದು, ಸಾಹಿತಿಗಳು ಮತ್ತು ಕಲಾವಿದರು ಸಮಾಜದಲ್ಲಿ ತಮ್ಮ ಸುತ್ತ ನಡೆಯುವ ಬೆಳವಣಿಗೆಗಳಿಗೆ ಪ್ರತಿಕ್ರಿಯೆ ಸೂಚಿಸಬಾರದು ಎಂದು ಅವರ ಬಾಯಿಗೆ ಹಾಕುವ ಬೀಗವೂ ಅಲ್ಲ.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT