ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಕಿಂಡಿಯ ಬದಲು ಸೂರ್ಯ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೆಲವು ದಶಕಗಳ ಹಿಂದೆ ಕೇರಳದ ತ್ರಿವೇಂದ್ರಂ ಜಿಲ್ಲೆಯ ಥೈಕಾಡ್ ಊರಿನಲ್ಲಿ ಒಬ್ಬ ಹುಡುಗ ಬಾಲಕರ ಸರಕಾರ  ಮಾದರಿ ಶಾಲೆಯಲ್ಲಿ ಕಲಿಯುತ್ತಿದ್ದ. ಅವನ ಹಾಗೂ ಅವನ ಪರಿವಾರದ ಕನಸೆಂದರೆ ಈತ ವೈದ್ಯನಾಗುವುದು. ಶಾಲೆಯಲ್ಲಿ ಮತ್ತು ಕಾಲೇಜು ಹಂತದಲ್ಲಿ ಆತ ಚೆನ್ನಾಗಿಯೇ ಓದಿದ. ಅವನು ಓದುವ ರೀತಿ ಗಮನಿಸಿ ಎಲ್ಲರೂ ಆತ ವೈದ್ಯನಾಗುವುದು ಖಚಿತ­ವೆಂದೇ ಭಾವಿಸಿದ್ದರು.

ಹುಡುಗನೂ ಧೈರ್ಯದಿಂದ ಪ್ರವೇಶ ಪರೀಕ್ಷೆ ಬರೆದು ಬಂದ. ಆದರೆ ಫಲಿತಾಂಶ ಆಘಾತಕರ­ವಾಗಿತ್ತು. ಈ ಹುಡುಗನಿಗೆ ಪ್ರವೇಶ ದೊರಕಲಿಲ್ಲ. ತರುಣನ ಎದೆ ಒಡೆದು­ಹೋಯಿತು, ಆತ್ಮವಿಶ್ವಾಸ ನೆಲಕಚ್ಚಿತು. ಮುಂದೆ ಏನು ಮಾಡುವುದೆಂಬುದು ತೋಚದಾದಾಗ ಅವನ ಭೌತಶಾಸ್ತ್ರದ ಶಿಕ್ಷಕರು ಧೈರ್ಯನೀಡಿ ಸಂತೈಸಿದರು. ‘ವೈದ್ಯಕೀಯ ಒಂದೇ ಜೀವನದ ಪರಮ ಗುರಿಯಲ್ಲ. ನೀನು ಯಾವುದನ್ನೇ ತೆಗೆದುಕೊಂಡರೂ ಪೂರ್ತಿ ಶಕ್ತಿ ಹಾಕಿ ಪ್ರಯತ್ನಮಾಡು, ಯಶಸ್ಸು ದೊರ­ಕುತ್ತದೆ’ ಎಂದು ಹರಸಿದರು.

ಹಿಂಜರಿಕೆಯಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಂಡರೂ ಆತ ಮರಳಿ ಉತ್ಸಾಹದಿಂದ ಬಿ.ಎಸ್.ಸಿ. ಪದವಿ ಪೂರೈಸಿದ. ಬರೀ ಬಿ.ಎಸ್.ಸಿ. ಆದರೆ ಮುಂದೆ ಭವಿಷ್ಯವೇನು ಎಂದು ಅವನ ತಂದೆ-ತಾಯಿಯರು ಚಿಂತಿಸಿದರು. ನಂತರ ಮದ್ರಾಸಿನ ಐ.ಐ.ಟಿ ಯಿಂದ ಭೌತಶಾಸ್ತ್ರದಲ್ಲಿ ಎಂ.ಎಸ್.ಸಿ ಯನ್ನು ೧೯೭೭ ರಲ್ಲಿ ಹಾಗೂ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಎಮ್.ಟೆಕ್.ನ್ನು ಅದೇ ಸಂಸ್ಥೆಯಿಂದ ೧೯೭೯ ರಲ್ಲಿ ಪಡೆದುಕೊಂಡ.

ಆಗಿನ್ನೂ ದೇಶದಲ್ಲಿ ಕಂಪ್ಯೂಟರ ತಂತ್ರಜ್ಞಾನ ನಿಧಾನವಾಗಿ ತಳ ಊರುತ್ತಿದ್ದ ದಿನಗಳು. ಆತ ಮುಂಬೈಗೆ ಹೋಗಿ ಅಲ್ಲಿ ಪಟ್ನಿ ಕಂಪ್ಯೂಟರ್‌ ಕಂಪನಿಯಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ. ಅಲ್ಲಿ ನಾರಾಯಣಮೂರ್ತಿ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ದೊರಕಿತು. ಮುಂದೆ ನಾರಾಯಣ­ಮೂರ್ತಿ ಅವರ ನೇತೃತ್ವದಲ್ಲಿ ಏಳು ಜನ ತರುಣರ ಗುಂಪು ಬೆಂಗಳೂರಿನಲ್ಲಿ ಇನ್ಫೊಸಿಸ್‌ ಸ್ಥಾಪಿಸಿತು.

ಈ ತರುಣನೂ ಆ ತಂಡದಲ್ಲಿ ಸೇರಿಕೊಂಡ. ಆ ತರುಣನ ಹೆಸರು ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್.
ಮುಂದೆ ಅವರು ಬೆಳೆದದ್ದೂ ಅಗಾಧವಾಗಿ. ೨೦೦೭ರಲ್ಲಿ ಇನ್ಫೊಸಿಸ್‌ ಕಂಪನಿಯ ಸಿ.ಇ.ಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡರು. ಈಗ ೨೦೧೧ಕ್ಕೆ ತಮ್ಮ ಅಧಿಕಾರವನ್ನು ಸಹೋದ್ಯೋಗಿಗೆ ಹಸ್ತಾಂತರಿಸಿದರೂ ಇನ್ಫೊಸಿಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಮುಂದುವರೆದಿದ್ದಾರೆ.

೨೦೧೩-೧೪ನೇ ಸಾಲಿಗೆ ಭಾರತೀಯ ಉದ್ದಿಮೆಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿ­ದ್ದಾರೆ. ಅವರು ಗಳಿಸಿದ ಆಸ್ತಿ ಇಂದಿಗೆ ಸುಮಾರು 810 ಕೋಟಿ ರೂಪಾಯಿಗ­ಳು! ಗೋಪಾಲಕೃಷ್ಣನ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ­ರದಿದ್ದರೆ ಬಹುಶಃ ಕೇರಳದ ಒಂದು ಊರಿನಲ್ಲಿ ಔಷಧಿ ಕೊಡುತ್ತ ಉಳಿಯುತ್ತಿದ್ದರೆಂದು ತೋರುತ್ತದೆ.

ಅದೇನೂ ಸಣ್ಣ ಕೆಲಸವಲ್ಲ, ಆದರೆ ಈಗ ದೊರೆತಂತಹ ವಿಶಾಲವಾದ ವೇದಿಕೆ ದೊರಕುತ್ತಿರಲಿಲ್ಲವೇನೋ? ಆದ್ದರಿಂದ ಆಗದೇ ಹೋದದ್ದಕ್ಕೆ, ದೊರಕದೇ ಉಳಿದದ್ದಕ್ಕೆ ತಲೆಕೆಡಿಸಿಕೊಂಡು ಮುಂಬ­ರುವ ಅವಕಾಶಗಳನ್ನು ತಪ್ಪಿಸಿ­ಕೊ­ಳ್ಳು­­ವುದರ ಬದಲು ಹಿಂದಿನದನ್ನು ಹಿಂದಿಕ್ಕಿ ಹೊಸ ಬೆಳಕಿನ ಕಿಂಡಿಗಳನ್ನು ತೆರೆದು ಹೊಸ ದಿಗಂತದತ್ತ ದೃಷ್ಟಿ ಬೀರಿದರೆ ಹೊಸ ಬೆಳಕೇಕೆ, ಹೊಸ ಸೂರ್ಯನೇ ದೊರೆತಾನು!

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT