ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ಕವಿತೆಯೊಂದು ತಿರುತಿರುಗಿ ನೆನಪಾದಂತೆ...

Last Updated 31 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಹಾಗೆ ನೋಡಬೇಕೆಂದರೆ ಮೇಲಿನ ಮನೆಯಲ್ಲಿ ಎಷ್ಟು ಜನ ಹುಡುಗರಿದ್ದರೆಂಬುದು ಯಾರಿಗೂ ಸ್ಪಷ್ಟವಾಗಿ ಗೊತ್ತಿದ್ದಂತಿರಲಿಲ್ಲ. ಮೂರು ಜನ ಅಂತ ಕೆಲವರು ಹೇಳಿದರೆ, ಆ ಫ್ಲಾಟಲ್ಲಿ ಇರೋದು ನಾಲ್ಕು ಜನ ಅಂತ ಸೆಕ್ಯುರಿಟಿಯೂ ಮತ್ತು ಮ್ಯಾನೇಜರೂ ಹೇಳುತ್ತಿದ್ದರು. ಪೊಲೀಸಿನವರು ಬಂದಾಗ ಮನೆ ಬೀಗ ತೆಗೆಸಿದ್ದು ಮಾತ್ರ ದೊಡ್ಡ ಕೆಲಸವೇ ಆಗಿ ಹೋಯಿತು.

ಮನೆ ಓನರು ಮುಂಬೈಯಲ್ಲೆಲ್ಲೋ ಇದ್ದರು. ಅವರಿಗೆ ಫೋನ್ ಮಾಡಿ, ಅವರು ಹುಡುಗರಲ್ಲಿ ಯಾರನ್ನೋ ಸಂಪರ್ಕಿಸಿ ಅವರು ಬೀಗ ಎಲ್ಲಿಟ್ಟಿದ್ದೇವೆ ಅಂತ ಹೇಳುವಾಗ ನಡು ಮಧ್ಯಾಹ್ನ ದಾಟಿ ಹೋಗಿತ್ತು. ಹುಡುಗರು ಬೀಗವನ್ನು ಮನೆ ಬಾಗಿಲ ಬಳಿ ಇಟ್ಟಿದ್ದ ಹೂಕುಂಡದ ಬುಡದಲ್ಲಿ ಇಟ್ಟಿದ್ದರು. ಒಬ್ಬೊಬ್ಬರೂ ಒಂದೊಂದು ಟೈಮಿಗೆ ಬರುತ್ತಿದ್ದುದರಿಂದ ಈ ವ್ಯವಸ್ಥೆ ಅವರಿಗೆ ಹೊಂದಿಕೆಯಾಗಿತ್ತು.

ಮನೆ ಒರೆಸಲು ಅಜ್ಜಿಯೊಬ್ಬಳು ಬರುತ್ತಿದ್ದಳು. ಅವಳನ್ನು ಬಿಟ್ಟರೆ ಇನ್ಯಾರೂ ಬಂದು ಹೋದದ್ದು ಯಾರ ಗಮನಕ್ಕೂ ಬಂದಿರಲಿಲ್ಲವೇನೋ. 
ಆ ಹುಡುಗರೂ ಯಾವ್ಯಾವಾಗಲೋ ಪಾರ್ಟಿ ಗೀರ್ಟಿ ಮಾಡಿಕೊಂಡರೂ ಯಾರಿಗೂ ತೊಂದರೆ ಆಗುವಂತೆ ನಡೆದುಕೊಳ್ಳುತ್ತಿರಲಿಲ್ಲ. ಬಹಳ ಗಂಭೀರನಡೆಯುಳ್ಳವರು ಅಂತ ಅನ್ನಿಸಿತ್ತು. ಸಮಸ್ಯೆ ಏನೆಂದರೆ ಗಂಭೀರವಾಗಿದ್ದರೆ ಯಾರೂ ತಲೆಕೆಡಿಸಿಕೊಳ್ಳಲ್ಲ.

ಸ್ವಲ್ಪ ಚಂಗುಲಾದರೆ ಸಾಕು ‘ಬ್ರೇಕಿಂಗ್ ನ್ಯೂಸ್’ ಆಗಿಯೇ ಸಿದ್ಧ. ಇನ್ನು ಆ ಚಂಗುಲು ಸ್ವಭಾವ ಚಿಕ್ಕವಯಸ್ಸಿನ ಹುಡುಗಿಯಲ್ಲಿದ್ದು, ಅದು ಮದುವೆಯಾಗದೆ, ತನ್ನ ಅನ್ನ ತಾವು ದುಡಿದುಕೊಂಡು ಯಾವುದೋ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಯಾವಾಗಲೂ ನಗುನಗುತ್ತಾ ಇರುವ ಸುಂದರಿಯಾಗಿದ್ದರಂತೂ ನಮ್ಮ ದೇಶದಲ್ಲಿ ಅದು ಪ್ರತಿರಾತ್ರಿಯ ‘ದ ನ್ಯೂಸ್ ಅವರ್’ ಸುದ್ದಿಯ ಅಪ್‌ಡೇಟ್ ಆಗದೆ ಇರಲು ಸಾಧ್ಯವೇ ಇಲ್ಲ.

ಅವಳು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ಓಡಿಸುವ ಗಾಡಿಯವರೆಗೆ ಎಲ್ಲರ ಹತ್ತಿರವೂ ಎಕ್ಸ್‌ಕ್ಲೂಸಿವ್ ಮಾಹಿತಿ ಇರೋದಂತೂ ಶತಸಿದ್ಧ. ಆ ಮಾಹಿತಿ ತಪ್ಪೋ ಸರಿಯೋ ಅಥವಾ ಹೇಳುತ್ತಿರುವವರ ಕಲ್ಪನೆಯೋ ಅದೆಲ್ಲ ಬೇರೆ ಪ್ರಶ್ನೆ.

‘ಮದುವೆ ಆಗಿತ್ತಾ ಅವರಲ್ಲಿ ಯಾರಿಗಾದರೂ?’  ಟಕ್ ಅಂತ ಆಲೋಚನಾ ಸರಣಿ ತುಂಡರಿಸಿ ಜಯಾ ತನ್ನ ಮನೆ ಮುಂದಿಂದ ಮೆಟ್ಟಿಲು ಇಳಿದು ಹೋಗುತ್ತಿದ್ದ ಸೆಕ್ಯುರಿಟಿಯವನನ್ನು ಕೇಳಿದಳು. ಮನೆಯೊಳಗೆ ಸಿಕ್ಕಿದ್ದ ಬ್ರಾ ಮತ್ತು ಪ್ಯಾಂಟಿಗಳಿಗೆ ಒಂದು ಸೂಕ್ತ ಉತ್ತರ ಎಲ್ಲರಿಗೂ ಬೇಕಿತ್ತು. ಎಷ್ಟೇ ಆಧುನಿಕ ಅಂದುಕೊಂಡರೂ ಹೀಗೆ ಗಂಡು ಹೆಣ್ಣಿನ ಸಂಬಂಧದ ವಿಷಯ ಬಂದಾಗ ಪ್ರಶ್ನೆಗಳಿಗೆ ಕೊನೆಯುಂಟೆ? ಪ್ರಾಮಾಣಿಕವಾಗಿ ಇನ್ನೊಬ್ಬರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವವರು ಬಹಳ ಕಡಿಮೆ ಜನ. ಉಳಿದವರೆಲ್ಲರಿಗೂ ಊರ ಉಸಾಬರಿಯೇ ಜೀವಂತಿಕೆಯ ಚಿನ್ಹೆ!

‘ಇಲ್ಲಮ್ಮ... ಎಲ್ರೂ ಬ್ಯಾಚುಲರ್ಸೇ’ ಸೆಕ್ಯುರಿಟಿ ಬಹಳ ಧೃಡತೆಯಿಂದ ಹೇಳಿದ. ಅವನಿಗೆ ಎಲ್ಲಾ ವಿವರಗಳೂ ಗೊತ್ತಿರುವಂತಿತ್ತು. ಎಷ್ಟೆಂದರೂ ಅವನೊಬ್ಬನಿಗೇ ತಾನೇ ಒಳಗೆ ನಿರ್ಭಿಡೆಯಿಂದ ಹೋಗಿ ಬರಲು ಪರ್ಮಿಷನ್ ಇದ್ದದ್ದು! ಹುಡುಗರು ಆಗಾಗ ರಮ್ಮು, ವಿಸ್ಕಿ, ವೈನು, ಬಿಯರು ಸೇವನೆ ಮಾಡುತ್ತಾ ಪಾರ್ಟಿ ಮಾಡುತ್ತಿದ್ದುದರಿಂದ ಖಾಲಿ ಬಾಟಲಿಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಕೆಲಸ ಸೆಕ್ಯುರಿಟಿಯದ್ದೇ ಆಗಿತ್ತು.

ಮೇಲಾಗಿ, ಹುಡುಗರು ವಾಸಿಸುವ ಮನೆಯಲ್ಲಿ ಸೆಕ್ಯುರಿಟಿಗೆ ವಿಶೇಷ ಮರ್ಯಾದೆ ಕೂಡ ಇರುವಂತೆ ಇಲ್ಲೂ ಇತ್ತು. ಎಲ್ಲಾ ಸೀಕ್ರೆಟ್ಟುಗಳನ್ನು ತಿಳಿದೂ ಅವನ್ನು ಕಾಪಾಡುವ ಕಲೆ ಅವರಿಗೆ ಗೊತ್ತಿತ್ತು. ಅದಕ್ಕಾಗೇ ಗಾರ್ಡುಗಳಿಗೆ ಸಾಮಾನ್ಯ ಜ್ಞಾನ ಜಾಸ್ತಿ, ಹಾಗಂತಲೇ ಅವರಿಗೆ ಟಿಪ್ಸೂ ಜಾಸ್ತಿ. ನಂಬಿಕೆ ಬರದಿದ್ದರೆ ಮನೆ ಕೆಲಸದವರನ್ನೂ, ಸೆಕ್ಯುರಿಟಿಯನ್ನೂ ಕೇಳಿ ನೋಡಿ. ಅನಾದಿ ಕಾಲದಿಂದಲೂ ಇದೇ ಕ್ರಮವೇ ಜಾರಿಯಲ್ಲಿದೆ!

‘ಎಲ್ಲರೂ ಬ್ಯಾಚುಲರ್ಸೇ ಅಂದ ಮೇಲೆ ಹೆಣ್ಣು ಮಕ್ಕಳ ಬಟ್ಟೆ ಎಲ್ಲಿಂದ ಬಂತೋ?’ ಜಯಾ ಸ್ವಲ್ಪ ತಮಾಷೆ ಮಾಡುತ್ತಲೇ ಪ್ರಶ್ನಿಸಿದರು. ಸೆಕ್ಯುರಿಟಿ ಅವಳನ್ನೊಮ್ಮೆ ಅಪಾದಮಸ್ತಕ ನೋಡಿದ. ‘ಅಕ್ಕಾ! ನಿನ್ ಬಂಡ್ವಾಳ ನನಗ್ ಗೊತ್ತಿಲ್ವಾ’ ಅನ್ನೋ ಭಾವದಲ್ಲಿ. ಅಥವಾ ಜಯಾಗೇ ಹಾಗೆ ಅನ್ನಿಸಿತೋ ಏನೋ...

‘ಗೊತ್ತಿಲ್ಲಮ್ಮ. ಪೊಲೀಸ್ನೋರು ನಮ್ಮ ಇನ್ನೊಬ್ಬ ಸೆಕ್ಯುರಿಟಿಯನ್ನ ಕರ್ಕಂಬಾ ಅಂತ ಹೇಳಿದ್ರು. ಹೋಗ್ಬೇಕು...’  ಅಂದವನೇ ಧಡಧಡ ಹೊರಟ.
ಜಯಾಗೆ ಸೋಜಿಗವಾಯಿತು. ಇವಳು ತಲೆ ಮೇಲೆ ಎತ್ತಿ ನೋಡುತ್ತಿರುವುದಕ್ಕೊ ಅಲ್ಲಿಂದ ಪೊಲೀಸಪ್ಪ ಒಬ್ಬ ಕೆಳಗೆ ನೋಡುತ್ತಿರುವುದಕ್ಕೂ ಸರಿಯಾಯಿತು. ಅವನು ಇವಳನ್ನೇ ನೋಡುತ್ತಿರುವುದು ನೋಡಿ ಜಯಾಗೆ ಕಸಿವಿಸಿಯಾಯಿತು. ಸುಮ್ಮನೆ ತಲೆ ಕೆಳಗೆ ಹಾಕಿ ಮನೆ ಒಳಗೆ ಹೋದಳು. ಎಲ್ಲರೂ ಟಿ.ವಿ ನೋಡುತ್ತಾ ಕುಳಿತಿದ್ದರು. ಕೋಟಿ ಯಾವುದೋ ಸಿನಿಮಾದ ಫೈಟಿಂಗ್ ನೋಡುತ್ತಾ ಸುಖಾಸುಮ್ಮನೆ ಉತ್ತೇಜಿತನಾಗಿ ಕುಳಿತಲ್ಲಿಂದಲೇ ಎಗರಾಡುತ್ತಿದ್ದ.

ಹತ್ತು ನಿಮಿಷ ಆಗಿರಬಹುದೇನೋ.  ಕಾಲಿಂಗ್ ಬೆಲ್ ಸದ್ದಾಯಿತು. ಬಾಗಿಲು ತೆರೆದೇ ಇತ್ತು. ಹೊರಗೆ ಸೆಕ್ಯುರಿಟಿ ನಿಂತಿದ್ದ. ‘ಅಮ್ಮಾ, ನಿಮ್ಮನ್ನ ಪೊಲೀಸರು ಬರ ಹೇಳವ್ರೆ’  ಅಂತ ಹೇಳಿದ. ಜಯಾ ಮುಖ ತಕ್ಷಣ ಬಣ್ಣಗೇಡಾಯಿತು. ಸರಳಾ ಟಿ.ವಿಯಲ್ಲಿ ಮಗ್ನರಾಗಿದ್ದರು. ಜಯಾ ಸರಳಾನ್ನ ತಿವಿದು ಎಬ್ಬಿಸಿದಳು. ‘ಬನ್ರೀ ಹೋಗೋಣ. ಪೊಲೀಸ್ರು ಕರ್ದಿದಾರಂತೆ’  ಅಂದಳು. ಸರಳಾ ಎದ್ದರು. ಉಳಿದವರು ಇವರಿಬ್ಬರನ್ನು ಸುಮ್ಮನೆ ನೋಡಿದರು. ಇಡೀ ಪ್ರಕರಣವೇ ಒಂಥರಾ ಆತಂಕ ತರುವಂಥದ್ದು ಎನ್ನಿಸಿತು.

ಮೇಲೆ ಹೋದರೆ ಮೂರು ಜನ ಪೊಲೀಸ್ ಸಿಬ್ಬಂದಿ ಹುಡುಗರ ಮನೆಯಲ್ಲಿ ಎಲ್ಲಾ ಸಾಮಾನುಗಳನ್ನು ಪರಿಶೀಲಿಸುತ್ತಿದ್ದರು. ಜಯಾ ಸ್ವಲ್ಪ ಹೆದರಿಕೆಯಿಂದಲೇ ‘ಏನ್ ಸಾರ್! ಬರಹೇಳಿದ್ದಿರಂತೆ’  ಅಂತ ಹಿಂಜರಿಯುತ್ತಾ ಕೇಳಿದಳು. ಎದುರಿಗೆ ಏನನ್ನೋ ಪರೀಕ್ಷೆ ಮಾಡುತ್ತಾ ನಿಂತ ಪೊಲೀಸೊಬ್ಬ ಕೇಳಿಯೂ ಕೇಳದವನಂತೆ ಸುಮ್ಮನಿದ್ದ. ಜಯಾ ಅದೇ ಮಾತನ್ನು ಇನ್ನೊಮ್ಮೆ ರಿಪೀಟ್ ಮಾಡಿದಳು. ಆಗ ಮಾತ್ರ ಸ್ವಲ್ಪ ತಲೆ ತಿರುಗಿಸಿ ಅವಳತ್ತ ನೋಡಿ ನಕ್ಕ.

ಭಾರೀ ಎತ್ತರ ಗಾತ್ರವಿದ್ದ ಈ ಮನುಷ್ಯ ಕ್ರೈಮ್ ಸೀನ್‌ನಲ್ಲಿ ಇರೋದರಿಂದ ಏನನ್ನೋ ನೋಟ್ ಮಾಡಿಕೊಳ್ಳುತ್ತಿದ್ದ. ಜಯಾ ಮಾತಾಡಿದ್ದು ಕೇಳಿದರೂ ವಾಪಸು ಉತ್ತರ ಕೊಡಲು ನಿಂತರೆ ಎಲ್ಲಿ ಮಾಹಿತಿ ಮರೆತುಹೋಗುತ್ತದೋ ಅಂತ ಹೆಣ್ಣು ದನಿಯನ್ನೂ ಅಲಕ್ಷಿಸಿ ಕರ್ತವ್ಯ ಪ್ರಜ್ಞೆ ಮೆರೆದ.

ಮೊದಲೇ ಹೆದರಿಕೊಂಡಿದ್ದ ಜಯಾ ಯಾವಾಗ ಅದೇ ಮಾತನ್ನ ಮತ್ತೆ ರಿಪೀಟ್ ಮಾಡಿದಳೋ, ಅವಳ ಮುಂದೆ ಬಂದು ನಿಂತ. ಹತ್ತಿರತ್ತಿರ ಆರಡಿ ಎತ್ತರ ಇದ್ದಿರಬೇಕು. ‘ನೀವೇನಾ ಈ ಫ್ಲ್ಯಾಟಿನ ಕೆಳಗಿನ್ ಮನೇಲಿ ಇರೋದು?’  ಅಂತ ಕೇಳಿದ.

ಅವನು ಪ್ರಶ್ನೆ ಇನ್ನೂ ಮುಗಿಸಿರಲಿಲ್ಲವೇನೋ.. ಉಮ್ಮಳಿಕೆ ಬಂದ ಹಾಗೆ ಜಯಾಗೂ ಸರಳಾಗೂ ನಗು ಅನ್ನೋದು ಕಾದ ಹಾಲಿನ ಥರ ಉಕ್ಕುಕ್ಕಿ ಬಂದುಬಿಟ್ಟಿತು. ತಡೆಯುವ ಯಾವ ಪ್ರಯತ್ನವೂ ಕೈಗೂಡಲಿಲ್ಲ. ನಗಲು ಶುರು ಮಾಡಿದರು. ಆ ಪೊಲೀಸಪ್ಪನಿಗೆ ನಗು ಬರಲಿಲ್ಲ. ಈ ಲೂಸುಗಳ ನಗು ನಿಲ್ಲುವ ತನಕ ಸುಮ್ಮನಿದ್ದು ಮತ್ತೆ ಅದೇ ಪ್ರಶ್ನೆ ಸ್ವಲ್ಪ ಜೋರಾಗಿಯೇ ಕೇಳಿದ.

ಚಾನ್ಸ್ ಇದ್ದಿದ್ದರೆ ನೆಲದ ಮೇಲೆ ಉರುಳಾಡಿ ನಗುತ್ತಿದ್ದರೇನೋ. ಆದರೆ ಅದಕ್ಕೆ ಆಸ್ಪದವಿರಲಿಲ್ಲದ್ದರಿಂದ ನಿಂತಲ್ಲೇ ತಮ್ಮ ಹೆಣ್ತನ ಘನತೆ-ಮರ್ಯಾದೆ ಎಲ್ಲವನ್ನೂ ಮರೆತು ಹೊಟ್ಟೆ ಹಿಡಿದುಕೊಂಡು ನಕ್ಕರು. ಆ ನಗುವಿಗೆ, ಅದರ ಅಬ್ಬರಕ್ಕೆ ಎಲ್ಲದಕ್ಕೂ ಸಾಕ್ಷಿಯಾಗಿ ಪೊಲೀಸಪ್ಪ ಅಲ್ಲೇ ನಿಂತಿದ್ದ. ಅಷ್ಟು ಸ್ಥಿತಪ್ರಜ್ಞನಂತೆ ನಿಂತಿದ್ದನ್ನು ನೋಡಿ ಇವರಿಬ್ಬರಿಗೂ ದಿಗಿಲಾಗಿ ಕಷ್ಟಪಟ್ಟು ಬಾಯಿಮುಚ್ಚಿಕೊಂಡು ಸುಮ್ಮನಾಗುವ ಪ್ರಯತ್ನ ಮಾಡಿದರೂ ಕಣ್ಣಲ್ಲೆಲ್ಲಾ ನೀರು ತುಂಬುವಷ್ಟು ನಕ್ಕುಬಿಟ್ಟಿದ್ದರಿಂದ ನಗು ಮತ್ತೆ ಮತ್ತೆ ಭುಕ್ ಭುಕ್ ಎಂದು ಉಮ್ಮಳಿಸಿ ಬರುತ್ತಿತ್ತು.

‘ನಾನ್ಸೆನ್ಸ್ ಥರ ಆಡ್ಬೇಡಿ. ಸುಮ್ನೆ ಉತ್ತರ ಹೇಳ್ರೀ. ಇಲ್ಲಾಂದ್ರೆ ಗೊತ್ತಲ್ಲಾ!’ ಅಂತ ಬೆದರಿಕೆ ಹಾಕಿದ ಪೊಲೀಸಪ್ಪ. ಗಂಡಸರಾಗಿದ್ರೆ ‘ವದ್ದುಬುಡ್ತೀನಿ’ ಅಂತ ಹೇಳಬಹುದಿತ್ತು. ಹೆಣ್ಣು ಮಕ್ಕಳು ಹೆಂಗೆ ಆಡಿದರೂ ಆ ಮಾತುಗಳನ್ನು ಹೇಳೋ ಹಂಗಿಲ್ಲವಲ್ಲ! ಇತ್ತ ಈ ಇಬ್ಬರು ಹೆಣ್ಣುಗಳಿಗೂ ಸ್ವಲ್ಪ ಎಚ್ಚರ ಬಂದು ಸಾವರಿಸಿಕೊಂಡು ‘ಹೌದು ಸರ್, ಕೆಳಗಿನ ಫ್ಲ್ಯಾಟಿನಲ್ಲಿ ನಾವೇ ಇರೋದು ಸರ್’ ಅಂತ ಜಯಾ ಉತ್ತರ ನೀಡಿ ಕೃತಾರ್ಥರಾದರು. ಆಮೇಲೆ ರೊಟೀನ್ ಪ್ರಶ್ನೆಗಳಾದುವು.

ಇಲ್ಲಿ ಯಾರಾದ್ರೂ ಪರಿಚಯ ಇದ್ರಾ, ಹುಡುಗರಷ್ಟೇ ಇದ್ರಾ ಇಲ್ಲಾ ಹುಡುಗೀರೂ ಇದ್ರಾ? ಇಲ್ಲಿ ಕಳ್ತನ ಆಗ್ತಿರೋವಾಗ ಕೆಳಗೆ ಏನಾದರೂ ಸದ್ದು ಕೇಳಿಸಿತಾ? ನಿಮ್ಮನೇಲಿ ಎಷ್ಟು ಜನ ಇದೀರಾ? ಈ ಬೆಡ್ ಶೀಟನ್ನು ಯಾರು ನೋಡಿದ್ದು? ಅವರ್ಯಾಕೆ ಅಷ್ಟು ಹೊತ್ತಲ್ಲಿ ಎದ್ದಿದ್ದರು ಅಂತೆಲ್ಲಾ ಕೇಳಿಕೊಂಡು ‘ಸಾರ್ ಮೊದಲಿಗೆ ಯಾರೋ ಲೇಡೀಸ್ ಅಂತ ಬೆಡ್ ಶೀಟ್ ನೋಡಿದ್ದು ಅವರನ್ನು ಮಾತಾಡಿಸಿಕೊಂಡು ಬರ್ತೀನಿ ಸರ್’ ಅಂತ ಸಹೋದ್ಯೋಗಿಗೆ ಹೇಳಿದ.

ಅವರು ‘ಆಯ್ತು ಕಣ್ರೀ, ಇಲ್ಲೇನೂ ಇರೋ ಹಂಗಿಲ್ಲ’ ಅಂತ ಆ ಸಹೋದ್ಯೋಗಿ ಇವನತ್ತ ನೋಡಿಯೂ ನೋಡದೆ ಅನುಮಾನದಿಂದಲೇ ಹೇಳಿದರು. ಜಯಾ ಮನೆಗೆ ಬಂದು ಮೊದಲು ವಿಜಿಯನ್ನು ಪೊಲೀಸಪ್ಪ ಮಾತನಾಡಿಸಿದ. ಅವನು ಕೇಳುವ ಪ್ರಶ್ನೆಗಳನ್ನೆಲ್ಲಾ ಕೇಳಿಸಿಕೊಂಡು ಉತ್ತರ ನೀಡಿದಳು ವಿಜಿ. ಅವನು ಸುಮ್ಮನೆ ಹೊರಟುಹೋದ. ವಿಜಿ, ಜಯಾ ಮತ್ತು ಸರಳಾರ ಕಡೆ ‘ಸರಿಯಾಗಿ ಹೇಳಿದ್ನಾ’ ಎನ್ನುವಂತೆ ನೋಡಿದಳು.

ಪೊಲೀಸರ ಹತ್ತಿರ ಮಾತನಾಡಲು ಭಯ ಇಲ್ಲದಿದ್ದರೂ ಬಹಳ ಸಲಿಗೆಯಿಂದ ಮಾತನಾಡುವ ಹಾಗೂ ಇಲ್ಲವಲ್ಲ? ಮೇಲಾಗಿ ಮೊದಲೇ ಜಯಾ ಹೆದರಿಕೊಂಡಿದ್ದಾಳೆ ಅಂತ ಕಾಳಜಿ ವಹಿಸಿದರೆ ಆಯಮ್ಮ ಈಗ ಪೊಲೀಸಪ್ಪನನ್ನು ನೋಡಿ ಸಿಕ್ಕಾಪಟ್ಟೆ ನಗುತ್ತಿದ್ದಾಳೆ. ಎಲ್ಲಾ ಕಲಸುಮೇಲೋಗರವಾಯಿತು.

ವಿಜಿಗೆ ತಲೆ ಕೆಟ್ಟು ಹೋದಂತಾಯಿತು. ‘ಯಾಕ್ರೀ ನಗ್ತಿದೀರಾ? ಏನ್ ಮೆಂಟಲ್ಲಾ? ಬೆಳಿಗ್ಗೆ ತಾನೇ ಪೊಲೀಸ್ನೋರು ಅಂದ್ರೆ ಹೆದರಿ ಸಾಯ್ತಾ ಇದ್ರಿ? ಈಗ ನೋಡಿದರೆ ನಗ್ತಿದೀರಲ್ಲಾ?’
‘ವಿಜಿ, ಆಯಪ್ಪ... ಅವನ್ ಹೈಟು ವೈಟು ಆ ಯೂನಿಫಾರ್ಮು ಎಲ್ಲಾ ನೋಡಿದ್ರೆ ಹೆದರಿಕೆ ಬರೋ ಹಂಗೇ ಇದೆ ಕಣೆ...ಆದರೆ...’

‘ಆದ್ರೆ?’
‘ಆ ಧ್ವನಿ ಮಾತ್ರ ಕುಯ್ಯ್ ಕುಯ್ಯ್ ಅನ್ನೋ ಹಂಗಿತ್ತಲ್ಲಾ! ಫಸ್ಟ್ ಟೈಮ್ ಕೇಳಿದಾಗ ನಗು ಕಂಟ್ರೋಲ್ ಮಾಡೋಕೇ ಆಗಲಿಲ್ಲ’ ಎಂದರು ಜಯಾ.

‘ಏ ಥೂ! ನಿಮ್ ಬಾಯಿಗಿಷ್ಟು! ರಿ ಸರಳಕ್ಕಾ ಇವ್ರಿಗಂತೂ ಸೀರಿಯಸ್ನೆಸ್ಸೇ ಇಲ್ಲ. ನೀವಾದ್ರೂ???’
‘ಇಲ್ಲಾ ಕಣೇ... ನನಗೆ ಆಯಪ್ಪನ್ನ ನೋಡಿದ್ರೆ ನಮ್ಮೂರಲ್ಲಿ ನಾಟಕದಲ್ಲಿ ಪಾರ್ಟು ಮಾಡೋರು ನೆನಪಾಗಿ ಬಿಟ್ರು. ಅವ್ರೂ ಹಿಂಗೇ ಇದ್ರು. ಸಿಕ್ಕಾಪಟ್ಟೆ ಎತ್ತರ, ಭರ್ಜರಿ ಮೈಕಟ್ಟು. ನಡೆದರೆ ಹಂಗೇ ಸ್ಟೇಜು ನಡುಗಿ ಬಿಡಬೇಕು, ಹಂಗಿದ್ರು. ಯಾವಾಗ್ಲೂ ಮಾಡ್ತಾ ಇದ್ದುದು ದುರ್ಯೋಧನನ ಪಾರ್ಟು.  ಮೇಕಪ್ಪು ವಿಗ್ಗು ಹಾಕಿದ್ರೆ ಅಬ್ಬಾ! ಸಾಕ್ಷಾತ್ ದುರ್ಯೋಧನನೇ ಅನ್ನಬೇಕು ಹಂಗಿದ್ರು...’

‘ರೀ... ಯಾವ್ ಸೀಮೆ ನೀವು! ಈವತ್ತಿನ ಮಾತು ಹೇಳ್ರೀ ಅಂದ್ರೆ ದುರ್ಯೋಧನನ ಪಾರ್ಟು ಹೇಳ್ತೀರಲ್ಲ? ಇದು ಯಾರ ಕರ್ಮಾನೋ...’
‘ಹೇಳೋಕೆ ಹೊರಟಿದ್ದು ಮುಗಿಸೋ ತನಕ ಸುಮ್ಮನೆ ಬಾಯಿ ಮುಚ್ಚಿಕೊಂಡಿರು...’
‘ಹೂ ಹೇಳಿ... ಅದೂ ಆಗೋಗ್ಬಿಡ್ಲಿ ಅತ್ಲಾಗೆ..’

‘ಆ ದ್ರೌಪದಿ ಸೀರೆ ಎಳಿಯೋ ಸೀನಲ್ಲಿ ಆ ಯಪ್ಪ ಸ್ಟೇಜಿಗೆ ಎಂಟ್ರಿ ಕೊಟ್ಟುಬಿಟ್ಟು ಅತ್ತಲಿಂದ ಇತ್ಲಾಗೆ, ಇತ್ತಲಿಂದ ಅತ್ಲಾಗೆ... ಏನ್ ಕಳೆ ಗೊತ್ತಾ! ಅದರೆ ಡೈಲಾಗ್ ಹೇಳೋಕೆ ಬಾಯಿ ಓಪನ್ ಮಾಡಿದ್ರೆ ಮಾತ್ರಾ... ಅಯ್ಯೋ!!’

‘ಯಾಕೆ? ಡೈಲಾಗು ಮರೀತಿದ್ರಾ?’
‘ಮರಿಯೋದರ ಮನೆ ಹಾಳಾಯ್ತು. ಎಲ್ಲಾ ಡೈಲಾಗೂ ನೆನಪಿರುತ್ತಿತ್ತು. ಆದರೆ ಧ್ವನಿ ಮಾತ್ರ ಕೀಚಲು ಕಣೆ. ಕುಯ್ಯ್ ಕುಯ್ಯ್ ಕುಯ್ಯ್ ಅಂತಿತ್ತು. ಪಾಪ... ಅವನು ಮಾತಾಡೋಕೆ ಶುರು ಮಾಡಿದ್ರೆ ಜನ ಸಿಕ್ಕಾಪಟ್ಟೆ ನಗ್ತಾ ಇದ್ರು...’
ಹೌದಲ್ಲ? ವೈಭವೋಪೇತ ಸೆಟ್ಟುಗಳು, ಪರದೆಗಳು. ಅತಿ ಭಾವುಕ-ಕ್ರೂರ ಸನ್ನಿವೇಶವೊಂದು ಈ ಪಾತ್ರಧಾರಿ ಮೇಲೆ ಸಂಪೂರ್ಣ ಭಾರ ಹೊರಿಸಿ ಗಜವೊಂದು ಘೀಳಿಟ್ಟಂತೆ ಅನಾವರಣಗೊಳ್ಳಬೇಕು... ಅವನು ಬಾಯಿ ತೆರೆದ ತಕ್ಷಣ ಭೂಮಿ ನಡುಗಿಬಿಡಬೇಕು...

ಅವನ ವಾಕ್ ಕ್ರೌರ್ಯದಿಂದ ಜನ ಕುಮಟಿ ಬೀಳಬೇಕೆಂತೆಲ್ಲ ನಿರೀಕ್ಷಿಸುವಾಗ ಅವನ ಗಂಟಲು ಧ್ವನಿ ಒಡೆಯದೆ ಚೈನ್ ಬಾಕ್ಸಿನಲ್ಲಿ ಆಯಿಲ್ ಕೊರತೆಯಾದ ಸೈಕಲ್ಲಿನ ಸೌಂಡಿನ ಹಾಗೆ ಕೇಳಿಸಿದರೆ, ಆ ಕ್ಷಣದಲ್ಲಿ ಹುಟ್ಟುವ ಪ್ರತಿಕ್ರಿಯೆ ಅನಾಗರಿಕ ಅಂತೆಲ್ಲಾ ದೊಡ್ಡ ಮಾತಲ್ಲಿ ವರ್ಣಿಸಬಾರದು. ಸಿಂಪಲ್ಲಾಗಿ ಹೇಳೋದಾದರೆ ಅದು ‘ಭ್ರಮ ನಿರಸನ’ ಮಾತ್ರವೇ. ಹಾಸ್ಯ ರಸ ಉಕ್ಕಿಸುವಂಥ ಸನ್ನಿವೇಶ ಅದು.

ಈ ಸದರಿ ಭ್ರಮನಿರಸನಕ್ಕೆ ಆಯಾಮಗಳು ಸಾವಿರ ಇವೆ. ತೆಳ್ಳಗೆ ಬೆಳ್ಳಗಿರುವ ಹೆಣ್ಣು ಮಕ್ಕಳು ನಾಜೂಕಾಗಿರ್ತಾರೆ ಅಂದುಕೊಳ್ಳೋದು, ಅವರು ಬೀದಿ ಜಗಳ ಆಡೋದನ್ನ ನೋಡಿ ಆಶ್ಚರ್ಯ ಪಡೋದು... ಎತ್ತರಕ್ಕೆ ದಪ್ಪಕ್ಕೆ ಇರೋ ಗಂಡಸರು ಅಮರೀಶ್ ಪುರಿ ಥರಾನೋ, ಓಂ ಪುರಿ ಥರಾನೋ, ನಸೀರುದ್ದಿನ್ ಶಾ ಥರಾನೋ ಅಥವಾ ಅಮಿತಾಭ್ ಬಚ್ಚನ್ ಥರಾನೋ ಮಾತಾಡ್ತಾರೆ ಅಂದುಕೊಳ್ಳೋದು, ಅವರು ದೇಹಕ್ಕೆ ತಕ್ಕ ಧ್ವನಿ ಹೊರಡಿಸದಿದ್ದಾಗ ಯಕ್ಕಾ ಮಕ್ಕಾ ತಬ್ಬಿಬ್ಬಾಗೋದು. ಇಲ್ಲೂ ಹಾಗೇ ಆಗಿತ್ತು. ಹೊಟ್ಟೆಕಿಚ್ಚಾಗುವಷ್ಟು ಎತ್ತರ-ಗಾತ್ರದ ಆ ಪೊಲೀಸಪ್ಪನ ಧ್ವನಿ ಪೆಟ್ಟಿಗೆ ಅವನ ಮೈಕಟ್ಟಿಗೆ ತಕ್ಕನಾಗಿ ಇರಲಿಲ್ಲ ಅನ್ನುವುದೇ ಅವನ ಇಡೀ ವ್ಯಕ್ತಿತ್ವದ ಏರುಪೇರಿಗೆ ಸಾಕ್ಷಿಯಾಗಿತ್ತು.

ಬಹುಶಃ ಇದರಿಂದ ಅವನ ಕೆಲಸಕ್ಕೂ ತೊಂದರೆ ಆಗುತ್ತಿತ್ತೇನೋ. ಅವನು ಅದರೊಂದಿಗೆ ರಾಜಿ ಮಾಡಿಕೊಳ್ಳಲು ಎಷ್ಟು ಸಮಯ ಹಿಡಿದಿರಬಹುದು?
‘ಪಾಪ ಕಣ್ರೀ...ಅದಕ್ಕೆ ಅವನೇನು ಮಾಡೋಕಾಗತ್ತೆ? ದೇಹವನ್ನೂ, ಧ್ವನಿಯನ್ನೂ ದೇವರೇ ಕೊಟ್ಟಿದ್ದಪ್ಪಾ... ಸ್ವಲ್ಪಾನೂ ಸೆನ್ಸಿಟಿವಿಟಿ ಇಲ್ಲ ನಿಮಗೆ...’  ಅಂತ ವಿಜಿ ಹೇಳುತ್ತಿರುವಾಗ ಸೆಕ್ಯುರಿಟಿ ಮತ್ತೆ ಬಂದು ಬಾಗಿಲ ಹತ್ತಿರ ನಿಂತ.

‘ಮೇಡಂ... ಆ ಹುಡುಗರು ಬಂದಿದ್ದಾರೆ. ಪೊಲೀಸ್ನೋರ ಹತ್ತಿರ ಹುಡುಗಿಯರ ಬಟ್ಟೆ ತಮ್ಮದಲ್ಲ ಅಂತ ಹೇಳಿದರಂತೆ. ಕೆಳಗಿನ ಮನೆಯವರದ್ದು ಅಂತ’ ಅವನ ಮಾತು ಮುಗಿದಿರಲಿಲ್ಲ ಇನ್ನೂ... ಜಯಾ ಕಣ್ಣಲ್ಲಿ ಆಗಲೇ ದಳ ದಳ ನೀರು. ‘ನಾನ್ ಹೇಳ್ಳಿಲ್ಲವೇನ್ರೀ? ಇದು ನನ್ ಕುತ್ತಿಗೆಗೆ ಸುತ್ತಿಕೊಳ್ಳುತ್ತೆ ಅಂತ...’ ಎನ್ನುತ್ತಾ ಅಳಲು ಶುರು ಮಾಡಿದರು.

ಸರಳಾ ಮತ್ತೆ ತಲೆ ಮೇಲೆ ಕೈ ಹೊತ್ತು ಕುಳಿತರು. ಸೆಕ್ಯುರಿಟಿಯವ ‘ಬನ್ನೀಮ್ಮಾ...ಕರೀತಿದ್ದಾರೆ...’  ಅಂತ ಅವಸರ ಮಾಡಿದ. ಈ ಸಾರಿ ಜಯಾ, ಸರಳಾ ಮತ್ತು ವಿಜಿ ಮೂರೂ ಜನ ಹೊರಟರು.

ಪೊಲೀಸಿನವರನ್ನು ಕಂಡ ಕೂಡಲೇ ಜಯಾ ‘ಸಾರ್, ನಮ್ಮದಲ್ಲ ಈ ಬಟ್ಟೆ. ಇದರ ಬಗ್ಗೆ ನಮಗೆ ಗೊತ್ತಿಲ್ಲ. ಸುಮ್ಮನೆ ತೊಂದರೆ ಮಾಡಬೇಡಿ ಸಾರೂ... ನಿಮ್ಮ ಕಾಲ್ ಹಿಡ್ಕೋತೀನಿ’ ಅಂತ ಬಡಬಡಿಸಿದಳು.

‘ರೀ... ನಿಂತ್ಕೊಳ್ರಿ ಸುಮ್ನೆ. ಏ ಯಾಕೋ ಕರ್ಕೊಂಬಂದೆ ಇವರನ್ನ?’
‘ನೀವೇ ಕರ್ಕೊಂಬಾ ಅಂದ್ರಲ್ಲ ಸಾರ್? ಬಟ್ಟೆ ಇವರದ್ದಾ ಅಂತ ಕೇಳೋಕೆ?’
‘ಯಾವ್ ಬಟ್ಟೆ?’
‘ಚಡ್ಡಿ, ಬಾಡಿ, ಚೂಡಿದಾರು...’
‘ಲೈ ಬಾಂಚೊದ್! ಇವರಲ್ಲಿ ಯಾರೋ ಒಬ್ಬರ ಅಕ್ಕನದಂತೆ ಕಣಲೈ...ಆ ಕಟ್ಟಿರೋ ಬೆಡ್ ಶೀಟ್ ನಮ್ಮದಲ್ಲ ಅಂದ್ರು... ಅದು ಯಾರದ್ದು ಅಂತ ಮಾತಾಡ್ತಿದ್ರೆ ಹೋಗಿ ಇವರನ್ನ ಕರ್ಕೊಂಬಂದಿದಾನೆ ಬೇಕೂಫ...ನೀವ್ ಹೋಗೀಮ್ಮಾ...’
‘ಥ್ಯಾಂಕ್ಸ್ ಸಾರ್...’

‘ಅಂದ ಹಾಗೆ...ನೀವು ಆಂಧ್ರದವರಾ?’
ಜಯಾಗೆ ಹೃದಯ ಬಾಯಿಗೆ ಬಂತು. ಬೆಳಿಗ್ಗೆ ದೇವರಿಗೆ ದೀಪ ಹಚ್ಚಿಡಬೇಕಿತ್ತು ಅಂತ ತನ್ನನ್ನು ತಾನೇ ಶಪಿಸಿಕೊಂಡಳು. ‘ಹೌದು ಸರ್, ಯಾಕೆ?’

‘ಮುನಿರಾಜು ಗೊತ್ತಾ ನಿಮಗೆ?’
ಜಯಾ ಮನಸ್ಸಿನಲ್ಲೇ ಏಳುಕೊಂಡಲವಾಡನನ್ನು ನೆನೆದು ಹರಕೆ ಕಟ್ಟಿಕೊಂಡಳು. ‘ಯಾವ್ ಮುನಿರಾಜು ಸರ್?’ ಸರಳಾ ಮಧ್ಯೆ ಬಾಯಿ ಹಾಕಿದರು. ಕೆಟ್ಟ ಕವಿತೆಯೊಂದು ಮತ್ತೆ ಮತ್ತೆ ನಾಲಿಗೆ ತುದಿಯಲ್ಲೇ ನೆಲೆಸಿರುವಂತೆ ಯಾಕೋ ಈ ಘಟನೆ ಮುಗಿಯುವ ಲಕ್ಷಣಗಳನ್ನೇ ತೋರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT