ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರನೇ ಹುಟ್ಟುಹಬ್ಬದ ಸಂಭ್ರಮದಲ್ಲಿ...

Last Updated 16 ಜೂನ್ 2018, 9:09 IST
ಅಕ್ಷರ ಗಾತ್ರ

ಮೈಸೂರು ವಿಶ್ವವಿದ್ಯಾಲಯ ನೂರನೆಯ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯವರು ಇದೇ 27ರಂದು ಶತಮಾನೋತ್ಸವ ಆಚರಣೆಗಳನ್ನು ಉದ್ಘಾಟಿಸಲಿದ್ದಾರೆ. ವರ್ಷವಿಡೀ ನಡೆಯಲಿರುವ ಕಾರ್ಯಕ್ರಮಗಳ ಮೊದಲ ಹೆಜ್ಜೆಯಾಗಿ ಈ ತಿಂಗಳ 12ರಂದು ಶತಮಾನೋತ್ಸವ ಗೀತೆ ಬಿಡುಗಡೆಯಾಯಿತು.

ಇದರ ಜೊತೆಗೆ ವಿಶ್ವವಿದ್ಯಾಲಯದ ನೂರು ವರ್ಷಗಳ ಇತಿಹಾಸವನ್ನು ಹಿಡಿದಿಡುವ ಸಾಕ್ಷ್ಯಚಿತ್ರ, ಐತಿಹಾಸಿಕ ನಾಟಕ ಹಾಗೂ ಪುಸ್ತಕಗಳನ್ನು ಯೋಜಿಸಲಾಗಿದೆ.  ಮಾನಸ ಗಂಗೋತ್ರಿಯ ವಿಶಾಲ ಭೌತಿಕ ಪರಿಸರದ ಸೌಂದರ್ಯೀಕರಣ ಭರದಿಂದ ಸಾಗಿದೆ.

ಹೊಸ ಮಹಾದ್ವಾರ ಮತ್ತು ಗಡಿಯಾರ ಗೋಪುರ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದ್ದರೆ, ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣ, ವಸ್ತು ಸಂಗ್ರಹಾಲಯ, ತಾರಾಲಯ ಹಾಗೂ ಹೊಸ ವಿಜ್ಞಾನ ಕೇಂದ್ರಗಳನ್ನು ನಿರ್ಮಿಸುವ ಯೋಜನೆಗಳು ಘೋಷಿತವಾಗಿವೆ. ಇತರೆ ಬೌದ್ಧಿಕ ಚಟುವಟಿಕೆಗಳ ಪಟ್ಟಿಯಲ್ಲಿ ಮುಖ್ಯವಾದವುಗಳು ನೊಬೆಲ್ ಪ್ರಶಸ್ತಿ ವಿಜೇತರಿಂದ ಉಪನ್ಯಾಸ ಸರಣಿ ಮತ್ತು ಬರುವ ಜನವರಿಯಲ್ಲಿ ನಡೆಯಲಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 103ನೇ ಅಧಿವೇಶನ.

1916ರ ಜುಲೈ 27ರಂದು ಆರಂಭಗೊಂಡಾಗ, ಮೈಸೂರು ವಿಶ್ವವಿದ್ಯಾಲಯ ಭಾರತದ ಆರನೆಯ ಹಾಗೂ ದೇಶಿ ಸಂಸ್ಥಾನವೊಂದರಲ್ಲಿ ಸ್ಥಾಪಿತವಾದ ಮೊದಲ ವಿಶ್ವವಿದ್ಯಾಲಯ. ಇದಕ್ಕೆ ಮೊದಲು ಪ್ರಾರಂಭಗೊಂಡಿದ್ದ ಬಾಂಬೆ, ಮದ್ರಾಸ್, ಕಲಕತ್ತಾ (ಎಲ್ಲವೂ 1857ರಲ್ಲಿ), ಅಲಿಗರ್ ಮುಸ್ಲಿಮ್ ವಿ.ವಿ (1875) ಹಾಗೂ ಅಲಹಾಬಾದ್ (1887) ವಿಶ್ವವಿದ್ಯಾಲಯಗಳು ಬ್ರಿಟಿಷ್‌ ಭಾರತದಲ್ಲಿದ್ದವು.

ಮೈಸೂರಿನ ಆಧುನೀಕರಣಕ್ಕೆ ಅವಶ್ಯಕವೆಂದು ಭಾವಿಸಿ ಹೊಸದಾಗಿ ಕಟ್ಟಿದ ಸಂಸ್ಥೆಗಳ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯವೂ ಸೇರಿದೆ. ಇದಕ್ಕೆ ಮೊದಲು ಮೈಸೂರು ಸಂಸ್ಥಾನದ ಉನ್ನತ ಶಿಕ್ಷಣ ಸಂಸ್ಥೆಗಳು ಮದ್ರಾಸ್ ವಿಶ್ವವಿದ್ಯಾಲಯದ ಪ್ರಾದೇಶಿಕ ವ್ಯಾಪ್ತಿಗೆ ಒಳಪಟ್ಟಿತ್ತು.

ಹೊಸ ವಿಶ್ವವಿದ್ಯಾಲಯದ ರಚನೆಗೆ ಮದ್ರಾಸ್ ವಿಶ್ವವಿದ್ಯಾಲಯ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರೂ ಮೈಸೂರು ವಿ.ವಿ ಮೈಸೂರು ಸಂಸ್ಥಾನದ ವ್ಯಾಪ್ತಿಯನ್ನು ಒಳಗೊಂಡು ಜನ್ಮ ತಳೆಯಿತು. ಮಹಾರಾಜ ಕಾಲೇಜಿನಲ್ಲಿ 1913ರಿಂದ ಇತಿಹಾಸ ಪ್ರಾಧ್ಯಾಪಕರಾಗಿದ್ದ ಸಿ.ಆರ್.ರೆಡ್ಡಿಯವರು ಯುರೋಪ್ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳನ್ನು ಅಭ್ಯಸಿಸಿ ಹೊಸ ವಿಶ್ವವಿದ್ಯಾಲಯ ಹೇಗೆ ಕಾರ್ಯ ನಿರ್ವಹಿಸಬೇಕೆಂಬ ಸಾಂಸ್ಥಿಕ ಪರಿಕಲ್ಪನೆಯನ್ನು (ಇನ್‌ಸ್ಟಿಟ್ಯೂಷನಲ್ ಇಮ್ಯಾಜಿನೇಷನ್) ಒದಗಿಸಿದರು.

ಮುಂದಿನ ದಶಕಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ತನ್ನ ಪಥವನ್ನು ಕಂಡುಕೊಳ್ಳುತ್ತ ಬಂದಿತು. ಅದರ ಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಹಾಗೂ ಇನ್ನಿತರರ ಮುಂದಿದ್ದ ಮಾದರಿ ಪಶ್ಚಿಮದ ವಿಶ್ವವಿದ್ಯಾಲಯಗಳದ್ದು ಎಂಬುದರಲ್ಲಿ ಸಂಶಯವಿಲ್ಲ. ಕಾಶಿ ವಿದ್ಯಾಪೀಠ ಅಥವಾ ಗುಜರಾತ್ ವಿದ್ಯಾಪೀಠಗಳಂತೆ ದೇಶಿ ಮಾದರಿಯೊಂದನ್ನು ಹುಡುಕುವ ಪ್ರಯತ್ನ ಇಲ್ಲಿರಲಿಲ್ಲ.

ಐರೋಪ್ಯ ಮತ್ತು ಯುರೋಪಿನಲ್ಲಿ ಶಿಕ್ಷಣ ಪಡೆದ ಭಾರತೀಯ ಪ್ರಾಧ್ಯಾಪಕರು ಈ ಹೊಸ ಸಂಸ್ಥೆಯ ಮುಂಚೂಣಿಯಲ್ಲಿದ್ದರು. ಬ್ರಜೇಂದ್ರನಾಥ ಸೀಲ್, ರಾಧಕುಮುದ್ ಮುಖರ್ಜಿ ಮತ್ತು ಎಸ್. ರಾಧಾಕೃಷ್ಣನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಲೆಂದೇ ಮೈಸೂರಿಗೆ ಬಂದರು. ಹೊಸ ವಿಶ್ವವಿದ್ಯಾಲಯದ ಸಾಧನೆಯನ್ನು ಗುರುತಿಸಬೇಕೆಂದರೆ 1925–35ರ ನಡುವೆ ಆಲ್ಲಿ ಅಭ್ಯಸಿಸಿದ ಈ ಮೂವರು

ವಿದ್ಯಾರ್ಥಿಗಳನ್ನು ಗಮನಿಸಿ: ಕನ್ನಡ ಸಾಹಿತಿ ಕುವೆಂಪು, ಇಂಗ್ಲಿಷ್ ಕಾದಂಬರಿಕಾರ ಅರ್.ಕೆ. ನಾರಾಯಣ್ ಮತ್ತು ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ್. ವಿಭಿನ್ನ ಕ್ಷೇತ್ರಗಳಿಗೆ ಸೇರಿದವರಾದರೂ, ಈ ಮೂವರ ಸಂವೇದನೆ ಮತ್ತು ಮಹತ್ವಾಕಾಂಕ್ಷೆಗಳನ್ನು ಪೋಷಿಸುವಲ್ಲಿ ಮೈಸೂರು ವಿಶ್ವವಿದ್ಯಾಲಯದ ಪಾತ್ರ ಗಣನೀಯವಾದುದು.

ಇಂದಿನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ವಿಷಾದದ ದನಿಯೊಂದು ಆಗಾಗ ಕೇಳಿಬರುತ್ತದೆ. ಅದೆಂದರೆ ಮೈಸೂರು ವಿಶ್ವವಿದ್ಯಾಲಯವು ತನ್ನ ಮೊದಲ ಅರ್ಧ ಶತಮಾನದಲ್ಲಿ ಗಳಿಸಿದ್ದ ಔನ್ನತ್ಯವನ್ನು ಕಳೆದುಕೊಂಡಿದೆ ಎಂಬ ಮಾತು. ಇದು ಕೇವಲ ಗತಕಾಲದ ಬಗೆಗಿನ ಹಳಹಳಿಕೆ ಮಾತ್ರವಲ್ಲ.

ಇಲ್ಲಿ ನೆನಪಿಡಬೇಕಿರುವ ವಿಚಾರವೆಂದರೆ ಬೆಂಗಳೂರೂ ಸೇರಿದಂತೆ ಕರ್ನಾಟಕದ ಮತ್ತಾವ ವಿಶ್ವವಿದ್ಯಾಲಯವೂ ಇಂತಹ ಇತಿಹಾಸವನ್ನು ತನ್ನದೆಂದು ಸಾಧಿಸಲು ಸಾಧ್ಯವಿಲ್ಲ. ಅಷ್ಟೇ ಏಕೆ, ಇಡೀ ದೇಶದಲ್ಲಿಯೇ ಹೆಮ್ಮೆ ಪಡಬಹುದಾದ ಬೌದ್ಧಿಕ, ಶೈಕ್ಷಣಿಕ ಮತ್ತು ಸಂಶೋಧನೆಯ ಗುಣಮಟ್ಟದ ಹಿರಿಮೆ ಮೈಸೂರು ವಿಶ್ವವಿದ್ಯಾಲಯದ್ದಾಗಿತ್ತು.

ಹಿಂದಿದ್ದ ಗುಣಮಟ್ಟವನ್ನು ಮತ್ತೆ ಪಡೆಯಬೇಕೆಂಬ ಉತ್ಕಟ ಬಯಕೆಯ ಮಾತುಗಳು ವಿಶ್ವವಿದ್ಯಾಲಯದ ಜೊತೆಗೆ ಸಂಬಂಧವಿರುವ ಎಲ್ಲರ ಬಾಯಲ್ಲೂ ಕೇಳಿಬರುತ್ತವೆ. ಆದರೆ ಅದರ ಸಾಧನೆ ಹೇಗೆ ಎಂಬುದು ಅಷ್ಟು ಸುಲಭಸಾಧ್ಯವಲ್ಲದ ವಿಚಾರ. ಅನುದಾನಗಳನ್ನು ತರುವುದರಿಂದ ಮತ್ತು ನಿರ್ಮಾಣ ಕಾರ್ಯಗಳಿಂದ ಸೌಲಭ್ಯಗಳನ್ನು ಒದಗಿಸಬಹುದು.

ಆದರೆ ಸಂಶೋಧನೆ ಗುಣಮಟ್ಟದಲ್ಲಿ ಹೆಚ್ಚಳ, ಪಠ್ಯಕ್ರಮ ಮತ್ತು ಬೋಧನೆಗಳಲ್ಲಿ ಸುಧಾರಣೆಯನ್ನು ತರುವುದು ಹೇಗೆ?ಉನ್ನತ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಾಗಿದೆ. ಆ ಸಂಕೀರ್ಣ ಚರ್ಚೆಯ ವಿವರಗಳನ್ನು ಮತ್ತೆಂದಾದರೂ ಪ್ರಸ್ತಾಪಿಸುತ್ತೇನೆ. ಇಂದು ನಾನಿಲ್ಲಿ ಒಂದು ನಿರ್ದಿಷ್ಟ ಐತಿಹಾಸಿಕ ಬೆಳವಣಿಗೆಯನ್ನು ಗುರುತಿಸುತ್ತ, ಅದಕ್ಕೆ ಹೊಂದಿಕೊಂಡ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ರಾಚನಿಕ (ಸ್ಟ್ರಕ್ಚರಲ್) ಆಯಾಮವನ್ನು ಓದುಗರ ಮುಂದಿಡಬಯಸುತ್ತೇನೆ.

ಮೈಸೂರು ವಿಶ್ವವಿದ್ಯಾಲಯದ ಅವನತಿ ಕರ್ನಾಟಕದಲ್ಲಿ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯೊಡನೆ ಪ್ರಾರಂಭವಾಯಿತು ಎಂದರೆ ಅದು ಕೇವಲ ಐತಿಹಾಸಿಕ ಕಾಕತಾಳೀಯ ವಿದ್ಯಮಾನ ಮಾತ್ರವಲ್ಲ. ಹಳೆಯ ಮೈಸೂರು ಸಂಸ್ಥಾನದ ಭೌಗೋಳಿಕ ವ್ಯಾಪ್ತಿಯಲ್ಲಿ ಬೆಂಗಳೂರು (1964), ಮಂಗಳೂರು (1980) ಹಾಗೂ ಕುವೆಂಪು (1987) ವಿಶ್ವವಿದ್ಯಾಲಯಗಳು ಸ್ಥಾಪಿತವಾದ ಮೇಲೆ, ಮೈಸೂರು ವಿ.ವಿ ಕೇವಲ ನಾಲ್ಕು ಜಿಲ್ಲೆಗಳಿಗೆ (ಅಂದರೆ ಮೈಸೂರು, ಚಾಮರಾಜನಗರ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಿಗೆ) ಸೀಮಿತವಾಗಿದೆ.

ಈಗ ಹೊಸ ಉನ್ನತ ಶಿಕ್ಷಣ ನೀತಿಯ ಅಂಗವಾಗಿ ಸಣ್ಣ ವಿಶ್ವವಿದ್ಯಾಲಯಗಳಿಗೆ ಪ್ರಾಶಸ್ತ್ಯ ಹೆಚ್ಚು. ಹಾಗಾಗಿ ಮುಂಬರುವ ದಶಕಗಳಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾಲಯವಾಗುವ ಸಾಧ್ಯತೆಯೇ ಹೆಚ್ಚಾಗಿದೆ.
ವಿಶ್ವವಿದ್ಯಾಲಯಗಳ (ಖಾಸಗಿ, ರಾಜ್ಯ ಅಥವಾ ಕೇಂದ್ರ ಯಾವುದಾದರೂ ಸರಿ) ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ದೇಶದ ಆರನೆಯ ವಿಶ್ವವಿದ್ಯಾಲಯವಾಗಿದ್ದ ಮೈಸೂರು ವಿ.ವಿ ಇಂದು 722 ವಿಶ್ವವಿದ್ಯಾಲಯಗಳಲ್ಲಿ ಒಂದು  ಎನ್ನುವುದೇ ಸಮಸ್ಯೆಯಲ್ಲ. ಸಮಸ್ಯೆಯಿರುವುದು ಪ್ರತಿ ವಿಶ್ವವಿದ್ಯಾಲಯಕ್ಕೆ ಪ್ರಾದೇಶಿಕ ವ್ಯಾಪ್ತಿಯನ್ನು ಹಾಕುವುದರಲ್ಲಿ.

ಆಡಳಿತಾತ್ಮಕವಾಗಿ ಪ್ರಾದೇಶಿಕ ವ್ಯಾಪ್ತಿ ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ. ಮೊದಲಿಗೆ, ಆಯಾ ವಿಶ್ವವಿದ್ಯಾಲಯದೊಳಗಿರುವ ಉನ್ನತ ಶಿಕ್ಷಣ ಸಂಸ್ಥೆಗಳ (ಕಾಲೇಜುಗಳ) ನೋಂದಣಿ ಮತ್ತು ನಿಯಂತ್ರಣ. ಇದು ಆಡಳಿತಾತ್ಮಕ ಅನುಕೂಲತೆಗೆ ಮಾಡಿಕೊಂಡಿರುವ ವ್ಯವಸ್ಥೆ. ಹಾಗಾಗಿ, ಇದರಿಂದ ಹೆಚ್ಚಿನ ಸಮಸ್ಯೆಗಳು ಹುಟ್ಟುವುದಿಲ್ಲ. ಪ್ರಾದೇಶಿಕ ವ್ಯಾಪ್ತಿಯ ಎರಡನೆಯ ಆಯಾಮ ಸ್ನಾತಕೋತ್ತರ ತರಗತಿಗಳಲ್ಲಿನ ಪ್ರವೇಶಾತಿಗೆ ಸಂಬಂಧ ಪಡುವಂತಹುದು. ಇಲ್ಲಿ, ಮೈಸೂರು ವಿಶ್ವವಿದ್ಯಾಲಯದ ಬಹುಪಾಲು ಪ್ರವೇಶಾತಿ ಕೇವಲ ಅದರ ವ್ಯಾಪ್ತಿಯಿರುವ ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ.

ಇಂದಿನ ಸಮಸ್ಯೆ ಕೇವಲ ಈ ನಾಲ್ಕು ಜಿಲ್ಲೆಗಳ ವಿದ್ಯಾರ್ಥಿಗಳೇ ಬಹುಪಾಲು ಮೈಸೂರಿಗೆ ಬರುತ್ತಾರೆ ಎಂಬುದಷ್ಟೇ ಅಲ್ಲ. ಈ ನಾಲ್ಕು ಜಿಲ್ಲೆಗಳ ಅಧಿಕಾರ ಮತ್ತು ಜಾತಿ ರಾಜಕಾರಣ ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತಿಯನ್ನು ಪ್ರಭಾವಿಸುತ್ತದೆ. ಇಲ್ಲಿ ಯಾರಿಗೆ ನೌಕರಿ ಹಾಗೂ ಇತರ ಸೌಲಭ್ಯಗಳು ದೊರಕುತ್ತವೆ ಎನ್ನುವುದನ್ನು ನಿರ್ಧರಿಸುತ್ತದೆ. ಜಗತ್ತಿನೊಡನೆ ಅನುಸಂಧಾನ ಮಾಡುವ ತನ್ನ ಸಾಮರ್ಥ್ಯ ಕಳೆದುಕೊಂಡು, ವಿಶ್ವವಿದ್ಯಾಲಯಗಳು   ಕುಬ್ಜವಾಗಿ ಜಿಲ್ಲಾನಿಲಯಗಳಾಗುತ್ತಿರುವ ಪ್ರಕ್ರಿಯೆಯಿದು.

ಇಂದು ಮೈಸೂರು ವಿಶ್ವವಿದ್ಯಾಲಯದಲ್ಲಿ 50ಕ್ಕೂ ಹೆಚ್ಚು ದೇಶಗಳ 1400 ವಿದ್ಯಾರ್ಥಿಗಳು ಹಾಗೂ ಹೊರರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದರೂ, ನಾನು ಮೇಲೆ ಪ್ರಸ್ತಾಪಿಸಿರುವ ಅಂಶಗಳಿಂದ ಮೈಸೂರು ವಿ.ವಿ ಮುಕ್ತವಾಗಿಲ್ಲ. ಕಳೆದ ನಾಲ್ಕು ದಶಕಗಳಲ್ಲಿ ಮೈಸೂರು ವಿ.ವಿಯ ಅವನತಿಗೆ ಕಾರಣವಾಗಿರುವ ಮುಖ್ಯ ಅಂಶಗಳು ಇವು. ಅಷ್ಟೇ ಅಲ್ಲ, ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಸಂಸ್ಕೃತಿ ಮತ್ತು ಶೈಕ್ಷಣಿಕ ವಾತಾವರಣಗಳನ್ನು ರೂಪಿಸಿರುವ ಸಾಮಾಜಿಕ ಪ್ರಕ್ರಿಯೆಗಳು ಇವೇನೆ.

ಯಾವುದೇ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅತ್ಯುತ್ತಮ ವಿದ್ಯಾರ್ಥಿಗಳನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದ್ದರೆ ಮಾತ್ರ ಶ್ರೇಷ್ಠತೆಯನ್ನು ಗಳಿಸಲು ಮತ್ತು ಉಳಿಸಿಕೊಳ್ಳಲು ಸಾಧ್ಯವಾಗುವುದು. ಮೈಸೂರು ವಿ.ವಿಯ ಸಂದರ್ಭದಲ್ಲಿ ಕನಿಷ್ಠ ಕರ್ನಾಟಕದ ಉತ್ತಮ ವಿದ್ಯಾರ್ಥಿಗಳನ್ನು ತನ್ನಲ್ಲಿಗೆ ಬರುವಂತೆ ಮಾಡಿಕೊಳ್ಳುವ ಅವಕಾಶ ದೊರಕಿದರೂ, ಅದರ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಬಹುದು. ಇದೇನು ತೀರ ಕಷ್ಟದ ಕೆಲಸವೇನೂ ಅಲ್ಲ.

ನಮ್ಮಲ್ಲಿಯೇ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣಗಳಿಗಿರುವ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಸಾಕು. ಕಾಲೇಜುಗಳ ನೋಂದಣಿ ಇತ್ಯಾದಿಗಳು ಪ್ರಾದೇಶಿಕ ವ್ಯಾಪ್ತಿಯೊಳಗಿರಲಿ. ಆದರೆ ವಿದ್ಯಾರ್ಥಿಗಳ ಪ್ರವೇಶಾತಿ ಮೇಲಿನ ಮಿತಿಯನ್ನು ರಾಜ್ಯಮಟ್ಟಕ್ಕಾದರೂ ವಿಸ್ತರಿಸಿದರೆ ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳು, ಪ್ರಾಧ್ಯಾಪಕರು ಹಾಗೂ ಸೌಕರ್ಯಗಳನ್ನು ಹೊಂದಿರುವ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಪ್ರವೇಶಾತಿ ಬಯಸುತ್ತಾರೆ.

ಆಗ ಒಳ್ಳೆಯ ವಿಭಾಗಗಳು ಮತ್ತು ಕಾರ್ಯಕ್ರಮಗಳನ್ನು ಕಟ್ಟಲು ಉತ್ತೇಜನ ದೊರಕುತ್ತದೆ. ರಾಜ್ಯದಾಚೆಗಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಶುಲ್ಕ ಪಡೆದು ಸೀಮಿತ ಪ್ರವೇಶಾತಿ ಒದಗಿಸಬಹುದು. ಅಮೆರಿಕದ ಅತ್ಯುತ್ತಮ ಸಾರ್ವಜನಿಕ (ಪಬ್ಲಿಕ್) ವಿಶ್ವವಿದ್ಯಾಲಯಗಳು ಈ ಆಧಾರದ ಮೇಲೆಯೇ ನಡೆಯುತ್ತವೆ. ಬರ್ಕ್ಲಿ ಮತ್ತು ಲಾಸ್ ಏಂಜಲಿಸ್ ನಗರಗಳಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯಗಳು,

ಆನ್ ಅರ್ಬರನಲ್ಲಿರುವ ಮಿಶಿಗನ್ ವಿಶ್ವವಿದ್ಯಾಲಯ ಹಾಗೂ ಮಾಡಿಸನ್ ನಗರದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳು  ಆಯಾ ರಾಜ್ಯಗಳ ತೆರಿಗೆದಾರರ ಹಣದಿಂದ ನಡೆಯುವಂತಹವು. ಇವುಗಳ ಶ್ರೇಷ್ಠತೆಯ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಪ್ರಪಂಚದ ಎಲ್ಲೆಡೆಯಿಂದ ವಿದ್ಯಾರ್ಥಿಗಳನ್ನು ಮತ್ತು ಪ್ರಾಧ್ಯಾಪಕರನ್ನು ಇವುಗಳು ಆಕರ್ಷಿಸುತ್ತವೆ. ಜೊತೆಗೆ, ತಮ್ಮ ರಾಜ್ಯದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಗಳೆಲ್ಲರೂ ಅಲ್ಲಿಯೇ ಓದುವಂತೆ ಮಾಡುತ್ತವೆ.

ಪ್ರವೇಶಾತಿಗೆ ಸಂಬಂಧಿಸಿದ ಪ್ರಾದೇಶಿಕ ವ್ಯಾಪ್ತಿಯನ್ನು ರಾಜ್ಯ ಸರ್ಕಾರವೇ ತೆಗೆಯಬೇಕು. ಈ ಕೆಲಸ ಮಾಡುವುದು ಮೈಸೂರು ವಿಶ್ವವಿದ್ಯಾಲಯಕ್ಕೆ ಶತಮಾನೋತ್ಸವ ಆಚರಿಸಲು ₨ 50 ಕೋಟಿ ಕೊಟ್ಟಿದ್ದಕ್ಕಿಂತ ಮುಖ್ಯವಾದ ಕ್ರಮವಾಗುತ್ತದೆ.

ಈಗಿರುವಂತೆ ಹಾಗೂ ಮುಂದೆ ನಾವು ನಿರೀಕ್ಷಿಸುತ್ತಿರುವಂತೆ ವಿಶ್ವವಿದ್ಯಾಲಯಗಳು ಜಿಲ್ಲಾ ವಿದ್ಯಾಲಯಗಳಾಗುವತ್ತ ದಾಪುಗಾಲು ಹಾಕುತ್ತಿವೆ. ಬಹುಶಃ ಅದನ್ನು ತಡೆಯುವುದು ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ವನ್ನು ಆಚರಿಸುವ ಅತ್ಯಂತ ಅರ್ಥಪೂರ್ಣ ಕ್ರಮವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT