ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜಿತ ನಗರಾಭಿವೃದ್ಧಿ, ಪೌರಪ್ರಜ್ಞೆಯ ಫಲ

Last Updated 16 ಜೂನ್ 2018, 9:09 IST
ಅಕ್ಷರ ಗಾತ್ರ

ನಮ್ಮೂರ ಕಸ ಬಹುಶಃ ನಮಗೆ ಮಾತ್ರ ಕಾಣು ತ್ತದೆ. ಮೈಸೂರು ಭಾರತದಲ್ಲಿಯೇ ಅತ್ಯಂತ ಸ್ವಚ್ಛ ನಗರವೆಂದು ಮನ್ನಣೆ ಪಡೆದಿರಬಹುದು. ಆದರೆ, ನಗರದ ಅಸ್ವಚ್ಛತೆಯ ವರದಿಗಳು ಮೈಸೂರಿನ ಸ್ಥಳೀಯ ಪತ್ರಿಕೆಗಳ ಓದುಗರಿಗೆ ಮಾತ್ರ ಕಾಣ ಸಿಗುವುದು.

‘ಪ್ರಜಾವಾಣಿ’ಯ ಮೆಟ್ರೊ ಪುರವಣಿ ಯೂ ಸೇರಿದಂತೆ ಮೈಸೂರಿನ ಎಲ್ಲ ಪತ್ರಿಕೆಗಳೂ ನಿಯಮಿತವಾಗಿ ನಗರದೆಲ್ಲೆಡೆ ಇರುವ ಕಸದ ಚಿತ್ರಗಳನ್ನು ಮತ್ತು ವರದಿಗಳನ್ನು ಪ್ರಕಟಿಸುತ್ತವೆ. ಮೈಸೂರಿನ ನಾಗರಿಕರು ದೂರು ಗಳನ್ನು ಪುಂಖಾ ನುಪುಂಖವಾಗಿ ಪತ್ರಗಳ ರೂಪ ದಲ್ಲಿ ಬರೆಯು ತ್ತಲೇ ಇರುತ್ತಾರೆ. ಜನಪ್ರತಿನಿಧಿಗಳ ವಿರುದ್ಧ, ನಗರಪಾಲಿಕೆಯ ಸಿಬ್ಬಂದಿ ಮತ್ತು ಕಸಸಂಗ್ರಹ ಮಾಡುವವರ ವಿರುದ್ಧ, ನಗರವನ್ನು ಗಲೀಜು ಮಾಡುವ ಪೌರಪ್ರಜ್ಞೆಯಿಲ್ಲದ ಇತರ ನಾಗರಿಕರ ವಿರುದ್ಧ - ಹೀಗೆ ಎಲ್ಲರ ವಿರುದ್ಧವೂ ದೂರುಗಳ ಮಹಾಪೂರವಿರುತ್ತದೆ. ಇವುಗಳನ್ನು ಮಾತ್ರ ಗಮನಿಸಿದವರಿಗೆ ಮೈಸೂರು ಕಸದ ಆಗರ ವೇನೋ ಎಂಬ ಭಾವನೆ ಬಂದರೆ ಆಶ್ಚರ್ಯವೇನಿಲ್ಲ.

ಹೀಗೆ ದೂರುತ್ತಲೇ ಕಾಲ ಕಳೆಯುವ ಮೈಸೂ ರಿನವರಿಗೆ ನಾಲ್ಕು ದಿನ ಊರಿನಾಚೆ ಹೋದಾಗ ಮಾತ್ರ ಇಲ್ಲಿನ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಅರಿವಾಗುವುದು. ಮೈಸೂರ ನ್ನು ಅದರಂತೆಯೇ ಐತಿಹಾಸಿಕ ಹಿನ್ನೆಲೆಯಿರುವ ಇಂದು ವಿಜಯಪುರವೆಂದು ಕರೆಯಲಾಗುವ ವಿಜಾಪುರದೊಂದಿಗೆ ಹೋಲಿಸಿ ನೋಡಿ. 16-17ನೇ ಶತಮಾನಗಳಲ್ಲಿ ವಿಜಾಪುರ ಪ್ರಪಂಚದ ಅತ್ಯಂತ ಪ್ರಮುಖ ಮತ್ತು ಜನನಿಬಿಡ ನಗರಗ ಳಲ್ಲೊಂದು.

ಕುಶಲಕರ್ಮಿಗಳು, ಸೂಫಿಗಳು, ಸೈನಿಕರು, ವರ್ತಕರು ಹೀಗೆ ಎಲ್ಲ ಬಗೆಯ ಜನರನ್ನು ಜಗತ್ತಿನ ನಾನಾ ಭಾಗಗಳಿಂದ ಆಕರ್ಷಿಸುತ್ತ, ತನ್ನ ಉತ್ತುಂಗದಲ್ಲಿ ಸುಮಾರು ಆರು ಲಕ್ಷ ಜನಸಂಖ್ಯೆ ಹೊಂದಿತ್ತು.  ಅಲ್ಲಿನ ಗೋಲ್ ಗುಂಬಜ್ ನಂತಹ  ವಾಸ್ತುಶಿಲ್ಪದ ಅಚ್ಚರಿಗ ಳಿಂದಾಗಿ ವಿಜಾಪುರ ಜಾಗತಿಕವಾಗಿ ಕಟ್ಟಡ ನಿರ್ಮಾಣದ ಕೇಂದ್ರಗಳಲ್ಲೊಂದಾಗಿತ್ತು ಎಂಬು ದನ್ನು ನಮಗೆ  ನೆನಪಿಸುತ್ತವೆ. ಆದರೆ ನಾವು ಗಮನಿಸಬೇಕಿರುವ ಅಂಶ ಮತ್ತೊಂದಿದೆ. 

ತನ್ನ ಪೌರರಿಗೆ ಕನಿಷ್ಠ  ಸೌಕರ್ಯಗಳನ್ನು ಒದಗಿಸಲೂ ಹೆಣಗುತ್ತಿರುವ ಇಂದಿನ ವಿಜಯಪುರದ ಜನ ಸಂಖ್ಯೆಯ ಎರಡರಷ್ಟು ಸಂಖ್ಯೆಯ ನಿವಾಸಿಗಳನ್ನು ಬಿಜಾಪುರ ಸಲಹುತ್ತಿತ್ತು. ಇಂದಿರುವ ಸಂಪ ನ್ಮೂಲಗಳು, ತಂತ್ರಜ್ಞಾನ ಮತ್ತು ಪರಿಣತಿಯ ಹಿನ್ನೆಲೆಯಲ್ಲಿ ಆ ಸಾಮರ್ಥ್ಯವೆಲ್ಲಿ ಕಳೆದು ಹೋಯಿತು ಎಂದು ಮತ್ತೆ ಮತ್ತೆ ಕೇಳಿ ಕೊಳ್ಳಬೇಕು.

ಮೈಸೂರಿನ ವೈಶಿಷ್ಟ್ಯವೆಂದರೆ ಯೋಜಿತ ನಗರ ಬೆಳವಣಿಗೆಯ ಸಾಮರ್ಥ್ಯವನ್ನು 20ನೇ  ಶತಮಾನದ ಪ್ರಾರಂಭದಲ್ಲಿ ಅದು ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಂಡಿತು. ಈ ಅಪರೂಪದ ಬೆಳವಣಿಗೆಗೆ ಎರಡು ಆಯಾಮಗಳಿವೆ. ಒಂದೆಡೆ ನಾಗರಿಕ ಸೌಲಭ್ಯಗಳನ್ನು ಸೃಷ್ಟಿಸಿ, ಸತತವಾಗಿ ಒದಗಿಸಬಲ್ಲ ಸಂಸ್ಥೆಗಳನ್ನು ಮೈಸೂರು ಬೆಳೆಸಿ ಕೊಂಡಿತು.

ಮತ್ತೊಂದೆಡೆ ಈ ಬಗೆಯ ಸೌಕರ್ಯ ಗಳು ತಮ್ಮ ನಾಗರಿಕ ಹಕ್ಕು ಎಂದೇ ಬಗೆದ ಎಚ್ಚೆತ್ತ ನಾಗರಿಕ ಸಮಾಜ ಸಹ ಇಲ್ಲಿ ಹುಟ್ಟಿತು. ಹಾಗಾಗಿಯೇ ನಾನು ಮೇಲೆ ಗುರುತಿಸಿದ ರೀತಿಯ ದೂರುಗಳು ಪ್ರತಿನಿತ್ಯವೂ ಸ್ಥಳೀಯ ವೃತ್ತಪತ್ರಿ ಕೆಗಳಲ್ಲಿ ಪ್ರಕಟವಾಗುವುದು. ಗಮನಿಸಿ. ತಮಗೆ ದೊರಕುವ ನಾಗರಿಕ ಸೌಲಭ್ಯಗಳ ಗುಣಮಟ್ಟದ ಬಗ್ಗೆ ಮೈಸೂರಿಗರ ನಿರೀಕ್ಷೆ ಇತರ ನಗರಗಳ ನಿವಾಸಿಗಳಿಗಿಂತ ತುಂಬ ಹೆಚ್ಚಿನ ಪ್ರಮಾಣದ್ದು.

ಕುತೂಹಲದ ಸಂಗತಿಯೆಂದರೆ ಮೈಸೂರು ಸಂಸ್ಥಾನಕ್ಕೆ ಹಾಗೂ ಮೈಸೂರಿಗೆ ಆರು ಶತಮಾನ ಗಳ ಇತಿಹಾಸವಿದ್ದರೂ ಆಧುನಿಕಪೂರ್ವ ಕಾಲದಲ್ಲಿ ಅದು ನಗರದ ಗುಣಲಕ್ಷಣಗಳನ್ನೆಂದೂ ಪ್ರದರ್ಶಿಸಿರಲಿಲ್ಲ. ಬಹುಶಃ ಇದಕ್ಕೆ ಕಾರಣ ಸರಳ. ಮೈಸೂರು ಸಂಸ್ಥಾನ 17ನೇ ಶತಮಾನದ ಉತ್ತರಾರ್ಧದಲ್ಲಿ ರಾಜಕೀಯ ಪ್ರಾಬಲ್ಯ ಗಳಿಸಿದ ನಂತರ ಮೈಸೂರು ನಗರವೆಂದೂ ಸಂಸ್ಥಾನದ ರಾಜಕೀಯ ಮತ್ತು ಆಡಳಿತ ಕೇಂದ್ರವಾಗಿರಲಿಲ್ಲ. ಆ ಹಿರಿಮೆ ವಸಾಹತುಪೂರ್ವ ಯುಗದಲ್ಲಿ ಶ್ರೀರಂಗಪಟ್ಟಣಕ್ಕೆ ದೊರಕಿದ್ದರೆ, 1831ರಲ್ಲಿ ಬ್ರಿಟಿಷ್  ಕಮಿಷನರುಗಳ ಆಳ್ವಿಕೆಯಲ್ಲಿ ಹಾಗೂ ತದನಂತರದಲ್ಲಿ ಬೆಂಗಳೂರಿಗೆ ಲಭಿಸಿತು.

ಹೀಗಾಗಿ ಒಂದು ನಗರ ಬೆಳೆಯಲು ಅಗತ್ಯವಾದ ವಾಣಿಜ್ಯ, ವಸ್ತುಗಳ ಉತ್ಪಾದನೆ, ಆಡಳಿತ-ರಾಜಕಾರಣಗಳಂತಹ ಸ್ವಾಭಾವಿಕ, ಸಾವಯವ ಕಾರಣಗಳಾವುವೂ ಮೈಸೂರಿಗಿರಲಿಲ್ಲ. 19-20ನೇ ಶತಮಾನಗಳಲ್ಲೂ ಮೈಸೂರಿಗಿದ್ದದ್ದು ರಾಜಮನೆತನದವರ ವಾಸಸ್ಥಳವೆಂಬ ಸಾಂಕೇತಿಕ ಮಹತ್ವ ಮಾತ್ರ. ಹಾಗಾಗಿ ಆಧುನಿಕ ಮೈಸೂರಿನ ನಗರೀಕರಣ ಪ್ರಕ್ರಿಯೆಯೂ ಭಾಗಶಃ ರಾಜಮನೆತ ನದವರ ನಿರ್ಮಾಣ ಯೋಜನೆಗಳ ಜೊತೆಗೆ ತಳಕು ಹಾಕಿಕೊಂಡಿದೆ. ಇದರ ಜೊತೆಗೆ ನಾವು ಗುರುತಿಸಬೇಕಿರುವ ಮತ್ತೊಂದು ಆಯಾಮವೆಂದರೆ ಮೈಸೂರಿನ ಆಡಳಿತಗಾರರು ಪ್ರಾರಂಭಿ ಸಿದ ಸಾರ್ವಜನಿಕ ವಾಸ್ತುಶಿಲ್ಪದ (ಪಬ್ಲಿಕ್ ಆರ್ಕಿಟೆಕ್ಚರ್) ಯೋಜನೆಗಳು. ಇವೆರಡೂ ಮೈಸೂರು ನಗರವನ್ನು ರೂಪಿಸಿದ ಅಂಶಗಳೆಂದು ನಾವಿಲ್ಲಿ ಗುರುತಿಸಬಹುದು.

1897ರಲ್ಲಿ ಹಳೆಯ ಮೈಸೂರು ಅರಮನೆ ಸುಟ್ಟುಹೋದ ನಂತರ ಹೊಸ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ಮೈಸೂರಿನ ನಗರೀಕ ರಣಕ್ಕೆ ಚಾಲನೆ ನೀಡಿದ ಯೋಜನೆ. ಹೊಸ ಅಂಬಾವಿಲಾಸ ಅರಮನೆಯನ್ನು ಕಟ್ಟುವಾಗ ಮೂರು ಬಹುಮುಖ್ಯ ತೀರ್ಮಾನಗಳನ್ನು ಮಾಡ ಲಾಯಿತು. ಇವುಗಳಲ್ಲಿ ಮೊದಲನೆಯದು ಹಳೆಯ ಅರಮನೆಯ ಆವರಣದಲ್ಲಿಯೇ ವಾಸಿಸುತ್ತಿದ್ದ ರಾಜಾಶ್ರಿತರನ್ನು ಹೊರಕಳುಹಿಸಿ, ಅವರಿಗೆ ಲಕ್ಷೀಪುರಂನಂತಹ ಹೊಸ ಬಡಾವಣೆಗಳಲ್ಲಿ ವಸತಿ ಸೌಕರ್ಯ ಮಾಡಿಕೊಡಲು ನಿರ್ಧರಿಸಿದ್ದು.

ಎರಡನೆಯದಾಗಿ  ರಾಜಮನೆತನದವರಿಗೂ, ಮುಖ್ಯವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿಯರು ಮತ್ತು ಸಹೋದರನಿಗೆ ಸಹ ನಗರದ ಹೊರವಲಯದಲ್ಲಿ ಪ್ರತ್ಯೇಕವಾಗಿ ವಾಸಿಸಲು ಅನುವು ಮಾಡಿಕೊಡಲು ಹೊಸ ಅರಮನೆಗಳನ್ನು ಕಟ್ಟಲು ತೀರ್ಮಾನಿಸಲಾಯಿತು. ಹೀಗೆ ಕೋಟೆಯೊಳಗಿದ್ದ ಹೊಸ ಅರಮನೆಯು ಕೇವಲ ಮಹಾರಾಜರು ಮತ್ತವರ ಕುಟುಂಬ ಮಾತ್ರ ವಾಸಿಸುವ ಸ್ಥಳವಾಯಿತು. ಮೂರನೆಯದಾಗಿ, ಅರಮನೆಯ ಕೋಟೆಯ ಸುತ್ತಲೂ ಇದ್ದ ಜನ-ವಸತಿ ಬಾಹುಳ್ಯವನ್ನು ಕಡಿಮೆ ಮಾಡಲು ಅಲ್ಲಿನ ನಿವಾಸಿಗಳಿಗೂ ಪುನರ್ವಸತಿ ಕಲ್ಪಿಸಲಾ ಯಿತು. 

ನಂತರದಲ್ಲಿ ಅರಮನೆಯ ಸುತ್ತ ಉದ್ಯಾನ ವನಗಳು, ವಿಶಾಲ ರಸ್ತೆಗಳು ಮತ್ತು ವೃತ್ತಗಳು ನಿರ್ಮಾಣಗೊಂಡವು. ಅರಮನೆಯ ನಿರ್ಮಾಣ ಕಾರ್ಯ 1913ರ ವೇಳೆಗೆ ಮುಗಿದರೂ, ಅದರ ಸುತ್ತಣ ಪ್ರದೇಶದ ಸೌಂದರ್ಯೀಕರಣ ಯೋಜನೆ ಗಳು ಮುಂದುವರೆದವು. ಸೌಂದರ್ಯೀಕರಣದ ಈ ಮಾದರಿಗಳನ್ನು ನಗರದ ಇತರ ಭಾಗಗಳಲ್ಲೂ ಅನುಸರಿಸಲಾಯಿತು. ಈ ರೀತಿಯಲ್ಲಿ ಹೊಸ ಅರಮನೆಯ ನಿರ್ಮಾಣ ಮೈಸೂರು ನಗರದ ಹೊಸ ಕಲ್ಪನೆಯೊಂದಕ್ಕೆ ದಾರಿ ಮಾಡಿಕೊಟ್ಟಿತು.

ಹೊಸ ನಗರ ನಿರ್ಮಾಣದ ಜವಾಬ್ದಾರಿ ಯನ್ನು ಸಿಟಿ ಇಂಪ್ರೂವ್ ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ ಅಥವಾ ನಗರ ಸುಧಾರಣಾ ವಿಶ್ವಸ್ಥ ಮಂಡಳಿ) ಎಂಬ ಹೊಸ ಸಂಸ್ಥೆಗೆ ವಹಿಸಲಾ ಯಿತು. 1904ರಲ್ಲಿ ಸ್ಥಾಪಿತವಾದ ಈ ಬಗೆಯ ನಗರ ಯೋಜನೆಯ ಜವಾಬ್ದಾರಿಯುಳ್ಳ ಸಂಸ್ಥೆ ಯೊಂದು ಬಾಂಬೆಯ ನಂತರ ಮೈಸೂರಿನಲ್ಲಿಯೇ ಮೊದಲು ಪ್ರಾರಂಭವಾದುದು. ಸಿಐಟಿಬಿ ಹೊಸ ಬಡಾವಣೆಗಳ ಯೋಜಿತ ಅಭಿವೃದ್ಧಿಯನ್ನು  ಮಾಡುವುದರ ಜೊತೆಗೆ ಇಡೀ ನಗರಕ್ಕೆ ಒಳ ಚರಂಡಿ ಮತ್ತು ತ್ಯಾಜ್ಯ ನಿರ್ವಹಣ ವ್ಯವಸ್ಥೆ, ರಸ್ತೆ ಗಳು, ಮಾರುಕಟ್ಟೆಗಳು ಮತ್ತಿತರ ಮೂಲ ಭೂತ ಸೌಕರ್ಯಗಳನ್ನು ಒದಗಿಸಿತು. ನಗರದ ಸೌಂದ ರ್ಯೀಕರಣದ ಜವಾಬ್ದಾರಿ ಹೊತ್ತುಕೊಂಡಿತು.

ಜೊತೆಗೆ ನಾನು ಮೇಲೆ ಗುರುತಿಸಿದ ಸಾರ್ವ ಜನಿಕ ವಾಸ್ತುಶಿಲ್ಪದ ಯೋಜನೆಗಳನ್ನು ಮೈಸೂ ರಿನ ಆಡಳಿತಗಾರರು ಅನುಷ್ಠಾನಕ್ಕೆ ತಂದರು. ಮೈಸೂರಿನ ನೈರ್ಮಲ್ಯವನ್ನು ಸುಧಾರಿಸುವ ಸಲುವಾಗಿ, ಚಾಮರಾಜ ಒಡೆಯರ್ (1881-1894) ಅವರ ಕಾಲದಲ್ಲಿಯೇ ನಗರದ ಕೇಂದ್ರಕ್ಕೆ ನೀರು ತರುತ್ತಿದ್ದ ಪೂರ್ಣಯ್ಯ ನಾಲೆಯನ್ನು ಮುಚ್ಚಿ, ಅದರ ಎರಡೂ ಕಡೆಗಳಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಪ್ರಾರಂಭ ವಾಗಿತ್ತು.

1880ರಿಂದಲೇ ಪ್ರಾರಂಭವಾದ ಈ ಯೋಜನೆಗಳ ಪೈಕಿ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡ, ಕೃಷ್ಣರಾಜೇಂದ್ರ ಆಸ್ಪತ್ರೆ, (ಈ ವಾರ ಶತಮಾನೋತ್ಸವ ಆಚರಿಸುತ್ತಿರುವ) ಸಾರ್ವಜನಿಕ ಗ್ರಂಥಾಲಯ, ಮೈಸೂರು ವೈದ್ಯ ಕೀಯ ಕಾಲೇಜು ಮತ್ತು ಕಾವಾದಂತಹ ಸಂಸ್ಥೆ ಗಳು-ನಾಗರಿಕ ಸೌಲಭ್ಯಗಳು ಸೇರಿದ್ದವು. ಇದರ ಜೊತೆಗೆ ನಗರದಾದ್ಯಂತ ಮತ್ತಷ್ಟು ಯುರೋ ಪಿಯನ್ ಮತ್ತು ಭಾರತೀಯ ಅತಿಥಿಗಳಿಗೆ ಉಳಿಯಲು ಅರಮನೆಗಳು ಮತ್ತು ಅತಿಥಿಗೃಹ ಗಳು, ಶಾಲೆ-ಕಾಲೇಜು ಕಟ್ಟಡಗಳು, ಸರ್ಕಾರಿ ಆಡ ಳಿತ ಕಚೇರಿಗಳನ್ನು ಕಟ್ಟಲಾಯಿತು. ಇಂಡೊ-ಸಾರಸೆನಿಕ್ ಶೈಲಿಯಲ್ಲಿ ಕಟ್ಟಿದ ಈ ಎಲ್ಲ ಕಟ್ಟಡಗಳು ಮೈಸೂರು ನಗರಕ್ಕೆ ಪಾರಂಪರಿಕ ನಗರವೆನ್ನುವ ಭ್ರಮೆಯನ್ನು ಮೂಡಿಸುವಲ್ಲಿ ಸಹ ಯಶಸ್ವಿಯಾದವು.

ಹೀಗೆ ಇವುಗಳೆಲ್ಲ ಸಮ್ಮಿಳಿತಗೊಂಡು ಮೈಸೂ ರಿನ ನಗರೀಕರಣದ ಸ್ವರೂಪ ನಿರ್ಧರಿತ ವಾಯಿತು. ಮತ್ತಷ್ಟು ಮುಖ್ಯವಾಗಿ ಮೈಸೂರಿನ ನಾಗರಿಕರ ಪೌರಪ್ರಜ್ಞೆ, ನಗರದ ಮೂಲಭೂತ ಸೌಲಭ್ಯಗಳ ಕುರಿತಾಗಿ ಅವರ ನಿರೀಕ್ಷೆಗಳು ರೂಪಿತವಾದವು. ಸಾಮಾನ್ಯವಾಗಿ ಈ ಹೊಸ ನಗರದ ಮತ್ತದರ ಸೌಕರ್ಯಗಳ ನಿರ್ಮಾಣದ ಶ್ರೇಯಸ್ಸನ್ನು ಮೈಸೂರಿನ ಅರಸರಿಗೆ, ಅದರಲ್ಲೂ ನಾಲ್ವಡಿಯವರಿಗೆ, ಮೈಸೂರಿನ ಇತಿಹಾಸಕಾರರು ಮತ್ತು ನಾಗರಿಕರು ನೀಡುತ್ತಾರೆ.

ನನ್ನ ದೃಷ್ಟಿಯಲ್ಲಿ ಇದು ಪೂರ್ಣ ಸತ್ಯವಲ್ಲ. ಬ್ರಿಟಿಷ್ ಕಮಿಷನರುಗಳು ಮತ್ತು ನಂತರದ ದಶಕಗಳಲ್ಲಿ ಮೈಸೂರಿನಲ್ಲಿ ಕೆಲಸ ಮಾಡಿದ ಆಡಳಿತಗಾರರು ಹೊಸ ಆಡಳಿತ ವ್ಯವಸ್ಥೆ ಯೊಂ ದನ್ನು ರೂಪಿಸುವ ಬೌದ್ಧಿಕ ಚೈತನ್ಯ, ಬದ್ಧತೆ ಮತ್ತು ಕಲ್ಪನೆಯನ್ನು ಹೊಂದಿದ್ದವರು. ಕಬ್ಬನ್‌ ರಿಂದ ಶೇಷಾದ್ರಿ ಅಯ್ಯರ್ ತನಕ ಎಲ್ಲರೂ ಆಧುನಿಕ ರಾಜ್ಯವೊಂದನ್ನು ಕಟ್ಟಿದರು. ಸಿಐಟಿಬಿ ಯಂತಹ ಸಂಸ್ಥೆಗಳಲ್ಲಿ ನುರಿತ, ತಜ್ಞ ಯುರೋ ಪಿಯನ್ ಹಾಗೂ ಭಾರತೀಯ ತಂತ್ರಜ್ಞರಿದ್ದರು.

1881ರ ನಂತರ ಮೈಸೂರಿನ ಅರಸರು ಇವರಿಗೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮತ್ತು ಅನುಷ್ಠಾನ ಗೊಳಿಸುವ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ನೀಡಿದರು. ಅದರ ಶ್ರೇಯಸ್ಸು ಖಂಡಿತ ಅರಸರಿಗೆ ಸೇರುತ್ತದೆ. ಆ ಕಾರಣ ದಿಂದಲೇ ಹಳೆಯ ಮೈಸೂರು ಪ್ರಾಂತ್ಯದ ನಾಲ್ಕು ನಗರಗಳು (ಹಾಸನ, ಮಂಡ್ಯ, ಬೆಂಗಳೂರು ಮತ್ತು ಮೈಸೂ ರುಗಳು) ಭಾರತದ 476 ನಗರಗಳ ಪೈಕಿ ಮೊದಲ ಹತ್ತು ಸ್ಥಾನಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಅಂದರೆ ಈ ನಾಲ್ಕು ನಗರಗಳಿಗೆ ಇಂದು ದೊರಕಿರುವ ಮನ್ನಣೆಯ ಹಿಂದೆ ಒಂದು ಶತ ಮಾನದ ಅಭಿವೃದ್ದಿ ಕಾರ್ಯಗಳ ಮತ್ತು ನಾಗರಿಕ ಸಂಸ್ಕೃತಿಯ ಅಡಿಪಾಯವಿದೆ.  ಈ ಎರಡೂ ಆಯಾಮಗಳು ಬಿಜಾಪುರದಂತಹ ನಗರಗಳಲ್ಲಿ ಕಾಣಸಿಗುವುದಿಲ್ಲ. 
20ನೇ ಶತಮಾನದುದ್ದಕ್ಕೂ ನಗರ ಬೆಳೆದಂತೆ ಮೈಸೂರು ತನ್ನ ಯೋಜಿತ ಅಭಿವೃದ್ಧಿಯ ಮಾದರಿ ಯಿಂದ ದೂರ ಸರಿಯಲಿಲ್ಲ.

ಅದಕ್ಕಾಗಿಯೇ   ಸ್ವಾತಂತ್ರ್ಯೋತ್ತರ ಕಾಲದ ಮೈಸೂರಿನ ಸಿಐಟಿಬಿಯ ಅಧ್ಯಕ್ಷರ ಹೆಸರುಗಳು ಮೈಸೂರಿಗರ ನಾಲಿಗೆಗಳ ಮೇಲೆ ಇಂದೂ ನಲಿದಾಡುತ್ತವೆ. ಕರ್ನಾಟಕವೇಕೆ, ಭಾರತದ ಇತರ ನಗರಗಳಿಗೂ ಆದರ್ಶವಾಗುವ ಮಾದರಿಯನ್ನು ಮೈಸೂರು ರೂಢಿಸಿಕೊಂಡಿತು ಮತ್ತು 20ನೇ ಶತಮಾನದುದ್ದಕ್ಕೂ ಉಳಿಸಿ ಕೊಂಡಿತು. 2010ರ ವೇಳೆಗೆ ಮುಂದಿನೆರಡು ದಶಕಗಳಿಗೆ ಅಗತ್ಯ  ಮೂಲ ಸೌಕರ್ಯಗಳನ್ನು ಮೈಸೂರು ಪಡೆದುಕೊಂಡಿತ್ತು.

ಈ ಮಾತನ್ನು ಚಂಡೀಗಡ ಇಲ್ಲವೇ ಗಾಂಧಿನಗರ ಗಳಂತಹ ಆಧುನಿಕ ಭಾರತದ ಇತರೆ ಯೋಜಿತ ನಗರಗಳ ವಿಚಾರದಲ್ಲೂ ಹೇಳಲು ಸಾಧ್ಯವಿಲ್ಲ. ಆದರೆ, ಇದರ ನಡುವೆಯೇ ಕಳೆದ ದಶಕದಲ್ಲಿ ನೆಲಗಳ್ಳರ, ಅತಿದಾಹಿಗಳ ಹಿಡಿತಕ್ಕೆ ಸಿಲುಕಿ ನನ್ನೂರು ಮಿತಿಯಿಲ್ಲದ, ಗುರಿಯಿಲ್ಲದ ವಿಸ್ತರ ಣೆಯ ವಿಷವರ್ತುಲದಲ್ಲಿ ಸಿಲುಕಿದೆ. ಇಲ್ಲಿನ ನೈರ್ಮಲ್ಯ ಮತ್ತು ಸೌಕರ್ಯಗಳಿಂದ ಆಕರ್ಷಿತರಾಗಿ ಹೊರಗಿ ನವರಿಗೆಲ್ಲ ಇಲ್ಲೊಂದು ನಿವೇಶನ ಬೇಕು. ಹೊಸ ಖಾಸಗಿ ಬಡಾವಣೆಗಳಲ್ಲಿ ಸಹ ಮೈಸೂ ರಿಗರ ನಿರೀಕ್ಷೆ ಕಡಿಮೆಯಾಗಿಲ್ಲ. ಅಷ್ಟರ ಮಟ್ಟಿಗೆ ಮೈಸೂ ರಿನ ಡಿ.ಎನ್.ಎ. ಸ್ಥಿರವಾಗಿದೆ. ಆದರೆ, ಅದೆಷ್ಟು ಕಾಲ ಉಳಿಯಬಹುದು ಎಂಬು ದರ ಬಗ್ಗೆ ಮೊದಲ ಬಾರಿಗೆ ಅನುಮಾನಗಳು ಶುರುವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT