ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತೀಯತೆಗೆ ಭ್ರಷ್ಟತೆಯ ನಂಟು ಇದೆಯೇ?

Last Updated 24 ಡಿಸೆಂಬರ್ 2017, 5:12 IST
ಅಕ್ಷರ ಗಾತ್ರ

ಭ್ರಷ್ಟಾಚಾರ ಮತ್ತು ಅಪರಾಧಕ್ಕೆ ಜಾತಿ ಮತ್ತು ಕೋಮುಗಳ ಮಧ್ಯೆ ಸಂಪರ್ಕ ಕೊಂಡಿ ಏನಾದರೂ ಇದೆಯೇ. ಅಥವಾ ಜಾತಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ನೀವು ಕೆಳಮಟ್ಟಕ್ಕೆ ಹೋದಂತೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ನೀವು ಭಾಗಿಯಾಗುವ, ಸಿಲುಕಿಕೊಳ್ಳುವ ಪ್ರಮಾಣ ಹೆಚ್ಚುತ್ತ ಹೋಗುತ್ತದೆಯೇ ಎನ್ನುವ ಪ್ರಶ್ನೆಗಳಿಗೆ ನಾನು ಇಲ್ಲಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ.

ಇಲ್ಲಿ ಒಬ್ಬೊಬ್ಬರ ಪ್ರಕರಣಗಳನ್ನು ಒಂದೊಂದಾಗಿ ಪರಿಶೀಲಿಸೋಣ. 15 ತಿಂಗಳು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಳೆದ, ಆರು ವರ್ಷಗಳ ವಿಚಾರಣೆ ನಂತರ ಆರೋಪ ಮುಕ್ತರಾಗಿರುವ ಎ. ರಾಜಾ ಅವರು ದಲಿತರು. ಅವರ ಪಕ್ಷದ ಸಹೋದ್ಯೋಗಿ ಮತ್ತು ಈಗ ಆರೋಪ ಮುಕ್ತರಾಗಿರುವ ಸಹ ಅಪರಾಧಿ ಕನಿಮೊಳಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ಇತ್ತೀಚೆಗೆ ತಪ್ಪಿತಸ್ಥರೆಂದು ಘೋಷಿತರಾಗಿರುವ ಮಧು ಕೋಡಾ ಮತ್ತು ಭ್ರಷ್ಟಾಚಾರ ಮತ್ತು ಕೊಲೆ ಆರೋಪಕ್ಕೆ ಗುರಿಯಾಗಿ ಅಂತಿಮವಾಗಿ ಖುಲಾಸೆಯಾಗಿರುವ ಶಿಬು ಸೊರೇನ್‌ ಅವರಿಬ್ಬರೂ ಆದಿವಾಸಿಗಳು. ಮಾಯಾವತಿ ದಲಿತರು. ಲಾಲು ಪ್ರಸಾದ್‌ ಮತ್ತು ಮುಲಾಯಂ ಸಿಂಗ್‌ ಯಾದವ್‌ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರು. ಇವರೆಲ್ಲ ಅಕ್ರಮವಾಗಿ ಸಂಪತ್ತು ಗಳಿಸಿದ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡವರು.

ಈ ಎಲ್ಲ ಪ್ರಕರಣಗಳು ಆಯಾ ಸಂದರ್ಭದಲ್ಲಿನ ರಾಜಕೀಯ ಆಧರಿಸಿ ಏರಿಳಿತ ಕಾಣುತ್ತಿರುತ್ತವೆ. ಅಧಿಕಾರದಲ್ಲಿ ಇರುವವರ ಇಷ್ಟಾನಿಷ್ಟಗಳಿಗೆ ತಕ್ಕಂತೆ ಇಂತಹ ಪ್ರಕರಣಗಳು ಸುದ್ದಿಗೆ ಆಹಾರವಾಗುತ್ತವೆ. ಒಂದೊಮ್ಮೆ ರಾಜಕೀಯ ಉದ್ದೇಶ ಈಡೇರುತ್ತಿದ್ದಂತೆ ನಿರೀಕ್ಷೆಯಂತೆ ಪ್ರಕರಣಗಳು ನೇಪಥ್ಯಕ್ಕೆ ಸರಿದು ಬಿಡುತ್ತವೆ. ಹತ್ತು ವರ್ಷಗಳಷ್ಟು ಸುದೀರ್ಘ ಜೈಲುಶಿಕ್ಷೆ ಅನುಭವಿಸುತ್ತಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್‌ ಚೌಟಾಲಾ ಅವರು ಹಿಂದುಳಿದ ವರ್ಗಗಳಿಗೆ ಸೇರಿದವರಲ್ಲ. ಆದರೆ, ಜಾತಿಗೆ ಸಂಬಂಧಿಸಿದ ಸ್ಥಾನಮಾನದಲ್ಲಿ ಸವರ್ಣೀಯರಿಗಿಂತ ಕೆಳಮಟ್ಟದಲ್ಲಿ ಇರುವ ಜಾಟ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸಂಸದರಾದ ಫಗ್ಗನ್‌ ಸಿಂಗ್‌ ಕುಲಸ್ತೆ, ಅಶೋಕ್‌ ಅರ್ಗಲ್‌ ಮತ್ತು ಮಹಾವೀರ್‌ ಸಿಂಗ್‌ ಭಗೋರಾ ಅವರು, ರಾಜದೀಪ್‌ ಸರ್‌ದೇಸಾಯಿ ಅವರ ಸಿಎನ್‌ಎನ್‌–ಐಬಿಎನ್‌ ಚಾನೆಲ್‌ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಂಸತ್ತಿನಲ್ಲಿ 2008ರಲ್ಲಿ ನಡೆದ ವೋಟಿಗಾಗಿ ನೋಟು ಹಗರಣದಲ್ಲಿ ಆಧಾರಗಳಸಮೇತ ಸಿಕ್ಕಿ ಹಾಕಿಕೊಂಡಿದ್ದರು. ಅಂದು ಎಲ್‌. ಕೆ. ಅಡ್ವಾಣಿ ಅವರಿಗೆ ಆಪ್ತರಾಗಿದ್ದ ಸುಧೀಂದ್ರ ಕುಲಕರ್ಣಿ ಅವರೂ ಇದರಲ್ಲಿ ಭಾಗಿಯಾಗಿದ್ದರು. ಹಣ ಪಡೆದ ಸಂಸದರೆಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡದವರಾಗಿದ್ದರು. ಅದಕ್ಕೂ ಹಿಂದೆ 2005ರಲ್ಲಿ ನಡೆದಿದ್ದ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಹಗರಣದಲ್ಲಿ ಹೆಸರು ಕೇಳಿಬಂದಿದ್ದ 11 ಮಂದಿ ಸಂಸದರ ಸದಸ್ವತ್ವ ರದ್ದುಪಡಿಸಲಾಗಿತ್ತು. ಅವರಲ್ಲಿ ಬಿಜೆಪಿಯ 6, ಬಿಎಸ್‌ಪಿಯ ಮೂವರು ಮತ್ತು ಕಾಂಗ್ರೆಸ್‌ ಮತ್ತು ಆರ್‌ಜೆಡಿಯ ತಲಾ ಒಬ್ಬ ಸದಸ್ಯ ಇದ್ದರು. ಇವರಲ್ಲಿ ನರೇಂದ್ರ ಖುಶ್ವಾಹಾ ಮತ್ತು ರಾಜಾರಾಮ್‌ ಪಾಲ್‌ ಅವರು ಇತರೆ ಹಿಂದುಳಿದ ವರ್ಗದವರಾಗಿದ್ದರೆ, ಲಾಲ್‌ ಚಂದ್ರ ಕೋಲ್‌ ದಲಿತರಾಗಿದ್ದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡವರಲ್ಲಿ ಮೇಲ್ವರ್ಗದವರೂ ಇದ್ದಾರೆ. ಅವರಲ್ಲಿ ಸುಖ ರಾಮ್‌, ಜಯಲಲಿತಾ ಮತ್ತು ಸುರೇಶ್ ಕಲ್ಮಾಡಿ ಪ್ರಮುಖರು. ಆದರೆ, ಇಂತಹ ಹಗರಣಗಳಲ್ಲಿ ಭಾಗಿಯಾದವರ ಪೈಕಿ ಉನ್ನತ ವರ್ಗದವರ ಸಂಖ್ಯೆ ಕಡಿಮೆ ಇದೆ. ಅಷ್ಟೇ ಅಲ್ಲ, ಶಿಕ್ಷೆಯಿಂದ ಪಾರಾಗುವ ಉತ್ತಮ ಅವಕಾಶವನ್ನೂ ಅವರು ಹೊಂದಿದ್ದರು. ಇವರೆಲ್ಲರ ಪ್ರಕರಣಗಳನ್ನು ವೃಥಾ ಎಳೆಯಲಾಗುತ್ತಿತ್ತು. ಹಾಸಿಗೆಯಡಿ ಹಣ ಪತ್ತೆಯಾಗಿ, ವಿಚಾರಣೆ ನಡೆದು, ಶಿಕ್ಷೆಗೆ ಗುರಿಯಾದರೂ ಸುಖ ರಾಮ್‌ ಯಾವತ್ತೂ ಜೈಲು ಶಿಕ್ಷೆ ಅನುಭವಿಸಲಿಲ್ಲ. ಅವರು ತಮ್ಮ ರಾಜಕೀಯ ಬದುಕಿನ ಬಹುಭಾಗವನ್ನು ಕಾಂಗ್ರೆಸ್‌ನಲ್ಲೇ ಕಳೆದಿದ್ದರು. ಈಗ ಅವರಿಗೆ 90 ವರ್ಷವಾಗಿದ್ದು, ಬಿಜೆಪಿಯಲ್ಲಿ ಪುನರ್ವಸತಿ ಕಂಡುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಗ ಅನಿಲ್‌ನ ಜತೆ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಅನಿಲ್‌ ಈಗ ಶಾಸಕನಾಗಿ ಆಯ್ಕೆಯಾಗಿದ್ದು ಹಿಮಾಚಲ ಪ್ರದೇಶದ ಹೊಸ ಸಂಪುಟದಲ್ಲಿ ಬಹುಶಃ ಸಚಿವರಾಗಬಹುದು. ಎ. ರಾಜಾ ಅಥವಾ ಅವರ ಮಕ್ಕಳು ಬಿಜೆಪಿಗೆ ಸೇರ್ಪಡೆಗೊಂಡರೆ ಇದೇ ಬಗೆಯ ರಾಜಕೀಯ ಅದೃಷ್ಟವನ್ನು ಕಾಣಬಹುದು ಎಂದು ನೀವು ನಿರೀಕ್ಷಿಸುವಿರಾ...

ಭ್ರಷ್ಟಾಚಾರದ ಜಾತಿಯ ಮುಖವನ್ನು ಅನಾವರಣ ಮಾಡುತ್ತಿರುವುದಕ್ಕೆ ಓದುಗರು ನನ್ನ ಬಗ್ಗೆ ಕೋಪಾವಿಷ್ಟರಾಗುವ ಮುನ್ನ ನಾಲ್ಕು ಮುಖ್ಯ ಸಂಗತಿಗಳನ್ನು ದಯವಿಟ್ಟು ಪರಿಗಣಿಸಿ. ಮೊದಲನೆಯದಾಗಿ – ಸುಖರಾಮ್‌ ಮತ್ತು ಎ. ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದಾಗ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಎರಡನೆಯದಾಗಿ–ಸುಖರಾಮ್‌ ತಪ್ಪಿತಸ್ಥರೆಂದು ಕೋರ್ಟ್‌ ತೀರ್ಪು ನೀಡಿದ್ದರೆ, ಎ. ರಾಜಾ ನಿರ್ದೋಷಿ ಎಂದು ಆರೋಪ ಮುಕ್ತರಾಗಿದ್ದಾರೆ. ಮೂರನೆಯದಾಗಿ – ಒಬ್ಬರು ತಮ್ಮ ಹಾಸಿಗೆಯಡಿ ನೋಟುಗಳನ್ನು ಅಡಗಿಸಿ ಇಟ್ಟುಕೊಂಡಿದ್ದರು. ರಾಜಾ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು ‘ಹಣ ಎಲ್ಲಿ’ ಎಂದು ಅಣಕಿಸುವ ದನಿಯಲ್ಲಿ ಕೇಳಿದ್ದರು. ಹಣವೇ ಇಲ್ಲ ಎಂದಮೇಲೆ ಭ್ರಷ್ಟಾಚಾರ ಎಲ್ಲಿದೆ. ಹೀಗಾಗಿ ದೋಷಮುಕ್ತರು ಎಂದು ಘೋಷಿಸಲಾಗಿದೆ. ನಾಲ್ಕನೆಯ ಮಹತ್ವದ ಸಂಗತಿ ಏನೆಂದರೆ– ಸುಖರಾಮ್‌ ಬ್ರಾಹ್ಮಣರಾಗಿದ್ದಾರೆ. ಬಹುಶಃ ಒಂದು ಬಾರಿ ಅಡ್ಡದಾರಿ ಹಿಡಿದಿದ್ದರಿಂದ ಅವರು ಮಾಮೂಲಿ ಭ್ರಷ್ಟರಲ್ಲ ಎನ್ನುವುದು ಜನರ ನಿಲುವಾಗಿದೆ. ರಾಜಾ ದಲಿತರಾಗಿದ್ದಾರೆ. ಅವರಿಂದ ಉತ್ತಮವಾದುದನ್ನು ನಿರೀಕ್ಷಿಸಲು ಸಾಧ್ಯವವೇ? ಅಧಿಕಾರ ಮತ್ತು ಹೊಣೆಗಾರಿಕೆಯನ್ನು ಅವರು ಸಮರ್ಥವಾಗಿ ನಿಭಾಯಿಸಲಾರರು ಎನ್ನುವುದು ಸಾಮಾನ್ಯ ಶಂಕೆಯಾಗಿದೆ.

ಬಿಜೆಪಿಯಲ್ಲಿನ ಎರಡು ಆಸಕ್ತಿಕರ ಪ್ರಕರಣಗಳನ್ನು ನಾವಿಲ್ಲಿ ಕೊಂಚ ವಿವರವಾಗಿ ಗಮನಿಸೋಣ. ಪಕ್ಷದ ಇಬ್ಬರು ಮುಖಂಡರು ಬೇರೆ, ಬೇರೆ ಸಂದರ್ಭಗಳಲ್ಲಿ ಲಂಚ ಪಡೆಯುವಾಗಲೇ ಕ್ಯಾಮೆರಾದಲ್ಲಿ ಸೆರೆಯಾದ ಘಟನೆಗಳು ವರದಿಯಾಗಿದ್ದವು. ದಿಲೀಪ್‌ ಸಿಂಗ್‌ ಜುದೇವ್‌ ಅವರು 2003ರಲ್ಲಿ ₹9 ಲಕ್ಷ ಲಂಚ ಪಡೆಯುತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದರು. ಉನ್ನತ ಜಾತಿಗೆ ಸೇರಿದ್ದ ಇವರು ಆನಂತರವೂ ರಾಜಕೀಯ ಪುನರ್ವಸತಿ ಪಡೆದುಕೊಂಡಿದ್ದರು. ಲಂಚ ಪಡೆದ ಕಳಂಕ ಇದ್ದರೂ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಟಿಕೆಟ್‌ ನೀಡಲಾಗಿತ್ತು. ಸಂಸತ್ತಿಗೆ ಗೆದ್ದೂ ಬಂದಿದ್ದರು. ಜುದೇವ್ ಅವರು ಲಂಚ ಪಡೆಯುವಾಗ ಆಡಿದ ಮಾತು ಸಾಕಷ್ಟು ಕುಖ್ಯಾತಿಯನ್ನೂ ಪಡೆದಿತ್ತು. ‘ಪೈಸಾ ಖುದಾ ತೊ ನಹಿ, ಲೇಕಿನ್‌ ಖುದಾಕಿ ಕಸಂ, ಖುದಾಸೆ ಕಮ್‌ ಭೀ ನಹಿ (ನೋಟು ದೇವರಂತೂ ಅಲ್ಲ. ಆದರೆ, ದೇವರಾಣೆಗೂ ದೇವರಿಗಿಂತ ಕಡಿಮೆನೂ ಅಲ್ಲ). ಬಾಲಿವುಡ್‌ನ ಚಿತ್ರಕತೆಗಾರರೊಬ್ಬರು ಮಾಫಿಯಾ ತಂಡದ ಸದಸ್ಯನ ಬಾಯಲ್ಲಿ ಇದೇ ಮಾತನ್ನು ಹೇಳಿಸಿದ್ದರು. ಅಂದಿನ ವಾಜಪೇಯಿ ಸರ್ಕಾರದಲ್ಲಿ ಜುದೇವ್‌ ಅವರು ಕಿರಿಯ ಸಚಿವರಾಗಿದ್ದರು. ಲಂಚ ನೀಡಲು ಬಂದಿದ್ದವನ ಸಮ್ಮುಖದಲ್ಲಿಯೇ ಅವರು ಈ ಮಾತು ಹೇಳಿದ್ದರು. ಅದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಬಂಗಾರು ಲಕ್ಷ್ಮಣ್‌ ಅವರು 2001ರಲ್ಲಿ ₹1 ಲಕ್ಷ ಲಂಚ ಪಡೆಯುವಾಗ ತೆಹಲ್ಕಾ ನಡೆಸಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದರು. ಜುದೇವ್‌ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಕಿರಿಯ ಸಚಿವರಾಗಿದ್ದರೆ, ಬಂಗಾರು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರೂ ದಲಿತರಾಗಿದ್ದರು. ಬಿಜೆಪಿಯಲ್ಲಿ ಆ ಮಟ್ಟದ ಹುದ್ದೆಗೆ ಏರಿದ ಏಕೈಕ ದಲಿತ ವ್ಯಕ್ತಿ ಅವರಾಗಿದ್ದರು. ಪಕ್ಷವು ಅವರನ್ನು ಹೀಯಾಳಿಸಿ, ಬಹಿಷ್ಕರಿಸಿ, ಏಕಾಂಗಿಯನ್ನಾಗಿ ಮಾಡಿತು. ಪ್ರಕರಣದಲ್ಲಿ ಅವರು ಜೈಲಿಗೂ ಹೋದರು. ತೆಹಲ್ಕಾ ನಡೆಸಿದ್ದ ರಹಸ್ಯ ಕಾರ್ಯಾಚರಣೆಯ ಆರೋಪಗಳ ವಿರುದ್ಧ ಕೋರ್ಟ್‌ನಲ್ಲಿ ಹೋರಾಟ ನಡೆಸುತ್ತಲೇ ಅವರು ಕೊನೆಯುಸಿರೆಳೆದರು. ತೆಹಲ್ಕಾ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ ರಾಜಕಾರಣಿಗಳ ಪೈಕಿ ಇವರೊಬ್ಬರೇ ಜೈಲಿಗೆ ಹೋದ ರಾಜಕಾರಣಿಯಾಗಿದ್ದರು.

ಇದನ್ನೆಲ್ಲ ವಿವರಿಸುವುದು ದುರದೃಷ್ಟಕರ. ಆದರೆ, ಉಪಯುಕ್ತ ಮಾಹಿತಿ ಇಲ್ಲಿದೆ. ಬಿಜೆಪಿಯು ಒಂದೆಡೆ ಜುದೇವ್‌ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಬಂಗಾರು ಲಕ್ಷ್ಮಣ್‌ ಅವರನ್ನು ಬಹಿಷ್ಕೃತರಂತೆ ನಡೆಸಿಕೊಂಡಿತು.

ಈ ವಾದವನ್ನು ನ್ಯಾಯಾಂಗಕ್ಕೂ ಅನ್ವಯಿಸಬಹುದೇ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗಬಹುದು. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರ ಚಳವಳಿಯು ಉತ್ತುಂಗದಲ್ಲಿ ಇದ್ದಾಗ ಚಳವಳಿಯ ಭಾಗವಾಗಿದ್ದವರೂ ಸೇರಿದಂತೆ ಅನೇಕ ಖ್ಯಾತನಾಮರು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದ್ದರು. ಸುಪ್ರೀಂಕೋರ್ಟ್‌ನ ಅನೇಕ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂದು ಆರೋಪಿಸಿದ್ದರು. ಆದರೆ, ದಲಿತರಾದ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರೊಬ್ಬರನ್ನೆ ಗುರಿಯಾಗಿರಿಸಿಕೊಂಡು ಆರೋಪಗಳನ್ನು ಮಾಡಲಾಗಿತ್ತು. ಒಂದು ದಶಕದ ನಂತರವೂ ಇದುವರೆಗೂ ಅವರ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಾಧಾರಗಳೂ ದೊರೆತಿಲ್ಲ. ಅವರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಕೈಬಿಡುವ ಬಗ್ಗೆ ಆಲೋಚಿಸಬಾರದೇಕೆ ಎಂದು ಸುಪ್ರೀಂ ಕೋರ್ಟ್ ಎರಡು ವಾರಗಳ ಹಿಂದೆಯಷ್ಟೇ ಪ್ರಶ್ನಿಸಿದೆ.

ಈ ವಿಷಯದಲ್ಲಿ ಇನ್ನಷ್ಟು ಮುಂದುವರೆದರೆ, ಇನ್ನಷ್ಟು ಕುತೂಹಲಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಉನ್ನತ ನ್ಯಾಯಾಂಗದ ನಿಂದನೆ ಮಾಡಿ ವೃತ್ತಿಯಲ್ಲಿ ದುರ್ವರ್ತನೆ ತೋರಿದ ಆರೋಪಕ್ಕೆ ಜೈಲಿಗೆ ಹೋಗಿಬಂದ ಹೈಕೋರ್ಟ್‌ನ ಏಕೈಕ ನ್ಯಾಯಮೂರ್ತಿಯಾಗಿರುವ ಸಿ. ಎಸ್‌. ಕರ್ಣನ್ ಅವರೂ ದಲಿತರೇ.

ಇಂತಹ ಇತರ ಮೂವರು ನ್ಯಾಯಮೂರ್ತಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿದ್ದರೂ ಅವರೆಲ್ಲ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪಾರಾಗಿದ್ದಾರೆ. ಅವರಲ್ಲೊಬ್ಬರು ರಾಜಾ ಅವರು ಮಂಜೂರು ಮಾಡಿದ್ದ 122 ದೂರಸಂಪರ್ಕ ಪರವಾನಗಿಗಳನ್ನು ರದ್ದು ಮಾಡಿದ ಐತಿಹಾಸಿಕ ತೀರ್ಪಿಗೆ ಸಹಿ ಹಾಕಿದವರಾಗಿದ್ದಾರೆ. ಈಗ ಈ ಪ್ರಕರಣಗಳನ್ನೆಲ್ಲ ಹೂತು ಹಾಕಲಾಗಿದೆ. ಪ್ರಕರಣವೊಂದರಲ್ಲಿ, ಮಾಧ್ಯಮಗಳು ಆರೋಪದ ಬಗ್ಗೆ ಯಾವುದೇ ಬಗೆಯಲ್ಲಿ ವರದಿ ಮಾಡಬಾರದು ಎಂದೂ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು. ಈ ಮೂವರಲ್ಲಿ ಇಬ್ಬರು ಆನಂತರ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಅವರಲ್ಲೊಬ್ಬರು ನಿವೃತ್ತಿ ನಂತರ ಒಳ್ಳೆಯ ಹುದ್ದೆಗೆ ನೇಮಕಗೊಂಡಿದ್ದಾರೆ. ಈ ಮೂವರೂ ಕೆಳ ಜಾತಿಯವರಾಗಿರಲಿಲ್ಲ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.

ಸಾಮಾಜಿಕ ಶ್ರೇಣಿಯಲ್ಲಿ ಮೇಲ್ಭಾಗದಲ್ಲಿ ಇರುವವರು ಶುದ್ಧವಾಗಿದ್ದಾರೆ ಎನ್ನುವುದು ನಿಯಮವೇ. ಅಥವಾ ಸಾಮಾಜಿಕ ಶ್ರೇಣಿ ವ್ಯವಸ್ಥೆಯಲ್ಲಿ ಕೆಳ ಹಂತದಲ್ಲಿ ಇರುವವರ ವಿರುದ್ಧ ಇಡೀ ವ್ಯವಸ್ಥೆಯೇ ತಿರುಗಿ ಬಿದ್ದಿದೆಯೇ. ಬಹುತೇಕ ಕಡೆಗಳಲ್ಲಿ ಅದರಲ್ಲೂ ವಿಶೇಷವಾಗಿ ಸರ್ಕಾರಿ ಹುದ್ದೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಇರುವುದರ ಬಗ್ಗೆ ಅವರ ಸ್ಥಿತಿಗತಿ ಬಗ್ಗೆ ವರದಿ ನೀಡಿದ್ದ ಸಾಚಾರ್‌ ಸಮಿತಿಯು ಬೆಳಕು ಚೆಲ್ಲಿತ್ತು. ಅವರ ಜನಸಂಖ್ಯೆಗೆ ಹೋಲಿಸಿದರೆ ಜೈಲುಗಳಲ್ಲಿ ಇರುವ ಮುಸ್ಲಿಮರ ಸಂಖ್ಯೆ ಹೆಚ್ಚಿಗೆ ಇದೆ ಎಂದೂ ವರದಿ ತಿಳಿಸಿತ್ತು. ಇಲ್ಲಿ ಮತ್ತೆ ಅದೇ ಪ್ರಶ್ನೆ ಎದುರಾಗುತ್ತದೆ. ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚು ಅಪರಾಧ ಮನೋಭಾವ ಹೊಂದಿರುವರೆ ಅಥವಾ ಇಡೀ ವ್ಯವಸ್ಥೆಯೇ ಅವರ ವಿರುದ್ಧ ತಿರುಗಿ ಬಿದ್ದಿದೆಯೇ ಎನ್ನುವ ಅನುಮಾನ ಮೂಡಿಸುತ್ತದೆ.

ರಾಜಕೀಯ ಹಾಸ್ಯ ತಂಡವಾಗಿರುವ ‘ಐಸಿ ತೈಸಿ ಡೆಮಾಕ್ರಸಿ’, ತನ್ನ ಜನಪ್ರಿಯ ನಾಟಕ ಪ್ರದರ್ಶನಗಳಲ್ಲಿ, ಕೊಲೆ ಕೃತ್ಯ ಎಸಗಿದ್ದಕ್ಕೆ ಗಲ್ಲು ಶಿಕ್ಷೆಗೆ ಗುರಿಯಾದವರಲ್ಲಿ ಅಲ್ಪಸಂಖ್ಯಾತರು ಇಲ್ಲವೆ ಕೆಳ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರತ್ತ ಗಮನ ಸೆಳೆಯುತ್ತದೆ.

ಹೀಗಾಗಿ ಇಲ್ಲೊಂದು ಮಹತ್ವದ ಪ್ರಶ್ನೆ ಉದ್ಭವಿಸುತ್ತದೆ. ಭ್ರಷ್ಟಾಚಾರ ಮತ್ತು ಅಪರಾಧಕ್ಕೆ ಆನುವಂಶಿಕತೆಯು ಪ್ರಭಾವ ಬೀರುತ್ತದೆಯೇ. ಅಥವಾ ನಮ್ಮ ಪೊಲೀಸ್‌, ನ್ಯಾಯಾಧೀಶರು, ಮಾಧ್ಯಮ ಮತ್ತು ಸಾರ್ವಜನಿಕ ಅಭಿಪ್ರಾಯ ಒಳಗೊಂಡ ಇಡೀ ವ್ಯವಸ್ಥೆಯು ಅವಕಾಶ ವಂಚಿತರು ಅಥವಾ ಕೆಳ ಜಾತಿಯವರ ವಿರುದ್ಧ ಒಟ್ಟಾಗಿ ಮುಗಿ ಬೀಳುತ್ತದೆಯೇ ಎನ್ನುವುದನ್ನು ಪರಿಶೀಲಿಸಬೇಕು.

ಅಮೆರಿಕದಲ್ಲಿ ಆಫ್ರಿಕಾದವರನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ ಪ್ರಕರಣಗಳು ಮತ್ತು ಅವರ ಜನಸಂಖ್ಯೆಗೆ ಅನುಗುಣವಾಗಿ ಜೈಲುಗಳಲ್ಲಿ ಇರುವ ಅಪರಾಧಿಗಳ ಅಸಮಾನ ಸಂಖ್ಯೆಯನ್ನು ಒಮ್ಮೆ ಪರಿಶೀಲಿಸಿ. ವಿಶ್ವದ ಕೆಲ ದೇಶಗಳಲ್ಲಿ ಜನಾಂಗ ತಾರತಮ್ಯ ಇದ್ದರೆ ನಮ್ಮಲ್ಲಿ ಜಾತಿ ತಾರತಮ್ಯ ಇದೆ. ಕೆಲ ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳನ್ನು ಒಂದೇ ಬಗೆಯಲ್ಲಿ ಪರಿಗಣಿಸುವುದರಿಂದ ನಮ್ಮಲ್ಲಿ ಇದು ಇನ್ನಷ್ಟು ಸಂಕೀರ್ಣಗೊಂಡಿದೆ.

ಅಂತಹ ಪೂರ್ವಗ್ರಹ ಭಾವನೆ ನಮ್ಮಲ್ಲಿ ಹೆಚ್ಚು ಪ್ರಭಾವ ಹೊಂದಿದೆ. ಬ್ರಾಹ್ಮಣ ಜಾತಿಗೆ ಸೇರಿದ ಸುಖರಾಮ್‌ ಅವರು ತಪ್ಪಿತಸ್ಥರಾಗಿದ್ದರೂ ಜೈಲು ಶಿಕ್ಷೆಯಿಂದ ಪಾರಾಗುತ್ತಾರೆ. ಎ. ರಾಜಾ ಆರೋಪ ಮುಕ್ತರಾದರೂ, ಅವರನ್ನು ನಿರಂತರವಾಗಿ ಕಳ್ಳನ ಥರಹ ಪರಿಗಣಿಸಲಾಗುತ್ತದೆ. ಜುದೇವ್‌ ರಾಜಕೀಯ ಪುನರ್ವಸತಿ ಪಡೆದುಕೊಂಡರೆ, ಬಂಗಾರು ಲಕ್ಷ್ಮಣ್‌ ಅವರನ್ನು ಬಹಿಷ್ಕರಿಸಿ ಒಂಟಿಯಾಗಿ ಸಾಯುವಂತೆ ಮಾಡಲಾಗುತ್ತದೆ. ಇಂತಹ ಕಟು ವಾಸ್ತವ ಸಂಗತಿ ನೆನಪಿಸಿ ನಿಮ್ಮ ಕ್ರಿಸ್‌ಮಸ್‌ ವಾರಾಂತ್ಯ ಹಾಳು ಮಾಡಿದ್ದಕ್ಕೆ ಕ್ಷಮೆ ಇರಲಿ. ಸತ್ಯ ಸಂಗತಿಗಳನ್ನು ಪರಿಶೀಲಿಸಲು ಸೂಕ್ತ ಸಮಯಕ್ಕಾಗಿ ಕಾದು ಕುಳಿತುಕೊಳ್ಳದೆ ಯಾವಾಗ ಬೇಕಾದರೂ ಪರೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT